varthabharthi

ನಿಮ್ಮ ಅಂಕಣ

ಲೈನ್‌ಮೆನ್‌ಗಳ ಪ್ರಾಣ ಉಳಿಸಿ

ವಾರ್ತಾ ಭಾರತಿ : 4 Jun, 2019
-ವಿಜಯ್‌ಕುಮಾರ್ ಎಚ್. ಕೆ., ಶಕ್ತಿನಗರ, ರಾಯಚೂರು

ಮಾನ್ಯರೇ,

ಇನ್ನೇನು ಮಳೆಗಾಲ ಶುರು ಆಯ್ತು. ಮಲೆನಾಡಲ್ಲಿ ಮರಗಳ ಬಳಿಯೇ ವಿದ್ಯುತ್ ತಂತಿಗಳು ಇರುವುದರಿಂದ ಗಾಳಿ ಮಳೆಗೆ ಮರಗಳು ಈ ವಿದ್ಯುತ್ ತಂತಿಗಳ ಮೇಲೆ ಬೀಳುವುದು ಸರ್ವೇ ಸಾಮಾನ್ಯ, ಹೀಗಾಗಿ ಕೆಲವೆಡೆ ಕೆಲವೊಮ್ಮೆ ವಾರಗಟ್ಟಲೆ ವಿದ್ಯುತ್ ಇಲ್ಲದಿರುವುದು ಕೂಡ ಇದೆ. ಈ ಅವ್ಯವಸ್ಥೆಯನ್ನು ಸರಿಪಡಿಸಲು ಲೈನ್‌ಮೆನ್‌ಗಳು ತುಂಬಾ ಕಷ್ಟಪಡಬೇಕಾಗುತ್ತದೆ. ಮುಖ್ಯ ವಿಷಯ ಏನೆಂದರೆ ಇತ್ತೀಚಿನ ದಿನಗಳಲ್ಲಿ ವಿದ್ಯುತ್ ಬಳಕೆದಾರರ ಮನೆಗಳಲ್ಲಿ ವಿದ್ಯುತ್ ಕೈಕೊಟ್ಟರೆ ಬದಲಿ ವ್ಯವಸ್ಥೆಯಾಗಿ ಜನರೇಟರ್, ಸೋಲಾರ್, ಇನ್ವರ್ಟರ್ ಬಳಕೆ ಸರ್ವೇಸಾಮಾನ್ಯವಾಗಿದೆ. ಆದರೆ ಇದರಿಂದ ಬಳಕೆದಾರರಿಗೆ ಎಷ್ಟು ಉಪಯೋಗವಿದೆಯೋ ಅಷ್ಟೇ ಪ್ರಾಣಾಪಾಯ ಲೈನ್‌ಮೆನ್‌ಗಳಿಗಿದೆ. ಸಾರ್ವಜನಿಕರು ನೇರವಾಗಿ ವಿದ್ಯುತ್ ಮಾಪಕಕ್ಕೆ ಜನರೇಟರ್ ಜೋಡಿಸಿವುದರ ಪರಿಣಾಮ ಲೈನ್‌ಮೆನ್‌ಗಳು ಕೆಲಸ ಮಾಡುತ್ತಿದ್ದ ಲೈನ್‌ನಲ್ಲಿ ವಿದ್ಯುತ್ ಪ್ರವಾಹಿಸಿ ಅಪಘಾತ ಉಂಟಾಗಿ ಜೀವಹಾನಿಯಾಗುತ್ತದೆ. ಹೆಚ್ಚಿನ ಜನರು ತಾವು ಬಳಸುವ ಜನರೇಟರ್, ಇನ್ವರ್ಟರ್‌ಗಳು ಹತ್ತು, ಹದಿನೈದು ಸಾವಿರ ರೂ.ಗಿಂತ ಹೆಚ್ಚು ಪಾವತಿಸುತ್ತಾರೆ. ಆದರೆ ಅವುಗಳಿಗೆ ಬಳಸುವ ಚೇಂಜ್ ಓವರ್ ಸ್ವಿಚ್‌ಗೆ ಇನ್ನೂರು, ಮುನ್ನೂರು ರೂ.ಗಳಷ್ಟೇ ಆದರೂ ಅದನ್ನು ಅಳವಡಿಸಲು ಕಡೆಗಣಿಸುತ್ತಾರೆ. ಎಷ್ಟೋ ಕಡೆಗಳಲ್ಲಿ ಬಳಕೆದಾರರ ನಿರ್ಲಕ್ಷ್ಯದಿಂದ ಹಲವು ಲೈನ್‌ಮೆನ್‌ಗಳ ಪ್ರಾಣ ಹೋಗಿವೆ. ಜನಸಾಮಾನ್ಯರು ತಾವು ಬಳಸುವ ಜನರೇಟರ್ ಅಥವಾ ಇನ್ವರ್ಟರ್‌ಗಳಿಗೆ ಚೇಂಜ್ ಓವರ್ ಸ್ವಿಚ್ ಅಳವಡಿಸಿದರೆ, ಇದರಿಂದ ಜನರೇಟರ್, ಇನ್ವರ್ಟರ್‌ಗಳ ವಿದ್ಯುತ್ ವಾಪಸ್ ಲೈನಿಗೆ ಬರುವುದಿಲ್ಲ, ಇವನ್ನು ಜನಸಾಮಾನ್ಯರು ಎಲೆಕ್ಟ್ರಿಷಿಯನ್‌ಗಳ ಬಳಿ ಪರೀಕ್ಷಿಸಿಕೊಂಡು ಬಳಸಿದರೆ ಎಲ್ಲರಿಗೂ ಅನುಕೂಲ.

 -ವಿಜಯ್‌ಕುಮಾರ್ ಎಚ್. ಕೆ., ಶಕ್ತಿನಗರ, ರಾಯಚೂರು

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)