varthabharthi


ನಿಮ್ಮ ಅಂಕಣ

ಕೋಪ ತರಿಸುವುದು ರಾಮಭಕ್ತರಿಗೆ ಭೂಷಣವೇ?

ವಾರ್ತಾ ಭಾರತಿ : 7 Jun, 2019
-ವಿ. ಎನ್. ಲಕ್ಷ್ಮೀನಾರಾಯಣ, ಮೈಸೂರು

ಮಾನ್ಯರೇ,

ಉಡುಪಿ ಪೇಜಾವರ ಮಠದ ಯತಿಗಳಾದ ಶ್ರೀ ವಿಶ್ವೇಶ ತೀರ್ಥರು ‘‘ಪಶ್ಚಿಮ ಬಂಗಾಳ ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗಿದವರ ವಿರುದ್ಧ ಬೆದರಿಕೆ ಹಾಕಿರುವುದು ತರವಲ್ಲ. ಅಷ್ಟೊಂದು ಸಿಟ್ಟು ಕೋಪ ಒಳ್ಳೆಯದಲ್ಲ. ಅವರು ತಾಳ್ಮೆಯಿಂದ ವರ್ತಿಸಬೇಕು’’ ಎಂದು ತಿಳಿಹೇಳಿದರೆಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ತುಂಬಾ ಒಳ್ಳೆಯ ಮಾತು.

ಮೊದಲನೆಯದಾಗಿ, ‘‘ಜೈ ಶ್ರೀರಾಮ್’’ ಎಂದು ಯಾರೋ ದಾರಿಹೋಕರು ಘೋಷಣೆ ಕೂಗಿದರೆ, ಒಂದು ರಾಜ್ಯದ ಮುಖ್ಯಮಂತ್ರಿ ಯಾಕೆ ಸಿಟ್ಟು, ಕೋಪಗಳನ್ನು ತೋರಿಸಿ, ಘೋಷಣೆ ಕೂಗುವವರ ವಿರುದ್ಧ ಬೆದರಿಕೆ ಹಾಕಬೇಕು ಎನ್ನುವುದು ಅರ್ಥವಾಗುವುದಿಲ್ಲ.

ತೆಲುಗಿನ ವೈಷ್ಣವ ಕವಿಯೊಬ್ಬ ಕಾವ್ಯರಚನೆಗೆ ತೊಡಗುವಾಗ ಪ್ರಮಾದವಶಾತ್ ‘‘ಶ್ರೀ ಶಿವ..’’ಎಂದು ಪ್ರಾರಂಭಿಸಿ, ‘‘ಅಯ್ಯೋ ವಿಷ್ಣುವಿನ ಅರ್ಧಾಂಗಿಯಾದ ತಾಯಿ ಲಕ್ಷ್ಮ್ಮಿಯನ್ನು ಶಿವನೊಂದಿಗೆ ಕೂಡಿಸಿಬಿಟ್ಟೆನಲ್ಲಾ’’ ಎಂದು ದಿನಗಟ್ಟಲೆ ಪರಿತಾಪಪಟ್ಟನಂತೆ. ‘ಹರಿ ಸರ್ವೋತ್ತಮ’ ಎಂದು ನಂಬುವ ದ್ವೈತ ಸಿದ್ಧಾಂತದ ಪರಂಪರೆಯ ಮಠಸ್ಥ ಯತಿಗಳಾದ ಶ್ರೀ ವಿಶ್ವೇಶ ತೀರ್ಥರಿಗೆ ರಸ್ತೆಯಲ್ಲಿ ಯಾರಾದರೂ ದಾರಿಹೋಕರು ಸದುದ್ದೇಶದಿಂದಲೋ, ದುರುದ್ದೇಶದಿಂದಲೋ ‘‘ನಮಶ್ಶಿವಾಯ’’, ‘‘ಶಿವನೇ ಸರ್ವೋತ್ತಮ’’ ಎಂದು ಪದೇ ಪದೇ ಘೋಷಣೆ ಕೂಗಿದರೆ ಅವರು ಹೇಗೆ ಪ್ರತಿಕ್ರಿಯಿಸುತ್ತಾರೋ ತಿಳಿಯದು. ‘‘ಕೈಲಾಸ ವಾಸ, ಗೌರೀಶ ಈಶ, ತೈಲಧಾರೆಯಂತೆ ಮನಸುಕೊಡೊ ಹರಿಯಲ್ಲಿ ಶಂಭೋ’’ ಎಂದು ಶಿವನನ್ನು ಸ್ತುತಿಸಿದ ದಾಸದೃಷ್ಟಿಯು ಪ್ರಾಜ್ಞಯತಿಗಳಾದ ಅವರ ನೆರವಿಗೆ ಬರಬಹುದು. ಆದರೆ ದುರದೃಷ್ಟವಶಾತ್ ಸೀತಾಮಾತೆಯಂತೆ ಶಾಂತ ಸ್ವಭಾವದವರಲ್ಲವಾದ ಮಮತಾ ಬ್ಯಾನರ್ಜಿ ಕೇವಲ ಸಾಮಾನ್ಯಜನರಿಂದ ಚುನಾಯಿತರಾದ ಒಬ್ಬ ಮುಖ್ಯಮಂತ್ರಿ, ಶ್ರೀಪೇಜಾವರರಂತೆ, ತರ್ಕ-ವೇದ-ಶಾಸ್ತ್ರ-ಪುರಾಣೇತಿಹಾಸಗಳಲ್ಲಿ ಪಾರಂಗತರಾದ ಮಾಧ್ವಮಠದ ಯತಿಗಳಲ್ಲ. ಆದ್ದರಿಂದ ಅವರು ಸಿಟ್ಟು ಕೋಪಗಳನ್ನು ತೋರಿಸುತ್ತಿರಬಹುದು.

ಎರಡನೆಯದಾಗಿ, ರಸ್ತೆಯಲ್ಲಿ ಮಮತಾ ಬ್ಯಾನರ್ಜಿ ಅವರೆದುರು ‘‘ಜೈ ಶ್ರೀರಾಮ್’’ ಎಂದು ಯಾರಾದರೂ ಯಾಕೆ ಘೋಷಣೆ ಕೂಗಬೇಕು? ಅವರೇನೂ ಶ್ರೀರಾಮಚಂದ್ರನಲ್ಲ, ಸೀತಾದೇವಿಯೂ ಅಲ್ಲ, ಶ್ರೀರಾಮನ ವೇಷಧಾರಿಯೂ ಅಲ್ಲ. ಭಾರತದ ರಾಜ್ಯವೊಂದರ ಚುನಾಯಿತ ಮುಖ್ಯಮಂತ್ರಿ. ಅಲ್ಲದೆ ಅವರೆದುರು ‘‘ಜೈ ಶ್ರೀರಾಮ್’’ ಎಂದು ಕೂಗು ವವರು ರಾಮಭಕ್ತ ಹನುಮಂತನೇ? ಅವನ ಸಂತತಿಯವರೇ? ಅಥವಾ ಪೌರಾಣಿಕ ಸಿನೆಮಾ-ನಾಟಕಗಳಲ್ಲಿ ರಾಮನ ಪರವಾಗಿ ಜೈಕಾರಹಾಕುವ ಹನುಮಂತನ ವೇಷಧಾರಿಗಳೇ? ಹೋಗಲಿ, ರಾಮನ ಪರಮಭಕ್ತರಾದ ಸಜ್ಜನ ನಾಗರಿಕರು ರಸ್ತೆಯಲ್ಲೇ ರಾಮಭಕ್ತಿಪರವಶರಾಗಿ ಹಾಗೆ ಕೂಗಿದರು ಎಂದಿಟ್ಟುಕೊಂಡರೂ ‘‘ಜೈ ಶ್ರೀರಾಮ್’’ ಘೋಷಣೆಯಿಂದ ಬ್ಯಾನರ್ಜಿ ಯವರು ಅಜ್ಞಾನದಿಂದಲೋ, ಅಥವಾ ಶಿವನ ಅರ್ಧಾಂಗಿಯಾದ ಕಾಳಿಕಾಮಾತೆಯ ಪರಮಭಕ್ತಳಾಗಿ ಶ್ರೀರಾಮನ ಜೈಕಾರದ ಘೋಷಣೆಯಿಂದ ಕಿರಿಕಿರಿಗೊಂಡು ಸಿಟ್ಟು ಕೋಪಗಳನ್ನು ತೋರಿಸಿದರೆ, ಮತ್ತೆ ಮತ್ತೆ ಹಾಗೆ ಕೂಗಿ ಅವರಿಗೆ ಮತ್ತಷ್ಟು ಸಿಟ್ಟು ಕೋಪ ತರಿಸುವುದು ರಾಮಭಕ್ತರಿಗೆ ಭೂಷಣವೇ?? ಬ್ಯಾನರ್ಜಿಯವರಿಗೆ ತಾಳ್ಮೆಯಿಂದ ವರ್ತಿಸಬೇಕೆಂದು ತಿಳಿಹೇಳುವ ಪ್ರಾಜ್ಞರಾದ ಯತಿಗಳು ರಾಮರಸದಲ್ಲಿ ಮುಳುಗೆದ್ದು ಘೋಷಣೆಹಾಕುವ ಸಜ್ಜನರಾದ ಆ ರಾಮಭಕ್ತರಿಗೆ, ಒಂದು ರಾಜ್ಯದ ಮುಖ್ಯಮಂತ್ರಿಗೆ ತಿಳಿದೂ ತಿಳಿದೂ ಘೋಷಣೆಯ ಮೂಲಕ ಸಿಟ್ಟು ಕೋಪಗಳನ್ನು ತರಿಸುವುದು ಸಜ್ಜನರ ಲಕ್ಷಣ ವಲ್ಲವೆಂದು ಅವರಿಗೂ ಸಹ ತಿಳಿ ಹೇಳುವುದು ಯತಿಧರ್ಮವೇ ಅಲ್ಲವೇ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)