varthabharthi

ರಾಷ್ಟ್ರೀಯ

ನಾಪತ್ತೆಯಾಗಿದ್ದ ವಾಯುಪಡೆಯ ವಿಮಾನದ ಅವಶೇಷ ಪತ್ತೆ

ವಾರ್ತಾ ಭಾರತಿ : 11 Jun, 2019

ಹೊಸದಿಲ್ಲಿ,ಜೂ.11: ಎಂಟು ದಿನಗಳ ಹಿಂದೆ ನಾಪತ್ತೆಯಾಗಿದ್ದ ಭಾರತೀಯ ವಾಯುಪಡೆಯ ಎಎನ್-32 ಸಾರಿಗೆ ವಿಮಾನದ ಅವಶೇಷಗಳು ಮಂಗಳವಾರ ಅರುಣಾಚಲ ಪ್ರದೇಶದ ಲಿಪೊದ ಉತ್ತರಕ್ಕೆ 16 ಕಿ.ಮೀ.ದೂರದ,ಸಮುದ್ರ ಮಟ್ಟದಿಂದ 12,000 ಅಡಿ ಎತ್ತರದ ಪ್ರದೇಶದಲ್ಲಿ ಪತ್ತೆಯಾಗಿವೆ.

ವಿಸ್ತರಿತ ಶೋಧ ವಲಯದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ವಾಯುಪಡೆಯ ಎಂಐ-17 ಹೆಲಿಕಾಪ್ಟರ್ ವಿಮಾನದ ಅವಶೇಷಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ. ಅವಶೇಷಗಳು ಪತ್ತೆಯಾಗಿರುವುದನ್ನು ದೃಢಪಡಿಸಿರುವ ವಾಯುಪಡೆಯು,ವಿಮಾನದಲ್ಲಿದ್ದ 13 ಜನರ ಸ್ಥಿತಿ ಏನಾಗಿದೆ ಎನ್ನುವುದನ್ನು ತಿಳಿದುಕೊಳ್ಳಲು ಪ್ರಯತ್ನಗಳು ನಡೆದಿವೆ ಎಂದು ಟ್ವೀಟಿಸಿದೆ.

 ಜೂ.3ರಂದು ಮಧ್ಯಾಹ್ನ 12:27ಕ್ಕೆ ಅಸ್ಸಾಮಿನ ಜೋರ್ಹಾಟ್‌ನಿಂದ ಅರುಣಾಚಾಲ ಪ್ರದೇಶದ ಶಿ-ಯೋಮಿ ಜಿಲ್ಲೆಯ ಮೆಚುಕಾಕ್ಕೆ ಹಾರಾಟ ಆರಂಭಿಸಿದ್ದ ರಶ್ಯಾ ನಿರ್ಮಿತ ಎಎನ್-32 ವಿಮಾನವು 33 ನಿಮಿಷಗಳ ಬಳಿಕ ಭೂ ನಿಯಂತ್ರಣ ಕೇಂದ್ರದ ಸಂಪರ್ಕವನ್ನು ಕಳೆದುಕೊಂಡಿತ್ತು.

ಅಧಿಕಾರಿಗಳಾದ ವಿಂಗ್ ಕಮಾಂಡರ್ ಜಿ.ಎಂ.ಚಾರ್ಲ್ಸ್,ಸ್ಕ್ವಾಡ್ರನ್ ಲೀಡರ್ ಎಚ್.ವಿನೋದ್, ಫ್ಲೈಟ್ ಲೆಫ್ಟಿನೆಂಟ್‌ಗಳಾದ ಮೋಹಿತ್ ಗರ್ಗ್, ಸುಮಿತ್ ಮೊಹಂತಿ,ಆಶಿಷ್ ತನ್ವರ್ ಮತ್ತು ರಾಜೇಶ್ ಥಾಪಾ,ಇತರ ದರ್ಜೆಗಳ ಸಿಬ್ಬಂದಿಗಳಾದ ಅನೂಪ್, ಶರಿನ್, ಕೆ.ಕೆ.ಮಿಶ್ರಾ, ಪಂಕಜ್ ಸಂಗ್ವಾನ್, ಎಸ್.ಕೆ.ಸಿಂಗ್, ರಾಜೇಶ ಕುಮಾರ ಮತ್ತು ಪಟಾಲಿ ಅವರನ್ನು ಹೊತ್ತಿದ್ದ ಈ ವಿಮಾನವನ್ನು ತಾಂತ್ರಿಕವಾಗಿ ಮೇಲ್ದರ್ಜೆಗೇರಿಸಲಾಗಿರಲಿಲ್ಲ.

ನಾಪತ್ತೆಯಾಗಿದ್ದ ವಿಮಾನದ ಶೋಧ ಕಾರ್ಯಾಚರಣೆ ಪ್ರತಿಕೂಲ ಹವಾಮಾನದಿಂದಾಗಿ ಎರಡು ದಿನಗಳ ಕಾಲ ಸ್ಥಗಿತಗೊಂಡಿದ್ದು, ಸೋಮವಾರ ಪುನರಾರಂಭಗೊಂಡಿತ್ತು. ವಾಯುಪಡೆಯು ಹೆಚ್ಚಿನ ಹೆಲಿಕಾಪ್ಟರ್ ಮತ್ತು ಸಾರಿಗೆ ವಿಮಾನಗಳನ್ನು ಕಾರ್ಯಾಚರಣೆಗಿಳಿಸಿದ್ದು,ಶೋಧ ಪ್ರದೇಶವನ್ನು ಗಣನೀಯವಾಗಿ ವಿಸ್ತರಿಸಲಾಗಿತ್ತು.

ನಾಪತ್ತೆಯಾಗಿದ್ದ ವಿಮಾನದ ಬಗ್ಗೆ ಮಾಹಿತಿ ನೀಡುವವರಿಗೆ ಐದು ಲ.ರೂ.ಗಳ ಬಹುಮಾನವನ್ನು ನೀಡುವುದಾಗಿ ವಾಯುಪಡೆಯು ಶನಿವಾರ ಪ್ರಕಟಿಸಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)