varthabharthi

ಆರೋಗ್ಯ

ನಿಮಗೆ ಗೊತ್ತೇ...? ಮಕ್ಕಳನ್ನೂ ಸಂಧಿವಾತ ಕಾಡಬಹುದು...!

ವಾರ್ತಾ ಭಾರತಿ : 7 Jun, 2019

ಸಂಧಿವಾತ ಹೆಚ್ಚಾಗಿ ವಯಸ್ಸಾದವರನ್ನು ಕಾಡುವ ಕಾಯಿಲೆ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಮಕ್ಕಳೂ ಸಂಧಿವಾತಕ್ಕೆ ಗುರಿಯಾಗುತ್ತಾರೆ ಎಂದರೆ ಹಲವರು ಹುಬ್ಬೇರಿಸಬಹುದು.ಆದರೆ ಬಾಲ ಸಂಧಿವಾತವು ವಿಶ್ವಾದ್ಯಂತ ಪ್ರಮುಖ ಆರೋಗ್ಯ ಸಮಸ್ಯೆಗಳಲ್ಲೊಂದಾಗಿದೆ ಎನ್ನುವುದು ವಾಸ್ತವ.

 ಸಂಧಿವಾತವು ಮಕ್ಕಳಲ್ಲಿ ಪ್ರಮುಖವಾಗಿ ಕೀಲುಗಳು,ಸ್ನಾಯುಗಳು ಮತ್ತು ಮೂಳೆಗಳ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡುತ್ತದೆ ಹಾಗೂ ಇದು ಊತ,ನೋವು ಮತ್ತು ಪೀಡಿತ ಭಾಗದಲ್ಲಿ ಕೆಂಪಗಾಗುವಿಕೆಯಂತಹ ಸಾಮಾನ್ಯ ಲಕ್ಷಣಗಳನ್ನೇ ತೋರಿಸುತ್ತದೆಯಾದರೂ ಕೆಲವು ವಿಶಿಷ್ಟ ಲಕ್ಷಣಗಳೂ ಇವೆ.

 ಮಕ್ಕಳಲ್ಲಿ ಸಂಧಿವಾತ ಕಾಣಿಸಿಕೊಂಡಿದೆ ಎಂಬ ಶಂಕೆಯುಂಟಾದರೆ ಚಿಕಿತ್ಸೆಯ ನಿರ್ಧಾರಕ್ಕೆ ಮುನ್ನ ಅದು ಯಾವ ವಿಧದ ಸಂಧಿವಾತ ಎನ್ನುವುದನ್ನು ತಿಳಿದುಕೊಳ್ಳಬೇಕಾಗುತ್ತದೆ. ಸಂಧಿವಾತವು ಮುಂದುವರಿದ ಹಂತದಲ್ಲಿದ್ದರೆ ವ್ಯಕ್ತಿಯ ಪ್ರಾಥಮಿಕ ಚಲನವಲನಗಳಿಗೂ ತೊಂದರೆಯನ್ನುಂಟು ಮಾಡುತ್ತದೆ.

ನಾವು ಕೇವಲ ವಯಸ್ಕರಲ್ಲಿ ಕೇಳಿರುವ ಅನಾರೋಗ್ಯ ಸ್ಥಿತಿಗಳು ಮಕ್ಕಳಲ್ಲಿ ಕಂಡು ಬಂದರೆ ಖಂಡಿತ ಕಡೆಗಣಿಸಕೂಡದು. ಸಕಾಲಕ್ಕೆ ಚಿಕಿತ್ಸೆ ಕೊಡಿಸದಿದ್ದರೆ ಇದು ಗಂಭೀರ ಸ್ಥಿತಿಗೆ ಕಾರಣವಾಗಬಹುದು ಮತ್ತು ಜೀವಮಾನವಿಡೀ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಮಕ್ಕಳಲ್ಲಿ ಉಂಟಾಗುವ ಸಂಧಿವಾತದ ವಿಧಗಳು ಮತ್ತು ಅವುಗಳ ಲಕ್ಷಣಗಳ ಕುರಿತು ಮಾಹಿತಿಯಿಲ್ಲಿದೆ.

ಜುವೆಲಿನ್ ಡರ್ಮಟೊಮಯೊಸಿಟಿಸ್: ಪ್ರತಿ ಐವರು ಮಕ್ಕಳಲ್ಲಿ ಒಂದು ಮಗು ಈ ವಿಧದ ಸಂಧಿವಾತಕ್ಕೆ ಗುರಿಯಾಗುವ ಸಾಧ್ಯತೆಯಿರುತ್ತದೆ. ಇಡೀ ಶರೀರವನ್ನೇ ಕಾಡಿಸುವ ಇದು ಪ್ರಮುಖವಾಗಿ ಭುಜಗಳು,ತೊಡೆಗಳು ಮತ್ತು ಕುತ್ತಿಗೆಯಿಂದ ಸೊಂಟದವರೆಗಿನ ಭಾಗವನ್ನು ಪೀಡಿಸುತ್ತದೆ. ಇದರಿಂದಾಗಿ ಮೆಟ್ಟಿಲುಗಳನ್ನು ಹತ್ತುವುದು, ಓಡುವುದು ಹಾಗೂ ಕುಳಿತುಕೊಳ್ಳುವ ಮತ್ತು ನಿಂತುಕೊಳ್ಳುವಂತಹ ಇತರ ಚಲನವಲನಗಳು ಕಷ್ಟವಾಗುತ್ತವೆ.

ಜುವೆಲಿನ್ ಐಡೊಪತಿಕ್ ಆರ್ಥ್ರಿಟಿಸ್: ಈ ವಿಧದ ಸಂಧಿವಾತವು ಸಾಮಾನ್ಯವಾಗಿ ಮಕ್ಕಳಲ್ಲಿ 16ರ ವಯಸ್ಸಿಗೆ ಮುನ್ನವೇ ಕಾಣಿಸಿಕೊಳ್ಳತೊಡಗುತ್ತದೆ. ಕನಿಷ್ಠ ಆರು ವಾರಗಳ ಕಾಲ ಕೀಲುಗಳಲ್ಲಿ ಊತ ಕಾಣಿಸಿಕೊಳ್ಳುತ್ತದೆ. ಈ ಲಕ್ಷಣಗಳು ಸಂಧಿವಾತದ ಗಂಭೀರತೆಯನ್ನು ತಿಳಿದುಕೊಳ್ಳಲು ಪ್ರಮುಖ ಸೂಚಕಗಳಾಗಿವೆ. ಮೂಳೆಗಳ ಸವೆತ, ಕೀಲುಗಳ ಜೋಡಣೆ ತಪ್ಪುವಿಕೆ,ಸ್ನಾಯುಗಳು ಮತ್ತು ಮೃದು ಅಂಗಾಂಶಗಳ ಸೆಡೆತ,ಕ್ರಮ ತಪ್ಪಿದ ಶರೀರದ ಬೆಳವಣಿಗೆ ಇವು ಈ ವಿಧದ ಸಂಧಿವಾತದ ಸಾಮಾನ್ಯ ಲಕ್ಷಣಗಳಾಗಿವೆ.

 ಜುವೆಲಿನ್ ಸ್ಲೆರೊಡರ್ಮಾ: ಈ ವಿಧದ ಸಂಧಿವಾತದಲ್ಲಿ ಚರ್ಮವು ಬಿಗಿಗೊಳ್ಳುತ್ತದೆ ಮತ್ತು ಪೆಡಸಾಗುತ್ತದೆ ಮತ್ತು ಈ ಸ್ಥಿತಿ ಇಡೀ ಶರೀರವನ್ನು ವ್ಯಾಪಿಸುತ್ತದೆ. ಅದು ಮೊದಲು ಮುಖ,ಮುಂದೋಳುಗಳು,ಕೈಗಳು ಮತ್ತು ಬೆರಳುಗಳನ್ನು ಕಾಡುತ್ತದೆ.

  ಜುವೆಲಿನ್ ಲುಪಸ್: ಶರೀರದ ರೋಗ ನಿರೋಧಕ ಶಕ್ತಿಗೆ ಹಾನಿಯನ್ನುಂಟು ಮಾಡುವ ಈ ವಿಧದ ಬಾಲ ಸಂಧಿವಾತವು ಹೆಚ್ಚಾಗಿ ಹೆಣ್ಣುಮಕ್ಕಳನ್ನು ಕಾಡುತ್ತದೆ ಹಾಗೂ ಮೂತ್ರಪಿಂಡ,ಚರ್ಮ,ಕೀಲುಗಳು,ರಕ್ತ ಮತ್ತು ಶರೀರದ ಇತರ ಮುಖ್ಯಭಾಗಗಳಿಗೆ ಹಾನಿಯನ್ನುಂಟು ಮಾಡುತ್ತದೆ. ಶರೀರದಲ್ಲಿ ಯಾವುದೇ ಭಾಗದಲ್ಲಿ ಪಾತರಗಿತ್ತಿ ಆಕಾರದಲ್ಲಿ ದದ್ದುಗಳು,ಮಗುವಿನ ಕುತ್ತಿಗೆ ಮತ್ತು ಮುಖದಲ್ಲಿ ಹಪ್ಪಳೆಗಳಿಂದ ಕೂಡಿದ ದದ್ದುಗಳು,ಸೂರ್ಯನ ಬಿಸಿಲನ್ನು ನೋಡಲು ಮತ್ತು ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸಲು ಸಾಧ್ಯವಾಗದಿರುವುದು,ಎದೆ ಮತ್ತು ಕೀಲುಗಳಲ್ಲಿ ನೋವು ಇವು ಈ ವಿಧದ ಸಂಧಿವಾತದ ಲಕ್ಷಣಗಳಾಗಿವೆ.

 ಫೈಬ್ರೊಮ್ಯಾಲ್ಗಿಯಾ: ಹೆಚ್ಚಾಗಿ ಮಕ್ಕಳು ಪ್ರೌಢಾವಸ್ಥೆಯನ್ನು ತಲುಪುವ ಮುನ್ನ ಕಾಣಿಸಿಕೊಳ್ಳುವ ಫೈಬ್ರೊಮ್ಯಾಲ್ಗಿಯಾವು ಸಂಧಿವಾತ ಸಂಬಂಧಿತ ಸ್ಥಿತಿಯಾಗಿದ್ದು,ಶರೀರದಲ್ಲಿ ನೋವು ಮತ್ತು ಸೆಟೆತಗಳಿಗೆ ಕಾರಣವಾಗುತ್ತದೆ. ಇದು ತೀವ್ರ ಬಳಲಿಕೆ,ನಿದ್ರೆಗೆ ವ್ಯತ್ಯಯ ಮತ್ತು ದೀರ್ಘಕಾಲಿಕ ಶರೀರದ ನೋವಿಗೂ ಕಾರಣವಾಗುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)