varthabharthi

ವೈವಿಧ್ಯ

ಹಾಲಿವುಡ್‌ನ ಅಮರ ಪ್ರೇಮಕಥೆ

ವಾರ್ತಾ ಭಾರತಿ : 9 Jun, 2019
ಕೆ. ಪುಟ್ಟಸ್ವಾಮಿ

ಇಡೀ ಹಾಲಿವುಡ್ ಚರಿತ್ರೆಯಲ್ಲಿ ದಾಖಲೆ ಎನಿಸಿದ 21 ಬಾರಿ ಆಸ್ಕರ್ ಪ್ರಶಸ್ತಿಗೆ ನಾಮಿನೇಟ್ ಆದ ಏಕೈಕ ನಟಿ ಮೆರಿಲ್ ಸ್ಟ್ರೀಪ್. ಮೂರು ಬಾರಿ ಆಸ್ಕರ್ ಮುಡಿಗೇರಿಸಿಕೊಂಡವಳು. ಆದರೆ, ಆಕೆಯ ಮಿತ್ರವೃಂದ ಮತ್ತು ಸಹ ಕಲಾವಿದರು ಮೆರಿಲ್ ಸ್ಟ್ರೀಪ್‌ಳನ್ನು ಕೊಂಡಾಡುವುದು ಆಕೆ ತನ್ನ ಪ್ರಿಯಕರನ ಬಗ್ಗೆ ತೋರಿದ ನಿಷ್ಕಲ್ಮಶ ಪ್ರೀತಿಯನ್ನು. ಅಷ್ಟೊಂದು ಸಣ್ಣ ವಯಸ್ಸಿನಲ್ಲಿ ಪ್ರೀತಿ, ತ್ಯಾಗವನ್ನು ನಿಭಾಯಿಸಿದ ಪರಿಯನ್ನು.

ಅವಳೋ ಹಾಲಿವುಡ್ ಆಳಿದ ರತಿಗಳಲ್ಲೇ ವಿರಳವೆನಿಸಿದವಳು. ಹಾಲಿನಲ್ಲಿ ಅದ್ದಿ ತೆಗೆದ ಬಿಳಿ ಗುಲಾಬಿಯಂಥ ಸುಂದರಿ. ಸಾವಿರಭಾವ ಅರಳಿಸುವ ಹೊಳೆಯುವ ಕಂಗಳ ಬೆಡಗಿ. ಹೊಂಗೂದಲ ಚೆಲುವೆ. ಗುಂಪಿನಲ್ಲಿ ಇತರರ ಸೌಂದರ್ಯವನ್ನು ಕುಂದಿಸಿ ಎದ್ದುಕಾಣುವ ಚೆಲುವೆ. ನಟನೆಯಲ್ಲಿ ಎಣೆಯಿಲ್ಲದ ಪ್ರತಿಭೆಯ ಗಣಿ. ತನ್ನ ವೃತ್ತಿ ಬದುಕಿನಲ್ಲಿ 21 ಬಾರಿ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶಿತಳಾಗಿ ಮೂರು ಪ್ರಶಸ್ತಿ ಪಡೆದವಳು. ಮೂವತ್ತೊಂದು ಬಾರಿ ನಟನೆಗಾಗಿ ಗೋಲ್ಡನ್ ಗ್ಲೋಬ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡು, ಎಂಟು ಬಾರಿ ಆ ಪ್ರಶಸ್ತಿಯನ್ನು ಬಾಚಿಕೊಂಡವಳು. ತನ್ನ ಮೋಹಕ ಚೆಲುವು ಮತ್ತು ಅಮೋಘ ನಟನೆಯಿಂದ ಲಕ್ಷಾಂತರ ರಸಿಕರ ಎದೆಯಲ್ಲಿ ಪ್ರೀತಿಯ ಚಿಲುಮೆಯನ್ನು ಉಕ್ಕಿಸಿದವಳು. ಪ್ರೇಕ್ಷಕರ ಭಾವಭಿತ್ತಿಯಲ್ಲಿ ಆಕೆಯ ಚಿತ್ರ ಸಾವಿರ ಬಗೆಯ ವಿರಹದ ನೋವುಗಳನ್ನು ಮೀಟುತ್ತಿರುವ ಕಾಲದಲ್ಲಿಯೇ, ಇಪ್ಪತ್ತಾರರ ಸೌಂದರ್ಯ ದೇವತೆ ತನ್ನ ಸಹನಟನ ಪ್ರೀತಿಯ ಸೆಳೆತಕ್ಕೆ ಸಿಕ್ಕಳು. ಮಿಲಿಯಾಂತರ ಪ್ರೇಕ್ಷಕರ ಎದೆ ನೋವಿನ ಗೂಡಾಯಿತು.
ಆದರೆ ಇಂಥ ಮೋಹಕ ಚೆಲುವೆಯ ಹೃದಯ ಕದ್ದವನು ಗುಂಪಿನಲ್ಲಿ ಎದ್ದು ಕಾಣುವ ಚೆಲುವನಲ್ಲ. ತಲೆಯ ಮಧ್ಯಕ್ಕೆ ಬೋಳಾದ ಹಣೆ, ನಿಸ್ತೇಜ ಕಣ್ಣುಗಳು, ಅಪಾರವಾದ ನೋವನ್ನು ಉಂಡು ಹೊರಹಾಕುತ್ತಿರುವಂತೆ ಕಾಣುವ ಮುಖ, ಮೊಂಡ ಮೂಗು, ಸಾಮಾನ್ಯರಲ್ಲಿ ಸಾಮಾನ್ಯನಂತೆ ಕಾಣುತ್ತಿದ್ದ ನಟ. ತನಗಿಂತಲೂ ಹದಿನಾಲ್ಕು ವರ್ಷ ಚಿಕ್ಕವಳಾದ ನಟಿಯೊಡನೆ ಪ್ರೇಮಾಂಕುರಿಸಿದಾಗಲೂ, ಜೀವನೋತ್ಸಾಹವೇ ಮಾಯವಾದಂತಹ ಮುಖಭಾವ ಹೊತ್ತ ಈ ‘ಮಾಯಕಾರ’ ಮತ್ತು ಆ ‘ರತಿ’ಯ ಜೋಡಿಯನ್ನು ಕಂಡು ಮಿಡಿನಾಗರ-ಓತಿಕ್ಯಾತ ಜೋಡಿಯೆಂದು ಕುಹಕವಾಡಿದವರೇ ಹೆಚ್ಚು. ಆದರೆ ಇಂಥ ಜೋಡಿ ಪ್ರೀತಿಗೊಂದು ಹೊಸ ಭಾಷ್ಯ ಬರೆಯಿತು. ತ್ಯಾಗ ತಲುಪಬಹುದಾದ ಶಿಖರವನ್ನು ಏರಿ ನಿಂತಿತು. ಪ್ರೇಮಕಥೆಗಳ ಕಾರ್ಖಾನೆಯೆನಿಸಿದ ಹಾಲಿವುಡ್‌ನಲ್ಲೊಂದು ವಿಶಿಷ್ಟವಾದ ಅಮರ ಪ್ರೇಮಕತೆಯೊಂದನ್ನು ರಚಿಸಿತು. ಪ್ರೇಮಕತೆಯ ನಾಯಕಿ ಹಾಲಿವುಡ್ ಕಂಡ ಅಪ್ರತಿಮ ಚೆಲುವೆ ಮತ್ತು ಅಸಮಾನ ಕಲಾವಿದೆ ಮೆರಿಲ್ ಸ್ಟ್ರೀಪ್. ಆಕೆಯ ಜೊತೆ ಪ್ರೀತಿಯಿಂದ ಅಲ್ಪಕಾಲ ಬಾಳಿದವನು ಜಾನ್ ಹಾಲಂಡ್ ಕಾಡ್ಜಲ್.


ಮೆರಿಲ್ ಸ್ಟ್ರೀಪ್ ಎಂದಾಕ್ಷಣ ಆ ನಗುಮೊಗದ ಸುಂದರಿಯ ಅನೇಕ ಚಿತ್ರಗಳು ಥಟ್ಟನೆ ನೆನಪಾಗುತ್ತವೆ. ‘ದ ಡೀರ್ ಹಂಟರ್’, ಆಸ್ಕರ್ ಪ್ರಶಸ್ತಿ ಗಳಿಸಿದ ‘ಕ್ರೇಮರ್ ವರ್ಸಸ್ ಕ್ರೇಮರ್’, ‘ಸೋಫೀಸ್ ಚಾಯ್ಸಿ’, ‘ದಿ ಡೆವಿಲ್ ವೇರ್ಸ್ ಪ್ರಾಡಾ’ದಿಂದ ಹಿಡಿದು ವಾಶಿಂಗ್ಟನ್ ಪೋಸ್ಟ್‌ನ ಮೊದಲ ಮಹಿಳಾ ಪ್ರಕಾಶಕಿಯಾಗಿ ಪೆಂಟಗನ್ ಪೇಪರ್ಸ್ ಪ್ರಕಟಗೊಳ್ಳಲು ದೃಢ ನಿರ್ಧಾರ ತಾಳುವ ಕ್ಯಾಥರೀನ್ ಗ್ರಹಾಂ ಪಾತ್ರವನ್ನು ನಿರ್ವಹಿಸಿದ ‘ದ ಪೋಸ್ಟ್’(2017) ಚಿತ್ರದವರೆಗೆ ಆಕೆಯ ನಟನೆಯ ಸಾಮರ್ಥ್ಯವನ್ನು ಬಿಂಬಿಸುವ ಹತ್ತಾರು ಚಿತ್ರಗಳು ಕಣ್ಮುಂದೆ ನಿಲ್ಲುತ್ತವೆ. ನಟನೆಗೆ ತೆರೆದುಕೊಂಡು ಐವತ್ತು ವರ್ಷಗಳಾದರೂ ಸೌಂದರ್ಯ ಮಾಸದ ಚಲುವೆ. ತನ್ನ ಎಡಪಂಥೀಯ ನಿಲುವುಗಳಿಗೆ ಬದ್ಧಳಾಗಿ, ಸಿಸಿಲ್ ಬಿ. ಡೀಮಿಲ್ಲೆ ಜೀವಮಾನ ಪ್ರಶಸ್ತಿ ಸ್ವೀಕಾರ(2017) ಸಮಯದಲ್ಲಿ ಪತ್ರಕರ್ತನ ಪ್ರಶ್ನೆಗೆ ಉತ್ತರಿಸುವ ಬದಲು ಆತನ ದೈಹಿಕ ಸವಾಲನ್ನು ಟೀಕಿಸಿದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ನನ್ನು ಹಿಗ್ಗಾಮುಗ್ಗಾ ಟೀಕಿಸಿದ ಧೈರ್ಯದಿಂದಲೂ ಆಕೆ ಜನಪ್ರಿಯಳು.

ಆದರೆ ಜಾನ್ ಹಾಲಂಡ್ ಕಾಡ್ಜಲ್ ಜಗತ್ತಿನಾದ್ಯಂತ ಅಷ್ಟೊಂದು ಜನಪ್ರಿಯನಲ್ಲ. ಆದರೆ ಅಮೆರಿಕದ ರಂಗಭೂಮಿಯಲ್ಲಿ ಆತನ ಜನಪ್ರಿಯತೆಗೆ ಸಾಟಿಯಿರಲಿಲ್ಲ. ನಟಿಸಿದ ಐದೂ ಚಿತ್ರಗಳು ಅಮೆರಿಕ ಚಲನಚಿತ್ರರಂಗದಲ್ಲಿ ಖ್ಯಾತಿ ಪಡೆದವು. ಅವೆಲ್ಲವೂ ಅತ್ಯುತ್ತಮ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಚಿತ್ರಗಳು. ಫ್ರಾನ್ಸಿಸ್ ಫೋರ್ಡ್ ಕೊಪೋಲನ ಯುಗಕೃತಿ ‘ದ ಗಾಡ್‌ಫಾದರ್’ ಚಿತ್ರ ದಲ್ಲಿ ಡಾನ್ ವಿಟೋ ಕಾರ್ಲಿಯೋನೆಯ ದುರ್ಬಲ ಮನಸ್ಸಿನ ಎರಡನೇ ಮಗ ಫ್ರೆಡೋ ವಿಟೋ ಕಾರ್ಲಿಯೋನೆಯ ಪಾತ್ರವನ್ನು ನಿರ್ವಹಿಸಿದವನೇ ಜಾನ್ ಕಾಡ್ಜಲ್. ಅದೇ ಆತನ ಮೊದಲ ಚಲನಚಿತ್ರ. ಆನಂತರ ‘ಗಾಡ್‌ಫಾದರ್-2’, ‘ದ ಡೀರ್ ಹಂಟರ್’, ‘ಡಾಗ್ ಡೇ ಆಫ್ಟರ್‌ನೂನ್’, ‘ದ ಕಾನ್ವರ್‌ಸೇಷನ್’ ಚಿತ್ರಗಳಲ್ಲಿ ಮಾತ್ರ ನಟಿಸಿದ. ಆದರೆ ಅಮೆರಿಕ ರಂಗಭೂಮಿ ಕಂಡ ಅಪ್ರತಿಮ ಕಲಾವಿದನೆಂಬ ಖ್ಯಾತಿ ಆತನದು. ನಟನೆಯಲ್ಲಿ ಪದವಿ ಪಡೆದು ಅಮೆರಿಕದ ಶ್ರೇಷ್ಠ ನಟರ ಸಾಲಿಗೆ ಸೇರಿದ ಆಲ್ ಪಾಚಿನೋ ಮೊದಲಾದವರೊಡನೆ ಸಹನಟನಾಗಿ, ಅವರಿಗೆ ನಟನೆಯ ಪಾಠವನ್ನು ಹೇಳಿಕೊಟ್ಟು ಗುರುವಾಗಿ, ಗೆಳೆಯನಾಗಿ ಖ್ಯಾತಿಗಳಿಸಿದ್ದ. ಯಾವುದೇ ಪಾತ್ರಕ್ಕೂ ಜೀವ ತುಂಬಬಲ್ಲ ಪ್ರತಿಭೆಯಿಂದಾಗಿ ಕಾಡ್ಜಲ್ ಎಲ್ಲರ ಪ್ರೀತಿಗಳಿಸಿದ್ದ.
1976ರಲ್ಲಿ ಜಾನ್ ಕಾಡ್ಜಲ್ ಷೇಕ್ಸ್‌ಪಿಯರ್‌ನ ‘ಮೆಷರ್ ಫಾರ್ ಮೆಷರ್’(ಸೇರಿಗೆ ಸವ್ವಾ ಸೇರು) ನಾಟಕದಲ್ಲಿ ಅಭಿನಯಿಸುತ್ತಿದ್ದ. ಅದೇ ನಾಟಕದಲ್ಲಿ ಮೆರಿಲ್ ಸ್ಟ್ರೀಪ್ ಸಹನಟಿಯಾಗಿ ಅಭಿನಯಿಸುತ್ತಿದ್ದಳು. ಆ ವೇಳೆಗೆ ಕಾಡ್ಜಲ್‌ಗೆ ತಾರೆಯಲ್ಲದಿದ್ದರೂ ಎಲ್ಲ ನಿರ್ದೇಶಕರ ಬೇಡಿಕೆಯ ನಟನಾಗಿದ್ದ. ಒಂದು ವರ್ಷದ ಹಿಂದೆ ರಂಗಭೂಮಿಗೆ ಬಂದು ಹೆಜ್ಜೆಯೂರುತ್ತಿದ್ದ ಮೆರಿಲ್ ಸ್ಟ್ರೀಪ್ ನಟನೆಯಲ್ಲಿ ಅಗಾಧ ಪ್ರತಿಭೆಯಿದ್ದ ಕಾಡ್ಜಲ್‌ಗೆ ಮನಸೋತಳು. ಕೃಶವಾದ ದೇಹ, ಎದ್ದು ಕಾಣುವ ಹಣೆ, ದೊಡ್ಡದಾದ ಮೂಗು, ದುಃಖಭರಿತ ಕಣ್ಣುಗಳ ಕಾಡ್ಜಲ್ ಕೂಡ ಈ ರತಿಯ ಪ್ರೇಮಪಾಶದಲ್ಲಿ ಬಂಧಿತನಾದ. ಲಕ್ಷಣ ಹಾಗೂ ವರ್ತನೆಯಲ್ಲಿ ಧ್ರುವಗಳಂತಿದ್ದ ಈ ಇಬ್ಬರ ನಡುವೆ ಚುಂಬಕ ಗಾಳಿ ಬೀಸಿದ ಪ್ರೇಮದೇವತೆಗೆ ಹಾಲಿವುಡ್ ಅಚ್ಚರಿಪಟ್ಟಿತು. ಆರಂಭದ ಸೆಳೆತ ಮುಗಿದ ನಂತರ ಪರಸ್ಪರ ದೂರವಾಗುವ ಅನೇಕ ಪ್ರಕರಣಗಳಂತೆ ಇದೂ ಅಂತ್ಯವಾಗಬಹುದೆಂಬ ಲೆಕ್ಕಾಚಾರದಲ್ಲಿ ಹಾಲಿವುಡ್ ಮಂದಿ ನಿರೀಕ್ಷಿಸಿದರು.
ಅನೇಕ ವರ್ಷಗಳ ನಂತರ ಜಾನ್‌ನ ಆಕರ್ಷಣೆ ಬಗ್ಗೆ ಮೆರಿಲ್ ಸ್ಟ್ರೀಪ್ ‘‘ನಾನು ಭೇಟಿ ಮಾಡಿದ ಎಲ್ಲರಂತಿರಲಿಲ್ಲ ಅವನು. ಆತನಿಗೆ ಆತನದೇ ಆದ ಗುಣಲಕ್ಷಣವಿತ್ತು. ಅವನ ವ್ಯಕ್ತಿತ್ವ, ಮಾನವೀಯ ಗುಣ, ಜನರ ಬಗ್ಗೆ ಆತನಿಗಿದ್ದ ಆಸಕ್ತಿ ಮತ್ತು ಅವನಲ್ಲಿದ್ದ ಅನುಕಂಪ ನನ್ನನ್ನು ಸೆಳೆಯಿತು’’ ಎಂದು ತಾನು ಕಾಡ್ಜಲ್‌ಗೆ ಶರಣಾದ ಕಾರಣ ನಿವೇದಿಸಿದಳು.
ಇಬ್ಬರ ನಡುವೆ ಪ್ರೇಮಾಂಕುರವಾದಾಗ ಜಾನ್ ಹೆಚ್ಚು ಪ್ರಸಿದ್ಧಿಯ ನಟನಾಗಿದ್ದ. ಆದರೂ ಇಬ್ಬರೂ ಇನ್ನೂ ಬೇರುಬಿಡಲು ಹೆಣಗಾಡುತ್ತಿದ್ದವರು. ಅವರ ಸಹನಟರು, ನಿರ್ದೇಶಕರ ಪಾಲಿಗೆ ಈ ಜೋಡಿ ಒಂದು ಒಗಟಾಗಿತ್ತು. ಚಲನಚಿತ್ರರಂಗದಲ್ಲಿ ಭವಿಷ್ಯ ಭದ್ರವಾದ ನಂತರ ಮದುವೆಯಾಗಲು ಪರಸ್ಪರ ಒಪ್ಪಿ, ಒಂದಾಗಿ ಬಾಳತೊಡಗಿದ ಅವರು ಒಬ್ಬರನ್ನೊಬ್ಬರು ಅಗಲದೇ ಇರುತ್ತಿದ್ದರು. ನ್ಯೂಯಾರ್ಕ್ ರಂಗಭೂಮಿಯಲ್ಲಿ ಅವರು ಜನರ ಅಸೂಯೆಯನ್ನು ಕೆರಳಿಸಿದ್ದರು. ‘‘ಎಲ್ಲದರಲ್ಲಿಯೂ ನಿಧಾನ ಸ್ವಭಾವದವನಂತೆ ಕಾಣುತ್ತಿದ್ದ ಕಾಡ್ಜಲ್, ರೊಮಾನ್ಸ್‌ನಲ್ಲಿ ಪಡೆದುಕೊಂಡ ವೇಗ ಅಚ್ಚರಿ ಹುಟ್ಟಿಸಿತ್ತು!’’ ಎಂದು ಅವರ ಹತ್ತಿರದ ಗೆಳೆಯ ನಟ ಆಲ್ ಪಾಚಿನೋ ಅಚ್ಚರಿ ವ್ಯಕ್ತಪಡಿಸಿದ್ದ.


ಸಹಜ ಪ್ರತಿಭೆಯ ಇಬ್ಬರು ಕಲಾವಿದರು ಪ್ರೇಮದ ಶಿಖರದಲ್ಲಿ ವಿಹರಿಸುತ್ತಿರುವಾಗಲೇ ಕಾಡ್ಜಲ್ ಪದೇ ಪದೇ ಅನಾರೋಗ್ಯಕ್ಕೀಡಾಗತೊಡಗಿದ. ನಿರ್ದೇಶಕರಿಗೆ ಇದು ಆತಂಕ ತಂದೊಡ್ಡಿತು. ಹಲವು ಪ್ರದರ್ಶನಗಳನ್ನು ತಪ್ಪಿಸಿಕೊಂಡ ಕಾಡ್ಜಲ್‌ನನ್ನು ನಿರ್ದೇಶಕರೊಬ್ಬರು ವೈದ್ಯಕೀಯ ತಪಾಸಣೆಗೆ ಕರೆದೊಯ್ದರು. ಭೂಮಿ ಬಾಯಿಬಿಡುವಂತಹ ಸುದ್ದಿ ಕಾದಿತ್ತು. ಕಾಡ್ಜಲ್‌ನ ಶ್ವಾಸಕೋಶಗಳಲ್ಲಿ ಕ್ಯಾನ್ಸರ್ ಮನೆಮಾಡಿತ್ತು! ಅದು ಅವನ ದೇಹವನ್ನು ವ್ಯಾಪಿಸಿತ್ತು!
ಸುದ್ದಿ ಕಿವಿಗೆ ಅಪ್ಪಳಿಸಿದ ಕೂಡಲೇ ಜಾನ್ ಮತ್ತು ಸ್ಟ್ರೀಪ್ ಮೌನಕ್ಕೆ ಶರಣಾದರು. ಆದರೆ ಕೆಲ ಸಮಯದ ನಂತರ ಎಚ್ಚೆತ್ತ ಮೆರಿಲ್ ಏನೂ ಆಗಿಯೇ ಇಲ್ಲವೆಂಬಂತೆ ‘‘ಡಿನ್ನರ್‌ಗೆ ಎಲ್ಲಿ ಹೋಗೋಣ?’’ ಎಂದು ಕೇಳಿದಳು.
ಕಾಡ್ಜಲ್ ರಂಗಭೂಮಿಯಲ್ಲಿ ನಟಿಸುವುದನ್ನು ನಿಲ್ಲಿಸಿದ. ಮೆರಿಲ್ ತನ್ನ ವೃತ್ತಿಯನ್ನು ಮುಂದುವರಿಸಿದಳು. ಕಾಡ್ಜಲ್ ಮತ್ತೆ ಗುಣವಾಗುತ್ತಾನೆ ಎಂಬ ಅತುಲ ವಿಶ್ವಾಸದಿಂದ ಆಕೆ ನೋವು ನುಂಗಿ ಬದುಕನ್ನು ಎದುರಿಸಲು ಸಿದ್ಧಳಾದಳು. ಕಾಡ್ಜಲ್‌ಗೆ ನೋವಾಗದಂತೆ ಆತನನ್ನು ಮಗುವಿನಂತೆ ನೋಡಿಕೊಳ್ಳತೊಡಗಿದಳು. ನೋಡಲು ಸುಕೋಮಲ ಸುಂದರಿಯಾದರೂ ಮೆರಿಲ್ ಸ್ಟ್ರೀಪ್ ಅವಳದು ಗಟ್ಟಿಯಾದ ವ್ಯಕ್ತಿತ್ವ. ಕಾಯಿಲೆಯ ಗಂಭೀರತೆಯನ್ನು ಇಬ್ಬರೂ ಜಗತ್ತಿಗೆ ತೋರಿಸಿಕೊಳ್ಳಲಿಲ್ಲ. ಕಾಡ್ಜಲ್‌ನ ಗೆಳೆಯನಾದ ನಟ ಆಲ್ ಪಾಚಿನೋ ರೇಡಿಯೇಷನ್ ಚಿಕಿತ್ಸೆಗೆ ಕರೆದೊಯ್ಯುತ್ತಿದ್ದ. ಆತ ಮತ್ತೆ ಗುಣಮುಖವಾಗಬಹುದು ಎಂದು ಮೆರಿಲ್ ಮತ್ತು ಆಲ್ ಪಾಚಿನೋ ನಂಬಿದ್ದರು. ತಾನು ಮತ್ತೆ ನಟನೆಗೆ ತೆರಳುವ ಭರವಸೆಯನ್ನೂ ಸ್ವತಃ ಕಾಡ್ಜಲ್ ತಾಳಿದ್ದ. ಸಂಗಾತಿ ಮತ್ತು ಗೆಳೆಯರ ಬೆಂಬಲ ಅಂತಹ ಭರವಸೆಯನ್ನು ಹುಟ್ಟು ಹಾಕಿತ್ತು.

‘ಗಾಡ್‌ಫಾದರ್’ ಚಿತ್ರದಿಂದ ಪ್ರಸಿದ್ಧಿಗೆ ಬಂದ ಕಾಡ್ಜಲ್ ಮತ್ತು ಸ್ಟ್ರೀಪ್ ಈ ವೇಳೆಗೆ ‘ದ ಡೀರ್ ಹಂಟರ್’ ಚಿತ್ರದಲ್ಲಿ ನಟಿಸಲು ಆಯ್ಕೆಯಾಗಿದ್ದರು. ಚಿತ್ರೀಕರಣ ಆರಂಭವಾಗುವ ವೇಳೆಗೆ ಕಾಡ್ಜಲ್‌ಗಿದ್ದ ಕ್ಯಾನ್ಸರ್ ಪತ್ತೆಯಾಗಿತ್ತು. ಕಾಡ್ಜಲ್‌ನ ಕ್ಯಾನ್ಸರ್ ಎಷ್ಟು ಗಂಭೀರವಾಗಿತ್ತೆಂದರೆ, ಅವನಿಗೆ ಜೀವವಿಮೆ ತೆಗೆಸಲಾರದಷ್ಟು ಕ್ಯಾನ್ಸರ್ ವಿಷಮಗೊಂಡಿತ್ತು. ನಿರ್ಮಾಪಕರು ಆತನನ್ನು ಕೈ ಬಿಡಲು ನಿರ್ಧರಿಸಿದರು. ಆದರೆ ನಿರ್ಮಾಪಕರ ನಿರ್ಧಾರಕ್ಕೆ ಅಡ್ಡಬಂದ ಮೆರಿಲ್ ಸ್ಟ್ರೀಪ್, ಒಂದು ವೇಳೆ ಜಾನ್ ಇಲ್ಲವೆಂದರೆ ತಾನೂ ನಟಿಸಲಾರೆ ಎಂದು ಸೆಟೆದುನಿಂತಳು. ಆಕೆಯ ಒತ್ತಡಕ್ಕೆ ಮಣಿದು ನಿರ್ದೇಶಕರು ಜಾನ್ ಕಾಡ್ಜಲ್‌ನ ಭಾಗಗಳನ್ನು ಆರಂಭದಲ್ಲಿಯೇ ಚಿತ್ರೀಕರಿಸಿದರು.
ಚಿತ್ರೀಕರಣದುದ್ದಕ್ಕೂ ಮೆರಿಲ್ ಸ್ಟ್ರೀಪ್ ತನ್ನ ಪ್ರಿಯಕರನನ್ನು ಕಣ್ಣ ಎವೆಯಲ್ಲಿರಿಸಿಕೊಂಡು ಉಪಚರಿಸಿದಳು. ಅದನ್ನು ಖುದ್ದಾಗಿ ಕಂಡ ಚಿತ್ರದ ನಾಯಕ ರಾಬರ್ಟ್ ಡೀ ನೀರೋ, ‘‘ಸಾವಿನೆಡೆಗೆ ನಡೆಯುತ್ತಿದ್ದ ವ್ಯಕ್ತಿಯನ್ನು ಅಷ್ಟೊಂದು ಪ್ರೀತಿ ಕಾಳಜಿಯಿಂದ ಉಪಚರಿಸುತ್ತಿದ್ದ ಮೆರಿಲ್ ಸ್ಟ್ರೀಪ್‌ನಂಥ ಮತ್ತೊಬ್ಬ ವ್ಯಕ್ತಿಯನ್ನು ನಾನು ಕಾಣೆ. ಆಕೆ ಪ್ರೀತಿಯಲ್ಲಿ ಮುಳುಗಿ ಮಿಂದೆದ್ದವಳು. ಅಂಥ ಪ್ರೀತಿ ಅಪರೂಪ’’ ಎಂದ.
ಚಿತ್ರೀಕರಣ ಮುಗಿದ ಕೂಡಲೇ ಸ್ಟ್ರೀಪ್ ತನ್ನ ಸಂಗಾತಿಯೊಂದಿಗೆ ಸೀದಾ ಆಸ್ಪತ್ರೆಗೆ ಬಂದಳು. ವೃತ್ತಿಯನ್ನು ಬಿಟ್ಟು ಜಾನ್ ಜೊತೆಯಲ್ಲಿ ಕಾಲ ಕಳೆಯಲು ನಿರ್ಧರಿಸಿ ದಳು. ಆದರೆ, ವೈದ್ಯಕೀಯ ವೆಚ್ಚ ಭರಿಸಲಾರದಷ್ಟು ಅಗಾಧವಾಗಿ ಬೆಳೆಯಿತು. ಮನಸ್ಸಿಲ್ಲದೆಯೇ, ಹಣ ಸಂಪಾದಿಸಲು, ಎರಡನೇ ಮಹಾಯುದ್ಧದ ಮೂಲಗಳನ್ನು ಕುರಿತ ‘ಹೋಲೊಕಾಸ್ಟ್’ ಟಿವಿ ಸರಣಿಯಲ್ಲಿ ಅಭಿನಯಿಸಿದಳು. ‘ಹೋಲೊಕಾಸ್ಟ್’ ಚಿತ್ರೀಕರಣಗೊಂಡಿದ್ದು ಆಸ್ಟ್ರಿಯಾದ ಯಾತನಾ ಶಿಬಿರಗಳಲ್ಲಿ. ಮೆರಿಲ್ ಬದುಕು ಮತ್ತು ಚಿತ್ರೀಕರಣವಾಗುತ್ತಿದ್ದ ಪರಿಸರ ಕೂಡ ಒಂದೇ ತೆರನಾಗಿತ್ತು. ನಿಗದಿಪಡಿಸಿದ ಅವಧಿಗಿಂತ ಹೆಚ್ಚು ಕಾಲ ಚಿತ್ರೀಕರಣ ಎಳೆಯಿತು. ಪ್ರತಿದಿನವೂ ಯಾತನಾಮಯವಾಗಿತ್ತು. ಕೊನೆಯ ದಿನ ಚಿತ್ರೀಕರಣ ಮುಗಿದ ಕೂಡಲೇ ನಿರ್ದೇಶಕ ಮಾರ್ವಿನ್ ಚೋಮ್‌ಸ್ಕಿಗೆ ವಿದಾಯ ಹೇಳಲೂ ಪುರುಸೊತ್ತು ಮಾಡಿಕೊಳ್ಳದೆ ಗಂಟುಮೂಟೆ ಕಟ್ಟಿ ಮೆರಿಲ್ ನ್ಯೂಯಾರ್ಕ್ ಗೆ ಬಂದಿಳಿದಳು.
ಜಾನ್‌ನನ್ನು ಭೇಟಿಯಾದಾಗ ಆತ ತಾನು ಊಹಿಸಿಕೊಂಡಿದ್ದ ಪ್ರಮಾಣಕ್ಕಿಂತಲೂ ಹೆಚ್ಚು ಕುಸಿದಿರುವುದನ್ನು ಕಂಡು ಕಂಗಾಲಾದಳು. ಮುಂದಿನ ಐದು ತಿಂಗಳು ಮೆರಿಲ್ ಜಗತ್ತಿನ ಪಾಲಿಗೆ ಕಾಣೆಯಾದಳು. ಕಾಡ್ಜಲ್ ಪಕ್ಕ ಅಂಟಿಕೂತಳು. ಅವನ ಕ್ಯಾನ್ಸರ್ ಮೂಳೆಗಳಿಗೂ ಹರಡಿತ್ತು. ಆತ ದುರ್ಬಲನಾಗುತ್ತಿದ್ದ. ವೈದ್ಯರ ಬಳಿ ಹೋದಾಗ ಜಾನ್ ಜೊತೆಗಿರುತ್ತಿದ್ದಳು. ರೇಡಿಯೇಷನ್ ಚಿಕಿತ್ಸೆ ಕಾಲದಲ್ಲಿ ಹೊರಗೆ ಕೂತು ಪ್ರಾರ್ಥಿಸುತ್ತಿದ್ದಳು. ಎಂದಿಗೂ ಭರವಸೆ ಕಳೆದುಕೊಳ್ಳಲಿಲ್ಲ. ಅವನನ್ನು ನೋಡಿಕೊಳ್ಳಲು ತನ್ನೆಲ್ಲ ಶಕ್ತಿ, ಉತ್ಸಾಹಗಳನ್ನು ಕ್ರೋಡೀಕರಿಸಿ ಅವನಲ್ಲಿ ಭರವಸೆಯು ಬತ್ತಿ ಹೋಗದಂತೆ ಶ್ರಮಿಸಿದಳು.
ಜಾನ್ ಜತೆಯಲ್ಲಿ ಕಳೆದ ದಿನಗಳನ್ನು ನೆನೆಯುತ್ತಾ ಒಮ್ಮೆ ಮೆರಿಲ್ ಹೇಳಿದ್ದು- ‘‘ನಾನು ಅವನಿಗೆ ಎಷ್ಟು ನಿಕಟವಾಗಿದ್ದೆ ಎಂದರೆ ಅವನ ಆರೋಗ್ಯ ಕುಸಿಯುತ್ತಿದ್ದುದು ನನ್ನ ಅನುಭವಕ್ಕೆ ಬರಲೇ ಇಲ್ಲ. ಅವನು ಕುಸಿಯದಂತೆ ನಾನು ಉಪಚರಿಸಬೇಕಿತ್ತು. ಹಾಗೆಯೇ ಉಪಚರಿಸಿದೆ. ನನಗೆ ಆತಂಕವಿದ್ದರೂ ಕೈಕಟ್ಟಿ ಕೂರಲಿಲ್ಲ. ಅಸಹಾಯಕತೆ ತೋರಿಸಲಿಲ್ಲ. ಸದಾ ಸಂತೋಷವಾಗಿಡುವುದು ನನ್ನ ಪ್ರೀತಿಯ ಕರ್ತವ್ಯವಾಗಿತ್ತು. ಮಾನಸಿಕವಾಗಿ, ದೈಹಿಕವಾಗಿ, ಭಾವನಾತ್ಮಕವಾಗಿ ನಾನು ಇದುವರೆಗೂ ನಿಭಾಯಿಸದೇ ಇದ್ದ ಅಧಿಕ ಪ್ರಮಾಣದ ಶ್ರಮ ಅದಾಗಿತ್ತು. ಜಾನ್ ಮೇಲಿನ ಪ್ರೀತಿ ನನ್ನನ್ನು ಆಯಾಸಗೊಳ್ಳಲು ಬಿಡಲಿಲ್ಲ.’’
1978ರ ಮಾರ್ಚ್ ಆರಂಭದಲ್ಲಿ ತೀವ್ರ ಅನಾರೋಗ್ಯದಿಂದಾಗಿ ಮೆಮೊರಿಯಲ್ ಸ್ಲೋಆನ್ ಕೆಟರಿಂಗ್ ಆಸ್ಪತ್ರೆಗೆ ಜಾನ್ ದಾಖಲಾದ. ಮೆರಿಲ್ ಆತನ ಮಗ್ಗಲಿನಲ್ಲಿಯೇ ಕುಳಿತಳು. ಮಾರ್ಚ್ 12ರಂದು ರಾತ್ರಿ 3 ಗಂಟೆಗೆ ಕಾಡ್ಜಲ್‌ನ ಪ್ರಾಣಪಕ್ಷಿ ಹಾರಿಹೋಯಿತು. ಚಿಕಿತ್ಸೆ ನಡೆಸುತ್ತಿದ್ದ ವೈದ್ಯರು ‘ಮುಗಿಯಿತು’ ಎಂದು ಮೆರಿಲ್‌ಗೆ ಹೇಳಿದರು. ಆಕೆ ನಂಬಲು ತಯಾರಿರಲಿಲ್ಲ. ಕಳೆದ ಹತ್ತು ತಿಂಗಳಿಂದ ಪ್ರಿಯಕರನನ್ನು ಬಿಡದೆ ಮೃತ್ಯು ಪ್ರವೇಶಕ್ಕೆ ಬೇಲಿ ಹಾಕಿದ್ದ ಮೆರಿಲ್ ಸ್ಟ್ರೀಪ್ ಹೋರಾಟ ಕೊನೆಗೂ ಸೋಲು ಕಂಡಿತು. ಆಧುನಿಕ ಸಾವಿತ್ರಿಯ ಸೋಲು ಅದಾಗಿತ್ತು.
ಬದುಕಿನಲ್ಲಿ ಮಹತ್ತರವಾದ ಸೋಲು ಕಂಡ ಆ ವರ್ಷದಲ್ಲಿ ಮೆರಿಲ್ ಸ್ಟ್ರೀಪ್‌ಳ ವೃತ್ತಿ ಬದುಕು ಉಜ್ವಲವಾಗಿ ಹೊಳೆಯಿತು. ಜಾನ್ ನಟಿಸಿದ ‘ದ ಡೀರ್ ಹಂಟರ್’ ಆತನ ನಿಧನಾನಂತರ ಬಿಡುಗಡೆಯಾಯಿತು. ಅದೇ ಚಿತ್ರದ ನಟನೆಗಾಗಿ ಆಕೆ ಆಸ್ಕರ್ ಪ್ರಶಸ್ತಿಗೆ ನಾಮಿನೇಟ್ ಆದಳು. ಟಿವಿ ಸರಣಿ ‘ಹೋಲೊಕಾಸ್ಟ್’ ನಟನೆಗೆ ಆಕೆಗೆ ಎಮ್ಮಿ ಪ್ರಶಸ್ತಿ ಲಭಿಸಿತು. ಆಕೆಯ ವೃತ್ತಿಗೆ ಹೊಸ ತಿರುವು ನೀಡಿದ, ಮೊದಲ ಆಸ್ಕರ್(ಪೋಷಕ ನಟಿ) ಪ್ರಶಸ್ತಿ ಗಳಿಸಿಕೊಟ್ಟ ‘ಕ್ರೇಮರ್ ವರ್ಸಸ್ ಕ್ರೇಮರ್’ ವಾಣಿಜ್ಯವಾಗಿಯೂ ಯಶಸ್ಸು ದಾಖಲಿಸಿತು. ಪೇಕ್ಸ್‌ಪಿಯರ್‌ನ ‘ದ ಟೇಮಿಂಗ್ ಆಫ್ ದ ಶ್ರೂ’ ನಾಟಕದಲ್ಲಿಯೂ ಕ್ಯಾಥರೀನ್ ಪಾತ್ರದಲ್ಲಿ ಮುಂಚಿದ ಆಕೆ ರಂಗಭೂಮಿ, ಸಿನೆಮಾಕ್ಷೇತ್ರದಲ್ಲಿ ತಾರಾ ಪಟ್ಟಕ್ಕೇರಿದಳು.
ಇಡೀ ಹಾಲಿವುಡ್ ಚರಿತ್ರೆಯಲ್ಲಿ ದಾಖಲೆ ಎನಿಸಿದ 21 ಬಾರಿ ಆಸ್ಕರ್ ಪ್ರಶಸ್ತಿಗೆ ನಾಮಿನೇಟ್ ಆದ ಏಕೈಕ ನಟಿ ಮೆರಿಲ್ ಸ್ಟ್ರೀಪ್. ಮೂರು ಬಾರಿ ಆಸ್ಕರ್ ಮುಡಿಗೇರಿಸಿಕೊಂಡವಳು. ಆದರೆ, ಆಕೆಯ ಮಿತ್ರವೃಂದ ಮತ್ತು ಸಹ ಕಲಾವಿದರು ಮೆರಿಲ್ ಸ್ಟ್ರೀಪ್‌ಳನ್ನು ಕೊಂಡಾಡುವುದು ಆಕೆ ತನ್ನ ಪ್ರಿಯಕರನ ಬಗ್ಗೆ ತೋರಿದ ನಿಷ್ಕಲ್ಮಶ ಪ್ರೀತಿಯನ್ನು. ಅಷ್ಟೊಂದು ಸಣ್ಣ ವಯಸ್ಸಿನಲ್ಲಿ ಪ್ರೀತಿ, ತ್ಯಾಗವನ್ನು ನಿಭಾಯಿಸಿದ ಪರಿಯನ್ನು. ‘‘ಜಗತ್ತಿನಲ್ಲಿ ಇನ್ನೊಂದು ಜೀವ ಇಲ್ಲವೇನೋ ಅನ್ನುವಷ್ಟರ ಮಟ್ಟಿಗೆ ಆಕೆ ಕಾಡ್ಜಲ್‌ನನ್ನು ಕಾಪಾಡಿದಳು. ಸಂಬಂಧಗಳು ಮೌಲ್ಯ ಕಳೆದುಕೊಳ್ಳುತ್ತಿದ್ದ ಕಾಲದಲ್ಲಿ ಅವನಿಗೆ ನಿಷ್ಠಳಾಗಿಯೇ ಉಳಿದಳು. ವಿಶ್ವಾಸದ್ರೋಹ ಎಸಗಲಿಲ್ಲ. ಅವನು ಉಳಿಯುವುದಿಲ್ಲ ಎಂಬ ಸತ್ಯವನ್ನು ಸುಳ್ಳಾಗಿಸಲು ಶ್ರಮಿಸಿದಳು’’ ಎಂದು ಅವರಿಬ್ಬರನ್ನು ಹತ್ತಿರದಿಂದ ಕಂಡ ನಾಟಕ ನಿರ್ದೇಶಕ ಜೋ ಫ್ಲ್ಯಾಪ್ ಉದ್ಗರಿಸಿದರೆ, ಅವರಿಬ್ಬರ ಗೆಳೆಯ ನಟ ಆಲ್ ಪಾಚಿನೋ ‘‘ಆತನ ಜೊತೆ ಆ ಹುಡುಗಿಯನ್ನು ಕಂಡಾಗ, ಇಂಥದೊಂದು ಜೋಡಿ ಇರಲು ಸಾಧ್ಯವಿಲ್ಲವೆನಿಸಿತು! ಆಕೆಯ ಬಗ್ಗೆ ಯೋಚಿಸಿದಾಗಲೆಲ್ಲ ನನಗನ್ನಿಸುವುದು, ಆಕೆ ಎಲ್ಲದರಲ್ಲೂ ಶ್ರೇಷ್ಠ’’ ಎಂದು ಅಚ್ಚರಿಪಟ್ಟಿದ್ದಾನೆ.
ಮೆರಿಲ್ ಸ್ಟ್ರೀಪ್ ಮತ್ತು ಜಾನ್ ಕಾಡ್ಜಲ್- ಪ್ರೀತಿ ಪ್ರೇಮಗಳು ಅಗ್ನಿಪರೀಕ್ಷೆಯಲ್ಲಿ ಮಿಂದು ಗೆದ್ದವರ, ಪರಸ್ಪರ ನಿಜವಾಗಿ ಬದುಕಿದವರ ಪ್ರತಿನಿಧಿಗಳು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)