varthabharthi

ನಿಮ್ಮ ಅಂಕಣ

ಧೋನಿ ಗ್ಲೌಸ್ ನ ಮೇಲಿರುವ ಕಾಳಜಿ ಯೋಧರ ಬಗ್ಗೆ ಏಕಿಲ್ಲ?

ವಾಯುಪಡೆ ವಿಮಾನ ನಾಪತ್ತೆಯಾಗಿ 6 ದಿನ: ಮಾಧ್ಯಮಗಳ, ಬಿಜೆಪಿಗರ ‘ದೇಶಭಕ್ತಿ’ಯೂ ನಾಪತ್ತೆ!

ವಾರ್ತಾ ಭಾರತಿ : 9 Jun, 2019
ಐ.ಬಿ.ಕೆ.

ಇತ್ತೀಚೆಗೆ ಕ್ರಿಕೆಟ್ ವಿಶ್ವಕಪ್ ನ ಪಂದ್ಯಗಳಿಗಿಂತ ಮಾಧ್ಯಮಗಳಲ್ಲಿ ಅತೀ ಚರ್ಚೆಯಾಗುತ್ತಿರುವುದು ಧೋನಿ ಗ್ವೌಸ್ ವಿಚಾರದಲ್ಲಿನ ವಿವಾದ. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತ ಜಯ ಗಳಿಸಿತ್ತು. ಈ ಪಂದ್ಯದಲ್ಲಿ ಧೋನಿ ಹಸಿರು ಬಣ್ಣದ ಗ್ಲೌಸ್ ಧರಿಸಿದ್ದರು. ಈ ಗ್ಲೌಸ್ ನಲ್ಲಿದ್ದ ಸೇನೆಯ ಬಲಿದಾನದ ಸಂಕೇತ ಎಲ್ಲರ ಗಮನ ಸೆಳೆದಿದ್ದು, ದೇಶಾದ್ಯಂತ ಸುದ್ದಿಯಾಗಿತ್ತು.

ಒಂದೆಡೆ ಯೋಧರ ಬಲಿದಾನದ ಸಂಕೇತವಿರುವ ಗ್ಲೌಸ್ ಧರಿಸಿದ್ದ ಧೋನಿ ಬಗ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದ್ದರೆ, ಮತ್ತೊಂದೆಡೆ ಧೋನಿ ಈ ಗ್ಲೌಸನ್ನು ಧರಿಸಬಾರದು ಎಂದು ಮನವಿ ಮಾಡುವಂತೆ ಬಿಸಿಸಿಐಗೆ ಐಸಿಸಿ ಸೂಚನೆ ನೀಡಿತ್ತು. ಐಸಿಸಿಯ ಈ ಸೂಚನೆ ಬಗ್ಗೆ ಮಾಧ್ಯಮಗಳು ಮತ್ತು ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸಚಿವೆ ಸ್ಮೃತಿ ಇರಾನಿ ಈ ಬಗ್ಗೆ ಟ್ವೀಟ್ ಮಾಡಿ ಬಲಿದಾನ ಸಂಕೇತದ ಫೋಟೊ ಅಪ್ಲೋಡ್ ಮಾಡಿದ್ದರು. ಕೇಂದ್ರ ಸಚಿವ ಕಿರಣ್ ರಿಜಿಜು ಟ್ವೀಟ್ ಮಾಡಿ, “ಇದು ದೇಶದ ಭಾವನೆಯ ವಿಚಾರ. ಧೋನಿ ವಿಚಾರದಲ್ಲಿ ಬಿಸಿಸಿಐ ಸರಿಯಾದ ಹೆಜ್ಜೆಯನ್ನಿಡಬೇಕು” ಎಂದಿದ್ದರು. ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಪ್ರಸಿದ್ಧರಾದ ಗಿರಿರಾಜ್ ಸಿಂಗ್, “ಧೋನಿ ಇತರ ಸೆಲೆಬ್ರಿಟಿಗಳಂತಲ್ಲ. ನಿಜವಾದ ದೇಶಪ್ರೇಮಿ” ಎಂದು ಹೇಳಿದರೆ, ಬಿಜೆಪಿ ಸಂಸದ, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್, “ಕ್ರಿಕೆಟ್ ನಡೆಸುವುದು ಐಸಿಸಿಯ ಕೆಲಸ ಹೊರತು, ಗ್ಲೌಸ್ ನಲ್ಲಿ ಯಾವ ಚಿಹ್ನೆಯಿದೆ ಎಂದು ನೋಡುವುದಲ್ಲ” ಎಂದರು. ಇನ್ನು ಕೆಲವರಂತೂ ಭಾರತ ವಿಶ್ವಕಪ್ ಬಹಿಷ್ಕರಿಸಿ ಟೂರ್ನಿಯಿಂದ ಹೊರನಡೆಯಬೇಕು ಎಂದರು. ಮಾಧ್ಯಮಗಳೂ ಈ ಬಗ್ಗೆ ದಿನಗಟ್ಟಲೆ ವರದಿ ಪ್ರಸಾರ ಮಾಡಿ, ತಮ್ಮ ‘ದೇಶಪ್ರೇಮ’ವನ್ನು, ಯೋಧರ ಮೇಲಿನ ಕಾಳಜಿಯನ್ನು ತೋರ್ಪಡಿಸಿ, ಟಿಆರ್ ಪಿ ಗಳಿಸಿದವು. ಆದರೆ ಈ ಬಗ್ಗೆ ಶನಿವಾರ ಹೇಳಿಕೆ ನೀಡಿದ ಭಾರತೀಯ ಸೇನೆ ಈ ವಿವಾದಕ್ಕೂ ತನಗೂ ಸಂಬಂಧವಿಲ್ಲ ಎಂದು ಸ್ಪಷ್ಟವಾಗಿ ಹೇಳಿ, ಐಸಿಸಿ ಸೂಚನೆಯ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಲು ನಿರಾಕರಿಸಿತು.

ಧೋನಿ ಗ್ಲೌಸ್ ವಿಚಾರದಲ್ಲಿ ಧ್ವನಿಯೆತ್ತುವ, ಸೈನಿಕರ ಬಗ್ಗೆ ಕಾಳಜಿ ವ್ಯಕ್ತಪಡಿಸುವ ಈ ಎಲ್ಲರ, ಪ್ರಮುಖವಾಗಿ ಮಾಧ್ಯಮಗಳ ದೇಶಭಕ್ತಿ, ಸೈನಿಕರ ಮೇಲಿನ ಪ್ರೀತಿ ನಾಪತ್ತೆಯಾದ ಐಎಎಫ್ ವಿಮಾನದ ವಿಚಾರದಲ್ಲಿ ‘ನಾಪತ್ತೆ’ಯಾಗಿರುವುದು ವಿಪರ್ಯಾಸ.

ಜೂನ್ 3ರಂದು ಮಧ್ಯಾಹ್ನ ಅಸ್ಸಾಂನ ಜೋರ್ಹಟ್ ನಿಂದ ಅರುಣಾಚಲ ಪ್ರದೇಶದ ಮೆಚುಕಾಕ್ಕೆ ಹಾರಾಟ ಆರಂಭಿಸಿದ್ದ ಭಾರತೀಯ ವಾಯುಪಡೆಯ ವಿಮಾನವೊಂದು ಇದ್ದಕ್ಕಿದ್ದಂತೆ ನಾಪತ್ತೆಯಾಗಿತ್ತು. ಈ ವಿಮಾನದಲ್ಲಿ 8 ಸಿಬ್ಬಂದಿ ಮತ್ತು ಐವರು ಪ್ರಯಾಣಿಕರಿದ್ದರು. ನಾಪತ್ತೆಯಾಗಿರುವ ವಿಮಾನಕ್ಕಾಗಿ ಸತತ 6 ದಿನಗಳಿಂದ ಪ್ರಯತ್ನ ನಡೆಸಲಾಗುತ್ತಿದ್ದರೂ ಯಾವುದೇ ಕುರುಹು ಪತ್ತೆಯಾಗಿಲ್ಲ. ವಿಮಾನದ ಬಗ್ಗೆ ಮಾಹಿತಿ ನೀಡಿದವರಿಗೆ 5 ಲಕ್ಷ ರೂ. ಬಹುಮಾನ ನೀಡುವುದಾಗಿ ವಾಯುಪಡೆ ಘೋಷಿಸಿದೆ.

ಯೋಧರಿದ್ದ, ವಾಯುಪಡೆಯ ವಿಮಾನ ನಾಪತ್ತೆಯಾಗಿ ಇಷ್ಟು ದಿನಗಳು ಕಳೆದಿದ್ದರೂ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲದಿರುವ ಗಂಭೀರ ವಿಚಾರವು ಮಾಧ್ಯಮಗಳಿಗಾಗಲೀ, ಧೋನಿಯ ಗ್ಲೌಸ್ ಬಗ್ಗೆ ದೇಶಭಕ್ತಿಯ ಮಾತುಗಳನ್ನಾಡುವವರಿಗೆ ಮಹತ್ವದ ವಿಚಾರವಾಗಿಯೇ ಕಾಣುತ್ತಿಲ್ಲ. ಈ ಬಗ್ಗೆ ಮಾಧ್ಯಮಗಳು ಹೆಚ್ಚಿನ ವರದಿಗಳನ್ನೂ ಪ್ರಕಟಿಸುತ್ತಿಲ್ಲ. ಪ್ರೈಮ್ ಟೈಮ್ ಚರ್ಚೆಗಳನ್ನೂ ನಡೆಸುತ್ತಿಲ್ಲ. ಮಾಧ್ಯಮಗಳ ಪರದೆಯ ಮೇಲೆ ಧೋನಿ ಗ್ಲೌಸ್ ಬಗೆಗಿನ ಚರ್ಚೆಯ ಹೊರತಾಗಿ ಸೆಲೆಬ್ರಿಟಿಗಳ ಸಂಬಳ, ಚಿತ್ರಗಳ ಕಲೆಕ್ಷನ್ ಗಳ ಬಗ್ಗೆ ಗಂಭೀರವಾಗಿ ಬಿತ್ತರಿಸಲಾಗುತ್ತಿದೆ. ಧೋನಿ ಗ್ಲೌಸ್ ಮೇಲೆ ಕಾಳಜಿ ತೋರಿಸುವ ಕೇಂದ್ರ ಸಚಿವರು ನಾಪತ್ತೆಯಾದ ವಾಯುಪಡೆಯ ವಿಮಾನದ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಇಲ್ಲಿ ಇವರ ದೇಶಭಕ್ತಿಯೂ ಮಾಯವಾಗಿದೆ ಅಥವಾ ಅದರ ಅವಶ್ಯಕತೆ ಅವರಿಗಿಲ್ಲ.

ಜಾಣಮೌನ ಇದೇ ಮೊದಲಲ್ಲ

ಮಾಧ್ಯಮಗಳು ಮತ್ತು ಕೇಂದ್ರ ಸಚಿವರ ದೇಶಭಕ್ತಿಯ ಸೋಗಲಾಡಿತನ ಬಯಲಾಗುತ್ತಿರುವುದು ಇದೇ ಮೊದಲೇನಲ್ಲ. ತಿಂಗಳುಗಳ ಹಿಂದೆ ಐಎಎಫ್ ವಿಮಾನವನ್ನು ಭಾರತೀಯ ವಾಯುಪಡೆಯೇ ಹೊಡೆದುರುಳಿಸಿದ ವಿಚಾರದಲ್ಲೂ ಯಾರೊಬ್ಬರೂ ತುಟಿ ಬಿಚ್ಚಿರಲಿಲ್ಲ. ಫೆಬ್ರವರಿ 27ರಂದು ಕಾಶ್ಮೀರದ ಬುಡ್ ಗಾಂವ್ ನಲ್ಲಿ ಕ್ಷಿಪಣಿ ದಾಳಿಯಿಂದ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಪತನಗೊಂಡಿತ್ತು. ಆ ಸಂದರ್ಭದಲ್ಲೇ ಇದು ಭಾರತೀಯ ವಾಯುಪಡೆಯ ದಾಳಿ ಎಂದು ಕೆಲ ಮಾಧ್ಯಮಗಳು ವರದಿ ಮಾಡಿತ್ತಾದರೂ ಸರಕಾರ ಇದನ್ನು ನಿರಾಕರಿಸಿತ್ತು.

ಆದರೆ ಲೋಕಸಭಾ ಚುನಾವಣೆಯ ಮತದಾನ ಕೊನೆಗೊಂಡು ಮೇ 22ರಂದು ಫಲಿತಾಂಶಕ್ಕೆ ಒಂದು ದಿನ ಮೊದಲು ಇದು ಭಾರತೀಯ ವಾಯುಪಡೆಯ ಕ್ಷಿಪಣಿ ದಾಳಿಯಿಂದ ನಡೆದ ಅನಾಹುತ ಎಂದು ಒಪ್ಪಿಕೊಳ್ಳಲಾಯಿತು. ಮತದಾನದ ಮೊದಲು ಈ ವಿಚಾರ ಹೊರಬಿದ್ದಿದ್ದರೆ ಸರಕಾರಕ್ಕೆ ಹಿನ್ನಡೆಯುಂಟಾಗಬಹುದು ಎನ್ನುವ ಕಾರಣದಿಂದ ಸತ್ಯವನ್ನು ಮರೆಮಾಚಲಾಯಿತು ಎನ್ನುವ ಆರೋಪಗಳು ಕೇಳಿಬಂದಿತ್ತು.    

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)