varthabharthi

ಸಂಪಾದಕೀಯ

ಕಾರ್ನಾಡ್ ಕಂಡ ಕನಸುಗಳು

ವಾರ್ತಾ ಭಾರತಿ : 11 Jun, 2019

ಈ ದೇಶದ ಆತ್ಮಸಾಕ್ಷಿಯಂತೆ ಬದುಕಿದ ಖ್ಯಾತ ಕಲಾವಿದ, ಚಿಂತಕ, ನಾಟಕಕಾರ ಗಿರೀಶ್ ಕಾರ್ನಾಡ್ ನರೇಂದ್ರ ಮೋದಿ ಸರಕಾರ ಭಾರೀ ಬಹುಮತ ಪಡೆದು ಅಧಿಕಾರಕ್ಕೇರಿದ ಕೆಲವೇ ದಿನಗಳಲ್ಲಿ ‘ಇದಕ್ಕೆಲ್ಲ ಏನು ಅರ್ಥ?(ಯಯಾತಿ ನಾಟಕದ ಸಾಲು)’ ಎಂಬಂತೆ ನಿಧನರಾಗಿದ್ದಾರೆ. ಮೋದಿ ಮೊದಲ ಬಾರಿ ಅಧಿಕಾರಕ್ಕೇರಿದ ಹೊತ್ತಿನಲ್ಲಿ ಹಿರಿಯ ಚಿಂತಕ ಅನಂತಮೂರ್ತಿಯವರು ನಿಧನರಾದಾಗ ಸಂಘಪರಿವಾರದ ದುಷ್ಟ ಮನಸ್ಸುಗಳು ಸಾರ್ವಜನಿಕವಾಗಿ ಸಂಭ್ರಮ ಆಚರಣೆ ಮಾಡಿದ್ದವು. ಈ ವಿಕೃತಿ ಈ ಬಾರಿ ಗಿರೀಶ್ ಕಾರ್ನಾಡ್ ನಿಧನದ ಹೊತ್ತಿನಲ್ಲೂ ಮುಂದುವರಿದಿದೆ. ಸಂಭ್ರಮಿಸುವುದಕ್ಕಾಗಿಯೇ ಕೊಲೆಗೈಯುವ ನಾಡಿನಲ್ಲಿ ಹಿರಿಯ ಚಿಂತಕನೊಬ್ಬನ ಸಾವಿಗೆ ಸಂಭ್ರಮಿಸುವುದು ಸಹಜವಾಗಿಯೇ ಇದೆ. ಕಾರ್ನಾಡ್ ತನ್ನ ಬದುಕಿನುದ್ದಕ್ಕೂ ನಾಟಕ, ಸಿನೆಮಾ ಹಾಗೂ ಚಳವಳಿಯ ಮೂಲಕ ಏನನ್ನು ಎದುರಿಸಿದ್ದರು ಎನ್ನುವುದನ್ನು ಇದು ಬಹಿರಂಗಪಡಿಸುತ್ತದೆ. ಮೂಲತಃ ಒಬ್ಬ ನಾಟಕಕಾರನಾಗಿ ಗುರುತಿಸಲ್ಪಟ್ಟು, ನಿಧಾನಕ್ಕೆ ನಟನೆ, ನಿರ್ದೇಶನ, ಸಾಹಿತ್ಯದ ಮೂಲಕ ಬೆಳೆಯುತ್ತಾ ಒಂದು ಕಾಲದ ಧ್ವನಿಯಾಗಿ ಮಾರ್ಪಟ್ಟ ಕಾರ್ನಾಡ್‌ರ ಅಗಲುವಿಕೆ ಪ್ರಗತಿಪರರ ನಡುವೆ ದೊಡ್ಡ ನಿರ್ವಾತವನ್ನು ಸೃಷ್ಟಿಸಿದೆ. ಅಘೋಷಿತ ತುರ್ತುಪರಿಸ್ಥಿತಿಯಲ್ಲಿ ಬದುಕುತ್ತಿರುವ ಜನಪರ ಹೋರಾಟಗಾರರ ಬೆನ್ನಿಗೆ ಶಕ್ತಿಯಾಗಿ ನಿಂತಿದ್ದ ಕಾರ್ನಾಡ್‌ರ ಅಗಲುವಿಕೆ ಈ ದೇಶದ ಪ್ರಜಾಸತ್ತೆಯ ಮೇಲೆ ನಂಬಿಕೆಯ ಜನರಲ್ಲಿ ಅನಾಥ ಪ್ರಜ್ಞೆಯನ್ನು ಉಂಟು ಮಾಡಿದೆ.

  ಕಾರ್ನಾಡ್ ತನ್ನನ್ನು ತಾನು ಕನ್ನಡಕ್ಕಾಗಿ ಸೀಮಿತವಾಗಿಟ್ಟುಕೊಂಡ ಪ್ರತಿಭೆಯಲ್ಲ. ಮರಾಠಿ, ಹಿಂದಿ ಮಾತನಾಡುವ ನೆಲದಲ್ಲಿ ಹುಟ್ಟಿ, ಬೆಳೆದು ಅಲ್ಲಿಂದ ಕನ್ನಡಕ್ಕೆ ಅನುವಾದಗೊಂಡವರು ಕಾರ್ನಾಡ್. ಈ ಹಿನ್ನೆಲೆಯಲ್ಲಿ ತನ್ನ ಕನ್ನಡ ಭಾಷಾ ಕೌಶಲದ ಕುರಿತಂತೆ ಅವರಿಗೆ ಆರಂಭದಲ್ಲಿ ಸಣ್ಣದೊಂದು ಕೀಳರಿಮೆಯಿತ್ತು. ಆ ಕೀಳರಿಮೆಯನ್ನು ಬದಿಗೊತ್ತಿ, ಇಡೀ ಕನ್ನಡವೇ ಹೆಮ್ಮೆ ಪಡುವಂತೆ ತನ್ನ ಪ್ರತಿಭೆಯ ಮೂಲಕ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಅವರು ಹರಡಿಕೊಂಡರು. ಇಂದು ಗಿರೀಶ್ ಅವರಿಗೆ ಕನ್ನಡೇತರ ಭಾಷೆಗಳಲ್ಲೇ ಅತ್ಯಧಿಕ ಗೆಳೆಯರಿದ್ದಾರೆ. ಕನ್ನಡ ಭಾಷೆ, ಸಾಹಿತ್ಯ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದ್ದರೆ ಅದಕ್ಕೆ ಕಾರ್ನಾಡರ ಕೊಡುಗೆ ದೊಡ್ಡದಿದೆ. ಲಂಕೇಶ್, ಅನಂತಮೂರ್ತಿ, ಕಾರ್ನಾಡ್ ಕಾಲಘಟ್ಟ ಆಧುನಿಕ ಕನ್ನಡದ ಸಂಕ್ರಮಣ ಕಾಲ. ಈ ಸಂದರ್ಭದಲ್ಲಿ ಅತ್ಯುತ್ತಮ ಕನ್ನಡ ಸಿನೆಮಾಗಳು ಹೊರಬಂದವು. ಕನ್ನಡ ನಾಟಕಗಳು ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿದವು. ಸಾಹಿತ್ಯ, ಕಾವ್ಯ, ಕತೆಗಳಲ್ಲಿ ಪ್ರಯೋಗಗಳು ನಡೆದುದೂ ಇದೇ ಹೊತ್ತಿನಲ್ಲ್ಲಿ. ಆಗ ಲಂಕೇಶ್, ಅನಂತಮೂರ್ತಿ, ತೇಜಸ್ವಿ ಅವರದೇ ಒಂದು ತೂಕವಾದರೆ ಕಾರ್ನಾಡರದು ಇನ್ನೊಂದು ತೂಕ. ನಾಟಕ ರಚನೆಗಳಲ್ಲಿ ಅತ್ಯಾಸಕ್ತಿ ಹೊಂದಿದ್ದ ಕಾರ್ನಾಡ್, ದೃಶ್ಯ ಮಾಧ್ಯಮವನ್ನು ಆರಿಸಿಕೊಂಡದ್ದು ಅದಕ್ಕೆ ಮುಖ್ಯ ಕಾರಣವಾಗಿರಬಹುದು. ಸಂಸ್ಕಾರ, ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ, ಒಂದಾನೊಂದು ಕಾಲದಲ್ಲಿ ....ಹೀಗೆ ಸಿನೆಮಾ ಮಾಧ್ಯಮಗಳು ನಿಧಾನಕ್ಕೆ ಅವರ ಜಗತ್ತನ್ನು ಭಾಷೆಯ ಗಡಿಯಾಚೆಗೆ ವಿಸ್ತರಿಸುವಂತೆ ಮಾಡಿತು. ಅವರನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಿತು. ಗಿರೀಶ್ ಕಾರ್ನಾಡ್ ತನ್ನ ನಾಟಕಗಳ ವಸ್ತುವಿಗೆ ಪುರಾಣ, ಇತಿಹಾಸವನ್ನೇ ಹೆಚ್ಚಾಗಿ ನೆಚ್ಚಿಕೊಂಡರು. ಯಯಾತಿ, ಅಗ್ನಿ ಮತ್ತು ಮಳೆ, ತುಘಲಕ್, ಟಿಪ್ಪುಸುಲ್ತಾನನ ಕನಸುಗಳು, ರಾಕ್ಷಸ ತಂಗಡಿ ನಾಟಕಗಳು ವರ್ತಮಾನದ ಜೊತೆಗೆ ಸಂವಾದಿಸುವಂತಿತ್ತು. ಪುರಾಣಗಳನ್ನು ಆಧುನಿಕ ನೆಲೆಕಟ್ಟಿನಲ್ಲಿ ಮುರಿದು ಕಟ್ಟುವ ಪ್ರಯತ್ನವೊಂದನ್ನು ಅವರು ಒಳಗೊಳಗೊಳಗೆ ಮಾಡಿದರು. ಮನುಷ್ಯನನ್ನು ಮಾತ್ರವಲ್ಲ, ಇತಿಹಾಸವನ್ನು ಕೂಡ ಕಪ್ಪು ಬಿಳುಪಾಗಿ ನೋಡುವುದನ್ನು ಅವರು ವಿರೋಧಿಸಿದರು. ಇತಿಹಾಸದಲ್ಲಿ ಮೂರ್ಖನಂತೆ ಚಿತ್ರಿತನಾಗಿದ್ದ ‘ತುಘಲಕ್’ ಅವರ ನಾಟಕದಲ್ಲಿ ಮುತ್ಸದ್ದಿ, ದೂರದೃಷ್ಟಿಯುಳ್ಳ ಅಸಹಾಯಕ ನಾಯಕನಾಗಿ ಬಿಂಬಿತನಾಗುತ್ತಾನೆ. ಸಂಘಪರಿವಾರ ಶಕ್ತಿಗಳು ಟಿಪ್ಪು ಸುಲ್ತಾನನ್ನು ಮತಾಂಧನಂತೆ ಬಿಂಬಿಸುವುದಕ್ಕೆ ಹರಸಾಹಸ ನಡೆಸುತ್ತಿರುವಾಗ ಅವರು ‘ಟಿಪ್ಪು ಸುಲ್ತಾನನ ಕನಸುಗಳು’ ನಾಟಕವನ್ನು ಬರೆದರು. ಕನಸುಗಳ ಜೊತೆಗೆ ಸಂಘರ್ಷಕ್ಕಿಳಿಯುವ ಟಿಪ್ಪುವನ್ನು ಕಾರ್ನಾಡ್ ಕಟ್ಟಿ ಕೊಟ್ಟ ಬಗೆಯೇ ಭಿನ್ನವಾದುದು. ಇದರಿಂದಾಗಿ ರಾಜಕೀಯ ಶಕ್ತಿಗಳ ಕೆಂಗಣ್ಣಿಗೆ ಪಾತ್ರರಾದರು. ಟಿಪ್ಪುವಿನ ಪರವಾಗಿ ಕಾರ್ನಾಡ್ ನೀಡಿದ ಹೇಳಿಕೆಗಳೂ ಅವರನ್ನು ವಿವಾದಕ್ಕೆ ಈಡು ಮಾಡಿತು. ಆದರೂ ತನ್ನ ನಿಲುವಿನಿಂದ ಒಂದಿಷ್ಟು ಹಿಂದೆ ಸರಿಯದೆ ಅವರು ಮುಂದುವರಿದರು. ತನ್ನ ನಾಟಕಕ್ಕಾಗಿ ರುದ್ರ ಭೂಮಿಕೆಗಳನ್ನು ಆರಿಸಿಕೊಳ್ಳಲು ತಹತಹಿಸುವ ಕಾರ್ನಾಡ್ ‘ರಾಕ್ಷಸ ತಂಗಡಿ’ಯ ಮೂಲಕ ಕರ್ನಾಟಕದ ಇತಿಹಾಸದ ಗಾಯವನ್ನು ಮತ್ತೊಮ್ಮೆ ಮುಟ್ಟಿ ನೋಡುವ ಸಾಹಸವನ್ನು ಮಾಡಿದರು. ಬಹುಶಃ ಟಿಪ್ಪು ಸುಲ್ತಾನನ ಕುರಿತ ನಾಟಕಕ್ಕೆ ಬಂದಿದ್ದ ಪ್ರತಿಕ್ರಿಯೆಗಳಿಗೆ ಅವರು ಹೆದರಿದ್ದಿದ್ದರೆ ‘ರಾಕ್ಷಸ-ತಂಗಡಿ’ ನಾಟಕ ರಚನೆ ಮಾಡುವ ಸಾಹಸಕ್ಕೇ ಇಳಿಯುತ್ತಿರಲಿಲ್ಲವೇನೋ? ಕರ್ನಾಟಕದ ಇತಿಹಾಸದಲ್ಲಿ ನಾವು ಓದಿಕೊಂಡು ಬಂದಿರುವ ‘ರಕ್ಕ ಸ ತಂಗಡಿ’ಗೆ ಭಿನ್ನವಾದ ಮನುಷ್ಯ ಪಾತ್ರಗಳಿರುವ ಇತಿಹಾಸವೊಂದನ್ನು ಅವರು ‘ರಾಕ್ಷಸ ತಂಗಡಿ’ಯಲ್ಲಿ ಕಟ್ಟಿ ಕೊಡುತ್ತಾರೆ. ಅಳಿಯ ರಾಮರಾಯನ ಪ್ರತಿಷ್ಠೆಗೆ ವಿಜಯನಗರ ಹೇಗೆ ಬಲಿಯಾಯಿತು ಎನ್ನುವುದನ್ನು ಅವರು ಚರ್ಚಿಸುತ್ತಾರೆ. ಅವರ ಒಂದೊಂದು ನಾಟಕಗಳೂ ವರ್ತಮಾನದ ಬೇರೆ ಬೇರೆ ಮಗ್ಗುಲುಗಳನ್ನು ಚರ್ಚಿಸುತ್ತಾ ಬಂದಿವೆ. ಅವರ ಎಲ್ಲ ಸಾಹಿತ್ಯದ ಉದ್ದೇಶ ಅಂತಿಮವಾಗಿ, ಈ ದೇಶದ ಜೀವಪರ ಸೆಳೆಯನ್ನು ಬಸಿದು ತೆಗೆಯುವುದೇ ಆಗಿತ್ತು. ಆದುದರಿಂದಲೇ ಅವರು, ಪಶ್ಚಿಮಘಟ್ಟಚಳವಳಿಗಳಲ್ಲಿ ತಮ್ಮನ್ನು ಗುರುತಿಸಿಕೊಂಡರು. ಕನ್ನಡದ ಸೂಫಿ ಮೌಲ್ಯಗಳನ್ನು ಉಳಿಸುವ ಭಾಗವಾಗಿ ‘ಬಾಬಾ ಬುಡಾನ್ ಗಿರಿ’ ಚಳವಳಿಯಲ್ಲಿಯೂ ಸಕ್ರಿಯವಾಗಿ ಕಾಣಿಸಿಕೊಂಡರು. ಕಲಬುರ್ಗಿ, ಗೌರಿ ಹತ್ಯೆಯ ಸಂದರ್ಭದಲ್ಲಿ ಸ್ಪಷ್ಟ ಧ್ವನಿಯಲ್ಲಿ ಮಾತನಾಡಿದರು ಮಾತ್ರವಲ್ಲ, ಬೀದಿಗಿಳಿದು ತಮ್ಮ ಪ್ರತಿಭಟನೆಯನ್ನು ದಾಖಲಿಸಿದರು. ವಿಪರ್ಯಾಸ ಗಮನಿಸಿ. ಗೋ ಹತ್ಯೆಯನ್ನು ರಾಜಕೀಯ ವಸ್ತುವಾಗಿಸುವ ಆರೆಸ್ಸೆಸ್‌ನ ಸಂಚಿಗೆ ಪೂರಕವಾಗಿ ಬರೆಯಲ್ಪಟ್ಟ ಕಾದಂಬರಿ ಎಸ್. ಎಲ್. ಭೈರಪ್ಪ ಅವರ ‘ತಬ್ಬಲಿಯು ನೀನಾದೆ ಮಗನೆ’. ಈ ಕಾದಂಬರಿಯನ್ನು ಕಾರ್ನಾಡ್ ಸಿನೆಮಾ ಆಗಿ ನಿರ್ದೇಶಿಸಿದರು. ಇದರ ಹಿಂದಿನ ಸಂಚನ್ನು ಅರಿಯದೆ, ಆ ಕಾದಂಬರಿ ಪ್ರತಿಪಾದಿಸುವ ಆಧುನಿಕ ಹಾಗೂ ಸಾಂಪ್ರದಾಯಿಕತೆಯ ನಡುವೆ ನಡೆಯುವ ಸಂಘರ್ಷಗಳಿಗೆ ಅವರು ಆದ್ಯತೆಯನ್ನು ನೀಡಿದರು. ಆದರೆ ಬಳಿಕ ಆ ಕಾದಂಬರಿಯ ಆಯ್ಕೆಗಾಗಿ ಅವರು ವಿಷಾದಿಸಿದರು. ಗೋಹತ್ಯೆ ವಿರೋಧವನ್ನು ಪ್ರತಿಪಾದಿಸುವ ‘ತಬ್ಬಲಿಯು ನೀನಾದೆ ಮಗನೆ’ ಸಿನೆಮಾ ನಿರ್ದೇಶಿಸಿದ ಗಿರೀಶ್ ಕಾರ್ನಾಡ್ ಅವರು, ಮುಂದೆ ಗೋಮಾಂಸ ಸೇವನೆ ಮಾಡುವ ಬಹುಸಂಖ್ಯಾತರ ಹಕ್ಕಿಗಾಗಿ ಬೀದಿಗಿಳಿದು ಧರಣಿ ನಡೆಸಿದರು. ಒಬ್ಬ ಗಂಭೀರ ಕಲಾವಿದನಾಗಿ, ಚಿಂತಕನಾಗಿಯೂ ಜನಪ್ರಿಯ ಸಿನೆಮಾಗಳ ಕುರಿತಂತೆ ಯಾವುದೇ ಕೀಳರಿಮೆ, ಅಸ್ಪಶ್ಯತೆಯನ್ನು ಇಟ್ಟುಕೊಳ್ಳದವರು ಕಾರ್ನಾಡ್. ಜನಪ್ರಿಯ ಸಿನೆಮಾವನ್ನು ಇಷ್ಟಪಡುವ ಕೋಟ್ಯಂತರ ಶ್ರೀಸಾಮಾನ್ಯರ ಕುರಿತಂತೆ ಅವರಿಗಿದ್ದ ಗೌರವವೇ ಅವರನ್ನು ಅಂತಹ ಸಿನೆಮಾಗಳಲ್ಲಿ ನಟಿಸುವಂತೆ ಮಾಡಿತು. ಆ ಕಾರಣದಿಂದಲೇ, ಇಂದು ಯಯಾತಿ, ತುಘಲಕ್, ಸಂಸ್ಕಾರ, ವಂಶವೃಕ್ಷದ ಕುರಿತಂತೆ ಅರಿವಿಲ್ಲದವರೂ ಕಾರ್ನಾಡರನ್ನು ಬಲ್ಲರು. ಕಲಾವಿದನ ಅನಂತ ಸಾಧ್ಯತೆಯನ್ನು ಹುಡುಕುತ್ತಾ ಕಾರ್ನಾಡ್ ನಮ್ಮ ನಡುವಿನಿಂದ ಮರೆಯಾಗಿದ್ದಾರೆ. ಅವರು ಪ್ರತಿಪಾದಿಸಿದ ಮೌಲ್ಯಗಳು ಈ ದೇಶವನ್ನು ಮುಂದೆಯೂ ಪೊರೆಯಲಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)