varthabharthi

ನಿಮ್ಮ ಅಂಕಣ

ಇಂದು ವಿಶ್ವ ಪರಿಸರ ದಿನ

ಪರಿಸರದ ಮೌಲ್ಯವನ್ನು ಇನ್ನಾದರೂ ಅರಿಯೋಣ

ವಾರ್ತಾ ಭಾರತಿ : 4 Jun, 2019
ಕೆ. ಪಿ. ಅಬ್ದುಲ್ ಖಾದರ್ ಕುತ್ತೆತ್ತೂರು

ಸುಂದರ ಹಾಗೂ ಆರೋಗ್ಯಕರ ಪರಿಸರ ಮಾನವ ಬದುಕಿನ ನೆಮ್ಮದಿಗೆ, ಆರೋಗ್ಯಕ್ಕೆ ಹಾಗೂ ವಿಕಾಸಕ್ಕೆ ಅಗತ್ಯವಾಗಿದೆ. ಜಗತ್ತಿನ ಪ್ರತಿಯೊಂದು ಜೀವ ತಂತುಗಳ ಉಗಮ, ಬೆಳವಣಿಗೆ ಮತ್ತು ನಾಶ- ಇವುಗಳ ಮೇಲೆ ಪರಿಸರವು ನಿಶ್ಚಿತ ಪ್ರಭಾವವನ್ನು ಬೀರುತ್ತದೆ. ಪರಿಸರದ ಸಕಲ ಲಾಭವನ್ನು ಪಡೆದ ಮಾನವನು, ಪರಿಸರದ ಸಂರಕ್ಷಣೆಯತ್ತ ಸಂಪೂರ್ಣ ಗಮನ ಹರಿಸುವುದು ಆತನ ಆದ್ಯ ಕರ್ತವ್ಯವಾಗಿದೆ. ಪರಿಸರದ ವಿನಾಶ ಇಂದು ಅತ್ಯಂತ ಅಪಾಯಕಾರಿಯಾಗಿ ಬೆಳೆಯುತ್ತಿದೆ. ನಮ್ಮಂತೆಯೇ ಬದುಕುವ ಹಕ್ಕು ಸಸ್ಯಗಳಿಗೂ ಇವೆ ಎಂಬುದನ್ನು ನಾವು ಮರೆಯುತ್ತಾ ಬಂದಿದ್ದೇವೆ.

ಮಾನವನಿಗೆ ಜೀವಿಸಲು ಗಾಳಿ, ನೀರು ಮತ್ತು ಆಹಾರ ಪರಿಸರದಿಂದ ದೊರೆಯುತ್ತದೆ. ಹಿಂದೆ ಹಸಿರುಡುಗೆಯಿಂದ ಕಂಗೊಳಿಸುತ್ತಿದ್ದ ಪ್ರದೇಶಗಳು, ಇಂದು ಕಟ್ಟಡಗಳ ಸಮೂಹದಿಂದ ತುಂಬಿ, ಬಿಸಿಲ ಝಳವನ್ನು ಹೆಚ್ಚಿಸುತ್ತಿದೆ. ಒಂದು ಕಾಲದಲ್ಲಿ ಹಚ್ಚ ಹಸುರಾಗಿದ್ದ ಮರಗಿಡಗಳು, ಕನ್ನಡಿಯಂತೆ ಹೊಳೆಯುವ ನೀರು, ಶುದ್ಧವಾದ ಗಾಳಿಯಿಂದ ಪರಿಸರ ತುಂಬಿ ಹೋಗಿತ್ತು. ಆದರೆ ಇಂದು ಆ ಪ್ರಕೃತಿ ಸೌಂದರ್ಯವೇ ಕಣ್ಮರೆಯಾಗುತ್ತಿದೆ. ಮರಗಳನ್ನು ಮನಬಂದಂತೆ ಕಡಿಯುವ ಅಭ್ಯಾಸ ಮಾನವನಿಗೆ ವಾಡಿಕೆಯಾಗಿ ಬಿಟ್ಟಿದೆ. ವೃಕ್ಷಸಂಹಾರದಿಂದ ಪ್ರಕೃತಿ ನಿಸ್ಸತ್ವಗೊಂಡು ಮಳೆಯ ಪ್ರಮಾಣ ಕ್ರಮೇಣ ಕಡಿಮೆಯಾಗ ಹತ್ತಿದೆ. ನದಿ, ಹಳ್ಳ, ಬಾವಿಗಳು ಸಂಪೂರ್ಣ ಬತ್ತಿ ಹೋಗುತ್ತಾ ಮಾನವನ ಉಪಯೋಗಕ್ಕೆ ಹಾಗೂ ಮರಗಿಡಗಳ ಬೆಳವಣಿಗೆಗೆ ಸಾಕಷ್ಟು ನೀರು ದೊರೆಯದಾಗಿದೆ. ಜನಸಂಖ್ಯೆ ಏರಿದಂತೆಯೇ ಕಾಡುಗಳೆಲ್ಲಾ ನಾಡಾಗಹತ್ತಿದೆ. ಜಲಮಾಲಿನ್ಯವಂತೂ ನಗರದ ಸಮಸ್ಯೆಯಾಗಿ ಬಿಟ್ಟಿದೆ. ನಗರದ ಕೊಳಕು ನೀರು ರಸ್ತೆಗಳಲ್ಲಿ ಹರಿದು, ಬಾವಿ ನೀರಿಗೆ ಸೇರಿ, ಕುಡಿಯುವ ನೀರಿನಲ್ಲಿ ರೋಗಾಣುಗಳು ತುಂಬಿಕೊಳ್ಳುವ ಸಾಧ್ಯತೆಗಳು ಜಾಸ್ತಿಯಾಗುತ್ತಿದೆ. ಹಳ್ಳಿಗಳಲ್ಲಂತೂ ಕೊಳದ ನೀರಿನಲ್ಲಿ ಪಾತ್ರೆ ತೊಳೆಯುವುದು, ಬಟ್ಟೆ ಒಗೆಯುವುದು, ಸ್ನಾನ ಮಾಡುವುದು, ಪ್ರಾಣಿಗಳನ್ನು ತೊಳೆಯುವುದು ಮತ್ತು ಅದೇ ನೀರನ್ನು ಕುಡಿಯಲು ಉಪಯೋಗಿಸುವುದು ಅನಿವಾರ್ಯ. ಇದರಿಂದಾಗಿ ಅನೇಕ ಸಾಂಕ್ರಾಮಿಕ ರೋಗಗಳು ಪರಿಸರದ ಎಲ್ಲಾ ಜನರಿಗೆ ಹರಡುತ್ತಿದೆ. ಕಾರ್ಖಾನೆಗಳ ಕೊಳವೆಗಳಿಂದ ನಿರಂತರ ಹೊರಸೂಸುವ ದಟ್ಟವಾದ ಹೊಗೆಯು ನಿರ್ಮಿಸುವ ವಾಯುಮಾಲಿನ್ಯವಂತೂ ಮಾನವನ ಉಸಿರಾಟಕ್ಕೆ ಶುಭ್ರಗಾಳಿ ದೊರೆಯದಂತಾಗಿದೆ. ಜನವಸತಿ ಪ್ರದೇಶಗಳಲ್ಲಿ ಕಾರ್ಖಾನೆಗಳು ತಲೆಯೆತ್ತಲು ಅವಕಾಶ ಮಾಡಿಕೊಡುವುದರಿಂದಾಗಿ, ಆಗಬಹುದಾದ ಅಪಾಯವನ್ನು ನಾವು ಮುಖ್ಯವಾಗಿ ಮನಗಾನಬೇಕಾಗಿದೆ. ಪರಿಸರದ ವೌಲ್ಯವನ್ನು ಅರಿತುಕೊಂಡು, ಅದಕ್ಕಾಗುವ ಅನ್ಯಾಯವನ್ನು ತಡೆಯಬೇಕು. ನಿಸರ್ಗದ ಸಂಪತ್ತನ್ನು ತನ್ನ ಸಂಪತ್ತೆಂದೇ ತಿಳಿದು, ಸಂರಕ್ಷಿಸಬೇಕು. ಶುಭ್ರ ಹಾಗೂ ಆರೋಗ್ಯಕರ ಪರಿಸರ ಸಂರಕ್ಷಣೆಯತ್ತ ಜನರಲ್ಲಿ ಪ್ರಜ್ಞೆ ಮೂಡಿಸಬೇಕಾದ ಕಾರ್ಯ ಇಂದು ಅನಿವಾರ್ಯವಾಗಿ ನಡೆಯಬೇಕಾಗಿದೆ. ಜನಸಂಖ್ಯೆಯ ಹೆಚ್ಚಳದಿಂದ, ನಗರಗಳ ಬೆಳವಣಿಗೆಯಿಂದ, ಕೈಗಾರಿಕೆಗಳ ನಿರಂತರ ಹುಟ್ಟುವಿಕೆಯಿಂದ ನಿರ್ಮಾಣವಾಗಬಹುದಾದ ಪರಿಸರ ಮಾಲಿನ್ಯದ ಅಪಾಯವನ್ನು ತಡೆಗಟ್ಟುವ ಬಗ್ಗೆ, ರಚನಾತ್ಮಕ ಮತ್ತು ಕ್ರಿಯಾತ್ಮಕ ಕಾರ್ಯಗಳು ಇಂದು ಅಗತ್ಯವಾಗಿದೆ. ನಮ್ಮ ವಿಜ್ಞಾನಿಗಳು, ಸಂಶೋಧಕರು, ರಾಜಕಾರಣಿಗಳು, ಬುದ್ಧ್ದಿಜೀವಿಗಳು ಹಾಗೂ ಪರಿಸರ ಪ್ರೇಮಿಗಳು ಈ ನಿಟ್ಟಿನಲ್ಲಿ ಎಚ್ಚೆತ್ತು ಪರಿಸರ ಸಂರಕ್ಷಣೆಯಲ್ಲಿ ತಮ್ಮ ಪಾಲಿನ ಕರ್ತವ್ಯವನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು. ಶಾಲಾ ಕಾಲೇಜುಗಳಲ್ಲಿ ಮೊದಲ ಹಂತದಿಂದಲೇ ಪರಿಸರ ಸಂರಕ್ಷಣೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕು. ಬಾನುಲಿಯಲ್ಲಿ, ದೂರದರ್ಶನದಲ್ಲಿ ಮತ್ತು ಪತ್ರಿಕೆಗಳಲ್ಲಿ ಪರಿಸರ ಸಂರಕ್ಷಣೆಯ ಕುರಿತು ಸಾಕಷ್ಟು ಪ್ರಚಾರಕಾರ್ಯಗಳು ನಡೆಯಬೇಕು. ನಗರಗಳನ್ನು ಸ್ವಚ್ಛವಾಗಿಡಲು ಗರಿಷ್ಠಮಟ್ಟದ ಪ್ರಯತ್ನ ನಡೆಯದೆ ಹೋದಲ್ಲಿ, ಅನಾರೋಗ್ಯವೇ ನಮ್ಮ ಮುಂದಿನ ಇತಿಹಾಸವಾಗಬಹುದು. ಮರಗಿಡಗಳ ನಾಶವನ್ನು ತಪ್ಪಿಸಬೇಕು. ಅವುಗಳನ್ನು ನೆಟ್ಟು ಬೆಳೆಸಬೇಕು. ಮರಗಿಡಗಳಿಲ್ಲದಿದ್ದಲ್ಲಿ, ನಮಗೆ ಶುದ್ಧವಾದ ಗಾಳಿ, ತಂಪಾದ ನೆರಳು ಸಿಗುವುದಿಲ್ಲ. ಪರಿಸರ ಸಂರಕ್ಷಣೆ ಮಾಡಲು ಮಾನವನಿಗೆ ಹಕ್ಕು ಇದೆಯೇ ಹೊರತು, ಅದನ್ನು ನಾಶಮಾಡಲಿಕ್ಕಲ್ಲ ಎಂಬುದನ್ನು ಸರಿಯಾಗಿ ಮನದಟ್ಟು ಮಾಡಿಕೊಳ್ಳಬೇಕು. ಆದುದರಿಂದ ಪರಿಸರದ ಸಂರಕ್ಷಣೆಯೇ ನಮ್ಮ ರಕ್ಷಣೆಯೆಂದರಿತು, ಪರಿಸರಕ್ಕಾಗಿ ಮತ್ತು ಪರಿಸರದ ರಕ್ಷಣೆಗಾಗಿ ಹೋರಾಡುವುದು ಪ್ರತಿಯೊಬ್ಬ ಮಾನವನ ಆದ್ಯ ಕರ್ತವ್ಯವಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)