varthabharthi

ಸಂಪಾದಕೀಯ

ಮುಂಗಾರು ತಂದ ಸಂದೇಶ

ವಾರ್ತಾ ಭಾರತಿ : 8 Jun, 2019

ಮುಂಗಾರು ಮಳೆ ಹವಾಮಾನ ಇಲಾಖೆಯ ಆದೇಶವನ್ನು ಸ್ವೀಕರಿಸುವ ಸೂಚನೆಗಳು ಕಾಣುತ್ತಿಲ್ಲ. ಜೂನ್ 6ಕ್ಕೆ ಮುಂಗಾರು ಮಳೆ ಕರ್ನಾಟಕಕ್ಕೆ ಕಾಲಿರಿಸುತ್ತದೆ ಎಂದು ಇಲಾಖೆ ಹೇಳಿತ್ತು. ಇಲಾಖೆಯ ಸೂಚನೆ ದೊರಕಿ ದಿನ ಎರಡು ಕಳೆದಿವೆ. ಆದರೂ ಅಧಿಕೃತವಾಗಿ ರಾಜ್ಯಾದ್ಯಂತ ಮಳೆಯಂತೂ ಆಗಿಲ್ಲ. ಕರಾವಳಿಯಂತೂ ಬಿಸಿಲ ಧಗೆಯಿಂದ ಬೆಂದು ಹೋಗಿದೆ. ಕಳೆದ ವರ್ಷ ಈ ಸಮಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ನೇತ್ರಾವತಿಯ ನೆರೆಗೆ ಸಾಕ್ಷಿಯಾಗಿತ್ತು. ಸುದೀರ್ಘವಾದ ಒಂದು ಮಳೆಗೆ ಮಂಗಳೂರು ಅಕ್ಷರಶಃ ಮುಳುಗಿ ಹೋಗಿತ್ತು. ಮುಂಗಾರು ಪೂರ್ವ ಮಳೆ ಪಕ್ಕಕ್ಕಿರಲಿ, ಈ ಬಾರಿ ಮುಂಗಾರು ಮಳೆಯೇ ಭುವಿಗಿಳಿಯಲು ಮುನಿಸು ತೋರಿಸುತ್ತಿದೆ. ಇದು ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ದೇಶಾದ್ಯಂತ ಮುಂಗಾರು ಪೂರ್ವ ಮಳೆ ಕಳೆದ 65 ವರ್ಷಗಳಲ್ಲೇ ಅತ್ಯಂತ ಕನಿಷ್ಠವಾಗಿದೆ ಎಂದು ಇಲಾಖೆ ಹೇಳುತ್ತಿದೆ. ದೇಶದ ಶೇ. 44ರಷ್ಟು ಭಾಗ ಬರಗಾಲವನ್ನು ಎದುರಿಸುತ್ತಿದೆ. ಅಂದರೆ ಅರ್ಧಕ್ಕರ್ಧ ದೇಶ ನೀರಿಗಾಗಿ ತತ್ತರಿಸುತ್ತಿದೆ.

ಇತ್ತೀಚೆಗೆ ದಕ್ಷಿಣ ಭಾರತದ ಪ್ರಮುಖ ಧರ್ಮಕ್ಷೇತ್ರವೊಂದು ನೀರಿನ ಕೊರತೆಯ ಕಾರಣದಿಂದ, ‘ಭಕ್ತಾದಿಗಳು ದಯವಿಟ್ಟು ಕ್ಷೇತ್ರಕ್ಕೆ ಆಗಮಿಸಬೇಡಿ’ ಎಂದು ಪತ್ರಿಕಾ ಪ್ರಕಟನೆಯನ್ನೇ ನೀಡಿತು. ಈ ಹಿಂದೆಲ್ಲ ಭಕ್ತರು ಬೋರ್‌ವೆಲ್‌ಗಳಲ್ಲಿ, ಬಾವಿಗಳಲ್ಲಿ ನೀರು ದೊರಕದೆ ಇದ್ದರೆ, ಈ ಕ್ಷೇತ್ರಕ್ಕೆ ಹರಕೆ ಹೊತ್ತುಕೊಳ್ಳುತ್ತಿದ್ದರು. ಇದೀಗ ಕ್ಷೇತ್ರವೇ ನೀರಿನ ಕೊರತೆಯ ಕಾರಣದ ಹಿನ್ನೆಲೆಯಲ್ಲಿ, ಮುಂಜಾಗ್ರತೆ ವಹಿಸಿದೆ. ಕ್ಷೇತ್ರದ ಪ್ರಕಟನೆಯೂ ಶ್ಲಾಘನೀಯ.

ನೀರಿನ ಕೊರತೆಯಿರುವ ಸಂದರ್ಭದಲ್ಲಿ ಭಕ್ತರು ಆಗಮಿಸಿದರೆ ಪರಿಸರ ಇನ್ನಷ್ಟು ಕೆಡುತ್ತದೆ. ಜೊತೆಗೆ ಪುಣ್ಯ ಕ್ಷೇತ್ರದ ಆಸುಪಾಸಿನ ಶುಚಿತ್ವವೂ ಹಾಳಾಗುತ್ತದೆ. ಜನರು ಕುಡಿಯುವ ನೀರಿಗಾಗಿ ತತ್ತರಿಸುವ ಸಂದರ್ಭದಲ್ಲಿ, ನೀರು ಪೋಲಾಗಬಾರದು ಎಂದು ಕ್ಷೇತ್ರಕ್ಕೆ ಸಂಬಂಧಿಸಿದ ಹಿರಿಯರು ಸೂಕ್ತ ನಿರ್ಧಾರವನ್ನು ತಳೆದಿದ್ದಾರೆ. ಇದೇ ಹೊತ್ತಿಗೆ ಕಂದಾಯ ಇಲಾಖೆ ಹವಾಮಾನ ಇಲಾಖೆಯನ್ನು ನಂಬಿ ‘ಜೂನ್ 6ಕ್ಕೆ ಪರ್ಜನ್ಯ ಹೋಮ’ ಮಾಡಲು ರಾಜ್ಯಾದ್ಯಂತ ದೇವಸ್ಥಾನಗಳಿಗೆ ಆದೇಶ ನೀಡಿತು. ಪೂಜೆ, ಪ್ರಾರ್ಥನೆಗಳ ಮೂಲಕ ಮಳೆ ಬರಿಸುವುದು ಸರಕಾರಿ ಇಲಾಖೆಗಳ ವ್ಯಾಪ್ತಿಯಲ್ಲಿ ಬರುವುದಿಲ್ಲ ಎನ್ನುವ ಸಣ್ಣ ಸಾಮಾನ್ಯ ಜ್ಞಾನವೂ ಕಂದಾಯ ಇಲಾಖೆಗೆ ಇಲ್ಲವಾಗಿ ಹೋಯಿತು. ಮಳೆಗಾಗಿ ಪೂಜೆ, ಹೋಮ, ಯಜ್ಞ ಮಾಡುವುದು ಖಾಸಗಿ ನಂಬಿಕೆ. ಆ ನಂಬಿಕೆ ಇರುವವರು ಪೂಜೆ ಮಾಡಬಹುದು, ಸಾರ್ವಜನಿಕವಾಗಿ ನಮಾಝ್ ಕೂಡ ನಿರ್ವಹಿಸಬಹುದು. ಈಗಾಗಲೇ ಇದನ್ನು ಸಾರ್ವಜನಿಕವಾಗಿ ಜನರು ಹಮ್ಮಿಕೊಂಡಿದ್ದಾರೆ ಕೂಡ.

‘ಸರಕಾರಿ ಕೆಲಸ ದೇವರ ಕೆಲಸ’ ಎಂಬ ವಾಕ್ಯವನ್ನು ಸರಕಾರಿ ಅಧಿಕಾರಿಗಳು ತಪ್ಪು ತಿಳಿದು, ಮಳೆ ಬರಿಸುವುದಕ್ಕಾಗಿ ಪೂಜೆ, ಪುನಸ್ಕಾರಕ್ಕೆ ಆದೇಶ ನೀಡಿರಬೇಕು. ಇಷ್ಟಕ್ಕೂ ಹವಾಮಾನ ಇಲಾಖೆಯೇ ಜೂ.6ರಂದು ಮುಂಗಾರು ಮಳೆ ರಾಜ್ಯಕ್ಕೆ ಆಗಮಿಸುತ್ತದೆ ಎಂದ ಮೇಲೆ ಸರಕಾರದ ವತಿಯಿಂದ ಅಂದು ಹೋಮ, ಯಜ್ಞಗಳಿಗೆ ಕರೆ ಕೊಡುವ ಅಗತ್ಯವೇನಿತ್ತು? ಅಂದರೆ, ಮಳೆ ಸುರಿದ ಹೆಗ್ಗಳಿಕೆಯನ್ನು ಈ ಹೋಮ ನಿರ್ವಹಿಸಿದ ಪುರೋಹಿತರ ತಲೆಗೆ ಕಟ್ಟುವುದು ಕಂದಾಯ ಇಲಾಖೆಯ ಆಯಕಟ್ಟಿನ ಜಾಗದಲ್ಲಿರುವವರ ಉದ್ದೇಶವಾಗಿತ್ತು. ಅದಕ್ಕಾಗಿಯೇ ಇರಬೇಕು, ಮಳೆರಾಯ ಹಟ ಹಿಡಿದವನಂತೆ ಸುರಿಯಲೇ ಇಲ್ಲ. ವರದಿಯ ಪ್ರಕಾರ ಈ ಹಿಂದಿನ ಸ್ಥಿತಿಗೆ ಹೋಲಿಸಿದರೆ ಮೇ 30ಕ್ಕೆ ಇದ್ದಂತೆ ಭಾರತದ ಪ್ರಮುಖ 91 ಜಲಾಶಯಗಳಲ್ಲಿ ನೀರಿನ ಮಟ್ಟ ಅವುಗಳ ಸಾಮರ್ಥ್ಯದ ಶೇ. 20ಕ್ಕೆ ಕುಸಿದಿದೆ. ಇದರ ಜೊತೆ ಜೊತೆಗೇ ಈ ಬಾರಿ ಮುಂಗಾರು ವಿಳಂಬವಾಗಲಿದೆ ಮಾತ್ರವಲ್ಲ, ಉತ್ತರ ಮತ್ತು ದಕ್ಷಿಣ ಭಾರತ ಎರಡರಲ್ಲೂ ಮಳೆಯಲ್ಲಿ ಇಳಿಕೆಯಾಗುವ ಕುರಿತಂತೆ ಭೀತಿ ಪಡಲಾಗಿದೆ. ಕೃಷಿಗಾಗಿ ನೀರು ಅನಂತರ ಮಾತು. ಮೊದಲು ಕುಡಿಯುವ ನೀರಾದರೂ ಸಿಕ್ಕಿದರೆ ಸಾಕು ಎನ್ನುವಷ್ಟರಮಟ್ಟಿಗೆ ರೈತರ ಸ್ಥಿತಿ ಚಿಂತಾಜನಕವಾಗಿದೆ. ನಳ್ಳಿ ನೀರು ಪೂರೈಕೆಯನ್ನು ಭಾಗಶಃ ಕಡಿತಗೊಳಿಸಲಾಗಿದ್ದು, ಜನರು ಟ್ಯಾಂಕರ್ ನೀರನ್ನು ಅವಲಂಬಿಸುವ ಸ್ಥಿತಿ ನಿರ್ಮಾಣವಾಗಿದೆ. ಮರಗಳನ್ನು ಬೆಳೆಸುವ ಬದಲು ಅವುಗಳನ್ನು ಕಡಿಯುತ್ತಾ ಗಗನಚುಂಬಿ ಕಟ್ಟಡಗಳನ್ನು ಬೆಳೆದ ಪರಿಣಾಮವಾಗಿ, ಜನರ ವಿರುದ್ಧ ಪ್ರಕೃತಿ ನಿಧಾನಕ್ಕೆ ಸೇಡು ತೀರಿಸಿಕೊಳ್ಳುವುದಕ್ಕೆ ಹಚ್ಚಿದೆ. ಇಂದು ನಾವು ಅಳಿದು ಹೋದ ಸಹಸ್ರಾರು ಕೆರೆಗಳನ್ನು ಪುನಶ್ಚೇತನಗೊಳಿಸುವ ಬಗ್ಗೆ ಮಾತನಾಡುತ್ತೇವೆ. ಆದರೆ ಅರ್ಧಕ್ಕರ್ಧ ಕೆರೆಗಳನ್ನು ಹುಡುಕುವುದಕ್ಕೆ ಸಾಧ್ಯವೇ ಇಲ್ಲ. ಅವುಗಳ ಮೇಲೆ ಬೃಹತ್‌ಕಟ್ಟಡಗಳು ತಲೆಯೆತ್ತಿ, ಅಲ್ಲಿ ನಾವು ವಾಸ ಮಾಡುತ್ತಿದ್ದೇವೆ. ಉಳಿದಂತೆ ಹೂಳು ತುಂಬಿದ, ದುಃಸ್ಥಿತಿಯಲ್ಲಿರುವ ಕೆರೆಗಳಿಗೆ ಮರುಜನ್ಮ ನೀಡುವ ಕೆಲಸ ನಡೆಯಬೇಕು. ಆದರೆ ಇದಕ್ಕೂ ಮೊದಲು ಇರುವ ನದಿಗಳನ್ನು ನಾವು ಎಷ್ಟರಮಟ್ಟಿಗೆ ಶುಚಿಯಾಗಿಟ್ಟಿದ್ದೇವೆ, ಕುಡಿಯಲು ಅರ್ಹವಾಗುವಂತೆ ಉಳಿಸಿಕೊಂಡಿದ್ದೇವೆ ಎನ್ನುವುದರ ಬಗ್ಗೆ ಗಮನ ಹರಿಸಬೇಕಾಗಿದೆ.

 ಈ ದೇಶ ನದಿಗಳನ್ನು ತಾಯಿ, ದೇವತೆ ಎಂದೆಲ್ಲ ನಂಬುತ್ತದೆ. ಅದರೊಳಗೆ ಮಿಂದರೆ ಸರ್ವ ಪಾಪ ನಾಶವಾಗುತ್ತದೆ ಎನ್ನುವುದು ಇಲ್ಲಿನ ಸನಾತನ ನಂಬಿಕೆ. ಆದರೆ ಈ ದೇಶ ಪ್ರಕೃತಿಯನ್ನು ತಾಯಿ, ದೇವತೆ ಎಂದು ಕರೆಯುತ್ತಲೇ ಅದನ್ನು ನಾಶ ಮಾಡುತ್ತಾ, ಅದರ ಮೇಲೆ ಅತ್ಯಾಚಾರಗೈಯುತ್ತಾ ಬಂದಿದೆ. ಇದಕ್ಕೆ ಅತ್ಯುತ್ತಮ ಉದಾಹರಣೆ ಗಂಗಾ ನದಿ. ದೇಶ ಗಂಗಾನದಿಯನ್ನು ದೇವತೆಯಾಗಿ ನಂಬುತ್ತದೆ. ಇದರ ಪಾತ್ರ ಪುಣ್ಯಕ್ಷೇತ್ರಗಳ ಆಗರ. ಆದರೆ ಈ ಪುಣ್ಯಕ್ಷೇತ್ರಗಳಿಂದಾಗಿ ನದಿಗಳ ನೀರು ಕುಡಿಯುವುದಕ್ಕೆ ಅನರ್ಹವಾಗಿದೆಯೇ ಹೊರತು, ಬೇರಾವುದೇ ಲಾಭವಾಗಿಲ್ಲ. ಒಂದು ವೇಳೆ ನದಿಗಳು ದೇವತೆಗಳೇ ಆಗಿದ್ದರೆ, ಅವುಗಳನ್ನು ನಾಶ ಮಾಡಿದ, ಅವುಗಳನ್ನು ಮಲಿನಗೊಳಿಸಿದ ಶಾಪ ಈ ದೇಶದ ಮೇಲೆ ಮತ್ತು ಭಕ್ತರ ಮೇಲಿದೆ. ಎಲ್ಲೆಲ್ಲ ಖ್ಯಾತ ಪುಣ್ಯಕ್ಷೇತ್ರಗಳಿವೆಯೋ ಅಲ್ಲೆಲ್ಲ ನದಿಗಳ ನೀರು ಕುಡಿಯುವುದಕ್ಕೆ ಅನರ್ಹವಾಗಿವೆ ಎಂದು ತಜ್ಞರ ವರದಿಗಳು ತಿಳಿಸುತ್ತವೆ.

ಒಂದು ಮೂಲದ ಪ್ರಕಾರ ದೇಶದ ಶೇ. 70ರಷ್ಟು ಸಿಹಿನೀರು ಕಲುಷಿತಗೊಂಡಿದೆ. ಭಾರತವು ವಿಶ್ವ ಜಲ ಗುಣಮಟ್ಟದ ಸೂಚಿಯಲ್ಲಿನ 122 ರಾಷ್ಟ್ರಗಳ ಪೈಕಿ 120ನೇ ಸ್ಥಾನದಲ್ಲಿದೆ. ಪ್ರಕೃತಿಯಲ್ಲೇ ದೇವರನ್ನು ಕಂಡಿದ್ದೇವೆ ಎಂದು ಪದೇ ಪದೇ ಹೆಮ್ಮೆ ಪಟ್ಟುಕೊಳ್ಳುವ ನಾವು, ನದಿಗಳನ್ನು ದೇವರ ಹೆಸರಿನಲ್ಲೇ ನಾಶ ಮಾಡುತ್ತಿದ್ದೇವೆ. ನಾವೀಗ ನದಿಗಳನ್ನು, ಕೆರೆಗಳನ್ನು ದೇವರಾಗಿ ಗುರುತಿಸಿ ಪೂಜಿಸಿ ಅದನ್ನು ಹಾಳುಗೆಡವಿದ್ದು ಸಾಕು. ಇಂದು ನದಿಗಳನ್ನು ನದಿಗಳಾಗಿ, ಕೆರೆಗಳನ್ನು ಕೆರೆಗಳಾಗಿ ವಾಸ್ತವ ಕಣ್ಣಲ್ಲಿ ನೋಡುವುದನ್ನು ಕಲಿಯಬೇಕಾಗಿದೆ. ಆ ಮೂಲಕ ಅದರ ಮಹತ್ವವನ್ನು ನಮ್ಮ ಮಕ್ಕಳಿಗೆ ತಿಳಿಸಿಕೊಡಬೇಕಾಗಿದೆ. ಇರುವ ಸಿಹಿ ನೀರಿನ ಮೂಲಗಳನ್ನೂ ಕೆಡಿಸುತ್ತಾ ಹೋದರೆ, ಇರದ ಮೂಲಗಳನ್ನು ಹುಡುಕುವ ಪ್ರಯತ್ನದಲ್ಲಿ ನಾವು ಯಶ ಸಾಧಿಸಲಾರೆವು. ಮೊದಲು ಇರುವ ನೀರನ್ನು ಉಳಿಸಿಕೊಳ್ಳೋಣ. ಹಾಗೆಯೇ ಪ್ರಕೃತಿಗೆ ಮಾಡಿಕೊಂಡು ಬಂದ ಆತ್ಮವಂಚನೆಯ ಕುರಿತಂತೆ ಆತ್ಮಾವಲೋಕನ ಮಾಡಿಕೊಳ್ಳಲು ಇದು ಸುಸಮಯ. ನಮ್ಮ ಸ್ವಾರ್ಥ ಬದಿಗಿಟ್ಟು ಈ ಪ್ರಕೃತಿ, ನದಿ, ಕಾಡು, ಕೆರೆಗಳೆಲ್ಲವೂ ನಮಗೆ ನಮ್ಮ ಹಿರಿಯರು ಕೊಟ್ಟ ಸಾಲ, ಅದನ್ನು ನಮ್ಮ ಮಕ್ಕಳಿಗೆ ಜಾಗರೂಕತೆಯಿಂದ ಒಪ್ಪಿಸಬೇಕಾಗಿದೆ ಎಂಬ ಎಚ್ಚರಿಕೆಯಿಂದ ಪ್ರಕೃತಿಯನ್ನು ಬಳಸತೊಡಗಿದರೆ ಮಳೆ ಸುರಿದರೂ ಸುರಿದೀತು. ಮುಂಗಾರು ಮಳೆಯ ಬದಲಿಗೆ ಇನ್ನಾವುದೋ ಸಂದೇಶವನ್ನು ನಮಗೆ ನೀಡಲು ಯತ್ನಿಸುತ್ತಿದೆ. ಅದನ್ನು ಆಲಿಸುವ ಪ್ರಯತ್ನ ನಡೆಸೋಣ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)