varthabharthi

ಸಿನಿಮಾ

ಮತ್ತೆ ಲಾರೆನ್ಸ್ ಕೈಗೆ ಲಕ್ಷ್ಮಿಬಾಂಬ್

ವಾರ್ತಾ ಭಾರತಿ : 9 Jun, 2019

ತಮಿಳಿನ ಬ್ಲಾಕ್‌ಬಸ್ಟರ್ ಚಿತ್ರ ಕಾಂಚನದ ಬಾಲಿವುಡ್ ರಿಮೇಕ್ ‘ಲಕ್ಷ್ಮಿ ಬಾಂಬ್’ನ ನಿರ್ದೇಶನದಿಂದ ಹಿಂದೆ ಸರಿದಿದ್ದ ದಕ್ಷಿಣದ ನಟ, ನಿರ್ದೇಶಕ ಲಾರೆನ್ಸ್ ಮತ್ತೆ ಚಿತ್ರತಂಡಕ್ಕೆ ವಾಪಾಸಾಗಿದ್ದಾರೆ. ಚಿತ್ರದ ನಾಯಕನಟ ಅಕ್ಷಯ್ ಕುಮಾರ್ ಅವರ ಸಂಧಾನದ ಕಾರಣದಿಂದಾಗಿ ನಿರ್ಮಾಪಕರೊಂದಿಗೆ, ಲಾರೆನ್ಸ್ ಗೆ ಉಂಟಾಗಿದ್ದ ಭಿನ್ನಾಭಿಪ್ರಾಯ ಶಮನಗೊಂಡಿದೆ.

‘‘ನಿರ್ದೇಶಕನಾಗಿ ಲಕ್ಷ್ಮಿ ಬಾಂಬ್ ಚಿತ್ರಕ್ಕೆ ವಾಪಾಸಾಗಿದ್ದೇನೆ. ನನ್ನ ಮನಸ್ಸಿನಲ್ಲಿ ಮೂಡಿದ್ದ ಎಲ್ಲಾ ಸಮಸ್ಯೆಗಳು ಈಗ ಪರಿಹಾರವಾಗಿದೆ. ಇದಕ್ಕಾಗಿ ಅಕ್ಷಯ್ ಕುಮಾರ್ ಸಾರ್ ಹಾಗೂ ನಿರ್ಮಾಪಕಿ ಶಾಬಿನಾ ಖಾನ್ ಅವರಿಗೆ ಕೃತಜ್ಞತೆ ಅರ್ಪಿಸುತ್ತಿದ್ದೇನೆ. ಅಕ್ಷಯ್ ಅವರ ಜೊತೆಗೆ ಈ ಚಿತ್ರದಲ್ಲಿ ಭಾಗಿಯಾಗಲು ನನಗೆ ಸಂತಸವಾಗುತ್ತಿದೆ’’ ಎಂದು ಲಾರೆನ್ಸ್ ಫೇಸ್‌ಬುಕ್‌ನಲ್ಲಿ ಹೇಳಿಕೊಂಡಿದ್ದಾರೆ.

 ಲಕ್ಷ್ಮಿಬಾಂಬ್ ಚಿತ್ರದಿಂದ ಲಾರೆನ್ಸ್ ಹೊರಬಿದ್ದಿದ್ದುದು, ಬಾಲಿವುಡ್‌ನಲ್ಲಿ ಭಾರೀ ಸುದ್ದಿಯಾಗಿತ್ತು. ಚಿತ್ರದ ಫಸ್ಟ್‌ಲುಕ್ ಪೋಸ್ಟರ್‌ನ ಬಿಡುಗಡೆ ವಿಚಾರದಲ್ಲಿ ನಿರ್ದೇಶಕನಾದ ತನ್ನನ್ನು ನಿರ್ಲಕ್ಷಿಸಲಾಗಿತ್ತು ಎಂಬ ಕಾರಣದಿಂದ ನೊಂದು ಅವರು ಚಿತ್ರದಿಂದ ಹೊರಬಂದಿದ್ದರೆನ್ನಲಾಗಿದೆ. ಆದರೆ ತಾನು ಹಿಂದೆ ಸರಿದಿರುವುದರ ಹಿಂದೆ ಇರುವ ಎಲ್ಲಾ ಕಾರಣಗಳನ್ನು ಈಗ ಹೇಳಲು ಸಾಧ್ಯವಿಲ್ಲವೆಂದೂ ಅವರು ತಿಳಿಸಿದ್ದಾರೆ. ಲಕ್ಷ್ಮಿಬಾಂಬ್‌ನಲ್ಲಿ ಅಕ್ಷಯ್ ಕುಮಾರ್ ನಾಯಕನಾಗಿದ್ದು, ಉದಯೋನ್ಮುಖ ನಟಿ ಕಿಯಾರಾ ಅಡ್ವಾಣಿ ಚಿತ್ರದ ಹಿರೋಯಿನ್.

ರಾಘವ ಲಾರೆನ್ಸ್ ನಿರ್ದೇಶನದ ತಮಿಳು ಹಾರರ್ ಕಾಮಿಡಿ ಕಾಂಚನ 2011ರಲ್ಲಿ ತೆರೆಕಂಡಿತ್ತು. ಶರತ್ ಕುಮಾರ್ ಹಾಗೂ ಲಕ್ಷ್ಮಿರಾಯ್ ಜೊತೆಗೆ ಲಾರೆನ್ಸ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)