varthabharthi

ಸಂಪಾದಕೀಯ

ಇವಿಎಂ ಅಕ್ರಮ: ಬೂದಿ ಮುಚ್ಚಿದ ಕೆಂಡ

ವಾರ್ತಾ ಭಾರತಿ : 10 Jun, 2019

ಚುನಾವಣೆ ಮುಗಿದು, ಪ್ರಧಾನಿ ಮೋದಿಯವರ ಪ್ರಮಾಣ ವಚನ, ಗೃಹಸಚಿವ ಅಮಿತ್ ಶಾರ ಅಧಿಕಾರ ಗ್ರಹಣ ಇತ್ಯಾದಿ ಇತ್ಯಾದಿಗಳೆಲ್ಲ ಮುಗಿದಿವೆ. ಎಂದಿನಂತೆ ಮೋದಿಯವರ ವಿದೇಶ ಪ್ರವಾಸ ಆರಂಭವಾಗಿದೆ. ಮೋದಿ ನೇತೃತ್ವದ ಬಿಜೆಪಿಯ ಭಾರೀ ಗೆಲುವಿನ ಮುಂದೆ ವಿರೋಧ ಪಕ್ಷಗಳು ಇನ್ನೂ ತಲೆ ಎತ್ತಿ ನಿಂತಿಲ್ಲ. ಗೆಲುವನ್ನು ಯಾವ ರೀತಿಯಲ್ಲಿ ವಿಶ್ಲೇಷಿಸಬೇಕು ಎನ್ನುವ ಗೊಂದಲದಿಂದ ಅವುಗಳಿನ್ನೂ ಹೊರ ಬಂದಿಲ್ಲ. ಬಹುತೇಕ ಪ್ರಮುಖ ರಾಷ್ಟ್ರೀಯ ಪಕ್ಷಗಳು ಚುನಾವಣೆಯ ಸೋಲನ್ನು ಪೂರ್ಣವಾಗಿ ಒಪ್ಪಿಕೊಂಡಿವೆ. ಅದರ ಅರ್ಥ, ಈ ಬಾರಿಯ ಚುನಾವಣೆಯಲ್ಲಿ ಕಾರ್ಪೊರೇಟ್ ಪ್ರಣೀತ ಹಿಂದುತ್ವ ಗೆಲುವು ಕಂಡಿದೆ. ಆದರೆ ಬಿಎಸ್ಪಿಯಂತಹ ಬೆರಳೆಣಿಕೆಯ ಪಕ್ಷ ಮಾತ್ರ ಇವಿಎಂನ ಕುರಿತಂತೆ ಗೊಣಗಾಡುತ್ತಿವೆ. ಆ ಧ್ವನಿಯಲ್ಲೂ ಸ್ಪಷ್ಟತೆಯಿಲ್ಲ.

ಚುನಾವಣಾ ಪೂರ್ವದಲ್ಲಿ ಎಲ್ಲ ವಿರೋಧ ಪಕ್ಷಗಳು ಒಂದಾಗಿ ಶೇ. 50 ರಷ್ಟು ಇವಿಎಂ ಮತ ಪತ್ರಗಳ ತಾಳೆಯಾಗಬೇಕು ಎಂದು ಸುಪ್ರೀಂಕೋರ್ಟ್‌ನವರೆಗೂ ಹೋಗಿದ್ದವು. ದೊಡ್ಡ ಧ್ವನಿಯಲ್ಲಿ ಇವಿಎಂ ದುರ್ಬಳಕೆಯ ವಿರುದ್ಧ ಮಾತನಾಡಿದ್ದವು. ಚುನಾವಣೆಯಲ್ಲಿ ಇವಿಎಂ ದುರ್ಬಳಕೆಯಾಗುವ ಸಾಧ್ಯತೆಗಳು ಹೆಚ್ಚಿವೆ ಎನ್ನುವ ತಮ್ಮ ಭೀತಿಗೆ ಕಾರಣಗಳನ್ನೂ ಹೇಳಿಕೊಂಡಿದ್ದವು. ಇದೇ ಹೊತ್ತಿನಲ್ಲಿ ‘ದಿ ಹಿಂದೂ’ ಪತ್ರಿಕೆಯೂ ‘ನಾಪತ್ತೆಯಾಗಿರುವ ಸಹಸ್ರಾರು ಮತಯಂತ್ರಗಳ’ ಕುರಿತಂತೆ ವಿಶೇಷ ವರದಿಯೊಂದನ್ನು ಪ್ರಕಟಿಸಿತ್ತು. ವಿವಿಧ ಪಕ್ಷಗಳು ಮಾತ್ರವಲ್ಲ, ಜನಸಾಮಾನ್ಯರೂ ಈ ಮತಯಂತ್ರಗಳ ದುರ್ಬಳಕೆಗಳ ಬಗ್ಗೆ ಆತಂಕಗೊಂಡಿದ್ದರು.ಆದರೆ ಶೇ. 50ರಷ್ಟು ಇವಿಎಂ ಮತ ಪತ್ರಗಳ ತಾಳೆಗೆ ಆಯೋಗ ಮಾತ್ರವಲ್ಲ, ಸುಪ್ರೀಂಕೋರ್ಟ್ ಕೂಡ ಸ್ಪಂದಿಸಲಿಲ್ಲ. ಇದೇ ಸಂದರ್ಭದಲ್ಲಿ ಪ್ರತಿ ಲೋಕಸಭೆಯ ಐದು ವಿಧಾನಸಭೆಯ ಮತ ಯಂತ್ರಗಳ ತಾಳೆಗೆ ನ್ಯಾಯಾಲಯ ಬಲವಾಗಿ ಅಂಟಿಕೊಂಡಿತ್ತು. ಚುನಾವಣೆಯ ಫಲಿತಾಂಶವಂತೂ ವಿರೋಧ ಪಕ್ಷಗಳನ್ನು ಬೆಚ್ಚಿ ಬೀಳಿಸುವಂತಿದೆ. ಆದರೆ ಚುನಾವಣಾ ಪೂರ್ವದಲ್ಲಿ ಇವಿಎಂ ದುರ್ಬಳಕೆಯ ಬಗ್ಗೆ ದನಿಯೆತ್ತಿದಷ್ಟು ದೊಡ್ಡ ಪ್ರಮಾಣದಲ್ಲಿ ಈ ಬಾರಿ ಯಾವ ಪಕ್ಷಗಳೂ ಧ್ವನಿಯೆತ್ತಲಿಲ್ಲ ಎನ್ನುವುದು ಕುತೂಹಲಕಾರಿಯಾಗಿದೆ. ಕನಿಷ್ಠ ಮುಖ ಉಳಿಸಿಕೊಳ್ಳುವುದಕ್ಕಾದರೂ ಇವಿಎಂ ಕಡೆಗೆ ಬೆರಳು ತೋರಿಸುತ್ತವೆಯೋ ಎಂದರೆ ಅದೂ ಇಲ್ಲ. ಅಂದರೆ, ದೇಶಾದ್ಯಂತ ಮೋದಿ ಅಲೆ ಇರುವುದನ್ನು ಅವುಗಳೆಲ್ಲ ಪರೋಕ್ಷ ಒಪ್ಪಿಕೊಂಡಂತಾಗಿದೆ.

ಕಳೆದ ಆಡಳಿತಾವಧಿಯಲ್ಲಿ ಮೋದಿ ಸರಕಾರ ಎಸಗಿದ ಪ್ರಮಾದಗಳು, ಅದರಿಂದ ಶ್ರೀಸಾಮಾನ್ಯರಿಗುಂಟಾದ ಹಾನಿಗಳು ಚುನಾವಣೆಯ ಮೇಲೆ ಯಾವ ಪರಿಣಾಮವನ್ನೂ ಬೀರದೆ, ಬಾಲಕೋಟ್ ಸರ್ಜಿಕಲ್ ಸ್ಟ್ರೈಕ್‌ನ್ನು ನಂಬಿ ಮತದಾರರು ಮೋದಿಯನ್ನು ಬೆಂಬಲಿಸಿದರು ಎಂಬ ನಿಲುವಿಗೆ ಅವುಗಳು ಬದ್ಧವಾದಂತಿವೆ. ‘ಹಿಂದುತ್ವ’ಕ್ಕೆ ಈ ಬಾರಿ ಪೂರ್ಣ ಪ್ರಮಾಣದಲ್ಲಿ ಜಯವಾಗಿದೆ ಎಂಬ ನಂಬಿಕೆಯನ್ನು ದೇಶ ಮಾತ್ರವಲ್ಲ ವಿಶ್ವಾದ್ಯಂತ ಹುಟ್ಟಿಸಿ ಹಾಕಲು ವಿರೋಧ ಪಕ್ಷಗಳ ಈ ವೌನವೂ ಒಂದು ಪ್ರಮುಖ ಕಾರಣ. ಸರಕಾರಿ ವಿರೋಧಿ ಅಲೆ ಒಂದಿಷ್ಟು ಕೆಲಸ ಮಾಡಿಲ್ಲ ಎನ್ನುವುದು ಒಂದು ದೇಶದ ಜನತೆಯ ಪ್ರಜ್ಞಾವಂತಿಕೆಗೆ ಒಂದು ಕಳಂಕವೇ ಆಗಿದೆ. ಇದು ನಿಜಕ್ಕೂ ಪ್ರಜಾಸತ್ತೆಯ ಸೋಲು ಕೂಡ. ದೇಶದ ಮಟ್ಟಿಗೆ ಆತಂಕಕಾರಿ. ಇದೇ ಸಂದರ್ಭದಲ್ಲಿ ಮತ ಎಣಿಕೆಗೆ ಸಂಬಂಧ ಪಟ್ಟಂತೆ ನ್ಯಾಯಾಲಯವು ಐದು ವಿಧಾನಸಭೆಗಳ ಇವಿಎಂ ತಾಳೆ ನೋಡುವ ಅವಕಾಶವನ್ನು ನೀಡಿತ್ತು. ವಿಪರ್ಯಾಸವೆಂದರೆ, ಪ್ರತಿ ಲೋಕಸಭೆಯ ಈ ಐದು ವಿಧಾನಸಭೆಯ ಮತಯಂತ್ರ ತಾಳೆ ಸರಿಯಿದೆಯೇ? ಇದರಲ್ಲಿ ಏನಾದರೂ ಲೋಪ ಸಂಭವಿಸಿದೆಯೇ? ಎನ್ನುವುದರ ಕುರಿತಂತೆ ಕೂಡ ವಿರೋಧಪಕ್ಷಗಳು ಆಸಕ್ತಿ ಕಳೆದುಕೊಂಡಿವೆ. ನೂತನ ಸರಕಾರದ ಭರ್ಜರಿ ವಿಜಯೋತ್ಸವದ ತಳದಲ್ಲಿ ಇವಿಎಂ ದುರ್ಬಳಕೆ ಆರೋಪ ಇನ್ನೂ ಸಣ್ಣದಾಗಿ ನರಳಾಡುತ್ತಿವೆ ಎನ್ನುವುದು ಸುಳ್ಳಲ್ಲ.

ಇವಿಎಂ ದುರ್ಬಳಕೆ ಒಂದು ರೀತಿಯಲ್ಲಿ ಬೂದಿ ಮುಚ್ಚಿದ ಕೆಂಡದಂತಿದೆ. ಪ್ರಮುಖ ರಾಜಕೀಯ ಪಕ್ಷಗಳು ಈ ಬಗ್ಗೆ ವೌನ ತಳೆದಿವೆಯಾದರೂ, ಸಾಮಾಜಿಕ ಸಂಘಟನೆಗಳು ಮತ್ತು ಕೆಲವು ತನಿಖಾ ಪತ್ರಕರ್ತರು ಇದರ ಹಿಂದೆ ಬಿದ್ದಿದ್ದಾರೆ. ಸಣ್ಣದಾಗಿ ಆರಂಭಗೊಂಡಿರುವ ಇವಿಎಂ ದುರ್ಬಳಕೆಯ ಸದ್ದು ದನಿಗೆ ದನಿ ಸೇರಿ ದೊಡ್ಡದಾಗುತ್ತಿದೆ. ಚುನಾವಣಾ ಪೂರ್ವದಲ್ಲಿ ಇವಿಎಂ ಕುರಿತಂತೆ ದಿ ಹಿಂದೂ ತನ್ನ ಅನುಮಾನ ವ್ಯಕ್ತಪಡಿಸಿದ್ದರೆ, ಚುನಾವಣಾ ಫಲಿತಾಂಶದ ಬಳಿಕ ಇದರ ವಿರುದ್ಧ ದೊಡ್ಡ ಧ್ವನಿಯಲ್ಲಿ, ಸ್ಪಷ್ಟವಾಗಿ ಮಾತನಾಡಿದ್ದು ‘ದಿ ಕ್ವಿಂಟ್ ಡಾಟ್ ಕಾಂ’. ಮೇ ತಿಂಗಳಾಂತ್ಯದಲ್ಲಿ ಈ ವೆಬ್ ಸೈಟ್‌ನಲ್ಲಿ ಒಂದು ತನಿಖಾ ವರದಿ ಪ್ರಕಟವಾಗಿದ್ದು, ದೇಶಾದ್ಯಂತ 370ಕ್ಕೂ ಅಧಿಕ ಸೀಟುಗಳಲ್ಲಿ ಇವಿಎಂನಲ್ಲಿ ಚಲಾವಣೆಯಾದ ಮತಗಳು ಮತ್ತು ಎಣಿಕೆಯಾದ ಮತಗಳು ಪರಸ್ಪರ ತಾಳೆಯಾಗುತ್ತಿರಲಿಲ್ಲ ಎಂದು ಹೇಳಿಕೊಂಡಿತ್ತು. ಬಹುತೇಕ ಕ್ಷೇತ್ರದಲ್ಲಿ ಎಣಿಕೆಯಾದ ಮತಗಳು ಅಧಿಕವಿದ್ದವು. ಈ ಬಗ್ಗೆ ಚುನಾವಣಾ ಆಯೋಗದ ಬಳಿಕ ‘ದಿ ಕ್ವಿಂಟ್’ ವಿವರಣೆಯನ್ನು ಕೇಳಿತ್ತಾದರೂ, ಚುನಾವಣಾ ಆಯೋಗ ಅದಕ್ಕೆ ಯಾವ ಪ್ರತಿಕ್ರಿಯೆಯನ್ನು ನೀಡದೆ ವೌನವಾಗಿ ಕುಳಿತಿತು. ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ, ಕ್ವಿಂಟ್ ಯಾವಾಗ ಇದರ ಕುರಿತಂತೆ ಆಸಕ್ತಿ ವಹಿಸಿತೋ, ತಕ್ಷಣ ಆಯೋಗದ ವೆಬ್‌ಸೈಟ್‌ನಿಂದ ಮತದಾನಗಳ ವಿವರಗಳೇ ನಾಪತ್ತೆಯಾದವು ಅಥವಾ ಅದನ್ನು ಆಯೋಗ ಅಳಿಸಿ ಹಾಕಿತು.

ತದನಂತರವೂ ಈಬಗ್ಗೆ ಅದು ಯಾವ ಸ್ಪಷ್ಟನೆಯನ್ನೂ ನೀಡಲಿಲ್ಲ. ಈ ಬಗ್ಗೆ ಕೆಲವು ರಾಜಕೀಯ ಪಕ್ಷಗಳು ಆತಂಕ ವ್ಯಕ್ತಪಡಿಸಿದ್ದವು. ಎಲ್ಲಕ್ಕಿಂತ ಮುಖ್ಯವಾಗಿ ಮಾಜಿ ಚುನಾವಣಾ ಅಧಿಕಾರಿಗಳು, ಮುಖ್ಯಸ್ಥರು ‘ಚುನಾವಣಾ ಆಯೋಗ ಸ್ಪಷ್ಟೀಕರಣ ನೀಡಬೇಕು’ ಎಂದು ಒತ್ತಾಯಿಸಿದರು. ಆದರೂ ಚುನಾವಣಾ ಆಯೋಗ ಇದು ತನಗೆ ಸಂಬಂಧಿಸಿದ ವಿಷಯವೇ ಅಲ್ಲ ಎಂಬಂತೆ ವರ್ತಿಸಿತು. ವಿಷಯ ಇಲ್ಲಿಗೇ ಮುಗಿಯಲಿಲ್ಲ. ಇವಿಎಂಗಳನ್ನು ಸಾಗಿಸುವ ಎಲ್ಲ ವಾಹನಗಳಿಗೆ ನೈಜ ಸಮಯದ ಜಿಪಿಎಸ್ ಟ್ರಾಕಿಂಗ್ ಅನ್ನು ಭಾರತ ಚುನಾವಣಾ ಆಯೋಗ ಕಡ್ಡಾಯಗೊಳಿಸಿದೆ. ಆದರೆ ಚುನಾವಣೆ ಫಲಿತಾಂಶ ಘೋಷಣೆಗೆ ಮುನ್ನ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ದಿ ಕ್ವಿಂಟ್ ವೆಬ್‌ಸೈಟ್ ಈ ಬಗ್ಗೆ ವಿವರ ಕೇಳಿದಾಗ ‘‘ ದತ್ತಾಂಶ ಹಾಗೂ ಈ ವಾಹನಗಳ ಚಲನೆಗೆ ಸಂಬಂಧಿಸಿದ ಯಾವುದೇ ಭೌತಿಕ ರೂಪದ ಮಾಹಿತಿ ಇಲ್ಲ’’ ಎಂಬ ಆಘಾತಕಾರಿ ಉತ್ತರವನ್ನು ಅದು ನೀಡಿತು. ಇವಿಎಂ ಭದ್ರತೆ ಹೆಚ್ಚಿಸುವ ಹಿನ್ನೆಲೆಯಲ್ಲಿ ಜಿಪಿಎಸ್ ಅಳವಡಿಕೆಯನ್ನು ಚುನಾವಣಾ ಆಯುಕ್ತರೇ ಹೇಳಿದ್ದರು. ಆದರೆ ಇದೀಗ ಅದರ ಕುರಿತಂತೆ ಚುನಾವಣಾ ಆಯೋಗದ ವೌನ ಇವಿಎಂ ಬಗ್ಗೆ ಅನುಮಾನಗಳು ಏಳುವಂತೆ ಮಾಡಿವೆ. ಎಲ್ಲಕ್ಕಿಂತ ಆಘಾತಕಾರಿ ಅಂಶವೆಂದರೆ, ಇವಿಎಂ ದುರ್ಬಳಕೆಯ ಹಿಂದಿರುವ ಸತ್ಯವನ್ನು ಹುಡುಕಲು ಹೊರಟ ‘ದಿ ಕ್ವಿಂಟ್’ ಪತ್ರಿಕೆಯನ್ನೇ ಇದೀಗ ಕಟಕಟೆಯಲ್ಲಿ ನಿಲ್ಲಿಸುವುದಕ್ಕೆ ಕೇಂದ್ರ ಸರಕಾರ ಹೊರಟಿದೆ. ಏಕಾಏಕಿ ಜಾರಿ ನಿರ್ದೇಶನಾಲಯವು ‘ದಿ ಕ್ವಿಂಟ್’ ಸಂಪಾದಕ ರಾಘವ ಬಹ್ಲ್ ವಿರುದ್ಧ ಅಕ್ರಮ ಹಣ ವಹಿವಾಟು ಪ್ರಕರಣವನ್ನು ದಾಖಲಿಸಿದೆ.

‘ತಪ್ಪು ಮಾಡಿರದಿದ್ದರೂ ನನ್ನನ್ನು ಬೇಟೆಯಾಡಲಾಗುತ್ತಿದೆ’ ಎಂದು ಬಹ್ಲ್ ಈಗಾಗಲೇ ಹೇಳಿಕೆ ನೀಡಿದ್ದಾರೆ. ಚುನಾವಣಾ ಆಯೋಗದ ವೌನ, ಆಯೋಗದ ವೆಬ್‌ಸೈಟ್‌ನ ಮಾಹಿತಿಯ ಅಳಿಸುವಿಕೆ, ಜಿಪಿಎಸ್ ಕುರಿತಂತೆ ಅದರ ಅಮಾಯಕತೆ, ಇದೀಗ ದಿ ಕ್ವಿಂಟ್‌ನ ವಿರುದ್ಧವೇ ಪ್ರಕರಣ ದಾಖಲು ಇವಿಎಂ ಬಗ್ಗೆ ಇನ್ನಷ್ಟು ಅನುಮಾನಗಳನ್ನು ಹುಟ್ಟಿಸಿ ಹಾಕಿದೆ. ಚುನಾವಣಾ ಆಯೋಗ ಒಂದೋ ಸ್ಪಷ್ಟನೆಯನ್ನು ನೀಡಬೇಕು, ಇಲ್ಲವಾದರೆ ಇವಿಎಂ ಬಗ್ಗೆ ಎದ್ದಿರುವ ಪ್ರಶ್ನೆಗಳು ತನಿಖೆಗೊಳಗಾಗಬೇಕು. ಅಲ್ಲಿಯವರೆಗೂ ಬಿಜೆಪಿಯ ಬೃಹತ್ ವಿಜಯ ವಿಶ್ವಾಸಾರ್ಹತೆಯನ್ನು ಪಡೆದುಕೊಳ್ಳಲಾರದು. ವಿಶ್ವಾಸಾರ್ಹತೆಯನ್ನು ಹೊಂದಿರದ ಸರಕಾರ ಈ ದೇಶದ ಆಶೋತ್ತರಗಳನ್ನು ಸಮಗ್ರವಾಗಿ ಪ್ರತಿನಿಧಿಸಲಾರದು ಎನ್ನುವ ಎಚ್ಚರವನ್ನು ಚುನಾವಣಾ ಆಯೋಗ ಇನ್ನಾದರೂ ಅರಿತುಕೊಂಡು ತನ್ನ ‘ಧರ್ಮ’ವನ್ನು ಪಾಲಿಸಬೇಕಾದ ಸಮಯ ಬಂದಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)