varthabharthi

ಬೆಂಗಳೂರು

ವಂಚನೆಯ ಬಗ್ಗೆ ಅವತ್ತೇ ಎಚ್ಚರಿಸಿತ್ತು 'ವಾರ್ತಾ ಭಾರತಿ' !

ಐಎಂಎ ಸಂಸ್ಥೆ ಅಧ್ಯಕ್ಷ ಆತ್ಮಹತ್ಯೆ ವದಂತಿ: ಈ ಬಗ್ಗೆ ಗೃಹ ಸಚಿವರು, ಪೊಲೀಸ್ ಅಧಿಕಾರಿಗಳು ಹೇಳುವುದೇನು ?

ವಾರ್ತಾ ಭಾರತಿ : 10 Jun, 2019

ಬೆಂಗಳೂರು, ಜೂ.10: ಹಲಾಲ್ ಆದಾಯದ ಹೆಸರಿನಲ್ಲಿ ಸಾರ್ವಜನಿಕರಿಂದ ಸಾವಿರಾರು ಕೋಟಿ ರೂ.ಗಳನ್ನು ಹೂಡಿಕೆ ಮಾಡಿಸಿಕೊಂಡು, ಲಾಭಾಂಶ ನೀಡುತ್ತಿದ್ದ ಐಎಂಎ(ಐ ಮಾನಿಟರಿ ಅಡ್ವೈಸರಿ) ಸಮೂಹ ಸಂಸ್ಥೆಗಳ ಅಧ್ಯಕ್ಷ ಮುಹಮ್ಮದ್ ಮನ್ಸೂರ್ ಖಾನ್ ಎಂದು ತಮ್ಮನ್ನು ಪರಿಚಯಿಸಿಕೊಂಡಿರುವ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿ, ನಗರ ಪೊಲೀಸ್ ಆಯುಕ್ತರಿಗೆ ಕಳುಹಿಸಿರುವ ಆಡಿಯೋ ಸಂದೇಶ ವೈರಲ್ ಆಗಿ, ಸಾವಿರಾರು ಮಂದಿ ಹೂಡಿಕೆದಾರರು ಪರದಾಡುವಂತಾಗಿದೆ.

ಈ ಮಧ್ಯೆ ಐಎಂಎ ಅಧ್ಯಕ್ಷ ಮುಹಮ್ಮದ್ ಮನ್ಸೂರ್ ಖಾನ್ ಎಲ್ಲಿದ್ದಾರೆಂಬ ಮಾಹಿತಿ ಲಭ್ಯವಾಗಿಲ್ಲ. ಶಿವಾಜಿನಗರ ಹಾಗೂ ಜಯನಗರದಲ್ಲಿರುವ ಐಎಂಎ ಆಭರಣ ಮಳಿಗೆಗಳು, ಐಎಂಎ ಸಮೂಹ ಸಂಸ್ಥೆಗಳ ಕಚೇರಿಗಳಿಗೆ ಬೀಗ ಜಡಿಯಲಾಗಿದೆ.

ಮುಹಮ್ಮದ್ ಮನ್ಸೂರ್ ಖಾನ್ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿರುವ ಆಡಿಯೋ ವೈರಲ್ ಆಗುತ್ತಿದ್ದಂತೆ ಸಾವಿರಾರು ಮಂದಿ ಹೂಡಿಕೆದಾರರು ಶಿವಾಜಿನಗರದಲ್ಲಿರುವ ಐಎಂಎ ಕಚೇರಿ ಎದುರು ಜಮೆಯಾಗಿ ಪ್ರತಿಭಟನೆ ನಡೆಸಿದರು. ಕೆಲ ದಿನಗಳ ಹಿಂದೆಯಷ್ಟೇ ಸಾಕಷ್ಟು ಸಂಖ್ಯೆಯಲ್ಲಿ ಹೂಡಿಕೆದಾರರು, ಐಎಂಎ ಕಚೇರಿ ಬಳಿ ಸೇರಿ ತಮ್ಮ ಹೂಡಿಕೆಯ ಹಣವನ್ನು ಹಿಂದಿರುಗಿಸುವಂತೆ ಪ್ರತಿಭಟನೆ ನಡೆಸಿದ್ದರು.

ಹೂಡಿಕೆದಾರರಿಗೆ ಜೂ.10ರಂದು ಹಣ ಪಾವತಿಸುವುದಾಗಿ ಸಂಸ್ಥೆಯ ಆಡಳಿತ ಮಂಡಳಿ ಭರವಸೆ ನೀಡಿತ್ತು. ಆದರೆ ಇಂದು ಮನ್ಸೂರ್ ಖಾನ್ ಅವರದ್ದೆಂದು ಹೇಳಲಾದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿರುವ ಆಡಿಯೋ ವೈರಲ್ ಆಗುತ್ತಿದ್ದಂತೆ ಸಾವಿರಾರು ಮಂದಿ ಹೂಡಿಕೆದಾರರು ದಿಕ್ಕು ತೋಚದೆ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಬೆಳಗ್ಗೆಯಿಂದಲೇ ಈ ಆಡಿಯೋ ವೈರಲ್ ಆಗುತ್ತಿದ್ದರೂ, ಐಎಂಎ ಸಂಸ್ಥೆಯ ನಿರ್ದೇಶಕರಾಗಲಿ, ಪದಾಧಿಕಾರಿಗಳಾಗಲಿ, ಮುಹಮ್ಮದ್ ಮನ್ಸೂರ್ ಖಾನ್ ಅವರ ಕುಟುಂಬ ಸದಸ್ಯರಾಗಲಿ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಆತ್ಮಹತ್ಯೆಯ ವದಂತಿ ಸತ್ಯವೋ, ಸುಳ್ಳೋ ಎಂಬ ಸ್ಪಷ್ಟೀಕರಣ ಸಂಸ್ಥೆಯ ಯಾರೊಬ್ಬರಿಂದ ಬರದೇ ಇರುವುದು ಮತ್ತಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಐಎಂಎ ಕಚೇರಿ ಬಳಿ ಬಿಗುವಿನ ವಾತಾವರಣ ಏರ್ಪಟ್ಟಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಅಲ್ಲದೇ, ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ, ಸಾರ್ವಜನಿಕರಿಗೆ ವಾಸ್ತವ ಪರಿಸ್ಥಿತಿ ಮನದಟ್ಟು ಮಾಡಿಕೊಡಲು ಪ್ರಯತ್ನಿಸಿದ್ದಾರೆ. ಈ ಸಂಬಂಧ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರು ಸ್ವೀಕಾರ ಕೇಂದ್ರ: ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆ ವತಿಯಿಂದ ಶಿವಾಜಿನಗರದ ಸೆಂಟ್ ಪೌಲ್ ಚರ್ಚ್ ಬಳಿ ದೂರು ಸ್ವೀಕಾರ ಕೇಂದ್ರವನ್ನು ಸ್ಥಾಪಿಸಲಾಗಿದೆ. ವಂಚನೆಗೆ ಒಳಗಾಗಿರುವ ಹೂಡಿಕೆದಾರರು ತಮ್ಮ ದೂರುಗಳನ್ನು ಇಲ್ಲಿ ದಾಖಲಿಸಬಹುದು ಎಂದು ಡಿಸಿಪಿ ರಾಹುಲ್ ಕುಮಾರ್, ಪ್ರತಿಭಟನಾ ನಿರತ ಸಾರ್ವಜನಿಕರಿಗೆ ಮನವಿ ಮಾಡಿದರು.

ಮುಹಮ್ಮದ್ ಮನ್ಸೂರ್ ಖಾನ್ ಅವರದ್ದು ಎಂದು ಹೇಳಲಾಗುತ್ತಿರುವ ಆಡಿಯೋ ಕ್ಲಿಪ್‌ನ ಸತ್ಯಾಸತ್ಯತೆ ಕುರಿತು ಪರಿಶೀಲನೆ ನಡೆಯುತ್ತಿದೆ. ಮನ್ಸೂರ್ ಖಾನ್ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ. ಹೂಡಿಕೆದಾರರಿಗೆ ನ್ಯಾಯ ಒದಗಿಸುವ ಕೆಲಸವನ್ನು ನಾವು ಪ್ರಾಮಾಣಿಕವಾಗಿ ಮಾಡುತ್ತೇವೆ. ಸಾರ್ವಜನಿಕರು ಯಾವುದೇ ಕಾರಣಕ್ಕೂ ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು ಎಂದು ಅವರು ಕೋರಿದರು.

ಆಡಿಯೋ ಸಂದೇಶದಲ್ಲಿ ಏನಿದೆ?:
ಬೆಂಗಳೂರು ನಗರ ಪೊಲೀಸ್ ಆಯುಕ್ತರೇ, ನನ್ನ ಹೆಸರು ಮನ್ಸೂರ್. ಐಎಂಎ ಜುವೆಲ್ಸ್ ಸಂಸ್ಥಾಪಕ. ಈ ಸಂದೇಶವನ್ನು ನೀವು ಕೇಳುತ್ತಿರುವಾಗ ನಾನು ನನ್ನ ಜೀವನವನ್ನು ಅಂತ್ಯಗೊಳಿಸಿರುತ್ತೇನೆ. ಸರ್ ನಾನು ಈ ಸಂಸ್ಥೆಯನ್ನು 12-13 ವರ್ಷಗಳಿಂದ ಬಹಳಷ್ಟು ಶ್ರಮ ಪಟ್ಟು ಕಟ್ಟಿ ಬೆಳೆಸಿದ್ದೇನೆ. ಆದರೆ, ಕೇಂದ್ರ ಸರಕಾರ, ರಾಜ್ಯ ಸರಕಾರದ ಭ್ರಷ್ಟಾಚಾರ, ಅಧಿಕಾರಿಗಳು, ರಾಜಕಾರಣಿಗಳು, ಎಲ್ಲರಿಗೂ ಲಂಚ ನೀಡಿ, ನೀಡಿ ಸಾಕಾಗಿ ಹೋಗಿದೆ.
ಕೆಲ ಮುಸ್ಲಿಂ ರಾಜಕಾರಣಿಗಳು ಪ್ರಧಾನಿ ಕಾರ್ಯಾಲಯದ ಅಧಿಕಾರಿಗಳಿಗೆ, ಆರ್‌ಬಿಐಗೆ ಸುಳ್ಳು ಮಾಹಿತಿ ನೀಡಿದ್ದಾರೆ. ಶಿವಾಜಿನಗರದ ಸ್ಥಳೀಯ ಶಾಸಕರು 400 ಕೋಟಿ ರೂ.ಪಡೆದು ವಾಪಸ್ ಕೊಟ್ಟಿಲ್ಲ. ಟಿಕೆಟ್ ಸಿಕ್ಕಿದಾಗ ವಾಪಸ್ ಕೊಡುತ್ತೇನೆ ಎಂದು ಹೇಳಿದ್ದರು. ಅದನ್ನು ಕೇಳಲು ಹೋದರೆ, ಹಣ ವಾಪಸ್ ಕೊಡುವ ಬದಲು, ಕಚೇರಿಗೆ ರೌಡಿಗಳನ್ನು ಕಳುಹಿಸಲು ಪ್ರಾರಂಭಿಸಿದರು. ಇದರಿಂದಾಗಿ ನನ್ನ ಕಚೇರಿಯಲ್ಲಿ ಸಮಸ್ಯೆಗಳು ಪ್ರಾರಂಭವಾದವು.
ನನ್ನ ಹಾಗೂ ನನ್ನ ಕುಟುಂಬಕ್ಕೆ ಪ್ರಾಣಾಪಾಯವಿತ್ತು. ಇದರಿಂದಾಗಿ, ನನ್ನ ಕುಟುಂಬವನ್ನು ಬೆಂಗಳೂರು ಹೊರವಲಯದ ಹಳ್ಳಿಯೊಂದರಲ್ಲಿ ಇಟ್ಟುಕೊಳ್ಳಬೇಕಾದ ಪರಿಸ್ಥಿತಿ ಬಂತು. ನಾನು ಬೆಂಗಳೂರಿನಲ್ಲೇ ಇದ್ದೇನೆ, ದಕ್ಷಿಣ ಬೆಂಗಳೂರಿನಲ್ಲಿದ್ದೇನೆ. ಆದರೆ, ನೀವು ಈ ನನ್ನ ಆಡಿಯೋ ಕೇಳಿಸಿಕೊಳ್ಳುವಷ್ಟರಲ್ಲಿ ನಾನು ಈ ಜಗತ್ತಿನಿಂದ ಹೊರಟು ಹೋಗಿರುತ್ತೇನೆ.

ಸರ್, ಈ ಆಡಿಯೋ ಮಾಡಿರುವುದು ಒಂದೇ ಉದ್ದೇಶಕ್ಕೆ, ಅದೇನೆಂದರೆ ನನ್ನ ಬಳಿ 500 ಕೋಟಿ ರೂ.ಆಸ್ತಿ ಇದೆ. ಬೆಂಗಳೂರಿನಲ್ಲಿ 500 ಕೋಟಿ ಮೌಲ್ಯದ ಆಸ್ತಿ ಮತ್ತು 33 ಸಾವಿರ ಕ್ಯಾರೆಟ್ 33 ಸಾವಿರ ಕ್ಯಾರೆಟ್ ವಜ್ರ ಹಾಗೂ ಚಿನ್ನಾಭರಣವಿದೆ. ಇದನ್ನೆಲ್ಲಾ ಮಾರಾಟ ಮಾಡಿ ಹೂಡಿಕೆದಾರರಿಗೆ ಹಣವನ್ನು ವಾಪಸ್ ಕೊಡಿ. ಆದರೆ, ಇದರಲ್ಲಿ ತುಂಬಾ ಜನರು ಮೋಸಗಾರರಿದ್ದಾರೆ. ಯಾರಿಗೆ ಹಣ ಸಿಗಬೇಕೋ ಅವರಿಗೆ ಹಣ ತಲುಪಿಸಿ. ಬಿಡಿಎ ಕುಮಾರ್ ಬಳಿ ನನ್ನ 5 ಕೋಟಿ ರೂ.ಹಣ ಇದೆ. ಶಿವಾಜಿನಗರದ ಶಾಸಕರ ಬಳಿ ಇರುವ ನನ್ನ ಹಣವನ್ನು ಪಡೆದು ಹೂಡಿಕೆದಾರರಿಗೆ ಹಂಚಿಕೆ ಮಾಡಿ ಎಂದು ತಮ್ಮನ್ನು ಮನ್ಸೂರ್ ಎಂದು ಪರಿಚಯಿಸಿಕೊಂಡಿರುವ ವ್ಯಕ್ತಿ, ನಗರ ಪೊಲೀಸ್ ಆಯುಕ್ತರಿಗೆ ಮಾಡಿರುವ ಮನವಿ.

ಈದುಲ್ ಫಿತ್ರ್ ಪ್ರಯುಕ್ತ ಐಎಂಎ ಸಮೂಹ ಸಂಸ್ಥೆಗಳ ಕಚೇರಿ ಹಾಗೂ ಐಎಂಎ ಜುವೆಲ್ಸ್ ಆಭರಣ ಮಳಿಗೆಗಳಿಗೆ ರಜೆ ಘೋಷಿಸಲಾಗಿತ್ತು. ಅದರಂತೆ, ಜೂ.7ರಂದು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಐಎಂ ಅಡ್ವೈಸರಿ ಪ್ರೈ.ಲಿ.ಪುಟದಲ್ಲಿ ಐಎಂಎ ಸಮೂಹ ಸಂಸ್ಥೆಗಳ ಕಚೇರಿಯು ಜೂ.10ರಂದು ಬೆಳಗ್ಗೆ 9 ಗಂಟೆಗೆ ತೆರೆಯಲಿದೆ. ಅದೇ ರೀತಿ, ಜಯನಗರ ಹಾಗೂ ಶಿವಾಜಿನಗರದ ಬೌರಿಂಗ್ ಲೇಡಿ ಕರ್ಜನ್ ಆಸ್ಪತ್ರೆ ಎದುರು ಇರುವ ಐಎಂಎ ಜುವೆಲ್ಸ್ ಆಭರಣ ಮಳಿಗೆಯು ಜೂ.10ರಂದು ಬೆಳಗ್ಗೆ 10.30ಕ್ಕೆ ತೆರೆಯಲಿದೆ ಎಂಬ ಸಂದೇಶವನ್ನು ಹಾಕಲಾಗಿತ್ತು.

ಉನ್ನತ ಮಟ್ಟದ ತನಿಖೆ
ಈ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವ ಎಂ.ಬಿ.ಪಾಟೀಲ್, ಪ್ರಕರಣವು ಇನ್ನೂ ಪ್ರಾಥಮಿಕ ತನಿಖಾ ಹಂತದಲ್ಲಿರುವುದರಿಂದ ನಾನು ಯಾರ ಹೆಸರನ್ನೂ ತೆಗೆದುಕೊಳ್ಳಲು ಇಷ್ಟಪಡುವುದಿಲ್ಲ. ರಾಜಕೀಯವಾಗಿ ಯಾರನ್ನೂ ಈ ಪ್ರಕರಣದಲ್ಲಿ ಸಿಲುಕಿಸುವ ಕೆಲಸ ಗೃಹ ಸಚಿವನಾಗಿ ನಾನು ಮಾಡುವುದಿಲ್ಲ ಎಂದು ಹೇಳಿದರು.

ಪ್ರಾಥಮಿಕ ಮಾಹಿತಿ ಪ್ರಕಾರ ಪ್ರಕರಣ ತುಂಬಾ ಗಂಭೀರವಾಗಿದೆ. ಈ ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆ ಮಾಡಿಸುತ್ತೇವೆ. ಯಾರ್ಯಾರೋ ಹಣಕಾಸಿನ ಅಪರಾಧ ಮಾಡುತ್ತಾರೆ, ಜನರ ಹಣವನ್ನು ಬೇರೆಯವರಿಗೆ ವರ್ಗಾಯಿಸುತ್ತಾರೆ, ಕಾನೂನು ಇದ್ದರೂ ಮುಗ್ಧ ಜನರು ಮೋಸ ಹೋಗುತ್ತಿದ್ದಾರೆ. ಏಜೆಂಟ್‌ಗಳ ಮೂಲಕ ಹಣ ಸಂಗ್ರಹಿಸಲಾಗುತ್ತದೆ. ಆಡಿಯೋ ಕ್ಲಿಪ್ ಬಗ್ಗೆ ನಗರ ಪೊಲೀಸ್ ಆಯುಕ್ತರಿಂದ ಮಾಹಿತಿ ಪಡೆದಿದ್ದೇನೆ ಎಂದು ಅವರು ಹೇಳಿದರು.

ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಶಂಕೆ
ಮುಹಮ್ಮದ್ ಮನ್ಸೂರ್ ಖಾನ್ ಆತ್ಮಹತ್ಯೆ ಮಾಡಿಕೊಂಡಿಲ್ಲ. ದುಬೈ ಅಥವಾ ಸೌದಿ ಅರೇಬಿಯಾದಲ್ಲಿ ಕುಟುಂಬ ಸಮೇತವಾಗಿ ತಲೆ ಮರೆಸಿಕೊಂಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ನಮ್ಮ ರಾಜ್ಯ ಸೇರಿದಂತೆ ನೆರೆಯ ರಾಜ್ಯಗಳ ವಿಮಾನ ನಿಲ್ದಾಣಗಳ ಇಮಿಗ್ರೇಷನ್ ಕೌಂಟರ್‌ಗಳಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಅವತ್ತೇ ಎಚ್ಚರಿಸಿತ್ತು ವಾರ್ತಾ ಭಾರತಿ !

ಫೆಬ್ರವರಿ 6, 2017 ರಂದು 'ವಾರ್ತಾ ಭಾರತಿ'ಯು " ಹಲಾಲ್ ಲಾಭದ ಹೆಸರಲ್ಲಿ ದುಡ್ಡು ಬಾಚುತ್ತಿವೆ ಹಲಾಲುಕೋರ ಕಂಪೆನಿಗಳು " ಎಂದು ಸವಿವರವಾದ ಮುಖಪುಟ ವರದಿ ಪ್ರಕಟಿಸಿ ಜನರನ್ನು ಎಚ್ಚರಿಸಿತ್ತು. ಅದರಲ್ಲಿ ಹಲಾಲ್ ಲಾಭದ ಹೆಸರಲ್ಲಿ ಹೇಗೆ ಕೆಲವು ಕಂಪೆನಿಗಳು ಜನರಿಂದ ಹಣ ಬಾಚುತ್ತಿವೆ , ಹೇಗೆ ಕಾನೂನು ಉಲ್ಲಂಘಿಸುತ್ತಿವೆ ಎಂದು ವಿವರಿಸಲಾಗಿತ್ತು ಮತ್ತು ಇದರಲ್ಲಿ ಹೂಡಿಕೆದಾರರಿಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಹೇಳಿತ್ತು. ಎಪ್ರಿಲ್ 2017 ರಲ್ಲಿ ಇದೇ ಐಎಂಎ ಕಂಪೆನಿ ಮೇಲೆ ಆದಾಯ ತೆರಿಗೆ ಇಲಾಖೆಯಿಂದ ದಾಳಿ ನಡೆದು ಸಾವಿರ ಕೋಟಿ ರೂ. ಹಗರಣ ನಡೆದಿದೆ ಎಂದು ಅದರ ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದಾಗ ಮತ್ತೆ ಈ ಬಗ್ಗೆ ವಿವರವಾಗಿ ವರದಿ ಮಾಡಿತ್ತು ವಾರ್ತಾಭಾರತಿ. ಆದರೆ ನಮ್ಮ ಕಂಪೆನಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಐಎಂಎ ಮುಖ್ಯಸ್ಥ  ಮನ್ಸೂರ್ ಖಾನ್ ಸ್ಪಷ್ಟೀಕರಣ ನೀಡಿದ್ದರು. 2018 ರ ಅಕ್ಟೋಬರ್ ನಲ್ಲಿ ಹೈದರಾಬಾದ್ ನ ನೌಹೇರಾ ಶೇಖ್ ಬಂಧನವಾದಾಗಲೂ ಈ ಬಗ್ಗೆ 'ವಾರ್ತಾಭಾರತಿ' (ಅ.18) ವಿವರವಾದ ಸುದ್ದಿ ಪ್ರಕಟಿಸಿತ್ತು.

http://www.varthabharati.in/article/60453  

http://m.varthabharati.in/article/2017_04_04/68247

http://www.varthabharati.in/article/vishesha-varadigalu/158896

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)