varthabharthi


ವಿಶೇಷ-ವರದಿಗಳು

ಗಿರೀಶ್ ಕಾರ್ನಾಡ್‌ರ ಆತ್ಮಕತೆ ‘ಆಡಾಡತ ಆಯುಷ್ಯ’ ಪುಸ್ತಕದಿಂದ ಆಯ್ದ ಭಾಗ

ತುರ್ತು ಪರಿಸ್ಥಿತಿ: ಕಾರ್ನಾಡ್ ನೆನಪು

ವಾರ್ತಾ ಭಾರತಿ : 11 Jun, 2019

ಒಂದು ದಿನ ನನಗೂ ದಿಲ್ಲಿಯಿಂದ ಫೋನ್ ಕಾಲ್ ಬಂತು. ಪಾಶ್ಚಾತ್ಯ ಪ್ರಸಾರ ಮಾಧ್ಯಮಗಳೆಲ್ಲ ಇಂದಿರಾ ಗಾಂಧಿಯ ತುರ್ತು ಪರಿಸ್ಥಿತಿಯ ದಬ್ಬಾಳಿಕೆಯನ್ನು ತೀವ್ರವಾಗಿ ಟೀಕಿಸುತ್ತಿದ್ದು, ಭಾರತದ ಮುಖಕ್ಕೆ ಮಸಿ ಬಳಿಯುತ್ತಿವೆ. ಇದರಿಂದ ಶುಕ್ಲಗೆ (ಇಂದಿರಾ ಗಾಂಧಿಗೆ, ಸಂಜಯನಿಗೆ)ಸಿಟ್ಟು-ನೋವು ಎರಡೂ ಆಗಿದ್ದು, ಈಗ ಆ ಪ್ರಚಾರಕ್ಕೆ ಪ್ರತಿಯಾಗಿ ಪಾಶ್ಚಿಮಾತ್ಯ ಸಮಾಜದಲ್ಲಿ ನಡೆಯುವ ಅನ್ಯಾಯಗಳ ಬಗ್ಗೆ ಸಾಕ್ಷ ಚಿತ್ರಗಳನ್ನು ನಿರ್ಮಿಸಿ, ಅದರಲ್ಲಿ ಪಶ್ಚಿಮದಲ್ಲಿ ಎಂಥ ದಾರಿದ್ರವಿದೆ, ಅಲ್ಲಿ ಅವರು ಕರಿಯರನ್ನು ಹೇಗೆ ಪಶುಗಳಂತೆ ನಡೆಸಿಕೊಳ್ಳುತ್ತಿದ್ದಾರೆ ಇತ್ಯಾದಿ ವಿಷಯಗಳ ಸತ್ಯದರ್ಶನ ನೀಡಬೇಕೆಂದು ಭಾರತ ಸರಕಾರ ಯೋಚಿಸುತ್ತಿದೆ. ಈ ಚಿತ್ರಗಳನ್ನು ಯಾರಿಗೆ ವಹಿಸಿ ಕೊಡಬಹುದು ಎಂಬ ಬಗ್ಗೆ ಸಲಹೆ ಕೇಳಲು ಮಂತ್ರಾಲಯ ನನಗೆ ಫೋನ್ ಮಾಡಿತ್ತು. ನಾನು ಈ ಯೋಜನೆಯನ್ನು ಕೇಳಿಯೇ ಗಾಬರಿಯಾದೆ.

5 ಜೂನ್ 1975ರಂದು ಇಂದಿರಾಗಾಂಧಿ ತುರ್ತು ಪರಿಸ್ಥಿತಿ Emergency ಯನ್ನು ಘೋಷಣೆ ಮಾಡಿದರು. ಆ ಕ್ಷಣಕ್ಕೆ ಇಡೀ ಭಾರತದ ಮಾನಸಿಕ ವಾತಾವರಣವೇ ಬದಲಾದರೂ, ವಿಶೇಷವಾಗಿ ಸರಕಾರಿ ಆಫೀಸುಗಳನ್ನು ಮೂಕಭೀತಿ ಅಕಸ್ಮಾತ್ತಾಗಿ ನುಗ್ಗಿಬಂದ ಚಳಿಗಾಲದಂತೆ ಆವರಿಸಿಕೊಂಡಿತು. ಎಲ್ಲರೂ ಕೆಳದನಿಯಲ್ಲೇ ಮಾತನಾಡುತ್ತಿದ್ದಾರೆಂಬ ಭಾಸವುಂಟಾಯಿತು.

ತುರ್ತು ಪರಿಸ್ಥಿತಿ ಆರಂಭವಾದ ಕೆಲದಿನಗಳಲ್ಲೇ ನಾನು ಮುಂಬೈಯ Film divisionbug ಫಿಲ್ಮ್ ಪ್ರಭಾಗದಲ್ಲಿ ಅದರ ನಿರ್ದೇಶಕರಾದ ಖಾಂಡಪುರರೊಡನೆ ಮಾತನಾಡುತ್ತಾ ಕುಳಿತಿದ್ದೆ, ಮೋಜಿಗೆಂದು ‘ತುರ್ತು ಪರಿಸ್ಥಿತಿ ಎಂದರೇನು? ನಮ್ಮ ಆಫೀಸುಗಳನ್ನೆಲ್ಲ ಮಾಡತಾರೇನು?’ ಎಂದು ಕೇಳಿದೆ. Bug ಮಾಡುವುದೆಂದರೆ ಒಂದು ಸ್ಥಳದಲ್ಲಿ ನಡೆದ ಸಂಭಾಷಣೆಯೆಲ್ಲ ಕೇಳಿ ಬರುವಂತೆ ಅಥವಾ ದಾಖಲೆಯಾಗುವಂತೆ ಗುಪ್ತ ಸ್ಥಳಗಳಲ್ಲೆಲ್ಲ ಮೈಕ್ರೋಫೋನ್‌ಗಳನ್ನು ಸ್ಥಾಪಿಸುವುದು. ಆಗಲೇ ವಾಶಿಂಗ್ಟನ್‌ನಲ್ಲಿ ಅಮೆರಿಕನ್ ಅಧ್ಯಕ್ಷ ನಿಕ್ಸನ್‌ನ ಕಾರಕಿರ್ದಿ ಈ Buggingನ ಫಲವಾಗಿ ಅತ್ಯಂತ ದರಿದ್ರ ರೀತಿಯಲ್ಲಿ ಕೊನೆಗೊಂಡಿತ್ತು. ಹೀಗಾಗಿ ಆ ಶಬ್ದ ಎಲ್ಲೆಡೆಗೆ ಒಂದು Joke ಆಗಿ ಪ್ರಚಲಿತವಾಗಿತ್ತು. ಆದರೆ ನಾನು ಆ ಪ್ರಶ್ನೆಯನ್ನು ಕೇಳಿದೊಡನೆ ಖಾಂಡಪುರರ ಮುಖ ಬಿಳಚಿಕೊಂಡಿತು. ಅತ್ತಿತ್ತ ಕಳ್ಳ ನೋಟ ಬೀರಿ, ‘‘ಪ್ಲೀಸ್,ಆ ವಿಷಯ ಬೇಡ!’’ ಎಂದು ಬೇಡಿಕೊಂಡರು. ಅವರ ಪ್ರತಿಕ್ರಿಯೆ ನನಗೆ ತುರ್ತು ಪರಿಸ್ಥಿತಿಯ ಪರಿಣಾಮವಾಗಿ ಸರಕಾರಿ ವರ್ತುಲಗಳಲ್ಲಾಗಲಾರಂಭಿಸಿದ ಸಂದೇಹ, ವಿಶ್ವಾಸಘಾತ, ಚಾರಿತ್ರ ವಧೆಗಳ ಸುಳುಹು ಪ್ರಪ್ರಥಮವಾಗಿ ಸಿಕ್ಕಿತು.

ಅದರಿಂದಾಗಿ ದಿಲ್ಲಿಯಲ್ಲಿ ನನ್ನ ವರಿಷ್ಠ ಅಧಿಕಾರ ವರ್ಗವೆಲ್ಲ ಕಾಣೆಯಾಯಿತು. ಸೂಚನಾ ಪ್ರಸಾರಣ ಮಂತ್ರಿಯಾಗಿದ್ದ ಇಂದರ್‌ಸಿಂಗ್ ಗುಜರಾಲ್ ವಿದೇಶ ಇಲಾಖೆಯಲ್ಲೆಲ್ಲೋ ರಾಯಭಾರಿಗಳಾಗಿ ಹೋಗಿ ಅವರ ಸ್ಥಳದಲ್ಲಿ ವಿದ್ಯಾಚರಣ ಶುಕ್ಲ ಎಂಬ ರಾಯಪುರದ ರಾಜಕಾರಣಿ ಬಂದು ಪ್ರಸ್ಥಾಪಿತನಾದ. ನನ್ನಿಂದ ಹಿರಿಯರಾಗಿದ್ದು ವರಿಷ್ಠರಾಗಿದ್ದರೂ ನನ್ನನ್ನು ಮಿತ್ರನೆಂದೇ ಕಂಡ ಕಿದ್‌ವಾಯಿ ಅವರ ಸ್ಥಳವನ್ನು S.M.H. Burney ಬರನಿ ಎಂಬ ವ್ಯಕ್ತಿ ಆಕ್ರಮಿಸಿದ. ಒಳ್ಳೆಯ ಕೆಲಸಗಾರ, ಮಾನವೀಯ ವ್ಯಕ್ತಿ ಆದರೆ ತುರ್ತು ಪರಿಸ್ಥಿತಿಯ ರಾಜಕಾರಣದಲ್ಲಿ ಸಿಲುಕಿ ಜರ್ಜರನಾದ. ದಿನೇ ದಿನೇ ಸಂಜಯ ಗಾಂಧಿ ನಡೆಸಿರುವ ಅತ್ಯಾಚಾರಗಳ ವರದಿಗಳೂ ಇಂದಿರಾ ಗಾಂಧಿ ರಾಷ್ಟ್ರ ಮಾತೆಯಾಗುವ ಪ್ರಯತ್ನದಲ್ಲಿ ಹೊರಡಿಸಿದ ಆಜ್ಞೆಗಳೂ ನಮಗೆ ಪುಣೆಯಲ್ಲಿ ಬಂದು ತಲುಪುತ್ತಿದ್ದವು.

ಒಂದು ದಿನ ನನ್ನ ಉತ್ತಮ ವಿದ್ಯಾರ್ಥಿ ಸಯೀದ್ ಮಿರ್ಝಾ ನನ್ನ ಆಫೀಸಿಗೆ ಬಂದು ಭೇಟಿಯಾದ. ಉರ್ದು ಸಾಹಿತ್ಯದ ವಾಮಪಂಥೀಯ ಕಂಕಣಬದ್ಧ ರಾಜಕಾರಣದ ಹಿನ್ನೆಲೆಯಿಂದ ಬಂದ ಹುರುಪಿನ ಹುಡುಗ. ಬೆದರಿದ್ದ. ‘‘ನಾನು ಈ ತುರ್ತುಪರಿಸ್ಥಿತಿಯ ವಿರುದ್ಧ ಕೆಲವು ಚಳವಳಿಗಳಲ್ಲಿ ಭಾಗಿಯಾಗಿ ದುಡಿಯುತ್ತಿದ್ದೇನೆ. ಆದರೆ ನನ್ನ ಜೊತೆಗೆ ದುಡಿಯುತ್ತಿರುವವರ ಹೆಸರಿನ ಯಾದಿ ಪೊಲೀಸರಿಗೆ ಸಿಕ್ಕಿದೆಯಂತೆ, ಈಗ ನಾನೇನು ಮಾಡಲಿ?’’ ಎಂದು ಕೇಳಿದ.

ನಾನು ಹೇಳಿದೆ, ‘‘ಸದ್ಯ ಈ ಹವ್ಯಾಸಿ ಕ್ರಾಂತಿಕಾರಿತ್ವವನ್ನು ನಿಲ್ಲಿಸು. ಪರಿಸ್ಥಿತಿ ಪುಣೆಯಿಂದ ಕಾಣಿಸುತ್ತಿರುವುದಕ್ಕಿಂತ ಕರಾಳವಾಗಿದೆ. ನೀನಿಲ್ಲಿರುವರೆಗೆ ನಾನು ನಿನ್ನನ್ನು ರಕ್ಷಿಸುತ್ತೇನೆ. ನನ್ನ ಪೊಲೀಸ್ ಮಿತ್ರರಿಂದ ಏನಾದರೂ ಗೊತ್ತಾದರೆ ಹೇಳುತ್ತೇನೆ’’ ಎಂದು ಅಭಯವಿತ್ತು ಕಳಿಸಿದೆ. ಪುಣ್ಯಕ್ಕೆ ಅವನಿಗೇನೂ ಆಗಲಿಲ್ಲ.

ಆದರೆ ವೀ.ಸಿ ಶುಕ್ಲನ ಕಾರಭಾರಿನ ಕತೆಗಳು ಒಂದರ ಹಿಂದೊಂದಾಗಿ ಬಂದು ಪುಣೆಯನ್ನಪ್ಪಳಿಸಹತ್ತಿದವು. ಅವನು ಎಲ್ಲ ಹಿರಿಯ ಹಿಂದಿ ಫಿಲ್ಮ್ ನಿರ್ಮಾಪಕರನ್ನು ಕರೆದು, ‘‘ನೀವೆಲ್ಲ ಸರಕಾರದ ಮಾತು ಕೇಳಿದರೆ ಸರಿ, ಇಲ್ಲದಿದ್ದರೆ ಜೋಕೆ’’ ಎಂದು ಬೆದರಿಸಿದ್ದನ್ನು, ನಿರ್ಮಾಪಕರು ಚಕಾರವೆತ್ತದೆ ಕೇಳಿಕೊಂಡದ್ದನ್ನು ಶ್ಯಾಮ ಬೆನೆಗಲ್ ವಿವರಿಸಿದ.

ನನ್ನ ಮಿತ್ರ ವಿನೋದ್ ದೋಶಿ ವಾಲ್‌ಚಂದ್ ಹಿರಾಚಂದ್ ಉದ್ಯಮ ಸಾಮ್ರಾಜ್ಯದ Managing director. ಅವನಿಗೆ ಅವನ ಆಫೀಸಿನಲ್ಲಿ ಶುಕ್ಲನ ಮಂತ್ರಾಲಯದಿಂದ ಫೋನ್ ಕಾಲ್ ಬಂತಂತೆ. ಕೂಡಲೇ ವಿನೋದ ತನ್ನ ಎಲ್ಲ ಆಫೀಸರುಗಳೂ ಮಂತ್ರಿಗಳು ಹೇಳಬಯಸುವುದನ್ನು ಕೇಳಿಕೊಳ್ಳಲಿ ಎಂದು ಅವರ ಕಾರ್ಯಾಲಯದಲ್ಲಿದ್ದ Loud speakers ಗಳನ್ನು on ಮಾಡಿ, ‘‘ಹೇಳಿ ಸಾರ್’’ ಎಂದನಂತೆ. ಶುಕ್ಲನ ಮೊದಲ ಮಾತು: ‘‘ನೋಡಿ, ವಿನೋದ್ ದೋಶೀಜೀ, ನಾನು ಮುಂಬೈಗೆ ಬರುತ್ತಿದ್ದೇನೆ. ನಿಮಗೆ ಆ ಹುಡುಗಿಯ ಬಗ್ಗೆ ಹೇಳಿದ್ದೇನಲ್ಲ. ಆ ವ್ಯವಸ್ಥೆ ಆಯಿತೇನು?’’ ಕೂಡಲೇ ವಿನೋದನಿಗೆ ಅರ್ಥವಾಯಿತು. ಮಂತಿಗಳಿಗೆ ಫಿಲ್ಮ್ ನಿರ್ಮಾಪಕ ವಿನೋದ ದೋಶಿಯ ಜೊತೆಗೆ ಮಾತನಾಡುವುದಿತ್ತು, ತನ್ನ ಜೊತೆಗಲ್ಲ. ಬೇರೆ ಕೆಲಸ ಬಿಟ್ಟು, ಪಟಪನೆ ಎಲ್ಲ Loud speakersಗಳನ್ನು off  ಮಾಡುತ್ತ. ‘‘ಸರ್, ಇದು ವಾಲ್‌ಚಂದ್ ಹಿರಾಚಂದ್ ಆಫೀಸು’’ ಎನ್ನುತ್ತಿರುವಾಗಲೇ ಶುಕ್ಲನ ದನಿ ಮಾಯವಾಯಿತಂತೆ.

 ಒಂದು ದಿನ ನನಗೂ ದಿಲ್ಲಿಯಿಂದ ಫೋನ್ ಕಾಲ್ ಬಂತು. ಪಾಶ್ಚಾತ್ಯ ಪ್ರಸಾರ ಮಾಧ್ಯಮಗಳೆಲ್ಲ ಇಂದಿರಾ ಗಾಂಧಿಯ ತುರ್ತು ಪರಿಸ್ಥಿತಿಯ ದಬ್ಬಾಳಿಕೆಯನ್ನು ತೀವ್ರವಾಗಿ ಟೀಕಿಸುತ್ತಿದ್ದು, ಭಾರತದ ಮುಖಕ್ಕೆ ಮಸಿ ಬಳಿಯುತ್ತಿವೆ. ಇದರಿಂದ ಶುಕ್ಲಗೆ (ಇಂದಿರಾ ಗಾಂಧಿಗೆ, ಸಂಜಯನಿಗೆ)ಸಿಟ್ಟು-ನೋವು ಎರಡೂ ಆಗಿದ್ದು, ಈಗ ಆ ಪ್ರಚಾರಕ್ಕೆ ಪ್ರತಿಯಾಗಿ ಪಾಶ್ಚಿಮಾತ್ಯ ಸಮಾಜದಲ್ಲಿ ನಡೆಯುವ ಅನ್ಯಾಯಗಳ ಬಗ್ಗೆ ಸಾಕ್ಷ ಚಿತ್ರಗಳನ್ನು ನಿರ್ಮಿಸಿ, ಅದರಲ್ಲಿ ಪಶ್ಚಿಮದಲ್ಲಿ ಎಂಥ ದಾರಿದ್ರವಿದೆ, ಅಲ್ಲಿ ಅವರು ಕರಿಯರನ್ನು ಹೇಗೆ ಪಶುಗಳಂತೆ ನಡೆಸಿಕೊಳ್ಳುತ್ತಿದ್ದಾರೆ ಇತ್ಯಾದಿ ವಿಷಯಗಳ ಸತ್ಯದರ್ಶನ ನೀಡಬೇಕೆಂದು ಭಾರತ ಸರಕಾರ ಯೋಚಿಸುತ್ತಿದೆ. ಈ ಚಿತ್ರಗಳನ್ನು ಯಾರಿಗೆ ವಹಿಸಿ ಕೊಡಬಹುದು ಎಂಬ ಬಗ್ಗೆ ಸಲಹೆ ಕೇಳಲು ಮಂತ್ರಾಲಯ ನನಗೆ ಫೋನ್ ಮಾಡಿತ್ತು. ನಾನು ಈ ಯೋಜನೆಯನ್ನು ಕೇಳಿಯೇ ಗಾಬರಿಯಾದೆ. ನಾನು ದಿಲ್ಲಿಗೆ ಬಂದು ನನ್ನ ಪ್ರತಿಕ್ರಿಯೆ ವೈಯಕ್ತಿಕವಾಗಿ ವಿವರಿಸುತ್ತೇನೆ ಎಂದು ಕೂಡಲೇ ಹೊರಟೆ. ಅಲ್ಲಿ Joint secretary ಎಸ್.ಕೆ.ಖನ್ನಾ ನನ್ನನ್ನು ಮಂತ್ರಿಗಳನ್ನು ಕಾಣಲು ಕರೆದುಕೊಂಡು ಹೋದ. ಮಂತ್ರಿಯ ಸುತ್ತ ನೆರೆದ ಆಫೀಸರುಗಳಲ್ಲಿ ದೂರದರ್ಶನದ ಡೈರೆಕ್ಟರ್ ಜನರಲ್ ಆಗಿರುವ ಪಿ.ವಿ.ಕೃಷ್ಣಮೂರ್ತಿಯೂ ಇದ್ದ.

ಶುಕ್ಲನ ಠೀವಿಯಲ್ಲೇ ಸೊಕ್ಕು ಮಿರುಗುತ್ತಿತ್ತು. ಹೆಸರಿಗೆ ತಕ್ಕಂತೆ ಶುಕ್ಲವರ್ಣ. ಮೇಲು ವರ್ಗಕ್ಕೊಪ್ಪುವ ತೀಡಿ ತೆಗೆದ, ನಾಜೂಕಾದ ಚಹರೆ. ಸುಸ್ವರೂಪಿ. ಆದರೆ ಉಬ್ಬು ಹಲ್ಲುಗಳ ಮೇಲೆ ವಿಷಯಲೋಲುಪತೆಯಿಂದೆಂಬಂತೆ ತೂಗುವ ಮೇಲುತುಟಿ. ಸಾಕಷ್ಟು ಅಭ್ಯಾಸ ಮಾಡಿ ಅಧಿಕಾರದ ಅಭಿನಯಕ್ಕಾಗಿಯೇ ಅರ್ಧ ಮುಚ್ಚಿಕೊಂಡಂತಿದ್ದ ಗೂಗೆ ಕಣ್ಣು, ಆಳವಾದ ದನಿ. ನಿಧಾನವಾಗಿ ದರ್ಪದ ಲಯದಲ್ಲೇ ಮಾತನಾಡುತ್ತ ವಾಕ್ಯಗಳನ್ನು ಕಣ್ಣಿನ ಚಲನದಿಂದ ಅಧೋರೇಖಿತಗೊಳಿಸುವ ಬಿಂಕ.

‘‘ಏನು, ಗಿರೀಶ್? ನಿಮಗೆ ನಮ್ಮ ಯೋಜನೆಯ ಬಗ್ಗೆ ಏನೋ ಅಭ್ಯಂತರವಿದೆಯಂತೆ?’’ ಎಂದ.

ನಾನು ನನ್ನ ನಿಲುವನ್ನು ವಿವರಿಸಿ ಹೇಳಿದೆ. ಭಾರತೀಯ ಸಮಾಜದಲ್ಲಿ ದಲಿತರು, ಸ್ತ್ರೀಯರು, ಆದಿವಾಸಿಗಳು, ಇವರೆಲ್ಲರ ಮೇಲೆ ನಡೆಯುವ ಅನ್ಯಾಯ, ಅಳೆಯಲಾಗದ ಅಳಿಸಲಾಗದ ದಾರಿದ್ರ ಇರುವುದು ಜಗತ್ತಿಗೇ ಗೊತ್ತಿರುವಾಗ ನಾವು ಈ ಸಮಸ್ಯೆಗಳ ಪರಿಹಾರಕ್ಕಾಗಿ ಧನವ್ಯಯ ಮಾಡುವುದರ ಬದಲಾಗಿ ಪಾಶ್ಚಾತ್ಯ ಕುಂದು-ಕೊರತೆಗಳನ್ನು ಚಿತ್ರಿಸುವುದರಲ್ಲಿ ಅದನ್ನು ಹೂಡುವ ಯತ್ನ ನಮ್ಮನ್ನು ನಗೆಗೀಡು ಮಾಡದೆ ಇರದು. ಅಲ್ಲದೆ ಈ ಸಾಕ್ಷ ಚಿತ್ರಗಳನ್ನು ತೋರಿಸುವವರು ಯಾರು? ನೋಡುವವರು ಯಾರು?

‘‘ಹಾಗಾದರೆ ನಾವು ಏನೂ ಮಾಡದೆ ಕೈಕಟ್ಟಿ ಕೂಡುವುದು ಸರಿ ಎಂದು ನಿಮ್ಮ ಅಭಿಪ್ರಾಯವೇ?’’ ಶುಕ್ಲ ವ್ಯಂಗ್ಯವಾಗಿ ಕೇಳಿದ.

ನಾನು ದಿಲ್ಲಿಗೆ ಹೋಗುವಾಗ ಮುಂಬೈಯಲ್ಲೇ ಶ್ಯಾಮ ಬೆನೆಗಲನನ್ನು ಮಾತನಾಡಿಸಿದ್ದೆ, ಅವನೊಂದು ಒಳ್ಳೆಯ ಪರ್ಯಾಯ ವಿಷಯ ಸೂಚಿಸಿದ್ದ. ಆರ್ಥಿಕವಾಗಿ ಮುನ್ನಡೆದ Advanced ಪಾಶ್ಚಿಮಾತ್ಯ ಸಮಾಜಗಳೆಲ್ಲ ಪ್ರಗತಿಯ ಹೆಸರಿನಲ್ಲಿ ನೈಸರ್ಗಿಕ ಸಂಪನ್ಮೂಲಗಳನ್ನು ಅಡ್ಡಾದಿಡ್ಡಿಯಾಗಿ ಬಳಸುತ್ತಿವೆ, ಪೃಥ್ವಿಯ ಊರ್ಜೆಯನ್ನೆಲ್ಲ ಉಧ್ವಸ್ತಗೊಳಿಸುತ್ತವೆ. ದರಿದ್ರ ರಾಷ್ಟ್ರಗಳು ಅನ್ನ, ನೀರು, ವಿದ್ಯುತ್ ಇತರ ಇಂಧನ ಸಾಮಗ್ರಿಯಿಲ್ಲದೆ ಬಳಲುತ್ತಿದ್ದಾಗ ಪೃಥ್ವಿಯ ಒಡಲಲ್ಲಿ ಪರಿಮಿತವಾಗಿದ್ದ ಪೆಟ್ರೋಲ್, ಕಲ್ಲಿದ್ದಲ್ಲು, ನೀರು ಇತ್ಯಾದಿ ಊರ್ಜಾಸಾಮಗ್ರಿಯನ್ನು ಪಾಶ್ಚಾತ್ಯ ಸಮಾಜ ಕೇವಲ ಐಷಾರಾಮದ ಜೀವನಕ್ಕಾಗಿ ಎಗ್ಗಿಲ್ಲದೆ ದುರುಪಯೋಗಿಸುತ್ತಿವೆ.

ಈವತ್ತು ನಾವು ಈ ವಿಚಾರ ಸರಣಿಯನ್ನು ಎಲ್ಲೆಡೆ ಕೇಳುತ್ತೇವೆ. ಪಾಶ್ಚಾತ್ಯ ಸಮಾಜಗಳೂ ಈ ನಿಸರ್ಗಧ್ವಂಸದಲ್ಲಿ ತಮ್ಮ ಹೊಣೆಯನ್ನು ಒಪ್ಪಿಕೊಂಡಿವೆ. ಆದರೆ 1970ರ ಮಧ್ಯದಲ್ಲಿ ಈ ಬಗ್ಗೆ ಚರ್ಚೆಯೇ ಇರಲಿಲ್ಲ. ಜಗತ್ತಿನ ಇಂಧನವೆಲ್ಲ ತಮ್ಮ ಖುಷಿಗೆ ಮೀಸಲಾದ ಸೊತ್ತು ಎಂಬ ದರ್ಪದಿಂದ ಪಶ್ಚಿಮ ವರ್ತಿಸುತ್ತಿತ್ತು. ಪರಿಸರದ ದೂಷಣೆಯ ಬಗ್ಗೆ ಆಗ ಇನ್ನೂ ಏನೂ ವಿಶೇಷ ಜಾಗೃತಿಯಿರಲಿಲ್ಲ.

ಈ ವಿಷಯಗಳನ್ನು ಕೇಂದ್ರದಲ್ಲಿಟ್ಟುಕೊಂಡು ಸಾಕ್ಷ ಚಿತ್ರಗಳನ್ನು ಮಾಡಿದರೆ ನಮಗೆ ಏಶ್ಯಾ-ಆಫ್ರಿಕಾ-ದಕ್ಷಿಣ ಅಮೆರಿಕದಲ್ಲಿ ಕೂಡ ವೀಕ್ಷಕರು ಸಿಗಬಹುದು, ಅಲ್ಲದೆ ಯಾವುದೇ ಕೀಳರಿಮೆಯಿಲ್ಲದೆ ನಾವು ಈ ವಾದವನ್ನು ಮಂಡಿಸಬಹುದು ಎಂದು ಹೇಳಿದೆ.

ಶುಕ್ಲ ಕೆಳದುಟಿಯಿಂದಲೇ ತನ್ನ ಉಬ್ಬು ಹಲ್ಲನ್ನು ಚೀಪುತ್ತ, ಹುಬ್ಬಿನಡಿಯಿಂದ ನನ್ನನ್ನು ದಿಟ್ಟಿಸಿದ.

‘‘ಸರಿ, ಈ ಚಿತ್ರಗಳನ್ನು ಯಾರು ಮಾಡಬಲ್ಲರು?’’ ಎಂದು ಕೇಳಿದ.

ನಾನು ನಾಲ್ಕೈದು ಹೆಸರುಗಳನ್ನು ಸೂಚಿಸಿದೆ.

‘‘ಆಗಲಿ ತಿಳಿಸುತ್ತೇನೆ ’’ ಎಂದ. ನನ್ನ ಮುಲಾಕಾತು ಮುಕ್ತಾಯವಾಯಿತು.

ಈ ನೌಕರಿಯಿಂದ ಹೊರಬೀಳಬೇಕೆಂಬ ನನ್ನ ಯೋಚನೆ ಈ ಸಭೆಯಿಂದ ಖಚಿತವಾಯಿತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)