varthabharthi

ಸುಗ್ಗಿ

ಒಂದು ಕಣ್ಣೋಟ

ರಾಷ್ಟ್ರೀಯ ಶಿಕ್ಷಣ ನೀತಿ-2019

ವಾರ್ತಾ ಭಾರತಿ : 8 Jun, 2019
ಬಿ. ಶ್ರೀಪಾದ ಭಟ್

ಸಂಸ್ಕೃತ ಭಾಷಾ ಕಲಿಕೆಗೆ ವಿಶೇಷ ಮಹತ್ವವನ್ನು ಕೊಡ ಬೇಕೆಂದು ಶಿಫಾರಸು ಮಾಡಿದೆ. ಸಾಧ್ಯವಾದರೆ ಅದನ್ನು ಕಡ್ಡಾಯ ಮಾಡಬಹುದೇ ಎನ್ನುವಂತಹ ಅರ್ಥ ಬರುವ ಮಾತುಗಳನ್ನು ಉಲ್ಲೇಖಿ ಸಲಾಗಿದೆ. ಇದು ನಮ್ಮಲ್ಲಿ ಅನುಮಾನ ಮೂಡಿಸುತ್ತದೆ. ಕೇಂದ್ರದಲ್ಲಿ ಆರೆಸ್ಸೆಸ್- ಬಿಜೆಪಿ ಆಡಳಿತ ನಡೆಸುತ್ತಿದೆ. ಸಂಸ್ಕೃತವನ್ನು ಸಂಘ ಪರಿವಾರವು ಬ್ರಾಹ್ಮಣೀಕರಣದ ನೆಲೆಯಲ್ಲಿ ಪರಿಭಾವಿಸುತ್ತದೆ. ಅವರೇ ಆಡಳಿತದಲ್ಲಿರುವಾಗ ಸಂಸ್ಕೃತವನ್ನು ಕಡ್ಡಾಯಗೊಳಿಸುವಂತಹ ಪ್ರಯತ್ನಗಳು ಕೊಂಚ ಅಪಾಯಕಾರಿ ನಡೆಯಾಗಿದೆ.

2ನೇ ಅವಧಿಗೆ ಆಯ್ಕೆಯಾದ ಮೋದಿ ಸರಕಾರ ಅಧಿಕಾರ ವಹಿಸಿಕೊಂಡ ಮರು ದಿನವೇ ಮೇ 31ರಂದು ಇಸ್ರೋ ಸಂಸ್ಥೆಯ ಮಾಜಿ ಅಧ್ಯಕ್ಷ ಕಸ್ತೂರಿ ರಂಗನ್ ಅವರ ಅಧ್ಯಕ್ಷತೆಯಲ್ಲಿ ತಯಾರಾದ ‘ರಾಷ್ಟ್ರೀಯ ಶಿಕ್ಷಣ ನೀತಿ 2019’ಯನ್ನು ಪ್ರಕಟಿಸಿದೆ. ಜೂನ್ 30ರ ಒಳಗೆ ಪ್ರತಿಕ್ರಿಯೆ, ಅಭಿಪ್ರಾಯಗಳನ್ನು ಸಲ್ಲಿಸಬೇಕೆಂದು ಮಾನವ ಸಂಪನ್ಮೂಲ ಇಲಾಖೆ ತಿಳಿಸಿದೆ. ಪ್ರೊ. ವಸುಧ ಕಾಮತ್, ಪ್ರೊ.ಮಂಜುಲ್ ಭಾರ್ಗವ, ಡಾ. ರಾಮ್ ಶಂಕರ್ ಕುರೀಲ್, ಪ್ರೊ. ಓ.ವಿ. ಕಟ್ಟೀಮನಿ, ಕ್ರಿಶ್ಣಮೋಹನ್ ತ್ರಿಪಾಠಿ, ಪ್ರೊ. ಮಾಜರ್ ಆಸೀಫ್, ಪ್ರೊ. ಎಂ.ಕೆ.ಶ್ರೀಧರ್, ರಾಜೇಂದ್ರ ಪ್ರತಾಪ ಗುಪ್ತ ಈ ಸಮಿತಿಯ ಸದಸ್ಯರು. ಇವರಲ್ಲಿ ಎಂ.ಕೆ.ಶ್ರೀಧರ್ ಅವರು ನೇರವಾಗಿ ಆರೆಸ್ಸೆಸ್‌ನ ಸಂಘಚಾಲಕ ರಾಗಿದ್ದವರು ಮತ್ತು ಎಬಿವಿಪಿಯ ಉಪಾಧ್ಯಕ್ಷರಾಗಿದ್ದ ವರು. ರಾಜೇಂದ್ರ ಪ್ರತಾಪ್ ಗುಪ್ತ ಅವರು 2009 ಮತ್ತು 2014ರ ಲೋಕಸಭಾ ಚುನಾವಣೆ ಯಲ್ಲಿನ ಬಿಜೆಪಿಯ ಪ್ರಣಾಳಿಕೆಯನ್ನು ರೂಪಿಸಿದವರಲ್ಲಿ ಪ್ರಮುಖರು. 2018ರಲ್ಲಿ ಆಗಿನ ಕೇಂದ್ರ ಆರೋಗ್ಯ ಮಂತ್ರಿ ಜೆ.ಪಿ. ನಡ್ಡ ಅವರು ತಮ್ಮ ಸಲಹೆಗಾರರಾಗಿದ್ದ ಈ ರಾಜೇಂದ್ರ ಪ್ರತಾಪ್ ಗುಪ್ತ ಅವರನ್ನು ಭ್ರಷ್ಟಾಚಾರದ ಆಧಾರದ ಮೇಲೆ ಸೇವೆಯಿಂದ ವಜಾಗೊಳಿಸಿದ್ದರು.

ಆದರೆ ಕಳೆದ ಐದು ವರ್ಷಗಳಲ್ಲಿ ವಿಶ್ವವಿದ್ಯಾನಿಲಯಗಳಿಗೆ ಆರೆಸ್ಸೆಸ್ ಸಿದ್ಧಾಂತಗಳಲ್ಲಿ ನಂಬಿಕೆ ಇಟ್ಟವರನ್ನು ಉಪಕುಲಪತಿಗಳನ್ನಾಗಿ ನೇಮಿಸಲಾಗಿದೆ. ಎಲ್ಲಾ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳಲ್ಲಿ ಸರಕಾರವು ನೇರವಾಗಿ ಹಸ್ತಕ್ಷೇಪ ಮಾಡುತ್ತಿದೆ. ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಆರ್ಥಿಕ ಅನುದಾನ ಕಡಿತಗೊಳಿಸ ಲಾಗುತ್ತಿದೆ. ಯಾವುದೇ ರಾಜ್ಯ ಸರಕಾರಗಳುಸಹ ತಮ್ಮ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಸಬಲೀಕರಣಗೊಳಿಸಿಲ್ಲ, ಬದಲಿಗೆ ದುರ್ಬಲಗೊಳಿಸಿವೆ. ಈ ಹಿನ್ನೆಲೆಯಲ್ಲಿ ಈ ಶಿಕ್ಷಣ ನೀತಿಗಳು ಯಾವುದೇ ಮಹತ್ವ ಪಡೆದಿಲ್ಲ ಎನ್ನುವುದು ನಿಜವಾದರೂ ಸರಕಾರವು ಶಿಕ್ಷಣ ನೀತಿಯನ್ನು ಬಿಡುಗಡೆಗೊಳಿಸಿದೆ ಎಂದಾಗ ಅದಕ್ಕೆ ಪ್ರತಿಕ್ರಿಯಿಸಿ, ಸಂವಾದ, ಅಭಿಪ್ರಾಯಗಳನ್ನು ರೂಪಿಸುವುದು ಅಗತ್ಯವಾಗಿದೆ. ಅದ ರಲ್ಲಿನ ಜೀವವಿರೋಧಿ, ಮತಾಂಧತೆಯ ಅಂಶಗಳಿದ್ದರೆ ವಿರೋಧಿಸಿ ಜನಾಂದೋಲನ ರೂಪಿಸುವುದು ಪ್ರಜ್ಞಾವಂತರ ಕರ್ತವ್ಯ.

ಈ ಹೊಸ ಶಿಕ್ಷಣ ನೀತಿ 2019ಯನ್ನು ಇಂಗ್ಲಿಷ್ ಮತ್ತು ಹಿಂದಿ ಭಾಷೆ ಯಲ್ಲಿ ಮುದ್ರಿಸಲಾಗಿದೆ. ಇದು ಆಕ್ಷೇಪಾರ್ಹ. ಪ್ರಾದೇಶಿಕ ಭಾಷೆ ಯಾದ ಹಿಂದಿಯ ಜೊತೆಗೆ ಇತರ ಪ್ರಾದೇಶಿಕ ಭಾಷೆಗಳಲ್ಲಿ ಯಾಕೆ ಮುದ್ರಿಸಲಿಲ್ಲ? ಇದರರ್ಥ ಈ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ಹಿಂದಿಯನ್ನು ಒಂದು ರಾಷ್ಟ್ರಭಾಷೆ ಎಂದು ನಂಬಿರುವುದು. ಈಗಾಗಲೇತ್ರಿಭಾಷಾ ಸೂತ್ರದಡಿಯಲ್ಲಿ ಹಿಂದಿ ಭಾಷೆಯನ್ನು ಕಡ್ಡಾಯ ಮಾಡಿರುವು ದರ ವಿರುದ್ಧ ದಕ್ಷಿಣ ಭಾರತದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಈ ವಿರೋಧಕ್ಕೆ ಮಣಿದಿರುವ ಕೇಂದ್ರ ಸರಕಾರ ಹಿಂದಿ ಕಡ್ಡಾಯ ಎನ್ನುವುದನ್ನು ಕೈಬಿಟ್ಟಿದೆ. ಆದರೆ ಹಿಂಬಾಗಿಲಿನಿಂದ ಈ ರೀತಿಯಾಗಿ ಹಿಂದಿಯನ್ನು ಹೇರುತ್ತಿದೆ. ಇದೇ ಶಿಕ್ಷಣ ನೀತಿಯಲ್ಲಿ ಭಾರತದಲ್ಲಿ ಶೇ.15 ಪ್ರಮಾಣದ ಜನಸಂಖ್ಯೆಗೆ ಇಂಗ್ಲಿಷ್ ಬರುತ್ತದೆ ಎಂದು ಹೇಳಲಾಗಿದೆ. ಹಾಗಿದ್ದಲ್ಲಿ ಈ ವರದಿಯನ್ನು ಮಿಕ್ಕ ಶೇ.85 ಪ್ರಮಾಣದ ಜನಸಂಖ್ಯೆ ಓದುವುದು ಹೇಗೆ? ಅವರ ಅಭಿಪ್ರಾಯ ಮುಖ್ಯವಲ್ಲವೇ? ಇದಕ್ಕಾಗಿ ಈ ವರದಿಯನ್ನು ಭಾರತದ ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿ ಮುದ್ರಿಸ ಬೇಕು ಎಂದು ಒತ್ತಾಯಿಸಬೇಕಾಗಿದೆ. ಈ ಶಿಕ್ಷಣ ನೀತಿಯಲ್ಲಿ ಶಾಲಾ ಶಿಕ್ಷಣ, ಉನ್ನತ ಶಿಕ್ಷಣ, ಇತರೆ ಹೆಚ್ಚುವರಿ ಮುಖ್ಯ ವಲಯಗಳು, ಶಿಕ್ಷಣದ ಪರಿವರ್ತನೆ ಎಂದು ನಾಲ್ಕು ವಿಭಾಗಗಳಿವೆ.

ಪೀಠಿಕೆಯ 28ನೇ ಪುಟದಲ್ಲಿ An integrated yet flexible approach to education ತಲೆಬರಹದ ಅಡಿಯಲ್ಲಿ ಆರಂಭದ ಬಾಲ್ಯದ ಆರೈಕೆ ಮತ್ತು ಶಿಕ್ಷಣವು (ECCE) ಶಾಲಾ ಶಿಕ್ಷಣಕ್ಕೆ ಬುನಾದಿಯಾಗಿ ಪೂರ್ವ ಪ್ರಾಥಮಿಕ, 1,2ನೇ ಗ್ರೇಡ್ (3-8 ವಯಸ್ಸು) ಒಂದು ಹಂತವೆಂದು ಪರಿಗಣಿಸಿ ಏಕರೂಪಿ ಪಠ್ಯಕ್ರಮ ವನ್ನು ರೂಪಿಸುವುದು ಮತ್ತು ಆಟ-ಕಂಡುಕೊಳ್ಳುವಿಕೆಯ ಕಲಿಕೆ ಯರಿಮೆಯನ್ನು ಕಲಿಸುವುದು. ಇದರ ನಂತರ 3,4,5 ಗ್ರೇಡ್‌ನ (9-11 ವಯಸ್ಸು) ಮೂರು ವರ್ಷಗಳ ತಯಾರಿಕಾ ಹಂತವೆಂದು ಪರಿಗಣಿಸಲಾಗುವುದು. ಈ ಹಂತದಲ್ಲಿ ಪಠ್ಯಪುಸ್ತಕಗಳನ್ನು ಬಳಸಿಕೊಳ್ಳ ಲಾಗುವುದು ಮತ್ತು ಔಪಚಾರಿಕ ಕ್ಲಾಸ್‌ರೂಮ್ ಕಲಿಕೆಯನ್ನು ಪ್ರಾರಂಭಿಸಲಾಗುವುದು. ನಂತರದ ಮೂರು ವರ್ಷಗಳ 6,7, ಮತ್ತು 8 ಗ್ರೇಡ್‌ನ ಮಾಧ್ಯಮಿಕ ಶಾಲಾ ಶಿಕ್ಷಣವೆಂದು ಪರಿಗಣಿಸಿ ನಂತರದ ನಾಲ್ಕು ವರ್ಷಗಳ 9,10,11,12 ಗ್ರೇಡ್‌ಗಳನ್ನ ಪ್ರೌಡ ಶಿಕ್ಷಣವೆಂದು ಪರಿಗಣಿಸಬೇಕು. ಈ ಹಂತದಲ್ಲಿ ಲಿಬರಲ್ ಕಲೆ ಶಿಕ್ಷಣವನ್ನು ಪರಿಚಯಿಸಬೇಕು ಎಂದು ಹೇಳಿದೆ. ಮುಂದುವರಿದು 29-30ನೇ ಪುಟಗಳಲ್ಲಿ ಪದವಿ, ಉನ್ನತ ಶಿಕ್ಷಣದಲ್ಲಿ ಮಾನವಿಕ ಅಧ್ಯಯನ ಮತ್ತು ವಿಜ್ಞಾನ, ತಂತ್ರಜ್ಞಾನದ ಅಧ್ಯಯನಗಳನ್ನು ಒಂದುಗೂಡಿಸಿ ಸಂಯೋಜಿಸಬೇಕು ಎಂದು ಹೇಳಿದೆ.

ಮೊದಲ ಭಾಗ ಶಾಲಾ ಶಿಕ್ಷಣದ ಅಡಿಯಲ್ಲಿ ಅಧ್ಯಾಯ 1ರಲ್ಲಿ ಮೊದಲ 2 ಪುಟಗಳಲ್ಲಿ ಮೇಲೆ ಹೇಳಿದ ಆರಂಭದ ಬಾಲ್ಯದ ಆರೈಕೆ ಮತ್ತು ಶಿಕ್ಷಣ (ECCE)ಆವಶ್ಯಕತೆಯ ಕುರಿತು ವಿವರಿಸ ಲಾಗಿದೆ. 1-3ನೇವಯಸ್ಸಿನಲ್ಲಿ ಪೌಷ್ಟಿಕ ಆಹಾರ ಮತ್ತು ಪಾಲನೆಯ ಹಂತದಿಂದ 3-6ನೇವಯಸ್ಸಿನಲ್ಲಿ ಆಟ-ಪಾಠಗಳ ಹಂತದಿಂದ 6-8 ವಯಸ್ಸಿನಲ್ಲಿ ಕಲಿಕೆಯ ಪ್ರಾರಂಭದ ಹಂತದವರೆಗೆ ಅಂದರೆ 1-8 ವಯಸ್ಸಿನೊಳಗಿನ ಹಂತವನ್ನುಏಕೀಕೃತ ಕಲಿಕೆಯರಿಮೆ ಬುನಾದಿ ಹಂತ ಎಂದು ಕರೆದಿದ್ದಾರೆ. 1-3 ಮತ್ತು 3-6 ವಯಸ್ಸಿನ ಎರಡು ಹಂತಗಳ ಮಕ್ಕಳ ಆರೈಕೆ, ಪೋಷಣೆ ಯಲ್ಲಿ ಅಂಗನವಾಡಿ ವ್ಯವಸ್ಥೆ ಉತ್ತಮವಾಗಿ ಕಾರ್ಯ ನಿರ್ವಹಿಸಿವೆ. ಆದರೆ ಶೈಕ್ಷಣಿಕವಾಗಿ ದುರ್ಬಲವಾಗಿವೆ ಎಂದು ಅಭಿಪ್ರಾಯಪಟ್ಟಿದೆ.

ಅಭಿಪ್ರಾಯ: (ಇದನ್ನು ಒಪ್ಪುವುದು ಕಷ್ಟ. ಏಕೆಂದರೆ ಶಿಶುಪಾಲನೆ ಹಂತವಾದ ಅಂಗನವಾಡಿ ವ್ಯವಸ್ಥೆಯಲ್ಲಿ ಶಿಕ್ಷಣದ ಪಾತ್ರವಿರುವುದಿಲ್ಲ. ಅಲ್ಲಿ ಮಕ್ಕಳ ದೈಹಿಕ, ಮಾನಸಿಕ ಆರೋಗ್ಯ ಮತ್ತು ಪೌಷ್ಟಿಕತೆ ಮತ್ತು ಚೈತನ್ಯದ ಮೇಲೆ ಕೇಂದ್ರೀಕರಿಸಲಾಗುತ್ತದೆ. ಇಲ್ಲಿ ಅಂಗನವಾಡಿ ವ್ಯವಸ್ಥೆ ಮತ್ತು ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಒಂದೇ ಎಂದು ತಪ್ಪಾಗಿ ಗ್ರಹಿಸಿದಂತಿದೆ)

ಈ ಮಿತಿಯನ್ನು ಮೀರಲು ಅಂಗನವಾಡಿ-ಪೂರ್ವ ಪ್ರಾಥಮಿಕ- ಮಾಧ್ಯಮಿಕ ಶಿಕ್ಷಣವನ್ನು ಒಂದೇ ಹೆಣಿಗೆಯಲ್ಲಿ ಪರಿಗಣಿಸಿ ಅದನ್ನು ಆರಂಭದ ಬಾಲ್ಯದ ಆರೈಕೆ ಮತ್ತು ಶಿಕ್ಷಣ (1-8 ವಯಸ್ಸು) ಎಂದು ಕರೆದು ಒಂದೆ ಸೂರಿನಡಿ ಶಿಕ್ಷಣ ನಿಡುವುದನ್ನು ಬಲವಾಗಿ ಪ್ರತಿಪಾದಿಸಿದೆ.ಇದು ನಿಜಕ್ಕೂ ಸ್ವಾಗತಾರ್ಹ. ಇದೇ ಸಂದರ್ಭದಲ್ಲಿ ಪುಟ 48-50ಗಳಲ್ಲಿ ಪಠ್ಯಗಳ ಆಯ್ಕೆ, ಕಲಿಕೆ ಕುರಿತು ವಿವರಿಸಲಾಗಿದೆ. ಇಲ್ಲಿ ಒಂದೆಡೆ ಈ ಬುನಾದಿ ಹಂತದ ಶಿಕ್ಷಣಕ್ಕೆ ಕೇಂದ್ರೀಕೃತ ಎನ್‌ಸಿಆರ್‌ಟಿ ಪಠ್ಯಕ್ರಮ ವನ್ನು ಅಳವಡಿಸಿ ಕೊಳ್ಳಬೇಕೆಂದು ಶಿಫಾರಸು ಮಾಡಿದೆ

ಅಭಿಪ್ರಾಯ: 1-8 ವಯಸ್ಸಿನ ಬುನಾದಿ ಹಂತದ ಬಾಲ್ಯದ ಆರೈಕೆ, ಪೋಷಣೆ, ಬುನಾದಿ ಶಿಕ್ಷಣಕ್ಕೆ ಕೇಂದ್ರೀಕೃತ ಪಠ್ಯಕ್ರಮವು ಮಕ್ಕಳ ಕ್ರಿಯಾಶೀಲತೆ ಮತ್ತು ಸೃಜನಶೀಲತೆಯನ್ನೇ ನಾಶ ಮಾಡುತ್ತದೆ. ಈ ಹಂತದಲ್ಲಿ ವಿಕೇಂದ್ರೀಕರಣವಾದ ರಾಜ್ಯ ಪಠ್ಯಕ್ರಮವನ್ನು ಅಳವಡಿಸಿಕೊಳ್ಳಬೇಕು. ಸ್ಥಳೀಯತೆಗೆ ಹೆಚ್ಚಿನ ಆದ್ಯತೆ ಕೊಡಬೇಕು. ತಮ್ಮ ನೆಲದ, ಮಣ್ಣಿನ ಪಾಠಗಳನ್ನು ಕಲಿಯಬೇಕು. ಎರವಲು ಪಠ್ಯಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ.

ಪುಟ 50-54ಗಳಲ್ಲಿ ಹೇಗೆ ಅಂಗನವಾಡಿ- ಪೂರ್ವ ಪ್ರಾಥಮಿಕ- ಪ್ರಾಥಮಿಕ ಶಿಕ್ಷಣವನ್ನು ಬೆಸೆಯಬೇಕು ಮತ್ತು ಯಾವ ರೀತಿ ಒಂದೇ ಸೂರಿನಡಿ ತರಬೇಕು ಎಂದು ವಿವರಿಸಲಾಗಿದೆ. ಇದು ಸಹ ಸ್ವಾಗತಾರ್ಹ. ಪುಟ55-65ರ ವರೆಗೆ ಪಠ್ಯಗಳ ಆಯ್ಕೆ, ರಚನೆ, ಕಲಿಕಾ ಕ್ರಮ, ಬೋಧನಾಕ್ರಮಗಳ ಕುರಿತು ವಿವರಿಸಲಾಗಿದೆ. ಇದನ್ನ ಬುನಾದಿ ಸಾಕ್ಷರತೆ ಎಂದು ಕರೆಯಲಾಗಿದೆ.

ಅಭಿಪ್ರಾಯ: ಈ ಹಂತದ (1-8 ವಯಸ್ಸು) ಕಾರ್ಯಯೋಜನೆ, ರೂಪುರೇಷೆಗಳ ಜವಬ್ದಾರಿಯನ್ನು ಆಯಾ ರಾಜ್ಯ ಸರಕಾರಗಳ ಸಾರ್ವ ಜನಿಕ ಶಿಕ್ಷಣ ಇಲಾಖೆ, ಸ್ಥಳೀಯ ಸಾರ್ವಜನಿಕ ಸಂಸ್ಥೆಗಳ ಹೊಣೆಗಾರಿಕೆ ಯಾಗಿರುತ್ತದೆ.

65-72ನೇ ಪುಟಗಳಲ್ಲಿ ಶಾಲೆಯಿಂದ ಹೊರಗುಳಿಯುವ, ಅರ್ಧ ದಲ್ಲೇ ಶಿಕ್ಷಣವನ್ನು ಮೊಟಕುಗೊಳಿಸುವ ಮಕ್ಕಳ ಕುರಿತು ವಿವರವಾಗಿ ಪ್ರಸ್ತಾಪಿಸಲಾಗಿದೆ. ಇದಕ್ಕೆ ಪರಿಹಾರವಾಗಿ ಮೂಲಭೂತ ಸೌಕರ್ಯ ಗಳು, ಶಿಕ್ಷಕರ ನೇಮಕಾತಿ, ಬೋಧನಾ ಗುಣಮಟ್ಟ, ವಾಹನ ವ್ಯವಸ್ಥೆ ಇತ್ಯಾದಿಗಳನ್ನು ಚರ್ಚಿಸಲಾಗಿದೆ.

ಪುಟ 73- ವರೆಗೆ ಪಠ್ಯಕ್ರಮ ಮತ್ತು ಕಲಿಕೆಯರಿಮೆ (pedagogy) ಕುರಿತು ವಿವರಿಸಲಾಗಿದೆ. ಇಲ್ಲಿ 5+3+3+4 ಕಲಿಕೆಯರಿಮೆಯನ್ನು ಅಳವಡಿಸಿಕೊಳ್ಳಬೇಕೆಂದು ಶಿಫಾರಸು ಮಾಡಲಾಗಿದೆ. 3-8 ವಯಸ್ಸು (5 ವರ್ಷ): ಬುನಾದಿ ಹಂತ: 3 ವರ್ಷಗಳ ಪೂರ್ವ ಪ್ರಾಥಮಿಕ ಮತ್ತು 1,2 ಗ್ರೇಡ್.

8-11 ವಯಸ್ಸು (3 ವರ್ಷ): Preparatory ಹಂತ: 3 ವರ್ಷಗಳ 3,4,5 ಗ್ರೇಡ್.

11-14 (3 ವರ್ಷ): ಹಿರಿಯ ಪ್ರಾಥಮಿಕ ಹಂತ: 3 ವರ್ಷಗಳ 6,7,8 ಗ್ರೇಡ್

14-18 (4 ವರ್ಷ): ಪ್ರೌಢ ಶಿಕ್ಷಣದ ಹಂತ:

4 ವರ್ಷಗಳ 9,10,11,12 ಗ್ರೇಡ್ (ಸದ್ಯಕ್ಕೆ 1-5 ತರಗತಿ (5)+ 6-8 ತರಗತಿ (3) + 9-12 ತರಗತಿ (4) ವ್ಯವಸ್ಥೆ ಇದೆ)

ಸದ್ಯದ ವ್ಯವಸ್ಥೆಗೆ ಶಿಶು ಪಾಲನೆ(ಅಂಗನವಾಡಿ), ಪೂರ್ವ ಪ್ರಾಥಮಿಕ ಶಿಕ್ಷಣವನ್ನ ಹೆಣೆದು ಒಂದು ಘಟ್ಟದ ಶಿಕ್ಷಣವನ್ನು ಶಿಫಾರಸು ಮಾಡಲಾ ಗಿದೆ ಮತ್ತು ಇದು ಸ್ವಾಗತಾರ್ಹ. ಮತ್ತೊಂದು ಗಮನಾರ್ಹ ಅಂಶ ವೆಂದರೆ ಈ ಹಂತದಲ್ಲಿ, ಮತ್ತು ಉನ್ನತ ಶಿಕ್ಷಣದಲ್ಲಿಯೂ ಕಲಾ ಮತ್ತು ವಿಜ್ಞಾನ ವಿಭಾಗಗಳೆಂದು ವರ್ಗೀಕರಿಸಬಾರದು, ವೃತ್ತಿಪರ ಮತ್ತು ಅಕಾಡೆಮಿಕ್ ಎಂದು ವರ್ಗೀಕರಿಸಬಾರದು ಎಂದು ಸ್ಪಷ್ಟವಾಗಿ ಹೇಳಿದೆ. ಇದು ಸಹ ಸ್ವಾಗತಾರ್ಹ.

ನಂತರದ ಅಧ್ಯಾಯದಲ್ಲಿ ಭಾಷಾ ಕಲಿಕೆ, ಭಾಷಾ ಮಾಧ್ಯಮದ ಕುರಿತು ವಿವರಿಸಲಾಗಿದೆ. ಬಹುಭಾಷಾ ಕಲಿಕೆಯನ್ನು ಶಿಫಾರಸು ಮಾಡ ಲಾಗಿದೆ. ಪ್ರಾದೇಶಿಕ ಭಾಷೆಗಳನ್ನು ಪ್ರೋತ್ಸಾಹಿಸಬೇಕು ಎಂದು ಒತ್ತಾಯಿಸಿದೆ. ಶಾಸ್ತ್ರೀಯ ಭಾಷೆಗಳ ಕಲಿಕೆಗೆ ವಿಶೇಷ ಮಹತ್ವ ಕೊಡ ಬೇಕೆಂದು ಶಿಫಾರಸು ಮಾಡಿದೆ. ಮಾತೃಭಾಷಾ ಮಾಧ್ಯಮದ ಬಗ್ಗೆ ಹೆಚ್ಚಿನ ಒತ್ತನ್ನು ಕೊಡಲಾಗಿದೆ. 1-5ನೇ ತರಗತಿಯವರೆಗೆ ಕಡ್ಡಾಯವಾಗಿ, ಸಾಧ್ಯವಾದರೆ 8ನೇ ತರಗತಿಯವರೆಗೂ ಮಾತೃಭಾಷಾ ಮಾಧ್ಯಮದಲ್ಲಿ ಕಲಿಸಬೇಕೆಂದು ಶಿಫಾರಸು ಮಾಡಲಾಗಿದೆ. ಸಾಧ್ಯವಾದಲ್ಲೆಲ್ಲ ಅಥವಾ ಆವಶ್ಯಕತೆ ಇರುವಲ್ಲೆಲ್ಲ ದ್ವಿಭಾಷೆ ಬೋಧನೆ ಯನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದೆ (ಇದು ಗಡಿನಾಡು ರಾಜ್ಯಗಳ ಜಿಲ್ಲೆಗಳಿಗೆ ಅನಿವಾರ್ಯವಾದ ಬೋಧನ ಕ್ರಮ). ಅದರ ಲ್ಲಿಯೂ ವಿಜ್ಞಾನವನ್ನು ದ್ವಿಭಾಷೆಯಲ್ಲಿ ಕಲಿಸಬೇಕೆಂದು ಶಿಫಾರಸು ಮಾಡಿದೆ. ತ್ರಿಭಾಷಾ ಸೂತ್ರವನ್ನು ಮುಂದುವರಿಸಬೇಕು ಮತ್ತು ದೇಶದ ಎಲ್ಲಾ ರಾಜ್ಯಗಳಲ್ಲಿ ಜಾರಿಗೊಳಿಸಬೇಕು ಎಂದು ಶಿಫಾರಸು ಮಾಡಿದೆ. ಹಿಂದಿಯೇತರ ರಾಜ್ಯಗಳಲ್ಲಿ 1-5ನೇ ತರಗತಿವರೆಗೆ ತ್ರಿಭಾಷಾ ಸೂತ್ರದಡಿಯಲ್ಲಿ ಹಿಂದಿ ಭಾಷೆಯನ್ನು ಕಡ್ಡಾಯವಾಗಿ ಕಲಿಯಬೇಕು ಎಂದು ಹೇಳಿದೆ. 6ನೇ ತರಗತಿಯಿಂದ ಯಾವುದಾದರೂ ಒಂದು ಭಾಷೆಯನ್ನು ಕೈಬಿಟ್ಟು ಮತ್ತೊಂದು ಭಾಷೆಯನ್ನು ಆಯ್ದುಕೊಳ್ಳ ಬಹುದು ಎಂದು ಹೇಳಿದೆ.

ಅಭಿಪ್ರಾಯ: ಈ ಅಂಶವು ವಿವಾದವನ್ನು ಹುಟ್ಟಿ ಹಾಕಿದೆ. ಏಕೆಂದರೆ ಈ ತ್ರಿಭಾಷಾ ಸೂತ್ರದಡಿಯಲ್ಲಿ ಪ್ರಾದೇಶಿಕ ಭಾಷೆ, ಇಂಗ್ಲಿಷ್ ಮತ್ತು ಹಿಂದಿಯನ್ನು ಕಡ್ಡಾಯಗೊಳಿಸಬೇಕು ಎಂದು ಹೇಳಿರುವುದು ಪ್ರಜಾಪ್ರಬುತ್ವ ವಿರೋಧಿ ನಿಲುವಾಗಿದೆ. ಇದು ನೇರವಾಗಿ ಹಿಂದಿ ಭಾಷೆಯ ಹೇರಿಕೆಯಾಗಿದೆ. ಇದು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತದೆ. ಈ ಹಿಂದಿಯನ್ನು ಒಂದು ಸಂಸ್ಕೃತಿಯಾಗಿ ಹೇರುತ್ತಿರುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಈಗಾಗಲೇ ದಕ್ಷಿಣ ಭಾರತದಲ್ಲಿ ಹಿಂದಿ ಹೇರಿಕೆಯ ತ್ರಿಭಾಷಾ ಸೂತ್ರ ವಿರೋಧಿಸಿ ಪ್ರತಿಭಟನೆ ನಡೆದಿದೆ. ಈ ಪ್ರತಿಭಟನೆಗೆ ಮಣಿದು ಕೇಂದ್ರ ಸರಕಾರ ಕರಡಿನಲ್ಲಿ ತಿದ್ದುಪಡಿ ತಂದು ಹಿಂದಿ ಕಡ್ಡಾಯ ಎನ್ನುವ ಅಂಶವನ್ನು ಕೈಬಿಟಿದೆ. ಇದೆಲ್ಲದರ ಆಚೆ ನಾವು ಮಾತೃಭಾಷಾ ಮಾಧ್ಯಮ/ ಭಾಷಾ ಕಲಿಕೆ ಮತ್ತು ರಾಜ್ಯ ಭಾಷಾ ಮಾಧ್ಯಮ / ಭಾಷಾ ಕಲಿಕೆಯನ್ನು ಒಂದೇ ಎಂದು ತಪ್ಪಾಗಿ ಅರ್ಥೈ ಸುತ್ತೇವೆ. ಇದು ಸಲ್ಲದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾತೃಭಾಷಾ ಮಾಧ್ಯಮ/ಭಾಷಾ ಕಲಿಕೆಗೆ ಆಗತ್ಯವಿದೆ. ಆದರೆ ರಾಜ್ಯಭಾಷಾ ಕಲಿಕೆಯು ಹೇರಿಕೆಯಾಗುತ್ತದೆ. ಮತ್ತೊಂದೆಡೆ ಸಂಸ್ಕೃತ ಭಾಷಾ ಕಲಿಕೆಗೆ ವಿಶೇಷ ಮಹತ್ವವನ್ನು ಕೊಡ ಬೇಕೆಂದು ಶಿಫಾರಸು ಮಾಡಿದೆ. ಸಾಧ್ಯವಾದರೆ ಅದನ್ನು ಕಡ್ಡಾಯ ಮಾಡಬಹುದೇ ಎನ್ನುವಂತಹ ಅರ್ಥ ಬರುವ ಮಾತುಗಳನ್ನು ಉಲ್ಲೇಖಿ ಸಲಾಗಿದೆ. ಇದು ನಮ್ಮಲ್ಲಿ ಅನುಮಾನ ಮೂಡಿಸುತ್ತದೆ. ಕೇಂದ್ರದಲ್ಲಿ ಆರೆಸ್ಸೆಸ್-ಬಿಜೆಪಿ ಆಡಳಿತ ನಡೆಸುತ್ತಿದೆ. ಸಂಸ್ಕೃತವನ್ನು ಸಂಘ ಪರಿವಾರವು ಬ್ರಾಹ್ಮಣೀಕರಣದ ನೆಲೆಯಲ್ಲಿ ಪರಿಭಾವಿಸುತ್ತದೆ. ಅವರೇ ಆಡಳಿತದಲ್ಲಿರುವಾಗ ಸಂಸ್ಕೃತವನ್ನು ಕಡ್ಡಾಯಗೊಳಿಸುವಂತಹ ಪ್ರಯತ್ನಗಳು ಕೊಂಚ ಅಪಾಯಕಾರಿ ನಡೆಯಾಗಿದೆ.

ಮತ್ತೊಂದೆಡೆ ಭಾಷಾ ಕಲಿಕೆಯಲ್ಲಿ ವೈವಿಧ್ಯತೆ, ಸಾಮರ್ಥ್ಯ ತರಲು ಸಂಸ್ಕೃತ ಭಾರತಿ ಸಂಸ್ಥೆಯ ನೆರವನ್ನು ಪಡೆದುಕೊಳ್ಳಬಹುದು ಎಂದು ನೇರವಾಗಿ ಶಿಫಾರಸು ಮಾಡುತ್ತದೆ. ಇದು ಆತಂಕದ ವಿಚಾರ. ಏಕೆಂದರೆ ಈ ಸಂಸ್ಕೃತ ಭಾರತಿ ಒಂದು ಸನಾತನವಾದಿ ಸಂಸ್ಥೆ. ಸಂಘ ಪರಿವಾರ ದೊಂದಿಗೆ ಸಂಬಂಧಗಳನ್ನು ಹೊಂದಿರುವ ಸಂಸ್ಥೆ. ಇದು ವರ್ಣಾ ಶ್ರಮವನ್ನು, ಜಾತಿ ಪದ್ಧತಿಯನ್ನು ಪುನರುಜ್ಜೀವನಗೊಳಿಸಲು ಬಯಸುತ್ತದೆ. ಇಂತಹ ಸಂಸ್ಥೆಯನ್ನ್ನು ಈ ರಾಷ್ಟ್ರೀಯ ಶಿಕ್ಷಣ ನೀತಿಯ ಸದಸ್ಯರು ಶಿಫಾರಸು ಮಾಡುವುದು ಕಸ್ತೂರಿ ರಂಗನ್ ಒಳಗೊಂಡಂತೆ ಅವರ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಬೇಕಾಗುತ್ತದೆ.

ನೈತಿಕತೆ ಮತ್ತು ನಡತೆ ಶಿಕ್ಷಣ ಎನ್ನುವ ಅಧ್ಯಯನದಲ್ಲಿ ಮಕ್ಕಳಿಗೆ ಆರಂಭದಿಂದಲೇ ನೀತಿಯುಕ್ತವಾದ, ನೈತಿಕತೆಯ ಪಠ್ಯಕ್ರಮಗಳನ್ನು ಬೋಧಿಸಬೇಕು, ಸಾಂವಿಧಾನತ್ಮಕ ಅಂಶಗಳನ್ನು ಒಳ್ಳಗೊಳ್ಳಬೇಕು.ಸಹನೆ, ಬಹುತ್ವ, ಸ್ವಾತಂತ್ರ, ಬಹುಸಂಸ್ಕೃತಿಗಳನ್ನು ಬೋಧಿಸಬೇಕು ಎಂದು ಶಿಫಾರಸು ಮಾಡಿದೆ. ಭಾರತೀಯ ಸಂಸ್ಕೃತಿಯನ್ನು ಬೋಧಿಸಬೇಕು ಎಂದು ಹೇಳುತ್ತದೆ.

ಅಭಿಪ್ರಾಯ: ಪುಟ 98ರಲ್ಲಿ ಭಾರತೀಯ ಜ್ಞಾನ ಎನ್ನುವ ಅಧ್ಯಾಯ ದಲ್ಲಿ (4.6.9) ಪ್ರಾಚೀನ ಭಾರತದಲ್ಲಿ ಜ್ಞಾನ ಸಂಪನ್ಮೂಲ ಹೇರಳ ವಾಗಿತ್ತು. ಉದಾಹರಣೆಗೆ ಗಣಿತಶಾಸ್ತ್ರದಲ್ಲಿರುವ ಪೈಥಾಗೊರಸ್ ಪ್ರಮೇಯ, ಫಿಬೊನಾಕ್ಕಿ ಸಂಖ್ಯೆಗಳು, ಪಾಸ್ಕಲ್‌ನ ತ್ರಿಕೋಣ ಪ್ರಮೇಯ ಗಳನ್ನು ಇವರೆಲ್ಲರಿಗಿಂತ ಮೊದಲು ಭಾರತದ ಬೌದಾಯನ, ವಿರಾಹಂಕ, ಪಿಂಗಾಲ ಅವರು ಕಂಡು ಹಿಡಿದಿದ್ದರು. ಇಂದು ಕಂಪ್ಯೂಟರ್ ತಂತ್ರಜ್ಞಾನದಲ್ಲಿ ಬಳಸುವ ಝೀರೋ ಸಂಖ್ಯೆಯ ಸಿದ್ಧಾಂತ ವನ್ನು 2,000 ವರ್ಷಗಳ ಹಿಂದೆ ಭಾರತದಲ್ಲಿ ಸಂಶೋಧಿಸಲಾಗಿತ್ತು. ಬೀಜಗಣಿತದ ಸಿದ್ಧಾಂತಗಳನ್ನು ರಾಜಸ್ಥಾನದ ಬ್ರಹ್ಮಗುಪ್ತ ಕಂಡು ಹಿಡಿದಿದ್ದ. ಕ್ಯಾಲುಕಲಸ್ ಗಣಿತವನ್ನು ಭಾಸ್ಕರ ಮತ್ತು ಮಾದವ ಕಂಡುಹಿಡಿದಿದ್ದರು. ಇಂತಹ ಅನೇಕ ಸಂಗತಿಗಳನ್ನು ಕಲೋನಿಯಲ್ ಇತಿಹಾಸಕಾರರು ಉಲ್ಲೇಖಿಸಿರಲಿಲ್ಲ. ಆದರೆ ಈಗ ಇತಿಹಾಸದ ಪಠ್ಯವನ್ನು ಮರು ರಚಿಸುವಾಗ ಎಲ್ಲಾ ಅಂಶಗಳನ್ನು ಸೇರಿಸಬೇಕು. ಭಾರತೀಯ ಸಂಸ್ಕೃತಿ, ಜ್ಞಾನವನ್ನು ಪಠ್ಯಕ್ರಮವನ್ನಾಗಿ ರೂಪಿಸಬೇಕು ಎಂದು ವಿವರಿಸಲಾಗಿದೆ. ಇದು ಅತ್ಯಂತ ಮತೀಯವಾದಿ ನಿಲುವು ಎಂದೇ ಹೇಳಬೇಕಾಗುತ್ತದೆ. ನೇರವಾಗಿ ಆರೆಸ್ಸೆಸ್ ಭಾಷೆಯಲ್ಲಿ ಮಾತನಾಡುವ ಈ ಸಮಿತಿ ಈ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಅದರ ಎಲ್ಲಾ ಸಿದ್ಧಾಂತಗಳನ್ನ್ನು ಜಾರಿಗೊಳಿಸಲು ಮುಂದಾಗಿರುವುದನ್ನು ವಿರೋಧಿಸಬೇಕಾಗುತ್ತದೆ.

ಪುಟ 100-104 ರಲ್ಲಿ ಎನ್‌ಸಿಆರ್‌ಟಿಯನ್ನು ಪುನಃರಚಿಸಬೇಕು, ಪಠ್ಯಗಳನ್ನು ಪುನರಾಯ್ಕೆ ಮಾಡಿಕೊಳ್ಳಬೇಕು ಎಂದು ಪದೇ ಪದೇ ಹೇಳಲಾಗಿದೆ. ಇದರರ್ಥ ಆರೆಸ್ಸೆಸ್ ಸಿದ್ಧಾಂತವನ್ನು ಜಾರಿಗೊಳಿಸಿ ಎಂದಷ್ಟೇ.

ಮಕ್ಕಳ ಅಭಿವೃದ್ಧಿಯ ವೌಲ್ಯ ಮಾಪನ ಎನ್ನುವ ಅಧ್ಯಾಯದಲ್ಲಿ 10, 12ನೇ ತರಗತಿಯ ಪಬ್ಲಿಕ್ ಪರೀಕ್ಷೆಗಳು ಮಕ್ಕಳಲ್ಲಿ ಒತ್ತಡವ ನ್ನುಂಟು ಮಾಡುತ್ತಿವೆ ಎಂದು ಅಭಿಪ್ರಾಯಪಟ್ಟಿದೆ. ಈಗಿನ ಪಬ್ಲಿಕ್ ಪರೀಕ್ಷೆ ಮಾದರಿ ಅನೇಕ ಲೋಪದೋಷಗಳಿಂದ ಕೂಡಿದೆ ಎಂದು ಹೇಳಿದೆ. ವರ್ಷವಿಡೀ ಓದಿದ ನಂತರ ಕೇವಲ ಒಂದು ದಿನದಲ್ಲಿ ಕೆಲವೇ ಗಂಟೆಗಳಲ್ಲಿ ಮಕ್ಕಳ ಬುದ್ಧಿಮತ್ತೆ, ಕೌಶಲ್ಯವನ್ನು ಪರೀಕ್ಷಿಸುವುದು ತಪ್ಪಾಗುತ್ತದೆ ಎಂದೂ ಹೇಳಿದೆ. ಈ 10, 12ನೇ ತರಗತಿಗಳ ಪಬ್ಲಿಕ್ ಪರೀಕ್ಷೆ ವ್ಯವಸ್ಥೆಯ ದೋಷಗಳನ್ನು ಸರಿಪಡಿಸಲು 10, 12ರ ಪಬ್ಲಿಕ್ ಪರೀಕ್ಷೆಗಳ ಜೊತೆಗೆ 3,5, ಮತ್ತು 8 ಗ್ರೇಡ್‌ಗಳಲ್ಲಿಯೂ ರಾಜ್ಯ ಮಟ್ಟದ ಪಬ್ಲಿಕ್ ಪರೀಕ್ಷೆಗಳನ್ನು ನಡೆಸಬೇಕು. ಈ ಪಬ್ಲಿಕ್ ಪರೀಕ್ಷೆ ಗಳನ್ನು ಭಾಷೆ ಮತ್ತು ವಿಷಯಗಳ ಆಧಾರದಲ್ಲಿ ಸೆಮಿಸ್ಟರ್‌ಗಳಾಗಿ ವಿಂಗಡಿಸಬೇಕು ಎಂದು ಶಿಫಾರಸು ಮಾಡಿದೆ. ಅಂದರೆ ಮಕ್ಕಳು 9,10,11,12ನೇ ತರಗತಿಗಳಲ್ಲಿ ಆರು ತಿಂಗಳ ಪ್ರತೀ ಸೆಮಿಸ್ಟರ್‌ನ ನಂತರ ಒಂದು ಪಬ್ಲಿಕ್ ಪರೀಕ್ಷೆ ಬರೆಯಬೇಕು. ಅಂದರೆ ನಾಲ್ಕು ವರ್ಷಗಳಲ್ಲಿ ಒಟ್ಟು ಎಂಟು ಪಬ್ಲಿಕ್ ಪರೀಕ್ಷೆಗಳನ್ನು ಬರೆಯಬೇಕು. ಸರಾಸರಿ ಪ್ರತಿ ಸೆಮಿಸ್ಟರ್‌ಗೆ ಮೂರು ಪಬ್ಲಿಕ್ ಪರೀಕ್ಷೆ ಬರೆಯಬೇಕು. ಗಣಿತ, ವಿಜ್ಞಾನ, ವೃತ್ತಿಪರ ವಿಷಯಗಳಲ್ಲಿ ಎರಡು ಸೆಮಿಸ್ಟರ್ ಪಬ್ಲಿಕ್ ಪರೀಕ್ಷೆಗಳು, ಭಾರತೀಯ ಇತಿಹಾಸ, ಜಾಗತಿಕ ಇತಿಹಾಸ, ಸಮ ಕಾಲೀನ ಭಾರತದ ಜ್ಞಾನ, ನೈತಿಕತೆ ಮತ್ತು ಫಿಲಾಸಫಿ, ಹಣಕಾಸು ಮತ್ತು ಬ್ಯುಸಿನೆಸ್ ಹಾಗೂ ಕಾಮರ್ಸ್, ಗಣಕೀಕೃತ ಮತ್ತು ಕಂಪ್ಯೂಟರ್, ದೈಹಿಕ ವಿಷಯಗಳಲ್ಲಿ ಒಂದು ಪಬ್ಲಿಕ್ ಪರೀಕ್ಷೆಗಳು, ಮೂರು ಭಾಷೆ ಗಳಲ್ಲಿ ತಲಾ ಒಂದು ಭಾಷೆಗೆ ಒಂದು ಪಬ್ಲಿಕ್ ಪರೀಕ್ಷೆ ಬರೆಯಬೇಕು.

ಅಭಿಪ್ರಾಯ: ಇದು ಅತ್ಯಂತ ಗೊಂದಲವಾದ ಮತ್ತು ವಿವಾದ ಗ್ರಸ್ತವಾದ ಶಿಫಾರಸು ಆಗಿದೆ. ಮಕ್ಕಳು 10ನೇ ತರಗತಿ ಮುಗಿಸುವ ಷ್ಟರಲ್ಲಿ ಗಣಿತದ ವಿಷಯದಲ್ಲಿ ಎರಡು ಪಬ್ಲಿಕ್ ಪರೀಕ್ಷೆ ಬರೆದು ಬಿಟ್ಟರೆ ನಂತರ 11, 12ನೇ ತರಗತಿಗಳಲ್ಲಿ ಅವರು ಗಣಿತ ವಿಷಯ ಓದುವ ಹಾಗಿಲ್ಲವೇ? 9ನೇ ತರಗತಿಯಲ್ಲಿ ಇತಿಹಾಸ ಪರೀಕ್ಷೆ ಬರೆದು ಬಿಟ್ಟರೆ 10,11,12 ರಲ್ಲಿ ಇತಿಹಾಸ ಓದುವ ಅಗತ್ಯವಿಲ್ಲವೇ? ಈ ಕುರಿತು ಕರಡುವಿನಲ್ಲಿ ಯಾವುದೇ ಸ್ಪಷ್ಟತೆ ಇಲ್ಲ. ಅತ್ಯಂತ ಹಗುರವಾಗಿ, ಬೇಕಾ ಬಿಟ್ಟಿಯಾಗಿ ಬರೆದಿದ್ದಾರೆ. ಈ ಪಬ್ಲಿಕ್ ಪರೀಕ್ಷೆಯ ವ್ಯವಸ್ಥೆಯು 1-8ನೇ ತರಗತಿಯವರೆಗೆ ಮಕ್ಕಳಿಗೆ ಸ್ಥಳೀಯತೆ, ನೆಲದ ಬೋಧನೆ, ಕಲಿಕೆ ಇರಬೇಕು ಮತ್ತು ಅವರು ಪ್ರಾದೇಶಿಕ ಪಠ್ಯಗಳನ್ನ್ನು ಕಲಿಯ ಬೇಕು ಎನ್ನುವ ವೈಜ್ಞಾನಿಕ ಕಲಿಕೆಯರಿಮೆಯ ಆಶಯವನ್ನೇ ನಾಶ ಮಾಡುತ್ತದೆ. ಮತ್ತೊಂದೆಡೆ ರಾಜ್ಯಗಳಲ್ಲಿ ಗುಣಮಟ್ಟದ ಕಲಿಕೆಯರಿಮೆಯೆ ಇಲ್ಲದಂತಹ ಸಂದರ್ಭದಲ್ಲಿ 3,5,8ನೇ ತರಗತಿಗಳ ಮಕ್ಕಳು ಅದು ಹೇಗೆ ರಾಜ್ಯ ಮಟ್ಟದಲ್ಲಿ ಸ್ಪರ್ಧಿಸಬಲ್ಲರು? ಬಹುತೇಕ ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಮೂಲಭೂತ ಸೌಲಭ್ಯಗಳ ಕೊರತೆ ಇದೆ. ಆ ಸರಕಾರಿ ಶಾಲೆಗಳ ಮಕ್ಕಳು ಇಂಟರ್‌ನ್ಯಾಶನಲ್ ಶಾಲೆಯ ಮಕ್ಕಳೊಂದಿಗೆ ಹೇಗೆ ಸ್ಪಂದಿಸಬಲ್ಲರು? ಸೂಕ್ತವಾದ ತಯಾರಿ ಇಲ್ಲದೆ, ಸರಕಾರಿ ಶಾಲೆಗಳನ್ನು ಸಬಲೀಕರಣಗೊಳಿಸದೆ ಈ ರೀತಿ ಏಕಾಏಕಿ 3,5,8ನೇ ತರಗತಿಯ ಮಕ್ಕಳಿಗೆ ರಾಜ್ಯಮಟ್ಟದ ಪಬ್ಲಿಕ್ ಪರೀಕ್ಷೆ ನಡೆಸುವುದು ಅಪಾಯಕಾರಿ ನಡೆಯಾಗುತ್ತದೆ. ಇದು ಮಕ್ಕಳ ಭವಿಷ್ಯವನ್ನೇ ನಾಶ ಮಾಡುತ್ತದೆ. ಬಡಕುಟುಂಬಗಳ, ತಳ ಸಮುದಾಯಗಳ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ಇದು ಜೀವವಿರೋಧಿ ಶಿಫಾರಸಾಗಿದೆ.

ಈ ಮೊದಲು 8ನೇ ತರಗತಿಯವರೆಗೆ ಮಕ್ಕಳನ್ನ ಫೇಲು ಮಾಡುವ ಹಾಗಿರಲಿಲ್ಲ. ಅವರು 8ನೇತರಗತಿಯವರೆಗೆ ಅಡೆತಡೆ ಇಲ್ಲದೆ ಓದಬಹುದಾಗಿತ್ತು. ಇದು ಮಕ್ಕಳ ಹಿನ್ನಲೆ. ಅವರು ಓದುವ ಶಾಲೆಯ ಗುಣಮಟ್ಟ, ಮೂಲಭೂತ ಸೌಲಭ್ಯಗಳ ಗುಣಮಟ್ಟ ಇತ್ಯಾದಿಗಳನ್ನು ಗಮನದಲ್ಲಿರಿಸಿ ಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಆದರೆ ಶಿಕ್ಷಣ ಹಕ್ಕು ಕಾಯ್ದೆಯು (ಆರ್‌ಟಿಇ) ಕಳೆದ ವರ್ಷ ಮಾಡಿದ ತಿದ್ದುಪಡಿಯಲ್ಲಿ 5ನೇ ತರಗತಿಯಲ್ಲಿ ಮಕ್ಕಳನ್ನು ಫೇಲು ಮಾಡಬಹುದು ಎಂದು ಹೇಳಲಾಗಿದೆ. ಇದನ್ನು ಯಾವ ಆಧಾರದಲ್ಲಿ ನಿರ್ಣಯಿಸಿದರು ಎಂಬುದಕ್ಕೆ ಯಾರ ಬಳಿಯೂ ಉತ್ತರವಿಲ್ಲ. ಕಳಪೆ ಶಾಲೆಗಳು, ಮೂಲಭೂತ ಸೌಕರ್ಯಗಳಿಲ್ಲದ, ಶಿಕ್ಷಕರಿಲ್ಲದ, ಶಾಲೆಗಳಲ್ಲಿ ಓದುವ, ಗುಣಮಟ್ಟದ ಬೋಧನೆ, ಕಲಿಕೆ ದೊರಕದ ಮಕ್ಕಳನ್ನು (ಪ್ರತಿಭೆ ಇದ್ದೂ ತಮ್ಮದಲ್ಲದ ಕಾರಣಕ್ಕೆ) ಅವರ 11ನೇ ವಯಸ್ಸಿನಲ್ಲಿ ಫೇಲು ಮಾಡುವುದು ಅಮಾನವೀಯ ನಿರ್ಧಾರವಾಗಿದೆ. ಆದರೆ ಈ ಕಸ್ತೂರಿ ರಂಗನ್ ಶಿಕ್ಷಣ ನೀತಿಯಲ್ಲಿ ಇದರ ಕುರಿತು ಯಾವುದೇ ಪ್ರಸ್ತಾಪವಿಲ್ಲ. ಬದಲಿಗೆ ಮಕ್ಕಳು ತಮ್ಮ ಶಿಕ್ಷಣವನ್ನು ಅರ್ಧದಲ್ಲಿಯೇ ಮೊಟಕುಗೊಳಿಸಲು ಈ ಪಬ್ಲಿಕ್ ಪರೀಕ್ಷೆ ನೀತಿಯನ್ನು ಜಾರಿಗೊಳಿಸಲು ಶಿಫಾರಸು ಮಾಡಿದ್ದಾರೆ.

ಈ ವರದಿಯು ಖಾಸಗಿ ಶಾಲೆಗಳು ಆರ್‌ಟಿಇ ಅಡಿಯಲ್ಲಿ ಶೇ. 25 ಪ್ರಮಾಣದ ಸೀಟುಗಳನ್ನು ಆರ್ಥಿಕ ವಾಗಿ ದುರ್ಬಲವಾಗಿರುವ ಕುಟುಂಬಗಳ ಮಕ್ಕಳಿಗೆ ಮೀಸಲಿಡಬೇಕು ಎನ್ನುವ ಕಾಯ್ದೆಯನ್ನು ಹಿಂದೆೆಗೆದು ಕೊಳ್ಳಬೇಕು ಎಂದು ಶಿಫಾರಸು ಮಾಡಿದೆ. ಇದು ಖಾಸಗಿ ಶಿಕ್ಷಣ ಸಂಸ್ಥೆಗಳ ಸ್ವಾಯತ್ತತೆಯನ್ನು ಗಣಗೊಳಿಸುತ್ತದೆ ಎಂದು ಕಾರಣ ನೀಡಲಾಗಿದೆ. ಅಲ್ಲದೆ ಖಾಸಗಿ ಶಿಕ್ಷಣ ಸಂಸ್ಥೆಗಳು ಮೂರು ವರ್ಷಕ್ಕೊಮ್ಮೆ ತಮ್ಮ ಶಾಲೆಯ ಶುಲ್ಕವನ್ನು ಹೆಚ್ಚಿಸಬಹುದು ಎಂದು ಶಿಫಾರಸು ಮಾಡಿದೆ. ಇದು ಸಹ ಪ್ರಶ್ನಾರ್ಹ ಶಿಫಾರಸು ಆಗಿದೆ. ಇದು ಜಾರಿಗೊಂಡರೆ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಯಾವುದೇ ಉತ್ತರದಾಯಿತ್ವ ಇರುವುದಿಲ್ಲ. ಬಡಕುಟುಂಬಗಳ ಮಕ್ಕಳಿಗೆ ಶಿಕ್ಷಣ ಕೊಡಬೇಕೆನ್ನುವ ನಿಯಮವಿರುವುದಿಲ್ಲ. ಎಲ್ಲ ಖಾಸಗಿ ಶಿಕ್ಷಣ ಸಂಸ್ಥೆಗಳು ಮೇಲ್ವರ್ಗದ, ಮಧ್ಯಮ ವರ್ಗಗಳ ಮಕ್ಕಳಿಗೆ ಮಾತ್ರ ಲಭ್ಯವಾಗುತ್ತವೆ ಮತ್ತು ಬಡಕುಟುಂಬಗಳ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ಇದು ಅಮಾನವೀಯವಾದ ಶಿಫಾರಸು ಆಗಿದೆ

ಉನ್ನತ ಶಿಕ್ಷಣ

ಪುಟ 203ರಿಂದ - 220ರವರೆಗೆ ಉನ್ನತ ಶಿಕ್ಷಣದ ಮುಂದಿರುವ ಸವಾಲುಗಳು ಕುರಿತು ಮಾತನಾಡುತ್ತ್ತಾ ಉನ್ನತ ಶಿಕ್ಷಣದಲ್ಲಿ ತುಂಬಾ ಗುಂಡಿಗಳಿವೆ. ಮಿತಿಮೀರಿದ ವೃತ್ತಿಪರ ಪದವೀಧರರ ಸಂಖ್ಯೆ, ಸಮಾಜೋ-ಆರ್ಥಿಕ ವಲಯದಲ್ಲಿ ಹಿಂದುಳಿದವರಿಗೆ ಉನ್ನತ ಶಿಕ್ಷಣದಲ್ಲಿ ಅವಕಾಶಗಳ ಕೊರತೆ, ಪ್ರಾಧ್ಯಾಪಕರ ಕೊರತೆ ಮತ್ತು ಪ್ರಾಧ್ಯಾಪಕರಿಗೆ ಸ್ವಾತಂತ್ರದ ಕೊರತೆ, ಉದ್ಯೋಗ ಸಂಬಂಧಿತ ಅವಕಾಶಗಳಿಗೆ ಸೂಕ್ತವಾದ ಕಾರ್ಯಯೋಜನೆಗಳ ಕೊರತೆ, ವಿವಿಗಳಲ್ಲಿ ಸಂಶೋಧನೆಯ ಗುಣಮಟ್ಟದ ಕೊರತೆ, ಆಡಳಿತದಲ್ಲಿ ದಕ್ಷತೆಯ, ನಾಯಕತ್ವದ ಕೊರತೆ ಹೀಗೆ ಅನೇಕ ಮಿತಿಗಳನ್ನು ಪಟ್ಟಿ ಮಾಡಿದೆ. ಇದಕ್ಕೆ ಪರಿಹಾರವಾಗಿ ಏನು ಮಾಡಬಹುದು ಎಂಬುದನ್ನು ಸಹ ಹೇಳಿದೆ. ಸಂಶೋಧನೆ ವಿವಿಗಳನ್ನು ಟೈಪ್ 1, ಬೋಧನಾ ವಿವಿಗಳನ್ನು ಟೈಪ್ 2, ಕಾಲೇಜುಗಳನ್ನು ಟೈಪ್ 3 ಎಂತಲೂ ಕರೆಯಬೇಕೆಂದು ಹೇಳಿದೆ. ಈಗಿರುವ (‘deemed to be university’, ‘affiliating university’, ‘unitary university’) ಎನ್ನುವ ಸಂಕೀರ್ಣ ಹೆಸರುಗಳನ್ನು ತೆಗೆದು ಹಾಕಿ ಬದಲಿಗೆ ಸಾರ್ವಜನಿಕ, ಖಾಸಗಿ ಅನುದಾನ, ಖಾಸಗಿ ವಿವಿಗಳೆಂದು ಕರೆಯಬೇಕು. ಟೈಪ್ 1 ವಿವಿಗಳನ್ನ ಬಹುಶಾಸ್ತ್ರೀಯ ಸಂಶೋಧನ ವಿವಿಗಳು ಮತ್ತು ಟೈಪ್ 2 ವಿವಿಗಳನ್ನು ವಿಸ್ತಾರವಾದ ಬೋಧನ ವಿವಿಗಳೆಂದು ಕರೆಯಬೇಕೆಂದು ಹೇಳಿದೆ. ಯುಜಿಸಿಯನ್ನು ವಿಸರ್ಜಿಸಿ ಭಾರತೀಯ ಉನ್ನತ ಶಿಕ್ಷಣ ಆಯೋಗ ಸ್ಥಾಪನೆಯನ್ನು ಬೆಂಬಲಿಸಿದೆ. ಎಂಫಿಲ್‌ನ್ನು ಸ್ಥಗಿತಗೊಳಿಸಬೇಕು ಎಂದು ಹೇಳಿದೆ.

ರಾಜ್ಯ, ಕೇಂದ್ರ, ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಒಳಗೊಂಡಂತೆ ಸರಾಸರಿ ದಾಖಲಾತಿ ಅನುಪಾತ (GER) ಶೇ.50 ಪ್ರಮಾಣಕ್ಕೆ ತಲುಪಬೇಕೆಂದು ಆಶಿಸಿದೆ ಮತ್ತು ಇದಕ್ಕಾಗಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕಾಲೇಜು, ಶಿಕ್ಷಣ ಸಂಸ್ಥೆಗಳನ್ನು ತೆರೆಯಬೇಕು ಎಂದು ಬಯಸಿದೆ. ಅನೇಕ ಕಡೆ ವಿವಿಗಳಿಗೆ, ಕಾಲೇಜುಗಳಿಗೆ ಸ್ವಾಯತೆ ಕೊಡಬೇಕು ಎಂದು ಹೇಳಿದೆ. ಲಿಬರಲ್ ಶಿಕ್ಷಣ ವ್ಯವಸ್ಥೆ ಕುರಿತು ಹೆಚ್ಚಿನ ಒತ್ತು ನೀಡಿದೆ.

ಅಭಿಪ್ರಾಯ: ಮೊದಲನೆಯದಾಗಿ ವಿವಿಗಳ ಹಣೆಪಟ್ಟಿ ಬದಲಿಸುವುದರಿಂದ ಗುಣಮಟ್ಟ ಸುಧಾರಿಸಲು ಸಾಧ್ಯವಿಲ್ಲ ಎಂಬುದು ಈ ಸಮಿತಿಗೆ ಅರಿವಿರಬೇಕಿತ್ತು. ಎರಡನೆಯದಾಗಿ ಈಗಾಗಲೇ 840ಕ್ಕೂ ಅಧಿಕ ವಿವಿಗಳಿವೆ. ಆದರೂ ದಾಖಲಾತಿ ಪ್ರಮಾಣ ಶೇ. 25ಕ್ಕಿಂತ ದಾಟಿಲ್ಲ. ಅಂದರೆ ವಿವಿಗಳು, ಪದವಿ ಕಾಲೇಜುಗಳ ಸಂಖ್ಯೆಯ ಹೆಚ್ಚಳದಿಂದ ಮಾತ್ರ ದಾಖಲಾತಿ ಪ್ರಮಾಣ ಹೆಚ್ಚುವುದಿಲ್ಲ ಎಂಬುದು ಈ ಸಮಿತಿಗೆ ಅರ್ಥವಾಗದ ವಿಷಯವೇನಲ್ಲ. ಆದರೆ ಈ ಸಮಿತಿ ಆಡಳಿತ ಪಕ್ಷದ ಋಣದಲ್ಲಿರುವಂತೆ ವರ್ತಿಸುವುದರಿಂದ ಉನ್ನತ ಶಿಕ್ಷಣದಲ್ಲಿ ಅರಾಜಕತೆಯ ವಾತಾವರಣ ಸೃಷ್ಟ್ಟಿಸಿರುವ ಬಿಜೆಪಿ ವಿವಿಗಳಲ್ಲಿ ನಡೆಸುತ್ತಿರುವ ನಿರಂಕುಶ ಆಡಳಿತ, ವಿವಿಗಳಲ್ಲಿನ ಹಸ್ತಕ್ಷೇಪ, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಆರೆಸ್ಸೆಸ್‌ನ ಮತೀಯವಾದಿ ಸಿದ್ಧಾಂತಗಳನ್ನು ಅಳವಡಿಸುವುದು, ಅವುಗಳ ಸ್ವಾಯತ್ತೆಯನ್ನ್ನು ಕಸಿದುಕೊಳ್ಳುವುದು ಮತ್ತು ಆರ್ಥಿಕ ಅನುದಾನವನ್ನು ಕಡಿತಗೊಳಿಸುವುದು ಮುಂತಾದವುಗಳು ಕಸ್ತೂರಿ ರಂಗನ್ ಅವರನ್ನು ಒಳಗೊಂಡಂತೆ ಇತರ ಸದಸ್ಯರಿಗೂ ಗೊತ್ತಿರುವ ವಿಷಯ. ಆದರೂ ಈ ವಿಷಯಗಳನ್ನು ಹೊರಗಿಟ್ಟು ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವ ಮಾತನಾಡುವ ಈ ಸಮಿತಿಯು ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ. ಇತ್ತೀಚೆಗೆ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯು ಪ್ರಸ್ತಾಪಿಸಿದ್ದ ಯುಜಿಸಿಯನ್ನು ವಿಸರ್ಜಿಸಿ ಅದರ ಬದಲು ಭಾರತೀಯ ಉನ್ನತ ಶಿಕ್ಷಣ ಆಯೋಗದ ಸ್ಥಾಪನೆಯಂತಹ ವಿವಾದಾತ್ಮಕ ತೀರ್ಮಾನವನ್ನು ಬೆಂಬಲಿಸಿರುವುದು ಈ ಸಮಿತಿಯ ಆಶಯಗಳ ಕುರಿತು ಅನುಮಾನ ಮೂಡಿಸುತ್ತದೆ. ಯುಜಿಸಿ ವಿಸರ್ಜನೆ ನಿರ್ಧಾರವು ಈ ಸಮಿತಿಯು ಬಯಸುವ ಉನ್ನತ ಶಿಕ್ಷಣದ ಉನ್ನತೀಕರಣದ ಆಶಯಗಳಿಗೆ ವಿರೋಧವಾಗಿದೆ. ಆದರೂ ಈ ಸಮಿತಿ ಇದನ್ನು ಬೆಂಬಲಿಸಿದೆ ಎನ್ನುವುದಾದರೆ ಇದರ ಮೂಲ ನೀತಿಯನ್ನೇ ನಂಬಲು ಕಷ್ಟವಾಗುತ್ತದೆ.

ಉನ್ನತ ಶಿಕ್ಷಣದ ಸಬಲೀಕರಣಕ್ಕೆ ದೀರ್ಘಾವಧಿಯ ದೂರದೃಷ್ಟಿಯನ್ನು ಹಮ್ಮಿಕೊಳ್ಳಬೇಕಾಗಿದೆ. ಇದಕ್ಕಾಗಿ ಮಿಷನ್ ನಿರ್ದೇಶನಾಲಯದ ಅಡಿಯಲ್ಲಿ ಮಿಷನ್ ನಳಂದ ಮತ್ತು ಮಿಷನ್ ತಕ್ಷಶಿಲಾ ಯೋಜನೆಗಳನ್ನು ಜಾರಿಗೊಳಿಸಲಾಗುವುದು. ಮಿಷನ್ ನಳಂದ ಯೋಜನೆಯಲ್ಲಿ ಕನಿಷ್ಠ 100 ಟೈಪ್ 1 ಮತ್ತು 500 ಟೈಪ್ 2 ಉನ್ನತ ಶಿಕ್ಷಣ ಸಂಸ್ಥೆಗಳು 2030ರ ಹೊತ್ತಿಗೆ ಉತ್ತಮವಾಗಿ ಕಾರ್ಯನಿರ್ವಹಿಸುವಂತಾಗಬೇಕು. ಮಿಷನ್ ತಕ್ಷಶಿಲಾ ಯೋಜನೆಯಲ್ಲಿ ಪ್ರತಿ ಜಿಲ್ಲೆಯಲ್ಲಿ ಒಂದು ಮಾದರಿ ಉನ್ನತ ಶಿಕ್ಷಣ ಸಂಸ್ಥೆ ಸ್ಥಾಪನೆಯಾಗಬೇಕು ಮತ್ತು ಮಿಷನ್ ನಿರ್ದೇಶನಾಲಯವು ಇದರ ಮೇಲುಸ್ತುವಾರಿ ವಹಿಸಿಕೊಳ್ಳಬೇಕು ಎಂದು ಹೇಳಿದೆ. ಬಿ.ಎಡ್. ಕೋರ್ಸ್ ಅನ್ನು ನಾಲ್ಕು ವರ್ಷಗಳಿಗೆ ವಿಸ್ತರಿಸಲಾಗಿದೆ. ರಾಷ್ಟ್ರೀಯ ಸಂಶೋಧನ ಪ್ರತಿಷ್ಠಾನ (NRF) ಸ್ಥಾಪಿಸಲಾಗುವುದು ಎಂದು ಹೇಳಿದೆ. ನ್ಯಾಕ್ ವೌಲ್ಯಮಾಪನದಲ್ಲಿ ಗ್ರೇಡ್‌ಗಳ ಬದಲಿಗೆ ಹೌದು, ಅಥವಾ ಇಲ್ಲ ಎಂದಷ್ಟೇ ನಿಧರ್ರಿಸಲಾಗುವುದು ಎಂದು ಹೇಳಿದೆ.

ಅಭಿಪ್ರಾಯ : ಪುಟ 220-238ಗಳಲ್ಲಿ (four-year Bachelor of Liberal Arts / Education) ಕುರಿತು ಅದರ ಅಗತ್ಯದ ಕುರಿತು ವಿವರಿಸಲಾಗಿದೆ. ಪುಟ 239-250ಗಳಲ್ಲಿ ಉನ್ನತ ಶಿಕ್ಷಣದಲ್ಲಿನ ಪಠ್ಯಕ್ರಮ, ಪಠ್ಯ ಪುಸ್ತಕಗಳು, ಕಲಿಕೆಯರಿಮೆ ಕುರಿತು ವಿವರಿಸಿದ್ದಾರೆ. ಇದರಲ್ಲಿ ಯಾವುದೇ ಹೊಸತನವಿಲ್ಲ, ಹೊಸ ದೃಷ್ಟಿಕೋನವಿಲ್ಲ, ವೈಚಾರಿಕ ಸ್ಪಷ್ಟತೆ ಇಲ್ಲ. ಪುಟ 251-264ಗಳಲ್ಲಿ ಪ್ರಾಧ್ಯಾಪಕರು ಮತ್ತು ಅವರ ತರಬೇತಿ, ನೇಮಕಾತಿ ಕುರಿತು ವಿವರಿಸಲಾಗಿದೆ. ಇಲ್ಲಿಯೂ ಯಾವುದೇ ಹೊಸತನವಿಲ್ಲ. ಪ್ರಾಧ್ಯಾಪಕರ ನೇಮಕಾತಿಗೆ ಅವಶ್ಯವಾದ ವ್ಯವಸ್ಥೆ ಕುರಿತಾಗಿ, ಈಗ ವಿವಾದದಲ್ಲಿರುವ ಮೀಸಲಾತಿಯಲ್ಲಿ ರೋಸ್ಟರ್ ಬಿಂದು ಆಧಾರಿತ ನೇಮಕಾತಿ ಕುರಿತಾಗಿ, ಉಪಕುಲಪತಿಗಳು ಮತ್ತು ಪ್ರಾಧ್ಯಾಪಕರ ನೇಮಕಾತಿಯಲ್ಲಿ ನಡೆಯುವ ವ್ಯಾಪಕ ಭ್ರಷ್ಟಾಚಾರದ ಕುರಿತು ಎಲ್ಲಿಯೂ ಪ್ರಸ್ತಾಪವಿಲ್ಲ. 

ಉಪಸಂಹಾರ

ಒಟ್ಟಾರೆಯಾಗಿ ಈ ರಾಷ್ಟ್ರೀಯ ಶಿಕ್ಷಣ ನೀತಿ 2019 ನಿರಾಸೆ ಮೂಡಿಸುತ್ತದೆ. ಕೇವಲ ಆಶಯಗಳನ್ನು ಮಾತ್ರ ತುಂಬಿಕೊಂಡಿರುವ ಈ 500 ಪುಟಗಳಲ್ಲಿ ಅದನ್ನು ಜಾರಿಗೊಳಿಸುವ ವಿಧಾನಗಳ ಕುರಿತು ಯಾವುದೇ ಉಲ್ಲೇಖವಿಲ್ಲ. ಅಲ್ಲದೆ ಮೋದಿ ಸರಕಾರವು ಇಡೀ ಶಿಕ್ಷಣ ವ್ಯವಸ್ಥೆಯನ್ನು ಹಂತಹಂತವಾಗಿ ನಾಶಗೊಳಿಸುತ್ತಿರುವಾಗ ಈ ಶಿಕ್ಷಣ ನೀತಿಗಳು ಅದರ ಕುರಿತು ವೌನವಾಗಿರುವುದನ್ನ್ನು ಖಂಡಿಸಲೇಬೇಕಾಗುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)