varthabharthi

ಕ್ರೀಡೆ

ಧೋನಿಗೆ ಬಿಸಿಸಿಐ ಬೆಂಬಲ ನೀಡಲಿ: ಕಿರಣ್ ರಿಜಿಜು

ವಾರ್ತಾ ಭಾರತಿ : 8 Jun, 2019

ಹೊಸದಿಲ್ಲಿ, ಜೂ.7: ಗ್ಲೌಸ್ ವಿವಾದಕ್ಕೆ ಸಂಬಂಧಿಸಿ ಬಿಸಿಸಿಐ ಎಂಎಸ್ ಧೋನಿಯ ಬೆಂಬಲಕ್ಕೆ ನಿಲ್ಲಬೇಕು. ಇದರಲ್ಲಿ ರಾಜಕೀಯ ಮಾಡುವ ಅಗತ್ಯವಿಲ್ಲ್ಲ ಎಂದು ಕ್ರೀಡಾ ಸಚಿವ ಕಿರಣ್ ರಿಜಿಜು ಶುಕ್ರವಾರ ಹೇಳಿದ್ದಾರೆ.

‘‘ಬಿಸಿಸಿಐ ಈ ವಿಚಾರವನ್ನು ಐಸಿಸಿ ಮುಂದಿಟ್ಟು, ಬಗೆಹರಿಸಿಕೊಳ್ಳುವ ವಿಶ್ವಾಸವಿದೆ. ಎಂ.ಎಸ್. ಧೋನಿ ಗುರುತು ರಾಷ್ಟ್ರದ ಗುರುತು, ಸೇನೆಯ ಗುರುತು ಹಾಗೂ ಇದರಲ್ಲಿ ಯಾವುದೇ ರಾಜಕೀಯವಿಲ್ಲ. ಹಾಗಾಗಿ ಬಿಸಿಸಿಐ ಧೋನಿ ಬೆಂಬಲಕ್ಕೆ ನಿಲ್ಲಬೇಕು’’ ಎಂದು ರಿಜಿಜು ಸುದ್ದಿಗಾರರಿಗೆ ತಿಳಿಸಿದರು.

ಕ್ರೀಡಾ ಮಂಡಳಿಗಳ ವಿಚಾರದಲ್ಲಿ ಸರಕಾರ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಲು ಬಯಸುವೆ. ಬಿಸಿಸಿಐ ಅಥವಾ ಯಾವುದೇ ಕ್ರೀಡಾ ಒಕ್ಕೂಟಗಳು ಸ್ವಾಯತ್ತ ಸಂಸ್ಥೆಯಾಗಿದ್ದು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತವೆ ಎಂದು ರೆಜಿಜು ಹೇಳಿದ್ದಾರೆ. ಬುಧವಾರ ನಡೆದ ದಕ್ಷಿಣ ಆಫ್ರಿಕ ವಿರುದ್ಧ ವಿಶ್ವಕಪ್ ಪಂದ್ಯ ವೇಳೆ ಧೋನಿ ಭಾರತೀಯ ಸೇನೆಯ ಕಠಾರಿ ಮುದ್ರೆ ಇರುವ ಗ್ಲೌಸ್ ಧರಿಸಿಕೊಂಡು ಆಡಿ ಸೇನೆಗೆ ಗೌರವ ಸಲ್ಲಿಸಿದ್ದರು. ‘‘ವಿಶ್ವಕಪ್ ವೇಳೆ ಈ ಘಟನೆ ನಡೆದಿದ್ದು, ಇದು ಭಾರತದ ಘನತೆಗೆ ಸಂಬಂಧಿಸಿದ ವಿಚಾರ. ಬಿಸಿಸಿಐ ತನ್ನ ಮಟ್ಟದಲ್ಲಿ ಐಸಿಸಿ ಮುಂದೆ ಈ ವಿಷಯವನ್ನು ಮಂಡಿಸಬೇಕು. ಭಾರತೀಯರ ಭಾವನೆಯನ್ನು ಮನಸ್ಸಿನಲ್ಲಿಟ್ಟುಕೊಂಡು ತನ್ನ ಅಭಿಪ್ರಾಯವನ್ನು ಸ್ಪಷ್ಟವಾಗಿ ಹೇಳಬೇಕು’’ ಎಂದು ರಿಜಿಜು ಹೇಳಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)