varthabharthi

ನಿಮ್ಮ ಅಂಕಣ

ಅಂಡರ್ ಟ್ರಯಲ್‌ಗಳಿಗೊಂದು ವಂಡರ್‌ಫುಲ್ ಮಹಲ್!

ವಾರ್ತಾ ಭಾರತಿ : 9 Jun, 2019
ಡಾ. ಬಿ. ಭಾಸ್ಕರ ರಾವ್

 ಸ್ವತಃ ಕೇಂದ್ರ ಸರಕಾರವೇ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಮಾಹಿತಿಯ ಪ್ರಕಾರ ಕ್ರಿಮಿನಲ್ ದಾಖಲೆ ಹೊಂದಿದ್ದಾರೆನ್ನಲಾದ ಒಟ್ಟು ಪ್ರಜಾಪ್ರತಿನಿಧಿಗಳ ಕೇವಲ ಶೇ. 6 ಮಂದಿ ಮಾತ್ರ ಅಪರಾಧಿಗಳೆಂದು ಘೋಷಿಸಲ್ಪಟ್ಟವರು ಎಂದ ಮೇಲೆ ಸಂಸತ್ ಎಂಬುದು ಅಂಡರ್‌ಟ್ರಯಲ್‌ಗಳಿಗೆ ಆಸರೆ ನೀಡುವ ಒಂದು ವಂಡರ್‌ಫುಲ್ ಮಹಲ್ ಆಗುವುದರಲ್ಲಿ ಆಶ್ಚರ್ಯವಿದೆಯೇ?


ಯಾವುದೇ ಒಂದು ಪ್ರಜಾಸತ್ತಾತ್ಮಕ ಪ್ರಭುತ್ವವಿರುವ ಸಮಾಜದಲ್ಲಿ ಬದುಕುವ ಜನರ ಅಪೇಕ್ಷೆ ಆಕಾಂಕ್ಷೆ ಮತ್ತು ಆಶಯಗಳು ಒಂದು ತೆರನಾದರೆ ಅವುಗಳ ಈಡೇರಿಕೆಯ ಸಾಧ್ಯತೆ ಬೇರೆಯೇ ತೆರನಾಗಿರುತ್ತದೆ. ಆಂಗ್ಲ ಕವಿ ಟಿ. ಎಸ್. ಏಲಿಯೆಟ್ ಹೇಳುವ ಹಾಗೆ ‘‘ಯೋಜನೆ ಮತ್ತು ವಾಸ್ತವದ ನಡುವೆ ನೆರಳು ಬೀಳುತ್ತದೆ.’’ ಪ್ರಜಾಪ್ರಭುತ್ವದಲ್ಲಿ ಈ ‘ನೆರಳು’ ಅಪರಾಧ ಜಗತ್ತಿನಲ್ಲಿ ನಡೆದಾಡುವ, ಕಾರ್ಯಾಚರಿಸುವ ಜನಪ್ರತಿನಿಧಿಗಳಿಗೆ ತಮ್ಮ ‘ಆಯಾಸ’ ಪರಿಹರಿಸಿಕೊಳ್ಳಲು, ಸ್ವಲ್ಪ ಹೊತ್ತು ನಿಂತು ಸುಧಾರಿಸಿಕೊಂಡು ಮತ್ತೆ ಮುಂದೆ ‘ಕಾರ್ಯಾಚರಣೆ’ ನಡೆಸುವ ವರೆಗೆ ಒಂದು ತಾತ್ಕಾಲಿಕ ಆಸರೆಯಾಗಬಹುದು. ದೇಶದ ಸಂಸತ್ ಕೂಡ ಇಂತಹ ಹಲವರಿಗೆ ‘ನೆರಳು’ನೀಡುವ ಆಲದಮರ ವಾಗಬಹುದು.

ಯಾಕೆಂದರೆ ಆಧುನಿಕ ಪ್ರಭುತ್ವಗಳಲ್ಲಿ ಅಪರಾಧ ಮತ್ತು ಶಿಕ್ಷೆ ನೀಡಿಕೆಯ ಪರಿಕಲ್ಪನೆಯನ್ನಾಧರಿಸಿಯೇ ಕಾನೂನು ಮತ್ತು ಸುವ್ಯವಸ್ಥೆ, ಶಾಂತಿ, ಸಾಮರಸ್ಯ ಸಾಧ್ಯವಾಗುತ್ತದೆ. ನಿಜ ಅಪರಾಧವೆಸಗು ವವರಿಗೆ ಶಿಕ್ಷೆ ಖಾತರಿಯಾದಲ್ಲಿ ಯಾವುದೇ ಸಮಾಜ ಅಪರಾಧ ಮುಕ್ತವಾಗುತ್ತದೆಂಬ ಖಾತರಿ ಇತಿಹಾಸದಲ್ಲಿ ಎಲ್ಲಿಯೂ ಇಲ್ಲ. ಕಿಸೆಗಳ್ಳತನಕ್ಕೆ ಮರಣದಂಡನೆಯಂತಹ ಭಾರೀ ಶಿಕ್ಷೆಯಿದ್ದ ಇಂಗ್ಲೆಂಡಿನಲ್ಲಿ 1780 ಮತ್ತು 1808ರ ನಡುವೆ ಒಟ್ಟು ಕಿಸೆಗಳ್ಳರಲ್ಲಿ ಶೇ. 6 ಕಿಸೆಗಳ್ಳರನ್ನು ನೇಣುಗೇರಿಸಲಾಯಿತು. ಆ ಅಪರಾಧಿಗಳನ್ನು ಸಾರ್ವಜನಿಕವಾಗಿ ನೇಣುಗೇರಿಸುವಾಗ ಅದನ್ನು ವೀಕ್ಷಿಸಲು ನೆರೆಯುತ್ತಿದ್ದ ಜನ ಜಂಗುಳಿಯ ನಡುವೆಯೇ ನೇಣು ಶಿಕ್ಷೆಗೂ ಹೆದರದೆ ಇದ್ದ ಕಿಸೆಗಳ್ಳರು ಅಲ್ಲಿಯೇ ಪಿಕ್ ಪಾಕೆಟ್ ಮಾಡುತ್ತಿದ್ದರು!

ಅದೇನಿದ್ದರೂ, ಆಧುನಿಕ ಪ್ರಜಾಪ್ರಭುತ್ವ ವಾಗಿರುವ ನಮ್ಮ ದೇಶದಲ್ಲಿ ಅಪರಾಧ ವೆಸಗಿರುವ ಆಪಾದನೆಗೊಳಗಾಗಿರುವವರು, ಜೈಲಿಗೂ ಹೋಗಿ ಬಂದವರು ಸಂಸತ್ ಸದಸ್ಯರಾಗಿ ಚುನಾಯಿತರಾಗುತ್ತಿರುವ ವಿದ್ಯಮಾನವನ್ನು ಭಾರತೀಯ ಸಮಾಜ ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. 2019ರ ಲೋಕಸಭಾ ಚುನಾವಣೆಯ ವೇಳೆ ರಾಜಕೀಯ ಪಕ್ಷಗಳು ಪ್ರಸ್ತಾಪವೇ ಮಾಡದ ಎರಡು ವಿಷಯಗಳೆಂದರೆ ಸೆಕ್ಯೂಲರಿಸಮ್ ಮತ್ತು ರಾಜಕಾರಣದ ಅಪರಾಧೀಕರಣ. ನಮ್ಮ ಸಂಸತ್ತನ್ನು ಅಪರಾಧ ಹಿನ್ನೆಲೆಯ ವ್ಯಕ್ತಿಗಳು ಪ್ರವೇಶಿಸುವುದು ಹೊಸದೇನು ಅಲ್ಲ. ಆದರೆ ಹತ್ತು ವರ್ಷಗಳ ಹಿಂದೆ 2009ರಲ್ಲಿ ಸಂಸತ್ತಿಗೆ ಆಯ್ಕೆಯಾದ ಅಪರಾಧ ಹಿನ್ನೆಲೆಯ ಸಂಸದರಿಗೆ ಹೋಲಿಸಿದರೆ ಹತ್ತು ವರ್ಷಗಳ ಅವಧಿಯಲ್ಲಿ, 2019ರಲ್ಲಿ, ಈ ಬಾರಿ ಗಂಭೀರ ಅಪರಾಧ ಹಿನ್ನೆಲೆ ಹೊಂದಿರುವ ಸಂಸದರ ಸಂಖ್ಯೆ ಶೇ. 109ರಷ್ಟು ಹೆಚ್ಚಾಗಿದೆ ಎಂಬುದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ನಿಜವಾಗಿಯೂ ಮಾರಕ ಸಂಗತಿ. ಅದರಲ್ಲೂ ವಿವರ ಪರಿಶೀಲಿಸಲಾದ 539 ಸದಸ್ಯರಲ್ಲಿ 159 ಸಂಸದರಿಗೆ ಗಂಭೀರ ಅಪರಾಧ ಹಿನ್ನೆಲೆ ಇದೆ ಎಂದರೆ, ಪರಿಸ್ಥಿತಿ ಹೀಗೆಯೇ ಮುಂದುವರಿದಲ್ಲಿ ಇನ್ನು 10 ಅಥವಾ 15 ವರ್ಷಗಳು ಕಳೆಯುವಾಗ ನಮ್ಮ ಸಂಸತ್ ವಿಚಾರಣಾಧೀನ ‘ಸಂಸತ್ ಸದಸ್ಯ’ರೆಂಬ ಕೈದಿಗಳಿಂದ ತುಂಬಿತುಳುಕಬಹುದು.

ಭಾರತದ ರಾಜಕಾಣಕ್ಕೆ ಕ್ರಿಮಿನಲ್ ಕಲರ್ ನೀಡಿರುವ ಸಂಸದರ ಅಪರಾಧ ಸ್ವರೂಪ ಆಸಕ್ತಿದಾಯಕವೂ ಅಷ್ಟೇ ಆತಂಕಕಾರಿಯೂ ಆಗಿದೆ: 30 ಮಂದಿ ಕೊಲೆ ಪ್ರಕರಣದ ಆರೋಪಿಗಳಾದರೆ, ಆರು ಮಂದಿ ಅಪಹರಣ ಪ್ರಕರಣದ ಆರೋಪಿಗಳು, ಮೂವರು ಅತ್ಯಾಚಾರ ಪ್ರಕರಣದ ಆರೋಪಿಗಳು, 29 ಮಂದಿ ದ್ವೇಷ ಭಾಷಣದ ಆರೋಪ ಹೊತ್ತಿರುವ ಪ್ರಖರ ವಾಗ್ಮಿಗಳು, ಮತ್ತು 19 ಮಂದಿ ಮಹಿಳೆಯ ವಿರುದ್ಧದ ದೌರ್ಜನ್ಯ ಕೃತ್ಯದ ಆರೋಪಿಗಳು.

ಅಪರಾಧ ಯಾವುದೇ ಆದರೂ ಎಲ್ಲದಕ್ಕೂ ‘ಸೈ’ಎನ್ನುವ ಅಪರಾಧ ಜಗತ್ತಿನ ಈ ‘ಗಣ್ಯ’ರು ಪಕ್ಷಭೇದವಿಲ್ಲದೆ ಎಲ್ಲ ರಾಜಕೀಯ ಪಕ್ಷಗಳಲ್ಲೂ ಇದ್ದಾರೆ. ಸಂಸತ್‌ನಲ್ಲಿ ರಾಜಕೀಯ ಪಕ್ಷಗಳ ಬಲಾಬಲವನ್ನು ಎಣಿಸುವಂತೆ ಪಕ್ಷಗಳಲ್ಲಿರುವ ಅಪರಾಧ ಹಿನ್ನೆಲೆಯ ಸಂಸದರ ತೆಲೆ ಎಣಿಸಿದರೆ ಯಾವ ಪಕ್ಷವೂ ಮತದಾರರನ್ನು ನಿರಾಶೆಗೊಳಿಸುವುದಿಲ್ಲ: ಬಿಜೆಪಿಯಲ್ಲಿ 87 ಮಂದಿ, ಕಾಂಗ್ರೆಸ್‌ನಲ್ಲಿ, 19 ಮಂದಿ, ಜೆಡಿಯುನಲ್ಲಿ 8 ಮಂದಿ, ಡಿಎಂಕೆಯಲ್ಲಿ 6 ಮಂದಿ ಮತ್ತು ಟಿಎಂಸಿಯಲ್ಲಿ 4 ಮಂದಿ ಸಂಸತ್‌ನ ‘ಸಭಾ ಗೌರವ’ವನ್ನು ಹೆಚ್ಚಿಸಿದ್ದಾರೆ. ಅಪರಾಧ ಮತ್ತು ರಾಜಕಾರಣ ಪರಸ್ಪರ ಕೈಕೈ ಹಿಡಿದುಕೊಂಡು ‘ಪ್ರಜಾಪ್ರಭುತ್ವದ ನೃತ್ಯ’ದಲ್ಲಿ ಹೆಜ್ಜೆ ಹಾಕುತ್ತಿರುವಾಗ ‘ಸ್ವಚ್ಛ ಭಾರತ’ದಲ್ಲಿ ‘ಸ್ವಚ್ಛ ರಾಜಕಾರಣಿ’ಗಾಗಿ ಹುಡುಕಾಟ ನಡೆಸುವುದು ‘‘ಕತ್ತಲು ತುಂಬಿದ ಕೋಣೆಯೊಂದರಲ್ಲಿ ಅಲ್ಲಿ ಇಲ್ಲದಿರುವ ಕಡು ಕಪ್ಪು ಬಣ್ಣದ ಬೆಕ್ಕಿಗಾಗಿ ಹುಡುಕಾಡಿದಂತೆ.’’

ಇದು ಸ್ಪಚ್ಛವಾಗಬೇಕಾದರೆ ನಾವು ಚುನಾವಣಾ ಮತ್ತು ರಾಜಕೀಯ ಸುಧಾರಣೆಗಾಗಿ ಕಾರ್ಯನಿರ್ವಹಿಸುವ ‘ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ’ (ಎಡಿಆರ್) ಕಲೆ ಹಾಕಿರುವ ಅಂಕಿ ಸಂಖ್ಯೆಗಳನ್ನು ಸ್ವಲ್ಪ ಗಮನಿಸಬೇಕು. ಎಪ್ರಿಲ್ ತಿಂಗಳಲ್ಲಿ ಇದು ಬಿಡುಗಡೆ ಮಾಡಿರುವ ವರದಿಯ ಪ್ರಕಾರ ಒಟ್ಟು 1,580 ಮಂದಿ ಸಂಸದರ ಮತ್ತು ಶಾಸಕರ ವಿರುದ್ಧ ಕ್ರಿಮಿನಲ್ ವಿಚಾರಣೆಗಳು ನಡೆಯುತ್ತಿವೆ. ಅಂದರೆ ದೇಶದ ಸಂಸತ್ ಮತ್ತು ರಾಜ್ಯ ಶಾಸನ ಸಭೆಗಳಲ್ಲಿರುವ ನಮ್ಮವರೇ ಆದ ಪ್ರಜಾಪ್ರತಿನಿಧಿಗಳ ಶೇ. 33 ಯಾನೆ ಭರ್ಜರಿ ಮೂವರಲ್ಲಿ ಒಬ್ಬರು ಅಪರಾಧ ಹಿನ್ನೆಲೆ ಇರುವವರು.

ಚುನಾವಣಾ ಆಯೋಗಕ್ಕೆ ಅಫಿಡವಿತ್ ಸಲ್ಲಿಸಿದ ಒಟ್ಟು 4,896 ಮಂದಿಯಲ್ಲಿ 4,845 ಮಂದಿ ಅಭ್ಯರ್ಥಿಗಳ ಅಫಿಡವಿತ್‌ಗಳ ವಿಶ್ಲೇಷಣೆ ನಡೆಸಿದಾಗ ಕಂಡು ಬಂದ ವಿಷಯ ಇದು. ಇದರಲ್ಲಿ 776 ಸಂಸತ್ ಸದಸ್ಯರ ಅಫಿಡವಿತ್‌ಗಳಾದರೆ 4,120 ಶಾಸಕರ ಅಫಿಡವಿತ್‌ಗಳು. ಅಪರಾಧ ಮತ್ತು ರಾಜಕಾರಣದ ಈ ‘ಮಧುರ ಸಂಬಂಧ’ ಯಾವ ಹಂತ ತಲುಪಿದೆ ಎಂದರೆ ಈ ಸಂಬಂಧದಿಂದ ಆತಂಕಗೊಂಡ ದೇಶದ ಅತ್ಯುನ್ನತ ನ್ಯಾಯಾಲಯದ ಐವರು ಸದಸ್ಯರ ನ್ಯಾಯಾಪೀಠವು ಕಳೆದ ಸೆಪ್ಟಂಬರ್‌ನಲ್ಲಿ ‘‘ಈ ರೋಗವನ್ನು ಗುಣಪಡಿಸು’’ವಂತೆ ಸಂಸತ್ತಿಗೆ ಆದೇಶಿಸಿತು.

ರಾಜಕಾರಣದ ಅಪರಾಧೀಕರಣವು ‘‘ಅತ್ಯಂತ ಅನಾಹುತಕಾರಿಯಾದ ಹಾಗೂ ಅತ್ಯಂತ ಶೋಚನೀಯವಾದ’’ ಬೆಳವಣಿಗೆ ಎಂದಿರುವ ಸುಪ್ರೀಂ ಕೋರ್ಟ್ ಅದು ಪ್ರಜಾಪ್ರಭುತ್ವಕ್ಕೆ ‘ಮಾರಣಾಂತಿಕ’ವಾಗುವ ಮೊದಲೇ ಅದನ್ನು ಗುಣಪಡಿಸಬೇಕಾಗಿದೆ ಎಂದಿದೆ. ರಾಜಕಾರಣದ ಅಪರಾಧೀಕರಣ ಪ್ರಜಾಸತ್ತಾತ್ಮಕ ಸ್ವರೂಪದ ಸರಕಾರದ ಬುಡಕ್ಕೆ ಕೊಡಲಿ ಏಟು ನೀಡಿ ನಾಗರಿಕರು ಸಂಕಷ್ಟಕ್ಕೀಡಾಗುವಂತೆ ಮಾಡುತ್ತದೆಂದು ಸುಪ್ರೀಂ ಕೋರ್ಟ್ ಹೇಳಿದ್ದರೂ ಯಾವ ರಾಜಕೀಯ ಪಕ್ಷವೂ ಈ ಮಾತಿಗೆ ಕವಡೆ ಕಾಸಿನ ಕಿಮ್ಮತ್ತೂ ನೀಡುತ್ತಿಲ್ಲ. ರಾಜಕೀಯ ಪಕ್ಷಗಳಿಗೆ ವಿದೇಶಗಳಿಂದ ಹರಿದು ಬರುವ ಹಣವನ್ನು ನಿಯಂತ್ರಿಸಬೇಕಾದ ಸರಕಾರ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಗೆ (ಎಫ್‌ಸಿಆರ್‌ಎ) ತಂದ ತಿದ್ದುಪಡಿಯನ್ನು ಸಂಸತ್ತಿನಲ್ಲಿ ಯಾವುದೇ ಚರ್ಚೆಯಿಲ್ಲದೆ ಅಂಗೀಕರಿಸಿದೆ. ತಿದ್ದುಪಡಿಯ ಪ್ರಕಾರ ರಾಜಕೀಯ ಪಕ್ಷಗಳಿಗೆ ಅಜ್ಞಾತ ಮೂಲದಿಂದ ಹಣ ಹರಿದು ಬರುವುದನ್ನು ಪ್ರಶ್ನಿಸುವಂತಿಲ್ಲ; ಮಾಹಿತಿ ಹಕ್ಕು ಕಾಯ್ದೆಯ ಪ್ರಕಾರ ಆ ವಿಧಿಯ ಮೂಲದ ವಿವರಗಳನ್ನು ಕೇಳುವಂತಿಲ್ಲ ಎಂದ ಮೇಲೆ ಭವಿಷ್ಯದಲ್ಲಿ ತೋಳ್ಬಲ ಮತ್ತು ಧನಬಲ ಇರುವ ವಿವಿಧ ಬಗೆಯ ಕ್ರಿಮಿನಲ್‌ಗಳು ಈ ದೇಶದ ರಾಜಕಾರಣದಲ್ಲಿ, ಆಡಳಿತದ ವಿವಿಧ ಹಂತಗಳಲ್ಲಿ ಯಾವ ರೀತಿಯ ಅಟ್ಟಹಾಸಗೈಯಬಹುದೆಂದು ಊಹಿಸಿಕೊಳ್ಳಿ.

ಕ್ರಿಮಿನಲ್‌ಗಳು ಯಾಕೆ ಇಷ್ಟೊಂದು ಸಂಖ್ಯೆಯಲ್ಲಿ ಸಂಸತ್‌ಗೆ ನುಗ್ಗುತ್ತಿದ್ದಾರೆ ಮತ್ತು ಯಾಕೆ ರಾಜಕೀಯ ಪಕ್ಷಗಳು ಕ್ರಿಮಿನಲ್ ಅಪರಾಧಗಳ ಹಿನ್ನೆಲೆ ಇರುವವರಿಗೆ, ಜೈಲಿಗೆ ಹೋಗಿ ಬಂದವರಿಗೆ, ಜಾಮೀನು ಪಡೆದು ಹೊರ ಬಂದವರಿಗೆ ತಮ್ಮ ಪಕ್ಷದ ಟಿಕೇಟ್ ನೀಡುತ್ತವೆ?
 ಇರುಳು ಕಂಡ ಬಾವಿಗೆ ಹಗಲಿನಲ್ಲಿ ಬೀಳುವ ಇಂತಹ ಉಸಾಬರಿ ಯಾಕೆ? ಈ ಪ್ರಶ್ನೆಗಳಿಗೆ ಹಲವು ಉತ್ತರಗಳು ವಿಪರೀತ ಸಾಮಾಜಿಕ, ಆರ್ಥಿಕ ವೈಷಮ್ಯವಿರುವ ಈ ದೇಶದಲ್ಲಿ ಸಾಧ್ಯವಾದರೂ ಎರಡು ಅಂಶಗಳು ಢಾಳಾಗಿ ಎದ್ದು ಕಾಣುತ್ತವೆ.

ಯಾವುದೇ ವ್ಯಾಪಾರ ಉದ್ಯಮದಲ್ಲಿ ಅಂತಿಮವಾಗಿ ಲಾಭಗಳಿಕೆ ಹೇಗೆ ಮುಖ್ಯವೋ, ಹಾಗೆಯೇ ಯಾವುದೇ ಹಂತದ ಚುನಾವಣೆಯಲ್ಲಿ ಅಭ್ಯರ್ಥಿ ಗೆಲುವು ಮುಖ್ಯ. ಕಳೆದ ನಾಲ್ಕು ಐದು ದಶಕಗಳಲ್ಲಿ ಅಭ್ಯರ್ಥಿಗಳು ಗೆಲ್ಲುವ ಸಾಧ್ಯತೆಯ ವಿಶ್ಲೇಷಣೆ ನಡೆಸಿದಾಗ 1,200 ಸರಕಾರೇತರ ಸಂಘಟನೆಗಳು ಚುನಾವಣಾ ಸುಧಾರಣೆಗಳಿಗಾಗಿ ನಡೆಸುವ ಒಂದು ಅಭಿಯಾನವಾಗಿರುವ ರಾಷ್ಟ್ರೀಯ ಚುನಾವಣಾ ಕಾವಲು(ನ್ಯಾಶನಲ್ ಇಲೆಕ್ಷನ್ ಮತ್ತು ಎಡಿಆರ್ ವಾಚ್) ಕಂಡುಕೊಂಡ ಅಪ್ರಿಯ ಸತ್ಯ ಇದು: 2014ರ ಲೋಕಸಭಾ ಚುನಾವಣೆಯಲ್ಲಿ 243 ಮಂದಿ ಕಳಂಕಿತ ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಅದರಲ್ಲಿ ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಒಬ್ಬ ಅಭ್ಯರ್ಥಿ ಗೆಲ್ಲುವ ಸಾಧ್ಯತೆ ಕ್ರಿಮಿನಲ್ ಹಿನ್ನೆಲೆ ಹೊಂದಿರದ ಅಭ್ಯರ್ಥಿ ಗೆಲ್ಲುವ ಸಾಧ್ಯತೆಗಿಂತ ಬಹುತೇಕ ಎರಡು ಪಾಲು ಹೆಚ್ಚು ಎಂದು ಕಂಡುಬಂದಿತ್ತು. ಕ್ರಿಮಿನಲ್ ಕಳಂಕ ಹೊಂದಿರುವ ಒಬ್ಬ ಅಭ್ಯರ್ಥಿ ಗೆಲ್ಲುವ ಅವಕಾಶಗಳು ಶೇ. 13. ಆದರೆ ಕಳಂಕ ರಹಿತ ಸ್ವಚ್ಛ ಅಭ್ಯರ್ಥಿಯೊಬ್ಬ ಸ್ವಚ್ಛಭಾರತದಲ್ಲಿ ಗೆಲ್ಲುವ ಅವಕಾಶಗಳು ಕೇವಲ ಶೇ. 5 ಆಗಿದೆ. ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಅಭ್ಯರ್ಥಿಗಳಿಗೆ ನ್ಯಾಯಾಲಯಗಳಲ್ಲಿ ಶಿಕ್ಷೆಯಾಗುವುದು ತೀರ ಅಪರೂಪವಾದ್ದರಿಂದ ಕ್ರಿಮಿನಲ್‌ಗಳ ಸಂಖ್ಯೆ ರಾಜಕಾರಣದಲ್ಲಿ ಹೆಚ್ಚುತ್ತ ಹೋಗುವುದು ಒಂದು ಸಹಜ ಬೇಳವಣಿಗೆ.

ಆರು ವರ್ಷಗಳವರೆಗೆ ಚುನಾವಣೆಗಳಲ್ಲಿ ಸ್ಪರ್ಧಿಸದಂತೆ ತಡೆಯುವ ಶಿಕ್ಷೆಗೆ ಅರ್ಹವಾದ 3,884 ಪ್ರಕರಣಗಳಲ್ಲಿ ನ್ಯಾಯಾಲಯ ಕೇವಲ 38 ಪ್ರಕರಣಗಳಲ್ಲಿ ಅಭ್ಯರ್ಥಿ ಅಪರಾಧಿ ಎಂದು ಘೋಷಿಸಿತು; 560 ಪ್ರಕರಣಗಳಲ್ಲಿ ಅಪರಾಧಿಗಳನ್ನು ಖುಲಾಸೆಗೊಳಿಸಲಾಯಿತು. ಸ್ವತಃ ಕೇಂದ್ರ ಸರಕಾರವೇ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಮಾಹಿತಿಯ ಪ್ರಕಾರ ಕ್ರಿಮಿನಲ್ ದಾಖಲೆ ಹೊಂದಿದ್ದಾರೆನ್ನಲಾದ ಒಟ್ಟು ಪ್ರಜಾಪ್ರತಿನಿಧಿಗಳ ಕೇವಲ ಶೇ. 6 ಮಂದಿ ಮಾತ್ರ ಅಪರಾಧಿಗಳೆಂದು ಘೋಷಿಸಲ್ಪಟ್ಟವರು ಎಂದ ಮೇಲೆ ಸಂಸತ್ ಎಂಬುದು ಅಂಡರ್‌ಟ್ರಯಲ್‌ಗಳಿಗೆ ಆಸರೆ ನೀಡುವ ಒಂದು ವಂಡರ್‌ಫುಲ್ ಮಹಲ್ ಆಗುವುದರಲ್ಲಿ ಆಶ್ಚರ್ಯವಿದೆಯೇ? 


bhaskarrao599@gmail.com

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)