varthabharthi

ವಿಶೇಷ-ವರದಿಗಳು

ಡಿಸೆಂಬರ್ 13, 2003ರ ‘ವಾರ್ತಾಭಾರತಿ’ ಸಂಪಾದಕೀಯ

ನಿಜ, ಕಾರ್ನಾಡ್ ದೇಶದ್ರೋಹಿ!

ವಾರ್ತಾ ಭಾರತಿ : 11 Jun, 2019

‘ದೇಶ ಪ್ರೇಮ’ ಎನ್ನುವುದು ಸಮಯ ಸಾಧಕತನಕ್ಕೆ, ಒಂದಾಗಿ ಬಾಳುತ್ತಿರುವ ಜನತೆಯ ಭಾವನೆಗೆ ವಿಷ ಹಿಂಡುವುದಕ್ಕೆ, ಯಾರದಾದರೂ ಪ್ರಾರ್ಥನಾಲಯಗಳನ್ನು ಕೆಡಹುವುದಕ್ಕೆ, ಇನ್ನೊಂದು ಧರ್ಮವನ್ನು ದ್ವೇಷಿಸುವುದಕ್ಕೆ, ಅಮಾಯಕ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗುವುದಕ್ಕೆ, ಗರ್ಭಿಣಿಯ ಹೊಟ್ಟೆಯನ್ನು ಸೀಳಿ ತಾಯಿ, ಮಗುವನ್ನು ಬೆಂಕಿಗೆಸೆಯುವುದಕ್ಕೆ ಮತ್ತು ಅವರಿಗೆ ಬಹಿಷ್ಕಾರ ವಿಧಿಸುವುದಕ್ಕೆ ಬಳಸಲಾಗುವ ಇನ್ನೊಂದು ಹೆಸರು ಎಂಬುದನ್ನು ಸಂಘಪರಿವಾರ ಮತ್ತು ಅದರ ಬೆಂಗಾವಲಿರುವ ಬಿಜೆಪಿಯವರು ಈಗಾಗಲೇ ಹಲವು ಬಾರಿ ಸಾಬೀತು ಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಪ್ರಮುಖ ಡಿ.ಎಚ್.ಶಂಕರಮೂರ್ತಿ ಅವರು ಗಿರೀಶ್ ಕಾರ್ನಾಡ್ ಅವರನ್ನು ‘ದೇಶದ್ರೋಹಿ’ ಎಂದು ಕರೆದಿರುವುದು ಅರ್ಥಪೂರ್ಣವಾಗಿದೆ.

ಮರಾಠರ ವಂಚನೆ, ಆಪ್ತರ ದ್ರೋಹ ಇವುಗಳ ನಡುವೆ ಬ್ರಿಟಿಷರ ವಿರುದ್ಧ ಒಂಟಿ ಹೋರಾಟ ನಡೆಸಿ ರಣರಂಗದಲ್ಲಿ ವೀರ ಮರಣವನ್ನಪ್ಪಿದ ಟಿಪ್ಪು ಸುಲ್ತಾನನನ್ನು ‘ದೇಶದ್ರೋಹಿ’ ಎಂದು ಕರೆವ ಮೂಲಕ ಡಿ.ಎಚ್.ಶಂಕರಮೂರ್ತಿ ಈ ಹಿಂದೆ ‘ದೇಶಪ್ರೇಮ’ ಮೆರೆದಿದ್ದರು. ಆ ಮೂಲಕ ಟಿಪ್ಪುವನ್ನು ಬ್ರಿಟಿಷರಿಗೆ ಬಲಿ ಕೊಟ್ಟ ಮೀರ್ ಸಾದಿಕ್ ಮತ್ತು ಸಮಯ ಸಾಧಕ ಪೂರ್ಣಯ್ಯನಂಥವರೇ ತಮ್ಮ ದೃಷ್ಟಿಯಲ್ಲಿ ದೇಶಭಕ್ತರೆಂಬುದನ್ನು ದೇಶಕ್ಕೆ ತಿಳಿಸಿದ್ದರು. ಬ್ರಿಟಿಷರಿಗೆ ಕ್ಷಮೆಯಾಚನೆ ಪತ್ರವನ್ನು ಬರೆದು ತಪ್ಪೊಪ್ಪಿಕೊಂಡ ವೀರ (?) ಸಾವರ್ಕರ್, ಸ್ವಾತಂತ್ರ ಹೋರಾಟಗಾರರನ್ನು ಬ್ರಿಟಿಷರಿಗೆ ಹಿಡಿದುಕೊಟ್ಟ ಆರೋಪ ಎದುರಿಸುತ್ತಿರುವ ಅಟಲ್ ಬಿಹಾರಿ ವಾಜಪೇಯಿ ಮೊದಲಾದ ‘ದೇಶಪ್ರೇಮಿ’ಗಳ ನೇತೃತ್ವವನ್ನು ಹೊಂದಿದ ಬಿಜೆಪಿ ನಾಯಕ ಮಣಿಗಳಲೊಬ್ಬರಾಗಿರುವ ಶಂಕರಮೂರ್ತಿಗೆ ಕಾರ್ನಾಡ್ ‘ದೇಶದ್ರೋಹಿ’ಯಾಗಿ ಕಂಡಿರುವುದು ನಿಜಕ್ಕೂ ಕಾರ್ನಾಡ್ ಘನತೆಯನ್ನು ಎತ್ತಿಹಿಡಿದಿದೆ. ಆದುದರಿಂದ ಕಾರ್ನಾಡ್ ಅವರನ್ನು ಅಭಿನಂದಿಸೋಣ.

ಚಿಲ್ಲರೆ ಹಣಕ್ಕಾಗಿ ದೇಶದ ರಕ್ಷಣಾ ವಿಷಯವನ್ನೇ ‘ತೆಹಲ್ಕಾ ಹಗರಣ’ದಲ್ಲಿ ಒತ್ತೆಯಿಟ್ಟು ದೇಶಪ್ರೇಮ ಮೆರೆದಿರುವ ಬಿಜೆಪಿ ನಾಯಕರು, ಲಂಚ ತೆಗೆದು ಅದನ್ನು ಮತಾಂತರ ನಿಯಂತ್ರಣಕ್ಕಾಗಿ ಎಂದು ಬಣ್ಣಿಸಿ ಹುತಾತ್ಮ ಹೇಳಿಕೆಯನ್ನು ನೀಡಿದ ಜುದೇವ್, ‘‘ಗುಜರಾತ್ ನರಭಕ್ಷಕ’ ಎಂಬ ಆರೋಪವನ್ನು ಹೊಂದಿರುವ ಮೋದಿಯಂಥವರೆಲ್ಲ ಮಹಾನುಭಾವರೆಲ್ಲ ದೇಶಪ್ರೇಮಿಗಳೆಂದಾದರೆ, ಭಾರತೀಯರೆಲ್ಲಾ ಪರಸ್ಪರ ಒಂದಾಗಿ ಬಾಳುವ ಕನಸು ಹೊತ್ತು ಬಾಬಾಬುಡಾನ್‌ಗಿರಿಯಲ್ಲಿ ಸೌಹಾರ್ದ ಸಮಾವೇಶಕ್ಕೆ ಮುಂದಾದ ಗಿರೀಶ್ ಕಾರ್ನಾಡ್ ‘ದೇಶದ್ರೋಹಿ’ಯೇ ಸರಿ. ಬಿಜೆಪಿ ತನ್ನ ಅಧಿಕಾರವಧಿಯಲ್ಲಿಯೇ ಕಾರ್ನಾಡ್ ಅವರಿಗೆ ಜ್ಞಾನಪೀಠ ಪ್ರಶಸ್ತಿಯನ್ನು ನೀಡಿರುವುದರಿಂದ, ಬಿಜೆಪಿಯ ‘ದೇಶಪ್ರೇಮ’ವನ್ನು ಒಪ್ಪಿ ಬಿಜೆಪಿಗೆ ಸದಾ ‘ಚಿರಋಣಿ’ಯಾಗಿರುವುದು ಕಾರ್ನಾಡ್ ಅವರ ಕರ್ತವ್ಯವಾಗಿತ್ತು. ಆದರೆ ಕಾರ್ನಾಡ್ ಈ ಕಾರ್ಯದಲ್ಲಿ ವಿಫಲರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಶಂಕರಮೂರ್ತಿಯವರು ಹೇಳುವಂತೆ ಕಾರ್ನಾಡ್ ತಮ್ಮ ದೇಶದ್ರೋಹವನ್ನು ಇದೇ ರೀತಿ ಮುಂದುವರಿಸಿದಲ್ಲಿ ಅವರ ‘ಜ್ಞಾನಪೀಠ’ವನ್ನು ಕಿತ್ತುಕೊಳ್ಳವುದೇ ಬಿಜೆಪಿ ಸಂಸ್ಕೃತಿಗೆ ಶೋಭಾಯಮಾನವಾಗಿದೆ. ಸಾಧ್ಯವಾದರೆ ಆ ಜ್ಞಾನಪೀಠವನ್ನು ಕಿತ್ತು ಈಗಾಗಲೇ ‘ಬಿಜೆಪಿಯ ದೇಶಪ್ರೇಮಕ್ಕೆ’ ತಮ್ಮದೇ ಕಾಣಿಕೆಯನ್ನು ನೀಡುತ್ತಾ ಬಂದಿರುವ ಎಸ್.ಎಲ್.ಭೈರಪ್ಪ ಅಥವಾ ಚಿದಾನಂದಮೂರ್ತಿ (ಚಿ.ಮೂ. ಈಗಾಗಲೇ ‘ಟಿಪ್ಪು ದೇಶದ್ರೋಹಿ’ ಎನ್ನುವುದನ್ನು ತಮ್ಮ ಸಂಶೋಧನೆಯಲ್ಲಿ ಸಾಬೀತು ಪಡಿಸಿರುವುದು ಅವರನ್ನು ಜ್ಞಾನಪೀಠ ಪ್ರಶಸ್ತಿಗೆ ಇನ್ನಷ್ಟು ಅರ್ಹರನ್ನಾಗಿಸಿದೆ.)ಯವರಿಗೆ ಅದನ್ನು ನೀಡುವುದರಿಂದ ಜ್ಞಾನಪೀಠ ಪ್ರಶಸ್ತಿ ಗೌರವವನ್ನು ‘ಧವಳಗಿರಿ’ಗೆ ಏರಿಸಬಹುದು.

ಇವೆಲ್ಲಕ್ಕಿಂತ ಮುಖ್ಯವಾಗಿ ಜನನ, ಮರಣ ಪ್ರಮಾಣ ಪತ್ರ ನೀಡುವಂತೆಯೇ ಯಾರು ದೇಶಪ್ರೇಮಿ, ಯಾರು ದೇಶದ್ರೋಹಿ? ಎನ್ನುವ ಪ್ರಮಾಣ ಪತ್ರವನ್ನು ನೀಡಲು ಬಿಜೆಪಿ ಸರಕಾರ ಇಲಾಖೆಯೊಂದನ್ನು ರಚಿಸಿದರೆ, ಜನರಲ್ಲಿ ‘ದೇಶದ್ರೋಹಿಗಳು’ ಯಾರು ‘ದೇಶಪ್ರೇಮಿಗಳು’ ಯಾರು ಎನ್ನುವ ಗೊಂದಲ ನಿವಾರಿಸಲು ಸುಲಭ ದಾರಿ ಮಾಡಿಕೊಡಬಹುದು. ಜನರಿಂದ ಮೂಲೆಗುಂಪಾಗಿ ಹಿಂಬಾಗಿಲಿನಿಂದ ವಿಧಾನಸಭೆಯನ್ನು ಪ್ರವೇಶಿಸಿರುವ ‘ದೇಶಪ್ರೇಮಿ’ ಶಂಕರಮೂರ್ತಿಯವರನ್ನೇ ಅದರ ಮುಖ್ಯಸ್ಥರನ್ನಾಗಿಸಿದರೆ ಆ ಇಲಾಖೆಯ ‘ತೂಕ’ ಇನ್ನೂ ಹೆಚ್ಚಬಹುದು.

ಜಾಗತೀಕರಣದ ವಿರುದ್ಧ ಮಾತನಾಡುವ ಈ ದೇಶದ ರೈತರು ದೇಶದ್ರೋಹಿಗಳು. ತಲೆತಲಾಂತರದಿಂದ ಕಾಡಿನಲ್ಲಿ ಬದುಕಿ, ಇದೀಗ ಬೀದಿಪಾಲಾಗುವ ಭಯದಿಂದ ಭೂಮಿಯ ಹಕ್ಕಿಗಾಗಿ ಹೋರಾಡುತ್ತಿರುವ ಆದಿವಾಸಿಗಳು ದೇಶದ್ರೋಹಿಗಳು. ಅವರ ಪರವಾಗಿ ಧ್ವನಿಯೆತ್ತುವ ಪ್ರಗತಿಪರರು ದೇಶದ್ರೋಹಿಗಳು. ಅಖಂಡ ಭಾರತದಲ್ಲಿ ಎಲ್ಲ ಜಾತಿ, ಧರ್ಮ, ವರ್ಗ ಒಂದಾಗಿ ಸೌಹಾರ್ದದಿಂದ ಜೀವಿಸುವ ಕನಸು ಕಾಣುಡಿವವರು ದೇಶದ್ರೋಹಿಗಳು. ಧರ್ಮದ ಹೆಸರಿನಲ್ಲಿ ನಡೆದ ಹಿಂಸೆ, ಅತ್ಯಾಚಾರಗಳ ವಿರುದ್ಧ ಧ್ವನಿಯೆತ್ತಿದವರು ದೇಶದ್ರೋಹಿಗಳು. ದೇಶದ ಇಷ್ಟೆಲ್ಲ ದೇಶದ್ರೋಹಿಗಳ ಪರವಾಗಿ ತಮ್ಮ ನಾಟಕದಲ್ಲಿ, ಲೇಖನದಲ್ಲಿ, ಭಾಷಣದಲ್ಲಿ ಮಾತನಾಡಿದ ಗಿರೀಶ್ ಕಾರ್ನಾಡ್ ನೆತ್ತಿಯ ಮೇಲೆ ಸಂಘ ಪರಿವಾರದ ಅವಧೂತ ಶಂಕರಮೂರ್ತಿ ‘ದೇಶದ್ರೋಹ’ದ ಕಿರೀಟವನ್ನು ಇಟ್ಟು ಗೌರವಿಸಿದಕ್ಕಾಗಿ ‘ದೇಶದ್ರೋಹಿ’ಗಳಾದ ನಾವೆಲ್ಲ ಕಾರ್ನಾಡರನ್ನು ಅಭಿನಂದಿಸೋಣ. ದೇಶವೆಲ್ಲಾ ಇಂತಹ ‘ದೇಶದ್ರೋಹಿ’ಗಳಿಂದಲೇ ತುಂಬಿ ತುಳುಕಲೆಂದು ಹಾರೈಸೋಣ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)