varthabharthi

ಬೆಂಗಳೂರು

ಕುವೆಂಪು ಕಲಾಕ್ಷೇತ್ರ ನಿರ್ಮಾಣಕ್ಕೆ 10 ಕೋಟಿ ರೂ.ನೆರವಿಗೆ ಸಿಎಂಗೆ ಮನವಿ

ವಾರ್ತಾ ಭಾರತಿ : 10 Jun, 2019

ಬೆಂಗಳೂರು, ಜೂ. 10: ಬೆಂಗಳೂರು ನಗರದಲ್ಲಿ ರಾಷ್ಟ್ರಕವಿ ಕುವೆಂಪು ಹೆಸರಿನಲ್ಲಿ ಕಲಾಕ್ಷೇತ್ರ ನಿರ್ಮಾಣಕ್ಕೆ 10 ಕೋಟಿ ರೂ. ಆರ್ಥಿಕ ನೆರವು ನೀಡಬೇಕೆಂದು ಕೋರಿ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಪದಾಧಿಕಾರಿಗಳು, ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಸೋಮವಾರ ಇಲ್ಲಿನ ಜೆಪಿ ನಗರದಲ್ಲಿನ ನಿವಾಸದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಹಿರಿಯ ಸಾಹಿತಿಗಳಾದ ಪ್ರೊ.ಹಂಪನಾ, ಕಮಲಾ ಹಂಪನಾ, ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ, ಕಡಿದಾಳ್ ಪ್ರಕಾಶ್ ಮನವಿ ಸಲ್ಲಿಸಿದರು.

ಕುಪ್ಪಳ್ಳಿಯ ಕುವೆಂಪು ಪ್ರತಿಷ್ಠಾನ ತನ್ನ ವ್ಯಾಪ್ತಿ ವಿಸ್ತರಿಸುವ ಉದ್ದೇಶದಿಂದ ಬಿಡಿಎಯಿಂದ ನಿವೇಶನ ಪಡೆದಿದ್ದು, ಕವಿಯ ಆಶಯಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಕುವೆಂಪು ನಾಟಕಗಳ ಪ್ರದರ್ಶನ, ಸರಳ ವಿವಾಹ(ಮಂತ್ರ ಮಾಂಗಲ್ಯ)ಕ್ಕೆ ಅವಕಾಶ, ಅವರ ಪರಿಚಯಕ್ಕೆ ಮ್ಯೂಸಿಯಂ ನಿರ್ಮಾಣಕ್ಕೆ ಮುಂದಾಗಿದೆ ಎಂದು ತಿಳಿಸಲಾಗಿದೆ.

ಮೇಲಿನ ಕಾರ್ಯಕ್ಕೆ ಕುವೆಂಪು ಕಲಾಕ್ಷೇತ್ರದ ಅಗತ್ಯವಿದೆ. ಅದಕ್ಕಾಗಿ 12 ಕೋಟಿ ರೂ.ವೆಚ್ಚವಾಗಲಿದ್ದು, ರಾಜ್ಯ ಸರಕಾರ 10 ಕೋಟಿ ರೂ.ನೆರವು ನೀಡಬೇಕು ಎಂದು ಪದಾಧಿಕಾರಿಗಳು ಮನವಿ ಮಾಡಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆಂದು ಗೊತ್ತಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)