varthabharthi

ಸುಗ್ಗಿ

ಅಧ್ಯಯನ ಮತ್ತು ಅರಿವು

ನೈತಿಕತೆ ಮತ್ತು ಲೋಕದ ವ್ಯವಸ್ಥೆ

ವಾರ್ತಾ ಭಾರತಿ : 8 Jun, 2019
ಬೆಳೆಯುವ ಪೈರು, ಯೋಗೇಶ್ ಮಾಸ್ಟರ್

ಕಲಿಕೆಯೆಂಬ ಪ್ರಕ್ರಿಯೆ: ಭಾಗ 24

ನಾಲ್ಕು ಜನ ಏನು ಅಂದುಕೊಳ್ಳುವರೋ ಎಂದು ಸರಿಯಾಗಿ ನಡೆಯುವುದು, ವರ್ತಿಸುವುದು ಒಂದು ಬಗೆಯ ಸಾಮಾಜಿಕ ವರ್ತನೆಗಳ ಪಾಠವಷ್ಟೇ. ಆದರೆ, ತನ್ನ ಮನಸ್ಸಿಗೆ ಒಪ್ಪದ್ದನ್ನು ಮಾಡದೇ ಇರುವುದು ಅಷ್ಟೇ ಮುಖ್ಯವಾಗುತ್ತದೆ. ನೈತಿಕತೆಯೆಂಬುದು ಮಗುವಿಗೆ ಪ್ರಾರಂಭದಿಂದಲೇ ತಪ್ಪಿ ಹೋಗಲಾರಂಭಿಸುತ್ತದೆ. ಕೆಲವು ಅಂಶಗಳನ್ನು ಗಮನಿಸೋಣ.

1.ಮಗುವು ಬರೆಯುವುದನ್ನೋ ಅಥವಾ ಓದುವುದನ್ನೋ ಮಾಡದಿರುವಾಗ, ನೀನು ಚೆನ್ನಾಗಿ ಬರೆದರೆ ಅಥವಾ ಓದಿದರೆ ನಿನಗೆ ಐಸ್ ಕ್ರೀಂ ಕೊಡಿಸುತ್ತೇನೆ ಎಂದು ಹೇಳುವುದೋ ಅಥವಾ ಉತ್ತಮ ಅಂಕದಲ್ಲಿ ಪಾಸ್ ಆದರೆ ನಿನಗೆ ಬೈಕ್ ಕೊಡಿಸುತ್ತೇನೆ ಎಂದು ಹೇಳುವುದೋ ಮಾಡುವುದರಲ್ಲಿ ಲಂಚಗುಳಿತನವನ್ನು ಬಿತ್ತಿದಂತಾಗುತ್ತದೆ. ನೈತಿಕತೆಗೆ ಮೊದಲ ಪೆಟ್ಟು ಅಲ್ಲೇ ಬೀಳುತ್ತದೆ.

2.ಪೊಲೀಸ್ ಇರುವ ಜಾಗದಲ್ಲಿ ಮಾತ್ರ ದಂಡದಿಂದ ತಪ್ಪಿಸಿಕೊಳ್ಳಲು ಹೆಲ್ಮೆಟ್ ಹಾಕಿಕೊಳ್ಳುವುದು, ಟ್ರಾಫಿಕ್ ಸಿಗ್ನಲ್ ಬಿದ್ದಿರುವಾಗ ಪೊಲೀಸ್ ಇರುವುದಿಲ್ಲ ಎಂದರೆ ಇಷ್ಟ ಬಂದಂತೆ ಹೋಗಿಬಿಡುವುದು, ಏಕಮುಖ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ವಾಹನ ನಡೆಸುವುದು; ಹೀಗೆ ದಂಡ ಹಾಕುವವರಿದ್ದಾರೆ ಎಂದಾಗ ಮಾತ್ರ ಕಾನೂನು ಅಥವಾ ನಿಯಮಕ್ಕೆ ಅನುಗುಣವಾಗಿ ನಡೆಯುವುದನ್ನು ನೋಡುವ ಮಕ್ಕಳಿಗೆ ನೈತಿಕತೆಯ ಪರಿಚಯವಾಗುವುದೆಲ್ಲಿ?

3.ಸ್ಪರ್ಧೆಗಳು ನೈತಿಕತೆಗೆ ಪೂರಕವೆಂದು ನನಗೇನೂ ಅನ್ನಿಸುವುದಿಲ್ಲ. ಸ್ಪರ್ಧೆ ಎಂಬುದು ಏರ್ಪಟ್ಟಾಗ ತನ್ನ ಗೆಲುವೇ ಪ್ರಧಾನ ಮತ್ತು ಉಳಿದವರ ಸೋಲನ್ನು ಬಯಸುವಂತಹ ಮನಸ್ಥಿತಿ. ಸ್ಫೋರ್ಟಿವಾಗಿ ಅಥವಾ ಕ್ರೀಡಾಮನೋಭಾವದಿಂದ ಎಲ್ಲವನ್ನೂ ತೆಗೆದುಕೊಳ್ಳಬೇಕು, ಗೆಲ್ಲುವುದು ಅಥವಾ ಸೋಲುವುದು ಮುಖ್ಯವಲ್ಲ, ಭಾಗವಹಿಸುವಿಕೆಯೇ ಮುಖ್ಯ ಎಂದೆಲ್ಲಾ ಏನೇ ಹೇಳಲು ಪ್ರಯತ್ನಿಸಿದರೂ ಸೋಲುವ ಮತ್ತು ಗೆಲ್ಲುವ ಮನಸ್ಥಿತಿಯೇ ಅಂತಿಮ. ಮಿಕ್ಕೆಲ್ಲಾ ಕಣ್ಣೊರೆಸುವ ಮಾತುಗಳು. ತನ್ನ ಗೆಲುವು ಮತ್ತು ಇತರರ ಸೋಲು ಅಂತರಾಳದಲ್ಲಿ ಅಡಗಿರುವಂತಹ, ಅಥವಾ ಸುಪ್ತವಾಗಿ ಬಚ್ಚಿಟ್ಟುಕೊಂಡಿರುವಂತಹ ಆ ಆಸೆಗೆ, ಸ್ವಾರ್ಥಕ್ಕೆ ಪೋಷಣೆಯನ್ನು ನೀಡುವುದೇ ಆಗಿರುತ್ತದೆ. ಇದು ಎಷ್ಟರಮಟ್ಟಿಗೆ ಮಕ್ಕಳ ಮೇಲೆ ಪರಿಣಾಮ ಬೀರುತ್ತವೆ ಎಂಬುದನ್ನು ನಮಗೆ ಆಗ ಅಲ್ಲಿ ಕಾಣಬರುವುದಿಲ್ಲ. ಅವರು ದೊಡ್ಡವರಾದ ಮೇಲೆ ಒಬ್ಬ ರಾಜಕಾರಣಿ, ಉದ್ಯಮಿ, ವ್ಯಾಪಾರಿ; ಹೀಗೆ ಆದಾಗ ಅವರಿಗೆ ತಮ್ಮದೇ ಮನಸ್ಥಿತಿಗಳನ್ನು ತಾವು ಕಂಡುಕೊಳ್ಳಲಾಗದೇ, ಮನೋಭಾವನೆಗಳನ್ನು ನಿಯಂತ್ರಿಸಲಾಗದೇ ಅಥವಾ ಗುರುತಿಸಿಕೊಳ್ಳಲೂ ಆಗದಂತೆ ವರ್ತಿಸುತ್ತಾರೆ. ಏಕೆಂದರೆ ಜಗತ್ತು ಇರುವುದೇ ಹೀಗೆ. ಲೋಕದಲ್ಲಿ ಎಲ್ಲರೂ ಹೀಗೇ ಇರುವುದು. ನಾನೇನೂ ತಪ್ಪು ಮಾಡುತ್ತಿಲ್ಲ. ತಪ್ಪಾಗಿ ಭಾವಿಸುತ್ತಿಲ್ಲ ಎಂಬ ಮನೋಭಾವವೇ ಅವರಲ್ಲಿರುತ್ತದೆ.

4.ಮಕ್ಕಳ ಸಮ್ಮುಖದಲ್ಲಿ ಇತರರಿಗೆ ಸಹಾಯ ಮಾಡುವ ಅಥವಾ ಕರುಣೆ ತೋರದಿರುವ ಪೋಷಕರಾಗಲಿ, ಶಿಕ್ಷಕರಾಗಲಿ ನೈತಿಕವಾಗಿ ಏನೂ ಪ್ರಭಾವ ಬೀರುವುದಿಲ್ಲ. ಬೇಡಿ ಬಂದ ಭಿಕ್ಷುಕರಿಗೋ ಅಥವಾ ಇನ್ನಾರಾದರೂ ಅಗತ್ಯವಿರುವವರಿಗೆ ನೀಡದಿರುವ ಉದಾಹರಣೆಯನ್ನು ನೋಡುತ್ತಿರುವ ಮಕ್ಕಳು ಇತರರನ್ನು ಕರುಣೆಯಿಂದ ಹೇಗೆ ಕಾಣುವರು?

5.ಧಾರ್ಮಿಕ ವಿಧಿವಿಧಾನಗಳನ್ನು ಮಾಡುವ ಅಥವಾ ಸಂಪ್ರದಾಯಗಳನ್ನು ಆಚರಿಸುವಂತಹ ಪೋಷಕರಂತೂ ನೈತಿಕತೆಯನ್ನು ಮಕ್ಕಳಿಗೆ ಪರಿಚಯಿಸುವುದರಲ್ಲಿ ತೀರಾ ಹಿಂದಕ್ಕುಳಿಯುವುದನ್ನು ನಾನು ಕಂಡಿದ್ದೇನೆ. ಇರುವೆಗಳಿಗೆ ಸಕ್ಕರೆ ಹಾಕುವುದೋ, ಕಾಗೆಗಳಿಗೆ ಅನ್ನ ಹಾಕುವುದೋ, ಇನ್ನಾರಿಗೋ ದಾನ ಧರ್ಮ ಮಾಡುವುದೋ; ಎಲ್ಲವೂ ತನಗೆ ಒಳ್ಳೆಯದಾಗಲಿ ಎಂದು. ಹಾಗೆ ನೀಡಿದರೆ, ತಮಗೆ ಒಳ್ಳೆಯದಾಗುವುದೆಂದೋ, ದೋಷ ಕಳೆಯುವುದೆಂದೋ ಮಾಡುವುದರಿಂದ ಗುಪ್ತವಾಗಿರುವ ಸ್ವಾರ್ಥವೇ ದಾನಧರ್ಮಾದಿಗಳನ್ನು ಮಾಡುವುದೇ ಹೊರತು ಅದು ನೈತಿಕತೆಯ ಭಾಗವು ಎಂದಿಗೂ ಆಗುವುದಿಲ್ಲ. ನೈತಿಕತೆ ಎಂಬುದು ಯಾವುದೇ ಗುಪ್ತವಾದ ಆಸೆ ಅಥವಾ ಪ್ರತಿಫಲಗಳನ್ನು ಬಯಸದೇ ಸಹಜವಾಗಿ ತಾವು ನೈತಿಕ ಗುಣಗಳಿಗೆ ಬದ್ಧವಾಗಿರುವುದು ಮತ್ತು ಅವುಗಳಿಗೆ ಹೃತ್ಪೂರ್ವಕವಾಗಿ, ಸಂಪೂರ್ಣ ಮನಸ್ಸಿನಿಂದ ಭಾವಿಸುವುದು. ತಮ್ಮ ಧರ್ಮದಲ್ಲಿ ಹೀಗೆ ಮಾಡಲೇ ಬೇಕೆಂದು ವಿಧಿಸಿದ್ದಾರೆ. ಹಾಗಾಗಿ ಮಾಡಬೇಕು. ಧರ್ಮದ ಭಯದಿಂದ ಒಳಿತನ್ನು ಮಾಡುವುದು, ಪೊಲೀಸರ ದಂಡಕ್ಕೆ ಅಥವಾ ವ್ಯವಸ್ಥೆಯ ಶಿಕ್ಷೆಗೆ ಹೆದರಿ ಕಾನೂನನ್ನು ಪಾಲಿಸುವ ಮಟ್ಟಿಗೇ ಸಂಕುಚಿತಗೊಳ್ಳುತ್ತದೆ.

6.ಪೋಷಕರಾಗಲಿ, ಶಿಕ್ಷಕರಾಗಲಿ ಯಾವುದೇ ಮಗುವನ್ನು ನೈತಿಕತೆಗೆ ಒಳಪಡಿಸಬೇಕೆಂದರೆ, ಮೊಟ್ಟಮೊದಲು ತಾವು ನೈತಿಕವಾಗಿ ಬದ್ಧವಾಗಿರುವುದು ಮೊತ್ತಮೊದಲನೆಯ ಹೆಜ್ಜೆ. ತನ್ನ ಮಗುವನ್ನು ಕರುಣೆಯಿಂದ, ಪ್ರೀತಿಯಿಂದ ನೋಡಿಕೊಳ್ಳುವುದು ನೈತಿಕತೆಯೇನಲ್ಲ. ಏಕೆಂದರೆ, ತನ್ನ ಮಗುವೆಂಬ ಮೋಹವಿದೆ ಅಲ್ಲಿ. ಆದರೆ ಯಾವುದೇ ಮಗುವನ್ನು, ಆ ಮಗುವು ಮತ್ತೆ ತನ್ನನ್ನು ಮತ್ತೆ ಭೇಟಿ ಮಾಡುವುದೋ ಇಲ್ಲವೋ, ತಮಗೆ ತಿಳಿದವರ ಮಗುವಾಗಿರುವುದೋ ಇಲ್ಲವೋ, ಆ ಮಗುವಿಗೆ ತೋರುವ ಸದ್ಗುಣಗಳಿಂದ ತನಗೆ ಲಾಭವಿದೆಯೋ ಇಲ್ಲವೋ; ಆದರೂ ಕೂಡಾ ಅದನ್ನು ಆದರದಿಂದ ಕಾಣುವುದರಲ್ಲಿಯೇ ಮಗುವು ಪ್ರಾರಂಭಿಕ ಪಾಠಗಳನ್ನು ಕಲಿಯುವುದು. ತನಗೆ ತೋರುವ ಗುಣಗಳಿಂದ ಕಲಿಯುವ ಪಾಠವು ಒಂದಾದರೆ, ತನ್ನ ಕಣ್ಣ ಎದುರು ಇತರರಿಗೆ ನೈತಿಕವಾಗಿ ಉಪಚರಿಸುವುದನ್ನೂ ಅದು ಕಾಣಬೇಕು.

ಮಾದರಿಗಳು

ಶಿಕ್ಷಕರು ಮತ್ತು ಪೋಷಕರು ತಮ್ಮ ಮಾತು ಮತ್ತು ಕೃತಿಗಳಲ್ಲಿ ನೈತಿಕತೆಯನ್ನು ಸಾಧಿಸುವವರಾಗಿಬಿಟ್ಟರೆ ಮಕ್ಕಳಿಗೆ ಜೀವಂತ ಮತ್ತು ನೇರ ಮಾದರಿಗಳು ದೊರಕುವುದಲ್ಲದೇ ಅವರನ್ನು ಗಾಢವಾಗಿ ಪ್ರಭಾವಿಸುತ್ತದೆ. ಯಾರಿಗೆ ತಾನೇ ಆಸೆ ಇರುವುದಿಲ್ಲ? ಯಾರಿಗೆ ತಾನೇ ಕೋಪ ಬರುವುದಿಲ್ಲ? ಈ ಕಾಲದಲ್ಲಿ ಒಳ್ಳೆಯದು ಯಾರು ಮಾಡ್ತಾರೆ? ಇದು ಒಳ್ಳೆಯವರಿಗೆ ಕಾಲವಲ್ಲ... ಈ ಬಗೆಯ ಸಾಮಾನ್ಯೀಕರಿಸುವಂತಹ ಮಾತುಗಳನ್ನು ಪದೇ ಪದೇ ಆಡುವುದೇ ನೈತಿಕತೆಯ ಲಕ್ಷಣವಲ್ಲ. ಮಗುವು ನೈತಿಕತೆಯನ್ನು ಕಲಿಯದೇ, ರೂಢಿಸಿಕೊಳ್ಳದೇ, ಪರಿಭಾವಿಸದೇ ಹೋದಲ್ಲಿ ಅದು ಎಂತಹ ಡಾಕ್ಟರ್, ಇಂಜಿನಿಯರ್, ರಾಜಕಾರಣಿ, ಉದ್ಯಮಿ, ಶಿಕ್ಷಕ ಮತ್ತೇನೇ ಆದರೂ ಅದೆಲ್ಲವೂ ವ್ಯರ್ಥವೇ. ವೃತ್ತಿಧರ್ಮವನ್ನೂ ಪಾಲಿಸುವುದಿಲ್ಲ, ತಾನೊಬ್ಬ ಸಹಜ ಮನುಷ್ಯನಾಗಿ ಮಾಡಬೇಕಾದ ಕರ್ತವ್ಯವನ್ನೂ ಕೂಡಾ ಮಾಡುವುದಿಲ್ಲ. ಎಲ್ಲವೂ ಲಾಭ ನಷ್ಟಗಳ ಪರಿಭಾಷೆಯಲ್ಲಿಯೇ ತೂಗಿ ಅಳೆಯುತ್ತಿರುತ್ತಾರೆ. ನೈತಿಕತೆಯನ್ನು ರೂಢಿಸಿಕೊಳ್ಳದ ಯಾರೇ ಆದರೂ ಅವರು ಯಾವ ವೃತ್ತಿಗೂ ನ್ಯಾಯ ಸಲ್ಲಿಸುವುದಿಲ್ಲ. ಅಷ್ಟಾದರೆ, ಯಾರು ಯಾವ ಕೆಲಸ ಮಾಡಿದರೇನು ಬಿಟ್ಟರೇನು?

ಮಕ್ಕಳಿಗೆ ನೈತಿಕತೆ ಸಹಜ ಸ್ವಭಾವವಾಗುವವರೆಗೂ ಅದನ್ನು ರೂಢಿಸುವ ಪ್ರಭಾವವನ್ನು ಪೋಷಕರು ಮತ್ತು ಶಿಕ್ಷಕರು ಬೀರಲೇಬೇಕು. ಅಂದರೆ ಮೊದಲು ಪೋಷಕರಿಗೆ ಮತ್ತು ಶಿಕ್ಷಕರಿಗೆ ನೈತಿಕತೆ ಸಹಜವಾದಂತಹ ಸ್ವಭಾವವಾಗಿರಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)