varthabharthi

ವೈವಿಧ್ಯ

ಕನಸುಗಳಿಲ್ಲದ ದಾರಿಯಲ್ಲಿ ನಡೆಯಲು ನಿರಾಕರಿಸಿದ ಗಿರೀಶ್ ಕಾರ್ನಾಡ್

ವಾರ್ತಾ ಭಾರತಿ : 11 Jun, 2019
ಬಿ. ಶ್ರೀಪಾದ ಭಟ್

ಒಬ್ಬ ಜೀನಿಯಸ್ ನಾಟಕಕಾರ, ಹೊಸ ಅಲೆಯ ಸಿನೆಮಾಗಳ ಭಾಗವಾಗಿದ್ದ ನಿರ್ದೇಶಕ, ನಟ, ಮತಾಂಧತೆಯ ವಿರುದ್ಧ ಸದಾ ದನಿಯೆತ್ತುತ್ತಿದ್ದ ಜೀವಪರ ಚಿಂತಕ. ಗಿರೀಶ್‌ಕಾರ್ನಾಡ್‌ರ 81 ವರ್ಷಗಳ ಬದುಕು ನಾವೆಲ್ಲಾ ಕನಸುವಂತಹದ್ದು. ಅವರ ಪ್ರತಿಭೆ ನಮಗೂ ಇರಬೇಕೆಂದು ಬಯಸುತ್ತಿದ್ದೆವು.ಅಂತರ್‌ರಾಷ್ಟ್ರೀಯ, ರಾಷ್ಟ್ರೀಯ ಚಿಂತಕ, ಸಾಹಿತಿಗಳೊಂದಿಗಿನ ಅವರ ಒಡನಾಟ ನಮಗೆ ಸಾಧ್ಯವಾಗದೆ ಹೋಯಿತಲ್ಲ ಎನ್ನುವ ಹಳಹಳಿಕೆ ಇತ್ತು ಮತ್ತು ಹೊಸ ಅಲೆ ಸಿನೆಮಾ ಚಳವಳಿಯ ಜೊತೆಗೆ ಅವರು ಬೆಳೆದ ರೀತಿಯೂ ಸಹ ನಮ್ಮಲ್ಲಿ ಬೆರಗು ಮೂಡಿಸುತ್ತಿತ್ತು.

ಗಿರೀಶ್ ಕಾರ್ನಾಡ್ ನಿಧನರಾಗಿದ್ದಾರೆ. ಈ ಸುದ್ದಿ ಕೇಳಿದ ಕ್ಷಣ ಮನದಲ್ಲಿ ಶೂನ್ಯಭಾವ ಆವರಿಸಿತು. ಒಂದು ಬಗೆಯ ಖಿನ್ನತೆ ಗುಂಗಿಡುತ್ತಲೇ ಇದೆ. ಏನೆಲ್ಲಾ ಹೇಳಬಹುದು ಗಿರೀಶ್ ಕಾರ್ನಾಡ್‌ರ ಕುರಿತಾಗಿ. ಒಬ್ಬ ಜೀನಿಯಸ್ ನಾಟಕಕಾರ, ಹೊಸ ಅಲೆಯ ಸಿನೆಮಾಗಳ ಭಾಗವಾಗಿದ್ದ ನಿರ್ದೇಶಕ, ನಟ, ಮತಾಂಧತೆಯ ವಿರುದ್ಧ ಸದಾ ದನಿಯೆತ್ತುತ್ತಿದ್ದ ಜೀವಪರ ಚಿಂತಕ. ಗಿರೀಶ್‌ಕಾರ್ನಾಡ್‌ರ 81 ವರ್ಷಗಳ ಬದುಕು ನಾವೆಲ್ಲಾ ಕನಸುವಂತಹದ್ದು. ಅವರ ಪ್ರತಿಭೆ ನಮಗೂ ಇರಬೇಕೆಂದು ಬಯಸುತ್ತಿದ್ದೆವು. ಅಂತರ್‌ರಾಷ್ಟ್ರ್ಟ್ರೀಯ, ರಾಷ್ಟ್ರೀಯ ಚಿಂತಕ, ಸಾಹಿತಿಗಳೊಂದಿಗಿನ ಅವರ ಒಡನಾಟ ನಮಗೆ ಸಾಧ್ಯವಾಗದೆ ಹೋಯಿತಲ್ಲ ಎನ್ನುವ ಹಳಹಳಿಕೆ ಇತ್ತು ಮತ್ತು ಹೊಸ ಅಲೆಯ ಸಿನೆಮಾ ಚಳವಳಿಯ ಜೊತೆಗೆ ಅವರು ಬೆಳೆದ ರೀತಿಯೂ ಸಹ ನಮ್ಮಲ್ಲಿ ಬೆರಗು ಮೂಡಿಸುತ್ತಿತ್ತು. ಮೋಹನ್ ರಾಕೇಶ್, ವಿಜಯ್ ತೆಂಡೂಲ್ಕರ್, ಬಾದಲ್ ಸರ್ಕಾರ್ ಜೊತೆಗೂಡಿ ಕಾರ್ನಾಡರು ರೂಪಿಸಿದ ಆಧುನಿಕ ನಾಟಕ ಚಳವಳಿ ಐತಿಹಾಸಿಕ. ಕಳೆದ ಹತ್ತು ವರ್ಷಗಳಲ್ಲಿ ಆರೆಸ್ಸೆಸ್-ಬಿಜೆಪಿ ಪೆಡಂಭೂತದಂತೆ ಬೆಳೆದು ದೇಶದಾದ್ಯಂತ ಬಹುಸಂಖ್ಯಾತ ಮತಾಂಧತೆಯ ವಿಷಗಾಳಿ ಹಬ್ಬಿಸುತ್ತಿದ್ದಾಗ ಅದನ್ನು ವಿರೋಧಿಸುತ್ತಿದ್ದ ಪ್ರಜ್ಞಾವಂತರ ಸಂಗಾತಿಯಾಗಿದ್ದ ಗಿರೀಶ್ ಕಾರ್ನಾಡ್ ಅವರು ಕೊಟ್ಟ ನೈತಿಕ ಬೆಂಬಲ ತುಂಬಾ ದೊಡ್ಡದು. ಈಗ ಅವರ ನಿಧನದ ನಂತರ ನಮಗೆ ಇದರ ಕೊರತೆ ಕಾಡುತ್ತದೆ.
 ಅನಂತಮೂರ್ತಿ ಮತ್ತು ಗಿರೀಶ್ ಕಾರ್ನಾಡ್ ಇಬ್ಬರೂ ಅಂತರ್‌ರಾಷ್ಟ್ರೀಯ, ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿವಂತರಾಗಿದ್ದ ಸಮಯದಲ್ಲಿ ಲಂಕೇಶ್, ತೇಜಸ್ವಿ, ಪ್ರೊ.ಎಂಡಿಎನ್ ರವರು ಕರ್ನಾಟಕದಲ್ಲಿ ಬೇರುಬಿಟ್ಟು ಜೀವಪರ, ಜ್ಞಾನವಂತ, ವಿವೇಕಯುಕ್ತ ಹೊಸತಲೆಮಾರುಗಳನ್ನು ರೂಪಿಸುತ್ತಿದ್ದರು. ಒಂದಲ್ಲ ಮೂರು ತಲೆಮಾರುಗಳಲ್ಲಿ ಪ್ರಾದೇಶಿಕತೆ ಮತ್ತು ಸ್ಥಳೀಯ ಸಂಸ್ಕೃತಿ ಕುರಿತು, ಭಾಷೆ ಕುರಿತು, ಸಮಾಜವಾದದ ಕುರಿತು ಪ್ರಜ್ಞೆಯನ್ನು ಬೆಳೆಸಿದರು. ಲಂಕೇಶ್, ತೇಜಸ್ವಿ, ಪ್ರೊ. ಎಂಡಿಎನ್, ರಾಮದಾಸ್ ಅವರು ಕರ್ನಾಟಕದ ಬದುಕಿನ ತಲ್ಲಣಗಳು, ಬಿಕ್ಕಟ್ಟುಗಳು ಕುರಿತು ಮಾತನಾಡುತ್ತಿದ್ದಾಗ, ಹೋರಾಟ ರೂಪಿಸುತ್ತಿದ್ದಾಗ ಅನಂತಮೂರ್ತಿ, ಕಾರ್ನಾಡ್ ರಾಷ್ಟ್ರ ಮಟ್ಟದಲ್ಲಿ ಖ್ಯಾತಿವಂತರಾಗಿದ್ದು, ಆಗ ಗಿರೀಶ್ ಕಾರ್ನಾಡ್ ಎಲ್ಲಿ ಹೋದರು ಎಂದು ಎಂಬತ್ತು, ತೊಂಬತ್ತರ ದಶಕದಲ್ಲಿ ನಾವೆಲ್ಲ ಆಚ್ಚರಿಪಡುತ್ತಿದ್ದೆವು. ಗ್ರಾಮ್ಶಿ ಹೇಳುತ್ತಿದ್ದ ಆರ್ಗ್ಯಾನಿಕ್ ಬುದ್ಧಿಜೀವಿ ವ್ಯಕ್ತಿತ್ವ ಯಾಕೆ ಕಾರ್ನಾಡ್‌ರಲ್ಲಿ ರೂಪುಗೊಳ್ಳಲಿಲ್ಲ ಎಂದು ಆಗಲೂ ಈಗಲೂ ನನಗೆ ಒಂದು ವಿಸ್ಮಯದ ವಿಷಯ. ಆದರೆ ತೊಂಬತ್ತರ ದಶಕ, ಇಪ್ಪತ್ತೊಂದನೇ ಶತಮಾನದ ಆರಂಭದ ಹೊತ್ತಿನಲ್ಲಿ ಅನಂತಮೂರ್ತಿ ಅವರು ರಾಷ್ಟ್ರಮಟ್ಟದಲ್ಲಿ ಪ್ರಾದೇಶಿಕ ಭಾಷೆಗಳ ಕುರಿತು, ಸ್ಥಳೀಯ ಜ್ಞಾನ, ಭಾರತದ ವಿವಿಧ ಹಳ್ಳಿ, ಹೋಬಳಿ, ಪಟ್ಟಣಗಳ ನುಡಿಕಟ್ಟು, ಬದುಕು ಎಷ್ಟು ಮಹತ್ವದ್ದು ಎಂದು ವಿವರಿಸತೊಡಗಿದಾಗ ಗಿರೀಶ್ ಕಾರ್ನಾಡ್ ಈ ಕುರಿತು ಒಂದು ಬಗೆಯ ಅಸಹನೆ ವ್ಯಕ್ತಪಡಿಸುತ್ತಿದ್ದುದೂ ನಮಗೆಲ್ಲಾ ಅಚ್ಚರಿ ಮೂಡಿಸುತ್ತಿತ್ತು. ಕನ್ನಡದಲ್ಲಿ ಅದ್ಭುತ ಎನಿಸುವಂತಹ ನಾಟಕಗಳನ್ನು ಬರೆದ ಕಾರ್ನಾಡ್‌ರಿಗೆ ಈ ಪ್ರಾದೇಶಿಕ ಅಭಿಮಾನ ಯಾಕೆ ಸಿಟ್ಟು ತರಿಸುತ್ತದೆ ಎಂದು ನಮಗೆಲ್ಲ ಒಗಟಾಗಿ ಕಾಡುತ್ತಿತ್ತು. ಆದರೆ ಅನಂತಮೂರ್ತಿಯವರ ರಾಜಕೀಯ ಪ್ರಯೋಗಗಳೂ ಸಹ ಒಂದು ಹಂತದಲ್ಲಿ ಬಾಲಿಶ ಎನಿಸುವಷ್ಟರ ಮಟ್ಟಿಗೆ ಕಂಡುಬಂದರೂ ಕಾರ್ನಾಡ್‌ರ ರೀತಿ ಅದನ್ನು ತಿರಸ್ಕರಿಸಲು ಸಾಧ್ಯವಾಗುತ್ತಿರಲಿಲ್ಲ. ಈಗ ಹಿಂದಿರುಗಿ ನೋಡಿದಾಗ ಇವೆಲ್ಲವೂ ಎಷ್ಟೊಂದು ಸಂಕೀರ್ಣ, ಜಿಜ್ಞಾಸೆ ಎಂದೆನಿಸುತ್ತದೆ.
ಕಾರ್ನಾಡರೊಂದಿಗೆ ಭಿನ್ನಾಭಿಪ್ರಾಯ ಇಟ್ಟುಕೊಳ್ಳಬಹುದಾಗಿತ್ತು, ಆದರೆ ಈ ಭಿನ್ನತೆಯೊಂದಿಗೆ ಅನಂತಮೂರ್ತಿಯವರೊಂದಿಗೆ ಸಂಭಾಷಿಸಿದಂತೆ ಕಾರ್ನಾಡ್‌ರೊಂದಿಗೆ ಚರ್ಚೆ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಕೆಲ ವಷರ್ಗಳ ಹಿಂದೆ ಆದಿಮ ಹುಣ್ಣಿಮೆಗೆ ನೂರು ತುಂಬಿದ ಸಂದರ್ಭದಲ್ಲಿ ಹಮ್ಮಿಕೊಂಡ ಎರಡು ದಿನಗಳ ವಿಚಾರ ಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಗೆ ಗಿರೀಶ್ ಕಾರ್ನಾಡ್‌ರನ್ನು ಕರೆಯೋಣ ಎಂದು ಕೋಟಿಗಾನಹಳ್ಳಿ ರಾಮಯ್ಯನವರು ನನಗೆ ಹೇಳಿದರು. ನಾನು ಕಾರ್ನಾಡ್‌ರಿಗೆ ಫೋನ್ ಮೂಲಕ ಕೇಳಿಕೊಂಡಾಗ ಅವರು ಒಂದೇ ಮಾತಿನಲ್ಲಿ ನಾನು ಬರುವುದಿಲ್ಲ ಎಂದು ಹೇಳಿದರು. ಯಾಕೆ ಹೀಗೆ ಸ್ಥಳೀಯ ಸಂಸ್ಕೃತಿಯೊಂದಿಗೆ ದೂರ ಉಳಿಯುತ್ತಾರೆ ಎಂಬುದು ನಮಗೆಲ್ಲಾ ಬೇಸರ ಮೂಡಿಸುತ್ತಿತ್ತು. ಆದರೆ ಕಾರ್ನಾಡ್‌ರನ್ನು ನಿರ್ಲಕ್ಷಿಸಲೂ ಸಾಧ್ಯವಿರಲಿಲ್ಲ. ಅವರ ಮಾನವೀಯತೆ, ನೈತಿಕ ಪ್ರಜ್ಞೆ, ಸೆಕ್ಯುಲರಿಸಂ ಸದಾ ನಮ್ಮನ್ನು ಅವರೆಡೆಗೆ ಸೆಳೆಯುತ್ತಿದ್ದವು. ಶತಮಾನಗಳು ಕಳೆದರೂ ಸದಾ ತಾಜಾತನದಿಂದ ಹೊಸತನದಿಂದ ನಳನಳಿಸುವ ಅವರ ನಾಟಕಗಳು ನೋಯುವ ಹಲ್ಲಿಗೆ ಮತ್ತೆ ಮತ್ತೆ ನಾಲಗೆ ಮರಳುವಂತೆ ನಮ್ಮನ್ನು ಗಿರೀಶ್ ಕಾರ್ನಾಡ್‌ರ ಬಳಿ ಸೆಳೆಯುತ್ತಿತ್ತು
‘ತುಘಲಕ್’ ನಾಟಕದಲ್ಲಿ ಬಂದ ನೆಲದಲ್ಲಿ ಬೇರು ಬಿಟ್ಟು ನಕ್ಷತ್ರಗಳ ಟೊಂಗೆಗೆ ಕೈಚಾಚುವಾಸೆ ಎನ್ನುವ ಪ್ರಜ್ಞೆ ಮತ್ತು ಸಂವೇದನೆಯನ್ನು ಕಟ್ಟಿದ ಗಿರೀಶ್ ಕಾರ್ನಾಡ್‌ರನ್ನು ಕಳೆದುಕೊಂಡಿರುವುದು ನಮಗೆಲ್ಲಾ ದುಃಖ ಮೂಡಿಸಿದೆ.
ಹೋಗಿ ಬನ್ನಿ ಸಾರ್.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)