varthabharthi

ನಿಮ್ಮ ಅಂಕಣ

ಹೈಟೆನ್ಷನ್ ತಂತಿಗಳನ್ನು ಭೂಮಿಯಡಿಯಲ್ಲಿ ಅಳವಡಿಸಿ..!!

ವಾರ್ತಾ ಭಾರತಿ : 7 Jun, 2019
-ಕೆ. ಎಸ್. ನಾಗರಾಜ್ ಹನುಮಂತನಗರ, ಬೆಂಗಳೂರು

ಮಾನ್ಯರೇ,

ಇತ್ತೀಚಿನ ದಿನಗಳಲ್ಲಿ, ಮನೆಗಳ ಮೇಲೆ ಹೈಟೆನ್ಷನ್ ತಂತಿಗಳು ಹಾದು ಹೋಗುತ್ತಿರುವ ಹಿನ್ನೆಲೆಯಲ್ಲಿ, ಪುಟ್ಟ ಪುಟ್ಟ ಮಕ್ಕಳು ಮತ್ತು ಇತರ ನಾಗರಿಕರು ಕೂಡಾ ವಿದ್ಯುತ್ ಅವಘಡಗಳಿಗೆ ಬಲಿಯಾಗಿ ಸಾವನ್ನಪ್ಪುತ್ತಿರುವುದು ಹೆಚ್ಚಾಗುತ್ತಿದೆ. ಇಷ್ಟೆಲ್ಲಾ ಆಧುನಿಕತೆಯನ್ನು ಕಂಡಿರುವ ಬೆಂಗಳೂರು ನಗರದಲ್ಲಿ, ಯಾವುದೋ ಕಾಲದಲ್ಲಿ, ಹೈಟೆನ್ಷನ್ ತಂತಿಗಳಿಗಾಗಿ ಹಾಕಲಾಗಿರುವ ಕಂಬಗಳು ಹಲವಾರು ನಾಗರಿಕರ ನಿವೇಶನಗಳನ್ನೇ ನುಂಗಿವೆೆ ಮತ್ತು ಈ ತಂತಿಗಳು ಹಲವಾರು ನಿವೇಶನಗಳ ಮೇಲೆ ಹಾದು ಹೋಗಿರುತ್ತವೆ. ಲಕ್ಷಾಂತರ ರೂ. ಕೊಟ್ಟು ನಿವೇಶನವನ್ನು ಖರೀದಿಸಿದ ನಾಗರಿಕರು ಅನಿವಾರ್ಯವಾಗಿ ಇಂತಹ ಜಾಗಗಳಲ್ಲಿ ಮನೆಗಳನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ. ಇಂತಹ ತಂತಿಗಳು ಹಾದು ಹೋಗಿರುವ ಪ್ರದೇಶಗಳ ಅಡಿಯಲ್ಲಿ ನಿವೇಶನಗಳನ್ನು ಮಾರಾಟ ಮಾಡಬಾರದು ಎಂಬ ನಿಯಮವಿದ್ದರೂ ಸಹ ಬಿಡಿಎ ಸೇರಿದಂತೆ ಅನೇಕ ಗೃಹಮಂಡಳಿ ಮತ್ತು ಹೌಸಿಂಗ್ ಸೊಸೈಟಿಗಳು ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಆದರೆ ಇಂತಹ ಜಾಗಗಳಲ್ಲಿ ಮನೆಕಟ್ಟಿದರೆ ಅಪಾಯ ಕಟ್ಟಿಟ್ಟ ಬುತ್ತಿ.

ಆದ್ದರಿಂದ ಬೆಸ್ಕಾಂನವರು ಈಗಲಾದರೂ ಇಂತಹ ತಂತಿಗಳನ್ನು ಭೂಮಿಯ ಒಳಗಡೆ, ಅಳವಡಿಸಿದರೆ ಸಾವಿರಾರು ನಿವೇಶನದಾರರಿಗೆ ಅನುಕೂಲವಾಗುವುದರ ಜೊತೆಗೆ ಅವರ ಕುಟುಂಬದ ಸದಸ್ಯರು ನೆಮ್ಮದಿಯಿಂದ ಬದುಕಬಹುದು. ಬೆಸ್ಕಾಂನವರು ಆದಷ್ಟು ಬೇಗ ಬೆಂಗಳೂರು ನಗರಾದ್ಯಂತ, ಭೂಮಿಯಡಿಯಲ್ಲಿ ಇಂತಹ ತಂತಿಗಳನ್ನು ಅಳವಡಿಸಲು ತುರ್ತು ಯೋಜನೆಯನ್ನು ಹಮ್ಮಿಕೊಳ್ಳಬೇಕು. ಸಾಮಾನ್ಯವಾಗಿ ರಸ್ತೆಯ ಅಭಿವೃದ್ಧಿಯ ವಿಚಾರಕ್ಕೆ, ಜಲಮಂಡಳಿಯ ನೀರಿನ ಸಂಪರ್ಕದ ವಿಚಾರಕ್ಕೆ, ಇಲ್ಲವೇ ರೈಲ್ವೆ ಹಳಿಗಳಿಗಾಗಿ ವಿವಿಧ ಇಲಾಖೆಯವರು ನಿವೇಶನವನ್ನು ಅಥವಾ ಜಮೀನನ್ನು ಬಳಸಿಕೊಂಡರೆ ನಾಗರಿಕರಿಗೆ ಪರಿಹಾರ ಸಿಗುತ್ತದೆೆ. ಆದರೆ ಬೆಸ್ಕಾಂನಲ್ಲಿ ಹೈ ಟೆನ್ಷನ್ ತಂತಿಗಳ ಅಳವಡಿಕೆಗೆ ನಿವೇಶನಗಳನ್ನು ಮತ್ತು ಜಮೀನನ್ನು ಬಳಸಿಕೊಂಡರೆ ಪರಿಹಾರ ನೀಡುವುದಿಲ್ಲ. ಈ ಹಿನ್ನೆಲೆಯಲ್ಲಿ ಬೆಸ್ಕಾಂನವರು ಇಂತಹ ತಂತಿಗಳು ಹಾದು ಹೋಗಿರುವ ನಿವೇಶನದ ಮಾಲಕರ ಸಭೆಯನ್ನು ಕರೆದು, ಅವರ ಸಹಕಾರದೊಂದಿಗೆ ಭೂಮಿಯಡಿಯಲ್ಲಿ ತಂತಿಯನ್ನು ಅಳವಡಿಸಲು ಯೋಜನೆ ರೂಪಿಸಬೇಕು. ಬೆಸ್ಕಾಂ ಇಂತಹ ಯೋಜನೆ ರೂಪಿಸಿದರೆ ಸಾವಿರಾರು ನಿವೇಶನದಾರರು ಸಹಕಾರ ನೀಡಲು ಸಿದ್ಧರಿದ್ದಾರೆ. ಬೆಂಗಳೂರಿನ ಅಭಿವೃದ್ಧಿಯ ದೃಷ್ಟಿಯಿಂದ ಈ ಯೋಜನೆ ತುರ್ತಾಗಿ ಆಗಬೇಕಾಗಿದೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)