varthabharthi

ವಿಶೇಷ-ವರದಿಗಳು

ಸೀಮೆಗಳನ್ನು ಮೀರಿದ ಮಹಾ ಪ್ರತಿಭೆ- ಕಾರ್ನಾಡ್

ವಾರ್ತಾ ಭಾರತಿ : 10 Jun, 2019

ಗಿರೀಶ್ ಕಾರ್ನಾಡ್ ಎಲ್ಲಾ ಸೀಮೆಗಳನ್ನೂ ಮೀರಿದ ಮಹಾನ್ ಪ್ರತಿಭೆ. ಕನ್ನಡದಲ್ಲಿ ನಾಟಕ ಸಾಹಿತ್ಯಕಾರರಾಗಿ, ಪ್ರಸಿದ್ಧ ರಂಗಭೂಮಿ ತಜ್ಞರಾಗಿ, ನಾಟಕಕಾರರಾಗಿ, ಚಲನಚಿತ್ರ ರಂಗದ ನಟರಾಗಿ, ನಿರ್ದೇಶಕರಾಗಿ, ಪ್ರಾಚಾರ್ಯರಾಗಿ, ಸಂಗೀತ ನಾಟಕ ಅಕಾಡಮಿಗಳ ಅಧ್ಯಕ್ಷರಾಗಿ ಹೀಗೆ ಅವರು ಹಲವು ರಂಗಗಳಲ್ಲಿ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದವರು. ಪ್ರಗತಿಶೀಲ ಸಮತಾವಾದ ಮತ್ತು ಜಾತ್ಯತೀತತೆಯನ್ನು ಪ್ರತಿಪಾದಿಸುವ ಇವರು ಕೆಲವು ಬಾರಿ ತಮ್ಮ ನೇರ ನುಡಿಗಳ ಮೂಲಕ ಹಲವು ವಿವಾದಗಳಲ್ಲಿ ಸಿಲುಕಿದ್ದು ಇದೆ.

ಕನ್ನಡಕ್ಕೆ ಏಳನೇ ಜ್ಞಾನಪೀಠ ಪ್ರಶಸ್ತಿ ತಂದಿತ್ತ ಕಾರ್ನಾಡ್ ಕನ್ನಡ ಸಾಹಿತ್ಯದಲ್ಲಿ ‘ನಾಟಕ ಕ್ಷೇತ್ರದ ಸಾಹಿತಿ’ ಎಂದು ಕರೆಯಲ್ಪಡುತ್ತಾರೆ. ಕನ್ನಡದಲ್ಲಿ ನಾಟಕ ರಚಿಸುತ್ತಾ ಇತರ ಭಾರತೀಯ ಭಾಷೆಗಳೊಡನೆ ಸಂಪರ್ಕವನ್ನಿಟ್ಟುಕೊಂಡು ನಟರಾಗಿ, ನಿರ್ದೇಶಕರಾಗಿ, ಸಾಂಸ್ಕೃತಿಕ ವಕ್ತಾರರಾಗಿ ಕೆಲಸ ಮಾಡಿದವರು.
ಗಿರೀಶ್ ಕಾರ್ನಾಡ್ 1938ರ ಮೇ 19ರಂದು ಮಹಾರಾಷ್ಟ್ರದ ಮಾಥೇರಾನದಲ್ಲಿ ಜನಿಸಿದರು. ಇವರ ತಂದೆ ರಘುನಾಥ ಕಾರ್ನಾಡ ಮುಂಬೈಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ತಾಯಿ ಕೃಷ್ಣಾಬಾಯಿ.

ಕಾರ್ನಾಡ್ ಪ್ರಾಥಮಿಕ ಶಿಕ್ಷಣ ಉತ್ತರ ಕನ್ನಡದ ಶಿರಸಿಯಲ್ಲಿ, ಪ್ರೌಢಶಿಕ್ಷಣ ಧಾರವಾಡದ ಬಾಸೆಲ್ ಮಿಷನ್ ಹೈಸ್ಕೂಲಿನಲ್ಲಿ, ಹಾಗೂ ಪದವಿ ಶಿಕ್ಷಣ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಮುಗಿಸಿದರು. ಆ ಬಳಿಕ ಪ್ರತಿಷ್ಠಿತ ರೋಡ್ಸ್ ಸ್ಕಾಲರ್‌ಶಿಪ್ ಪಡೆದು ಆಕ್ಸ್ ಫರ್ಡ್ ಯುನಿರ್ವಸಿಟಿಯಲ್ಲಿ ಹೆಚ್ಚಿನ ವ್ಯಾಸಂಗ ಮಾಡಿದರು. ಅಲ್ಲಿ ರಾಜಕೀಯಶಾಸ್ತ್ರ, ತತ್ವಶಾಸ್ತ್ರ ಮತ್ತು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು.

1963ರಲ್ಲಿ ಆಕ್ಸ್‌ಫರ್ಡ್‌ನ ಡಿಬೇಟ್ ಕ್ಲಬ್ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಥಮ ಏಶ್ಯನ್ ಎಂಬ ಹೆಗ್ಗಳಿಕೆ ಕೂಡಾ ಇವರು ಪಾತ್ರರಾಗಿದ್ದಾರೆ. ಚೆನ್ನೈಯಲ್ಲಿ ಆಕ್ಸ್‌ಫರ್ಡ್ ಯುನಿವರ್ಸಿಟಿ ಪ್ರೆಸ್‌ನಲ್ಲಿ ಸುಮಾರು 7 ವರ್ಷಗಳ ಕಾಲ ನೌಕರಿಯಲ್ಲಿದ್ದ ಕಾರ್ನಾಡ್, ನಂತರ ಅಮೆರಿಕಾದ ಚಿಕಾಗೋ ಯುನಿವರ್ಸಿಟಿಯಲ್ಲಿ ಒಂದು ವರ್ಷ ಅತಿಥಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.

ಇಂಗ್ಲೆಂಡಿನಲ್ಲಿ ನೆಹರೂ ಕೇಂದ್ರದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಪೂನಾ ಫಿಲ್ಮ್ ಇನ್‌ಸ್ಟಿಟ್ಯೂಟಿನ ನಿರ್ದೇಶಕರಾಗಿ, ಕೇಂದ್ರ ಸಂಗೀತ ನಾಟಕ ಅಕಾಡಮಿಯ ಅಧ್ಯಕ್ಷರಾಗಿ ಕೂಡಾ ಅವರು ಕಾರ್ಯನಿರ್ವಹಿಸಿರುವರು. ಇವೆಲ್ಲರ ಮಧ್ಯೆಯೇ ಅವರು ನಾಟಕ ಬರಹದಲ್ಲಿ ತೊಡಗಿದ್ದರು. ಕೆಲಕಾಲ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ ಮತ್ತು ಕೇಂದ್ರ ಸಂಗೀತ ನಾಟಕ ಅಕಾಡಮಿಯ ಅಧ್ಯಕ್ಷರಾಗಿದ್ದರು. 1980ರಲ್ಲಿ ಡಾ.ಸರಸ್ವತಿ ಗಣಪತಿಯವರನ್ನು ಮದುವೆಯಾದರು. ದಂಪತಿಗೆ ಇಬ್ಬರು ಮಕ್ಕಳು. ಓರ್ವ ಪುತ್ರ, ಓರ್ವ ಪುತ್ರಿ. 2011ರಲ್ಲಿ ತಮ್ಮ ಆತ್ಮಕಥೆಯಾದ ‘ಆಡಾಡತ ಆಯುಷ್ಯ’ ವನ್ನು ರಚಿಸಿದರು.

ಯಯಾತಿ, ತುಘಲಕ್, ಹಯವದನ, ನಾಗಮಂಡಲ, ತಲೆದಂಡ, ಅಗ್ನಿ ಮತ್ತು ಮಳೆ, ಅಂಜುಮಲ್ಲಿಗೆ, ಹಿಟ್ಟಿನ ಹುಂಜ, ಟಿಪ್ಪುವಿನ ಕನಸುಗಳು, ರಾಕ್ಷಸ-ತಂಗಡಿ ಮುಂತಾದವು ಕಾರ್ನಾಡ್ ಅವರ ಪ್ರಮುಖ ನಾಟಕ ಕೃತಿಗಳು. ‘ನಾಗಮಂಡಲ’ ಒಂದು ಜನಪದ ಕಥೆಯಾಗಿದ್ದು, ಇದಕ್ಕೆ ಕರ್ನಾಟಕ ಸಾಹಿತ್ಯ ಪ್ರಶಸ್ತಿ ಲಭಿಸಿದೆ.  

ಹಲವಾರು ಭಾಷೆಗಳ ಚಲನಚಿತ್ರಗಳಲ್ಲಿ ನಟಿಸಿರುವ ಕಾರ್ನಾಡ್, ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕರೂ ಆಗಿದ್ದಾರೆ. 1970ರಲ್ಲಿ ತೆರೆಕಂಡ ಯು.ಆರ್.ಅನಂತಮೂರ್ತಿ ಕಾದಂಬರಿ ಆಧಾರಿತ ‘ಸಂಸ್ಕಾರ’ ಚಿತ್ರದ ಮೂಲಕ ನಟನೆಗೆ ಇಳಿದರು. ಈ ಚಿತ್ರದಲ್ಲಿನ ಪ್ರಾಣೇಶಾಚಾರ್ಯ ಪಾತ್ರವನ್ನು ತುಂಬಾ ಪ್ರಬುದ್ಧರಾಗಿ ನಿಭಾಯಿಸಿದರು. ಈ ಚಿತ್ರಕ್ಕೆ ಚಿತ್ರಕಥೆ ಮತ್ತು ಸಂಭಾಷಣೆಯನ್ನು ಕೂಡ ಇವರೇ ಬರೆದಿದ್ದರು. ನಂತರ ಶಂಕರ ನಾಗ್ ನಿರ್ದೇಶನದ ‘ಮಾಲ್ಗುಡಿ ಡೇಸ್’ ಕಿರುತೆರೆ ಧಾರಾವಾಹಿಯಲ್ಲಿ ನಟಸಿದರು.

ಎಸ್.ಎಲ್.ಭೈರಪ್ಪನವರ ಕಾದಂಬರಿ ಆಧಾರಿತ ‘ವಂಶವೃಕ್ಷ’ ವನ್ನು ತೆರೆಗೆ ತರುವ ಮೂಲಕ ಚಿತ್ರ ನಿರ್ದೇಶನಕ್ಕೂ ಕಾರ್ನಾಡ್ ಕಾಲಿಟ್ಟರು. ಈ ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದರು. ಕುವೆಂಪುರವರ ‘ಕಾನೂರು ಹೆಗ್ಗಡತಿ’ ಕೃತಿಯನ್ನು ಪರದೆಗೆ ತಂದ ಕೀರ್ತಿ ಕಾರ್ನಾಡರದ್ದು. ನಂತರ ಹಲವಾರು ಚಿತ್ರಗಳನ್ನು ಮತ್ತು ಸೂಫಿ ಪಂಥ, ಕನಕ ಪುರಂದರರ ಸಾಕ್ಷಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ನಾಟಕ ಸಾಹಿತ್ಯ ರಚನೆಗೆ ಜ್ಞಾನಪೀಠ ಪ್ರಶಸ್ತಿ ಪಡೆದ ಕಾರ್ನಾಡ್, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ, ಪದ್ಮಶ್ರೀ, ಪದ್ಮಭೂಷಣ, ಕೇಂದ್ರ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ, ಹಾಗೂ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನು ಗಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)