varthabharthi

ಗಲ್ಫ್ ಸುದ್ದಿ

ಹಿರಿಯ ಸಾಹಿತಿ ಗಿರೀಶ್ ಕಾರ್ನಾಡ್ ನಿಧನ: ಇಂಡಿಯನ್ ಸೋಶಿಯಲ್ ಫೋರಂ ಸಂತಾಪ

ವಾರ್ತಾ ಭಾರತಿ : 10 Jun, 2019

ರಿಯಾದ್: ಹಿರಿಯ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ನಿಧನಕ್ಕೆ ಇಂಡಿಯನ್ ಸೋಶಿಯಲ್ ಫೋರಂ ಕರ್ನಾಟಕ ರಾಜ್ಯ, ಸೌದಿ ಅರೆಬಿಯಾ ತೀವ್ರ ಸಂತಾಪವನ್ನು ವ್ಯಕ್ತಪಡಿಸಿದೆ.

ಗಿರೀಶ್ ಕಾರ್ನಾಡ್ ಅವರು ತನ್ನ ಪ್ರಗತಿಪರ ಚಿಂತನೆಯನ್ನು ಸಮಾಜಕ್ಕೆ ತಲುಪಿಸುವುದಕ್ಕಾಗಿ ಸಾಹಿತ್ಯದ ಎಲ್ಲ ಆಯಾಮಗಳನ್ನು ಬಳಸಿಕೊಂಡಿರುವುದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲೂ ಅವರ ವಿಚಾರಧಾರೆಗಳು ವ್ಯಾಪಿಸಿವೆ.  ನಾಟಕಕಾರ, ಸಾಹಿತಿ, ಚಿತ್ರನಟ ಮತ್ತು ನಿರ್ದೇಶಕ, ಉಪನ್ಯಾಸಕ ಹಾಗು ಹೋರಾಟಗಾರನಾಗಿ ಗುರುತಿಸಿಕೊಂಡಿದ್ದ ಗಿರೀಶ್ ಕಾರ್ನಾಡ್ ಅವರು, ಫ್ಯಾಷಿಸಮ್ ನ ಅಪಾಯದ ಬಗ್ಗೆ ಭಾರತೀಯ ಸಮಾಜವನ್ನು ಆರಂಭದಿಂದಲೇ ಎಚ್ಚರಿಸುತ್ತಾ ಬಂದಿದ್ದರು. ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿಯೂ ಅಭಿನಯಿಸಿರುವ ಅವರು ಜನರಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸುವ ಕಾರ್ಯಕ್ರಮವನ್ನೂ ದೂರದರ್ಶನದಲ್ಲಿ ನಿರೂಪಿಸುತ್ತಿದ್ದರು.  ಬಹುಭಾಷಾ ಪಂಡಿತರೂ, ಬಹುಮುಖ ಪ್ರತಿಭೆಯೂ ಆಗಿದ್ದ ಗಿರೀಶ್ ಕಾರ್ನಾಡ್ ಅವರ ನಿಧನವು ವೈಚಾರಿಕ ಲೋಕಕ್ಕೆ ಬಹುದೊಡ್ಡ ನಷ್ಟ ಆದಂತಾಗಿದೆ.

ತನ್ನ ಜೀವನದುದ್ದಕ್ಕೂ ಫ್ಯಾಷಿಸಮನ್ನು ಗಟ್ಟಿ ಮತ್ತು ದಿಟ್ಟ ಧ್ವನಿಗಳಿಂದ ಸೈದ್ಧಾಂತಿಕವಾಗಿ ಎದುರಿಸುತ್ತಾ ದೇಶದ ಪ್ರಜಾಪ್ರಭುತ್ವದ ಉಳಿವಿಗಾಗಿ ಮಾನವಹಕ್ಕು ಕಾರ್ಯಕರ್ತನಂತೆ ಹೋರಾಟ ರಂಗದಲ್ಲಿಯೂ ಸಕ್ರಿಯರಾಗಿದ್ದರು. ಇವರ ನಿಧನದ ದುಃಖವನ್ನು ಸಹಿಸುವ ಶಕ್ತಿ ಪರಮಾತ್ಮನು ಅವರ ಕುಟುಂಬಕ್ಕೂ, ಅಭಿಮಾನಿ ಬಳಗಕ್ಕೂ ನೀಡಲಿ ಎಂದು ಇಂಡಿಯನ್ ಸೋಶಿಯಲ್ ಫೋರಂ, ಕರ್ನಾಟಕ ರಾಜ್ಯ, ಸೌದಿ ಅರೆಬಿಯಾ ಪ್ರಕಟನೆಯಲ್ಲಿ ತಿಳಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)