varthabharthi

ವಿಶೇಷ-ವರದಿಗಳು

ಸವಕಲು ನಾಣ್ಯದ ಚಲಾವಣೆಗೆ ಪ್ರಯತ್ನ

ವಾರ್ತಾ ಭಾರತಿ : 4 Jun, 2019

ಹಿಂದೂ ರಾಷ್ಟ್ರ ನಿರ್ಮಾಣದ ಕಿಲುಬು ಹಿಡಿದ ಪುರಾತತ್ವ ಇಲಾಖೆಯ ವಸ್ತು ಪ್ರದರ್ಶನದಲ್ಲಿ ಇಡಬೇಕಾದ ಸವಕಲು ನಾಣ್ಯವನ್ನು ಚಲಾವಣೆಯಲ್ಲಿ ತರಲು ಡಾ. ಹೆಡ್ಗೆವಾರ್ ಮತ್ತು ಗೋಳ್ವಾಲ್ಕರ್ ಪ್ರಯತ್ನಿಸಿದರು. ಕೊಳೆತು ಬೂಜುಗಟ್ಟಿದ ‘ಸರಕ’ನ್ನು ಕೊಳ್ಳುವ ಗಿರಾಕಿಗಳು ಸಂಘಪರಿವಾರದ ಹೊರಗಡೆ ಇರಲಿಲ್ಲ. ಹಾಗಾದರೆ ಈ ಪರಿತ್ಯಕ್ತ ಸಿದ್ಧಾಂತವನ್ನು ಕಾರ್ಯಗತ ಮಾಡುವವರು ಯಾರು? ಮಾಡುವುದು ಹೇಗೆ? ಹೆಡ್ಗೆವಾರ್-ಗೋಳಾಲ್ಕರ್ ಕಂಪೆನಿ ಆರೆಸ್ಸೆಸ್ ಸಂಘ ಸ್ಥಾಪನೆಯ ಮೂಲಕ ತಮ್ಮ ಸರಕನ್ನು ಜನಪ್ರಿಯಗೊಳಿಸಲು ಪ್ರಾರಂಭಿಸಿತು.

ಭಾರತ ಇಬ್ಭಾಗವಾದಾಗ ಭಾರತದಲ್ಲಿ ಉಳಿದಿದ್ದ ಅಲ್ಪಸಂಖ್ಯಾತರನ್ನು ಮುಖ್ಯವಾಗಿ ಮುಸ್ಲಿಂ ಮತ್ತು ಕ್ರಿಶ್ಚಿಯನ್ನರನ್ನು ಈಗಲೂ ಇಲ್ಲಿ ಹುಟ್ಟಿ ಬೆಳೆದವರನ್ನು ನಿರ್ನಾಮ ಮಾಡುವುದು ಸಂಘಪರಿವಾರದ ತ್ರಿಶೂಲಶಕ್ತಿಯಿಂದ ಸಾಧ್ಯವಿಲ್ಲ! ಸಾಧ್ಯವಿಲ್ಲ!! ಸಾಧ್ಯವೇ ಇಲ್ಲ. ಮಾನವ ಬಾಂಬ್ ಸ್ಫೋಟಗಳಿಂದಲೂ ಸಾಧ್ಯವಿಲ್ಲ. ಸಂಘಪರಿವಾರಕ್ಕೆ ಇದು ಗೊತ್ತು. ಆದ್ದರಿಂದ ಅವರ ತಂತ್ರ-ಇಲ್ಲಿರುವ ಅಲ್ಪಸಂಖ್ಯಾತರು ಇಲ್ಲಿ ಬದುಕಿ ಉಳಿಯುವುದಾದರೆ ಅವರು ಬಹು ಸಂಖ್ಯಾತರ ಸಾಂಸ್ಕೃತಿಕ ರಾಷ್ಟ್ರೀಯತೆ (cultural nationalism) ಮೈಗೂಡಿಸಿಕೊಂಡು ಬಹುಸಂಖ್ಯಾತರಂತೆಯೇ ಬದುಕಬೇಕು! ಹಿಂದೂ ಮತಧರ್ಮಾಚರಣೆ ಮಾಡಬೇಕು! ಹಿಂದೂಗಳು ಗೋಪೂಜೆ ಮಾಡುತ್ತಾರೆ.

ಗೋಮಾಂಸ ಭೋಜನ ನಿಷಿದ್ಧ ಆದ್ದರಿಂದ ಮುಸ್ಲಿಮರು ಗೋಹತ್ಯೆ ಮಾಡಕೂಡದು. ಗೋಮಾತೆಯ ರಕ್ಷಣೆಗಾಗಿ ಗೋಸಂವರ್ಧನ ಸಮ್ಮೇಳನ ಏರ್ಪಡಿಸಬೇಕು. ಕಸಾಯಿಖಾನೆಗಳಿಗೆ ಸಾಗಿಸುವ ಗೋವುಗಳನ್ನು ರಕ್ಷಿಸಲು ಹಿಂದೂ ಸೇನೆ ರಸ್ತೆಗಳಲ್ಲಿ ಕಾವಲಿದ್ದು ಪ್ರಾಣಿಗಳ ಪ್ರಾಣ ಉಳಿಸಬೇಕು, ಆ ಉನ್ನತ ಧ್ಯೇಯ ಸಾಧನೆಗಾಗಿ ಮಾನವ ಪ್ರಾಣ ಬಲಿಯಾದರೂ ಆಗಬೇಕು! ಇದು ಅವರ ಪಂಥ.

ಭಾರತವನ್ನು ‘ಹಿಂದೂ ಧರ್ಮ’ದ ತಾಯ್ನಡನ್ನಾಗಿಯೇ ಉಳಿಸಿಕೊಳ್ಳಬೇಕು. ಅವರ ಸಂಖ್ಯಾಬಲ ಕುಗ್ಗಬಾರದು. ಅಲ್ಪಸಂಖ್ಯಾತರ ಸಂಖ್ಯಾಬಲ ಹೆಚ್ಚಕೂಡದು. ಆದ್ದರಿಂದ ಹಿಂದೂ ಮುಸ್ಲಿಮರಿಗೆಲ್ಲ ಒಂದೇ ನಾಗರಿಕ ಸಂಹಿತೆ ಅನ್ವಯಿಸಬೇಕು. ಮುಸ್ಲಿಮರು ಬಹುಪತ್ನಿತ್ವವನ್ನು ಆಚರಿಸಬಾ ರದು. ಅವರ ಸಂಖ್ಯಾಬಲ ನಾಗಾಲೋಟ ದಿಂದ ಮುನ್ನುಗ್ಗಿ ಹೆಚ್ಚುತ್ತಿದೆ? ಮತಾಂತರದಿಂದಲೂ ಮುಸ್ಲಿಮರ ಸಂಖ್ಯೆ ಬೆಳೆಯುತ್ತಿದೆ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. 2001ರ ಜನಗಣತಿಯ ಪ್ರಕಾರ ಬಹುಪತ್ನಿತ್ವ ಆಚರಣೆಯು ಮುಸ್ಲಿಮರಿಗಿಂತಲೂ ಹೆಚ್ಚಾಗಿ ಹಿಂದೂಗಳಲ್ಲಿಯೇ ಇದೆ ಎಂದು ಭಾರತ ಸರಕಾರ ಪ್ರಕಟಿಸಿದ ಅಧಿಕೃತ ವರದಿಗಳಿಂದಲೇ ಸಿದ್ಧಪಡಿಸಲಾಗಿದೆ.

ಮುಸ್ಲಿಮರು, ಕ್ರಿಶ್ಚಿಯನ್ನರು ಹಿಂದೂಗಳನ್ನು- ಅದರಲ್ಲೂ ದಲಿತರನ್ನು ಇತರ ಹಿಂದುಳಿದ ವರ್ಗದವ ರನ್ನು, ಬಲಾತ್ಕಾರವಾಗಿ, ಮೋಸದಿಂದ, ಆಶೆ ಆಮಿಷಗಳನ್ನು ಒಡ್ಡಿ ಮತಾಂತರ ಮಾಡಿ ತಮ್ಮ ಜನರ ಸಂಖ್ಯಾಬಲವನ್ನು ಹೆಚ್ಚಿಸಿಕೊಂಡು, ಮುಂದೆ ಕಾಲಾನುಕಾಲಕ್ಕೆ ಭಾರತದಲ್ಲಿ ಅವರೇ ಹಿಂದೂಗಳಿಗಿಂತ ಹೆಚ್ಚಾಗಿ ಮುಸ್ಲಿಂ ರಾಷ್ಟ್ರ ವನ್ನಾಗಿ ಮಾಡುತ್ತಾರೆ ಎಂದು ಅಬ್ಬರದಿಂದ ಪ್ರಚಾರ ಮಾಡುತ್ತಿದ್ದಾರೆ. ಈ ಮತೀಯ ಭಾವನೆಯನ್ನು ಕೆರಳಿಸಿ ಹಿಂದೂ ಸಂಘಟನೆಯನ್ನು ಬಲಗೊಳಿಸಲು ಹಿಂದೂ ಬೃಹತ್ ಸಮಾವೇಶಗಳನ್ನು ಏರ್ಪಡಿಸುತ್ತಿದ್ದಾರೆ. ಮತಾಂತರದ ಮೂಲಕಾರಣ ಬಲಾತ್ಕಾರವಲ್ಲ, ಆಶೆ ಆಮಿಷಗಳಲ್ಲ, ಮೋಸ ವಂಚನೆಯಲ್ಲ. ವರ್ಣಾಶ್ರಮ ಪದ್ಧತಿಯ ಸಂಸ್ಥಾಪಕರಾದ ಹಿಂದೂಧರ್ಮ ಗುರುಗಳು ಚಾತುರ್ವರ್ಣ್ಯ ಆಚರಣೆಯಿಂದ ಉಚ್ಚ-ನೀಚ, ಮೇಲು- ಕೀಲು ಎಂಬ ಭಿನ್ನಭೇದವನ್ನು ಜನರ ರಕ್ತದ ಕಣಕಣದಲ್ಲಿ ಬಿತ್ತಿದ ಭೇದ ಧರ್ಮ ಮತಾಂತರಕ್ಕೆ ಅದರಲ್ಲೂ ಅಸ್ಪಶ್ಯತಾ ಪದ್ಧತಿ ಹಿಂದೂಧರ್ಮಕ್ಕೆ ಬಡಿದ ವಿಮೋಚನೆಯಾಗದ ಶಾಪ; ಕಡುಕಳಂಕ. ಇದು ಮತಾಂತರದ ಮುಖ್ಯ ಕಾರಣ. ಪುರೋಹಿತಶಾಹಿಯ ಉಡಹಿಡಿತ ಹಿಂದೂ ಸಮಾಜವನ್ನು ಮೇಲು, ಕೀಳುಗಳು ಅಡಕೊತ್ತಿನಲ್ಲಿ ಸಿಲುಕಿಸಿ ಕೆಳವರ್ಗದವರ ಬಾಳನ್ನು ಕತ್ತರಿಸುತ್ತಿದೆ. ಇದರ ಸಹಿಸಲಾಗದ ಹಿಂಸೆಯಿಂದ ತಪ್ಪಿಸಿಕೊಳ್ಳಲು ಪರ ಮತಾವಲಂಬಿಗಳಾಗುತ್ತಿರುವುದರ ಮುಖ್ಯ ಕಾರಣ.

ಆಚರಣೆಯಲ್ಲಿರುವ ಈ ಹಿಂದೂ ಧರ್ಮದ ಭದ್ರತೆಗಾಗಿ, ಶೋಷಣೆಗಾಗಿ ಹಿಂದೂ ಧರ್ಮಾವಲಂಬಿಗಳು ಸಹಸ್ರಾರು ವರ್ಷಗಳಿಂದ ಪ್ರಯತ್ನಿಸಿ ಬಹುಮಟ್ಟಿಗೆ ಯಶಸ್ವಿಯಾಗಿದ್ದಾರೆ. ಈ ಪಟ್ಟಭದ್ರ ಹಿತಾಸಕ್ತಿಗಳನ್ನು ವಿರೋಧಿಸಿದ ಬುದ್ಧ, ಬಸವ, ಮಹಾವೀರ, ನಾನಕರು ಹಿಂದೂ ಧರ್ಮವನ್ನು ತಿರಸ್ಕರಿಸಿ ತ್ಯಜಿಸಿ ಹೊರನಡೆದರು. ‘ಹೋದರೆ ಹೋಗಿ’ ಎಂದು ಅವರನ್ನು ಅವರ ಅನುಯಾಯಿಗಳನ್ನು ಹೊರಗೆ ತಳ್ಳಿದವರು ಸನಾತನಿಗಳು! ಇಸ್ಲಾಂ ಧರ್ಮ, ಕ್ತಿಶ್ಚಿಯನ್ ಧರ್ಮ ನಮ್ಮ ದೇಶಕ್ಕೆ ಬಂದ ಮೇಲೆ ಸರಿಸಮಾನತೆಯ ಬೆಳಕನ್ನು ಕಂಡ ಪಂಚಮರು ಅತ್ತಕಡೆ ನಡೆದರು. ಈ ಮಾತನ್ನು ಇತ್ತೀಚೆಗೆ ಹಿಂದೂ ಧರ್ಮಗುರುಗಳು ಒಪ್ಪಿಕೊಂಡಿದ್ದಾರೆ. ಅಂದಮೇಲೆ ಮತಾಂತರಕ್ಕೆ ಮುಖ್ಯ ಕಾರಣರಾದವರು ಹಿಂದೂಗಳೇ ಎಂಬುದಾಗಿ ಶ್ರೀ ಸ್ವಾಮಿ ವಿವೇಕಾನಂದರು ಸಾರುತ್ತಾರೆ.

ಇಂತಹ ಹಿಂದೂ ರಾಷ್ಟ್ರ ನಿರ್ಮಾಣದ ಕಿಲುಬು ಹಿಡಿದ ಪುರಾತತ್ವ ಇಲಾಖೆಯ ವಸ್ತು ಪ್ರದರ್ಶನದಲ್ಲಿ ಇಡಬೇಕಾದ ಸವಕಲು ನಾಣ್ಯವನ್ನು ಚಲಾವಣೆಯಲ್ಲಿ ತರಲು ಡಾ. ಹೆಡಗೆವಾರ್ ಮತ್ತು ಗುರೂಜಿ ಗೋಳ್ವಾಲ್ಕರ್ ಪ್ರಯತ್ನಿಸಿದರು. ಕೊಳೆತು ಬೂಜುಗಟ್ಟಿದ ‘ಸರಕ’ನ್ನು ಕೊಳ್ಳುವ ಗಿರಾಕಿಗಳು ಸಂಘಪರಿವಾರದ ಹೊರಗಡೆ ಇರಲಿಲ್ಲ. ಹಾಗಾದರೆ ಈ ಪರಿತ್ಯಕ್ತ ಸಿದ್ಧಾಂತವನ್ನು ಕಾರ್ಯಗತ ಮಾಡುವವರು ಯಾರು? ಮಾಡುವುದು ಹೇಗೆ? ಹೆಡ್ಗೆವಾರ್-ಗೋಳ್ವಾಲ್ಕರ್ ಕಂಪೆನಿ ಆರೆಸ್ಸೆಸ್ ಸಂಘ ಸ್ಥಾಪನೆಯ ಮೂಲಕ ತಮ್ಮ ಸರಕನ್ನು ಜನಪ್ರಿಯಗೊಳಿಸಲು ಪ್ರಾರಂಭಿಸಿತು. ಅವರ ಮಂತ್ರವನ್ನು ಕಾರ್ಯಗತಗೊಳಿಸುವ ಕ್ರಿಯಾಶಕ್ತಿ ಸಂಘದ ನಿಸ್ವಾರ್ಥ, ಶಿಸ್ತುಬದ್ಧ, ತ್ಯಾಗ ಬುದ್ಧಿಯ, ನಿರ್ಭೀತ ಯುವಕರು.

ಅಂಥ ದೇಶಭಕ್ತರ ನಿರ್ಮಾಣ ಸಂಘದ ಉದ್ದೇಶ. ಸಾವರ್ಕರ್ ಕಟ್ಟಬಯಸಿದ ಹಿಂದೂ ರಾಷ್ಟ್ರದ ಭಕ್ತರ ದಂಡು ಸಂಘದ ಸದಸ್ಯರು, ಗೋಳ್ವಾಲ್ಕರರು ಅವರನ್ನು ‘ರಾಷ್ಟ್ರಭಕ್ತರು’ ಎಂದು ಕರೆದಿದ್ದಾರೆ. ಅವರ ಭಾಗಕ್ಕೆ ದೇಶವೇ ದೇವರು. ಆ ದೇವರ ಆರಾಧನೆಗೆ ಸರ್ವಸಮರ್ಪಣಾಭಾವದ ಭಕ್ತರು ಬೇಕು. ‘ನಾನು’, ‘ನನ್ನದು’ ಎಂಬ ಅಹಂ ನಾಶವಾದ ದಾಸರು ಮಾತ್ರ ದೇಶ ದೇವಿಯ ಆರಾಧನೆಗೆ ಅರ್ಹರು.

ಗೋಳ್ವಾಲ್ಕರರ ಮಾತಿನಲ್ಲಿ ಅವರು ನೀರಿನಲ್ಲಿ ಕರಗಿಹೋದ ಉಪ್ಪಿನಂತಿರಬೇಕು. ಅವರಿಗೆ ಅಹಂ ವ್ಯಕ್ತಿತ್ವ ಇರಲೇಬಾರದು. ವ್ಯಷ್ಟಿ ಸಮಷ್ಟಿಯೊಡನೆ ಒಂದಾಗಿ ಹೋಗಬೇಕು. ಅವನು ಏನಿದ್ದರೂ ಸಮಷ್ಟಿ ಸಮಾಜದ ಒಂದು ಬಿಂದು ಮಾತ್ರ. ಸಿಂಧುವಿನಲ್ಲಿ ಬೆರೆತ ಬಿಂದು. ಆದ್ದರಿಂದ ಸಂಘದ ಸದಸ್ಯರು ಸರಸಂಘ ಚಾಲಕರ ಚೇಲಾ. ಅದು ಗುರು-ಶಿಷ್ಯರ ಸಂಬಂಧ. ಆದ್ದರಿಂದಲೇ ಅವರನ್ನು ‘ಗುರೂಜಿ’ ಎಂದು ಕರೆದಿದ್ದಾರೆ.

(ಶನಿವಾರದ ಸಂಚಿಕೆಗೆ ಮುಂದುವರಿಯುವುದು)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)