varthabharthi

ಕ್ರೀಡೆ

ಅಂತರ್ ರಾಷ್ಟ್ರೀಯ ಕ್ರಿಕೆಟ್ ಗೆ ಯುವರಾಜ್ ಸಿಂಗ್ ವಿದಾಯ

ವಾರ್ತಾ ಭಾರತಿ : 10 Jun, 2019

ಮುಂಬೈ , ಜೂ.10; ಟೀಮ್ ಇಂಡಿಯಾದ ಮಾಜಿ ಆಲ್ ರೌಂಡರ್ ಯುವರಾಜ್ ಸಿಂಗ್ ಅಂತರ್ ರಾಷ್ಟ್ರೀಯ ಕ್ರಿಕೆಟ್ ಗೆ ಸೋಮವಾರ  ಮುಂಬೈನಲ್ಲಿ ವಿದಾಯ ಘೋಷಿಸಿದ್ದಾರೆ,

ಭಾರತ 2007ರಲ್ಲಿ  ಟಿ-20  ವಿಶ್ವಕಪ್ ಮತ್ತು 2011ರಲ್ಲಿ  ವಿಶ್ವಕಪ್ ಜಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯುವರಾಜ್ ಸಿಂಗ್ ಎಲ್ಲ ಮಾದರಿಯ ಅಂತರ್ ರಾಷ್ಟ್ರೀಯ ಕ್ರಿಕೆಟಿಗೂ ವಿದಾಯ ಘೋಷಿಸಿರುವುದಾಗಿ ತಿಳಿಸಿದ್ದಾರೆ,

 2000, ಅ.16ರಂದು ಕೀನ್ಯಾ ವಿರುದ್ಧ ಏಕದಿನ ಕ್ರಿಕೆಟ್ ಪಂದ್ಯ ಆಡುವ ಮೂಲಕ ಅಂತರ್ ರಾಷ್ಟ್ರೀಯ ಕ್ರಿಕೆಟ್ ಪ್ರವೇಶಿಸಿದ್ದ ಯುವರಾಜ್ ಸಿಂಗ್ ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯ ವಿರುದ್ಧ 84 ರನ್ ಗಳಿಸುವ ಮೂಲಕ ಗಮನ ಸೆಳೆದಿದ್ದರು.40 ಟೆಸ್ಟ್ , 304 ಏಕದಿನ ಮತ್ತು 58 ಟ್ವೆಂಟಿ-20 ಪಂದ್ಯಗಳನ್ನಾಡಿದ್ದಾರೆ.
ಟೆಸ್ಟ್ ನಲ್ಲಿ 3 ಶತಕ , 11 ಅರ್ಧಶತಕಗಳನ್ನು ಒಳಗೊಂಡ 1,900 ರನ್, ಗರಿಷ್ಠ ವೈಯಕ್ತಿಕ ಸ್ಕೋರ್ 169 ರನ್, 9 ವಿಕೆಟ್ ಪಡೆದಿದ್ದಾರೆ.
ಏಕದಿನ ಕ್ರಿಕೆಟ್ ನಲ್ಲಿ 14 ಶತಕ , 52 ಅರ್ಧಶತಕಗಳನ್ನು ಒಳಗೊಂಡ 8,701 ರನ್, ಗರಿಷ್ಠ ವೈಯಕ್ತಿಕ ಸ್ಕೋರ್ 150 ರನ್, 111 ವಿಕೆಟ್ ಪಡೆದಿದ್ದಾರೆ.
 
 ಟ್ವೆಂಟಿ-20 ಕ್ರಿಕೆಟ್‌ನಲ್ಲಿ 8 ಅರ್ಧಶತಕಗಳನ್ನು ಒಳಗೊಂಡ 1,177 ರನ್, ಗರಿಷ್ಠ ವೈಯಕ್ತಿಕ ಸ್ಕೋರ್ ಔಟಾಗದೆ 77 ರನ್, 28 ವಿಕೆಟ್ ಪಡೆದಿದ್ದಾರೆ. ಎಡಗೈ ಬ್ಯಾಟ್ಸ್ ಮನ್ , ಎಡಗೈ ಸ್ಪಿನ್ನರ್ ಆಗಿರುವ ಯುವರಾಜ್ ಸಿಂಗ್ 2011 ಫೆ.19ರಿಂದ ಎ. 2ರ ತನಕ ನಡೆದ ವಿಶ್ವಕಪ್‌ನಲ್ಲಿ 1 ಶತಕ, 4 ಅರ್ಧಶತಕ ಗಳನ್ನು ಒಳಗೊಂಡ 362 ರನ್, 15 ವಿಕೆಟ್ ಪಡೆದು ನಾಲ್ಕು ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ, ಪ್ಲೇಯರ್ ಆಫ್ ದಿ ಅವಾರ್ಡ್ ಪ್ರಶಸ್ತಿಯನ್ನು ಬಾಚಿಕೊಂಡಿದ್ದರು. ಒಂದೇ ವಿಶ್ವಕಪ್‌ನಲ್ಲಿ 300ಕ್ಕೂ ಅಧಿಕ ರನ್ ಮತ್ತು 15 ವಿಕೆಟ್ ಪಡೆದ ಮೊದಲ ಆಲ್‌ರೌಂಡರ್ ಎನಿಸಿಕೊಂಡಿದ್ದರು.
 2007ಚೊಚ್ಚಲ ಟ್ವೆಂಟಿ-20 ವಿಶ್ವಕಪ್ ನಲ್ಲಿ ಸ್ಟುವರ್ಟ್ ಬ್ರಾಡ್ ಅವರ ಒಂದೇ ಓವರ್ ನಲ್ಲಿ 6 ಸಿಕ್ಸರ್ ಸಿಡಿಸಿ ದಾಖಲೆ ನಿರ್ಮಿಸಿದ್ದರು. ಆಸ್ಟ್ರೇಲಿಯ ವಿರುದ್ಧ 70 ರನ್ ಸಿಡಿಸಿ ಭಾರತವನ್ನು ಫೈನಲ್‌ಗೆ ತಲುಪಿಸಿದ್ದರು. ಭಾರತ ಚೊಚ್ಚಲ ಟ್ವೆಂಟಿ-20 ವಿಶ್ವಕಪ್ ಜಯಿಸಲು ನೆರವಾಗಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)