varthabharthi

ಸುಗ್ಗಿ

ಫೋಟೋಗ್ರಫಿ ಸುತ್ತಮುತ್ತ: ಭಾಗ -21

ಕ್ಯಾಮರಾ ತಾಂತ್ರಿಕತೆಯ ಪ್ರಾಥಮಿಕ ಕಲಿಕೆ-1

ವಾರ್ತಾ ಭಾರತಿ : 9 Jun, 2019
ನೂರ್ ಅಹಮದ್ ಎ.ಎಸ್ – ಲೋಕೆಶ್ ಮೊಸಳೆ

ಕ್ಯಾಮರಾ ಕೈಗೆ ಬಂದ ತಕ್ಷಣ ಅದಕ್ಕೆ ಸಂಬಂಧಿಸಿದಂತೆ ಅರಿಯಬೇಕಾದ ಅನೇಕ ವಿಚಾರಗಳಿವೆ. ಈಗ ನಿಮ್ಮ ಬಳಿ ಒಂದು DSLR
ಕ್ಯಾಮರಾ ಇದೆ ಎಂದು ಭಾವಿಸಿಕೊಳ್ಳಿ. ಕ್ಯಾಮರಾ ಸ್ವಿಚ್ ಆನ್ ಮಾಡಿದ ತಕ್ಷಣ ಅದರ ತೋರುಪರದೆಯ (display screen) ಮೇಲೆ ಮೂರು ಚಕ್ರಗಳು ಒಂದರ ಪಕ್ಕ ಒಂದರಂತೆ ಗೋಚರಿಸುತ್ತವೆ. ಈಗ ಆ ಚಕ್ರಗಳು ಸೂಚಿಸುವ ಹಲವಾರು ಸಂಗತಿಗಳ ಕುರಿತು ತಿಳಿಯೋಣ. ಅದರ ಕುರಿತು ಪ್ರಾಥಮಿಕ ಜ್ಞಾನ ಫೋಟೊಗ್ರಫಿಗೆ ಅತ್ಯಂತ ಮಹತ್ವಪೂರ್ಣವಾದುದು. ಅಂತಹ ಮೂರೂ ಚಕ್ರಗಳು ಕ್ಯಾಮರಾದಲ್ಲಿ ಚಿತ್ರ ತೆಗೆಯಲು ಬೇಕಾದ ವಿವಿಧ ಮಾಹಿತಿಗಳನ್ನು ನೀಡುತ್ತವೆ. ಆ ಮಾಹಿತಿಯ ಮೇಲೆ ಸರಿಯಾದ ನಿಯಂತ್ರಣ ಸಾಧಿಸಿದರೆ ಉತ್ತಮ ಚಿತ್ರಗಳನ್ನು ತೆಗೆಯವುದು ಸುಲಭ ಸಾಧ್ಯವಾಗಬಹುದು. ಆ ಮೂರು ಚಕ್ರಗಳನ್ನು ಷಟರ್ ಸ್ಪೀಡ್, ಅಪರ್ಚರ್ ಮತ್ತು ಐಎಸ್‌ಓ ಎಂದು ಕರೆಯಲಾಗುತ್ತದೆ. ಈ ಮೂರರಲ್ಲೂ ವಿಧವಿಧ ಬಗೆಯ ಸಂಖ್ಯಾ ಸೂಚನೆಗಳನ್ನು ಕಾಣಬಹುದು. ಆ ಸಂಖ್ಯಾ ಸೂಚಿಗಳು ಚಿತ್ರದ ಮೇಲೆ ಬೀರುವ ಪರಿಣಾಗಳೇನು ಎಂಬುದನ್ನೇ ನಾವು ಕಲಿಯಬೇಕಿರುವ ವಿಚಾರ. ಹಾಗಾಗಿ ಮೊದಲನೆಯದಾಗಿ ಷಟರ್ ಸ್ಪೀಡ್ ಎಂದರೇನು ಎಂಬುದನ್ನು ತಿಳಿಯೋಣ.

1.ಷಟರ್ ಸ್ಪೀಡ್: ಷಟರ್ ಎನ್ನುವುದು ಕ್ಯಾಮರಾದ ಒಳಗಿರುವ ಒಂದು ಅಂಗ ಎಂದು ಭಾವಿಸಿ. ಚಿತ್ರವೊಂದನ್ನು ಕ್ಲಿಕ್ಕಿಸುವ ಮುನ್ನ ಅದರ ವೇಗದ ಬಡಿತವನ್ನು ನಾವು ನಿರ್ಧರಿಸ ಬಹುದು. ಷಟರ್ ವೇಗ ಎನ್ನುವುದು ಕ್ಯಾಮರಾದಲ್ಲಿರುವ ಷಟರ್ ಒಂದು ಸೆಕೆಂಡ್ ಅಥವಾಒಂದು ಸೆಕೆಂಡಿನ ಎಷ್ಟು ಭಾಗದವರೆಗೆ ತೆರೆದುಕೊಂಡಿರುತ್ತದೆ ಎಂಬುದನ್ನು ಸೂಚಿಸಬಹುದು. ಸಂಖ್ಯೆಯ ಮೂಲಕ ಅದನ್ನು ತೋರಿಸುವುದಾದರೆ ಈ ರೀತಿಯಲ್ಲಿ ತೋರಿಸಬಹುದು. 1s (ಒಂದು ಸೆಕೆಂಡ್), 1/2 ( ಅರ್ಧ ಸೆಕೆಂಡ್), 1/4 ಹೀಗೆ ಸೆಕೆಂಡ್ ಒಂದನ್ನು ವಿಭಜಿಸುತ್ತಾ 1/125 (ಒಂದು ಸೆಕೆಂಡಿನ 125ನೇ ಭಾಗ)... 1/125 , 1/500 ಇತ್ಯಾದಿಯಾಗಿ ವಿಭಜಿಸುತ್ತ ಹೋಗಬಹುದು. ಸರಳವಾಗಿ ಹೇಳಬೇಕೆಂದರೆ ವೇಗವನ್ನು ಹೆಚ್ಚಿಸಿದರೆ ಚಿತ್ರವು ಅಸ್ಪಷ್ಟವಾಗದಂತೆ ಮೂಡಿಸಬಹುದು. ಅಂದರೆ ಹಾರುವ ಪಕ್ಷಿ ಅಥವಾ ಚಲನೆಯಲ್ಲಿರುವ ಯಾವುದೇ ವಸ್ತುವನ್ನು ಸ್ಥಿರವಾಗಿ ನಿಂತಿರುವಂತೆ “freeze’’ ಮಾಡಬಹುದು. ಚಿತ್ರ ಕ್ಲಿಕ್ಕಿಸುವಾಗ ಕ್ಯಾಮರಾ ಸಣ್ಣ ಪ್ರಮಾಣದಲ್ಲಿ ಅಲುಗಾಡಿರುತ್ತದೆ. ಆಗ ಆ ಅಲುಗಾಟದ ಪರಿಣಾಮವನ್ನು ಷಟರ್ ಸ್ಪೀಡ್‌ನಿಂದ ಕಡಿಮೆ ಮಾಡಬಹುದು. ಷಟರ್ ಸ್ಪೀಡ್‌ಅನ್ನು ಎರಡು ರೀತಿಯಲ್ಲಿ ವಿಭಜಿಸಬಹುದು.

a) ಹೈ ಷಟರ್ ಸ್ಪೀಡ್ (ಷಟರ್ ವೇಗ 1000ಕ್ಕಿಂತ ಮಿಗಿಲು)

b) ಲೋ ಷಟರ್ ಸ್ಪೀಡ್(ಷಟರ್ ವೇಗ 30ಕ್ಕಿಂತ ಕಡಿಮೆ)

 ಉದಾಹರಣೆಗೆ ಹಾರುತ್ತಿರುವ ಪಕ್ಷಿಯ ರೆಕ್ಕೆಗಳ ಬಡಿತ, ರೆಕ್ಕೆಯಲ್ಲಿರುವ ಚಿಕ್ಕ ಮತ್ತು ಉದ್ದನೆಯ ಗರಿಗಳ ವಿನ್ಯಾಸ, ಅದರ ಮೇಲೆ ಬಿದ್ದಿರುವ ಬೆಳಕು ಇತ್ಯಾದಿ ಸೂಕ್ಷ್ಮಗಳನ್ನೆಲ್ಲ ಚಿತ್ರದಲ್ಲಿ ಸ್ಥಿರವಾಗಿ ತೋರುವುದಾದರೆ ಹಾಗೂ ರೈಲು, ಬಸ್ಸಿನಲ್ಲಿ ಪ್ರಯಾಣಿಸುವಾಗ ಹೊರಗಿನ ದೃಶ್ಯಗಳು ಬ್ಲರ್ ಆಗದಂತೆ ಚಿತ್ರಿಸಬೇಕೆಂದರೆ ಷಟರ್ ವೇಗ ( ಸುಮಾರು 1000ಕ್ಕಿಂತ ಹೆಚ್ಚು) ಜಾಸ್ತಿ ಇಟ್ಟಿರಬೇಕು. ಲೋ ಷಟರ್ ಸ್ಪೀಡ್ ಮೂಲಕ ಕ್ಯಾಮರಾದೊಳಗೆ ಹೆಚ್ಚು ಬೆಳಕು ಬರುವಂತೆ ಮಾಡಿಕೊಳ್ಳಬಹುದು. ಉದಾಹರಣೆಗೆ, ಜಲಪಾತದ ಹರಿವ ನೀರು ಲೋ ಷಟರ್ ಸ್ಪೀಡ್‌ನ ಸಹಾಯದಿಂದ ತೆಳುವಾದ ಪರದೆಯೊಂದು ಬಂಡೆಗಳ ಮೇಲೆ ಇಳಿಬಿಟ್ಟಂತೆ ಚಿತ್ರಿಸಬಹುದು. ಆಗ ನೀರು ಬೀಳುವ ರಭಸ ಹೆಚ್ಚಿದಂತೆಲ್ಲ ಜಲಪಾತದ ಸೌಂದರ್ಯ ಇನ್ನಷ್ಟು ಮೆರಗು ತುಂಬಿ ಕಂಗೊಳಿಸಿದಂತೆ ಕಾಣುತ್ತದೆ. ಓಡುತ್ತಿರುವ ಜಿಂಕೆಗಳ ಹಿಂಡು ಆಗಿರಬಹುದು, ಒಮ್ಮೆಲೇ ಗುಂಪಿನಲ್ಲಿ ಮೇಲೆದ್ದು ಹಾರುವ ಪಕ್ಷಿಗಳೇ ಆಗಿರಬಹುದು -ಓಡುವ ಮತ್ತು ಹಾರುವ ರೀತಿಯ ಚಲನೆಯನ್ನು ಚಿತ್ರದಲ್ಲಿ ಎಳೆದಂತೆ ಕಾಣಿಸಬಹುದು.

ತಾಂತ್ರಿಕವಾಗಿ ಹೇಳುವುದಾದರೆ ಕ್ಯಾಮರಾದೊಳಗೆ ಪುಟ್ಟ ಕನ್ನಡಿ (mirror) ಯೊಂದು ಇರುತ್ತದೆ. (ಈಗ ಮಿರರ್‌ಲೆಸ್ ಕ್ಯಾಮರಾಗಳ ಯುಗ ಪ್ರಾರಂಭವಾಗಿದೆ-ಅದು ಬೇರೆ ವಿಚಾರ) ಪ್ರತಿ ಚಿತ್ರ ಕ್ಲಿಕ್ಕಿಸಿದಾಗಲೂ ಅದನ್ನು ದಾಖಲಿಸಿಕೊಳ್ಳಲು ಆ ಕನ್ನಡಿಯು ಕ್ಷಣಾರ್ಧದಲ್ಲಿ ತೆರೆದು ಮುಚ್ಚಿಕೊಳ್ಳುತ್ತದೆ. ಆಗ ಬೆಳಕಿನ ಪ್ರತಿಬಿಂಬ ಕ್ಯಾಮರಾದ ಒಳಗಿನ ಸೆನ್ಸರ್ ಒಂದು Image ಆಗಿ ದಾಖಲಿಸಿಕೊಳ್ಳುತ್ತದೆ. ಷಟರ್ ವೇಗವನ್ನು ಹೆಚ್ಚು ಅಥವಾ ಕಡಿಮೆ ಮಾಡಿದಂತೆ ಈ ಮೇಲೆ ಹೇಳಿದ ರೀತಿಯಲ್ಲಿ ಅದು ಬೆಳಕನ್ನು ಸನ್ಸರ್ ಗ್ರಹಿಸುತ್ತದೆ. ಮುಂದಿನ ವಾರ ಅಪರ್ಚರ್ ಮತ್ತು ಐಎಸ್‌ಒ ಕುರಿತ ಮಾಹಿತಿ ಹಂಚಿಕೊಳ್ಳೋಣ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)