varthabharthi

ಬೆಂಗಳೂರು

ರೈತರ ಖಾತೆಗಳಿಗೆ ಜಮೆ ಆಗಿದ್ದ ಸಾಲ ಮನ್ನಾ ಹಣ ವಾಪಸ್: ಈ ಬಗ್ಗೆ ಮುಖ್ಯಮಂತ್ರಿ ಹೇಳಿದ್ದೇನು ?

ವಾರ್ತಾ ಭಾರತಿ : 11 Jun, 2019

ಬೆಂಗಳೂರು, ಜೂ.11: ಬ್ಯಾಂಕ್ ಸಿಬ್ಬಂದಿಗಳ ತಪ್ಪಿನಿಂದಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಆಗಿದ್ದ ರಾಜ್ಯ ಸರಕಾರದ ಸಾಲ ಮನ್ನಾ ಹಣ ವಾಪಸ್ಸಾಗಿದೆ. ಇದಕ್ಕೆ ರಾಜ್ಯ ಸರಕಾರವನ್ನು ಹೊಣೆ ಮಾಡಬಾರದೆಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. 

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾದಗಿರಿಯ ಬ್ಯಾಂಕ್‌ವೊಂದರಲ್ಲಿ ರೈತನ ಖಾತೆಗೆ ಜಮೆಯಾಗಿದ್ದ ಸಾಲ ಮನ್ನಾ ಹಣ ವಾಪಾಸ್ಸಾಗಿರುವುದು ಬ್ಯಾಂಕ್ ಸಿಬ್ಬಂದಿಯ ತಪ್ಪಿನಿಂದ ಎಂದು ಬ್ಯಾಂಕ್ ಅಧಿಕಾರಿಗಳೇ ಹೇಳಿದ್ದಾರೆ. ಆದರೂ ಮಾಧ್ಯಮಗಳು ದಿನಪೂರ್ತಿ ಜನರಿಗೆ ತಪ್ಪು ಮಾಹಿತಿಯನ್ನು ನೀಡುತ್ತಿದ್ದಾರೆಂದು ಆರೋಪಿಸಿದರು.

ಸಾಲ ಮನ್ನಾ ವಿಷಯದಲ್ಲಿ ಮಾಧ್ಯಮಗಳು ಜನರನ್ನು ತಪ್ಪುದಾರಿಗೆ ಎಳೆಯಬಾರದು. ಅಸತ್ಯವಾಗಿರುವುದನ್ನು ತೋರಿಸಬಾರದು. ಯಾದಗಿರಿ ಜಿಲ್ಲೆಯ ರಾಷ್ಟ್ರೀಕೃತ ಬ್ಯಾಂಕುಗಳು ರೈತರ ಸಾಲಗಳ ವರ್ಗೀಕರಣ ಮಾಡುವಲ್ಲಿ ಆಗಿರುವ ಲೋಪದಿಂದಾಗಿ ಈ ಗೊಂದಲ ಉಂಟಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಪ್ರತಿ ಸಾಲ ಮನ್ನಾ ನಂತರ ರಾಜ್ಯ ಸರಕಾರ ನಡೆಸುವ ಆಡಿಟ್ ಸಂದರ್ಭದಲ್ಲಿ ಈ ವಿಷಯ ಬೆಳಕಿಗೆ ಬಂದಿದೆ. ಈವರೆಗೆ 13,988 ರೈತರ ಸಾಲ ಖಾತೆಗಳಲ್ಲಿ ಈ ಗೊಂದಲ ಉಂಟಾಗಿದೆ. ಸ್ಥಳೀಯ ಬ್ಯಾಂಕುಗಳು ತಮ್ಮಿಂದ ಆಗಿರುವ ಲೋಪದ ಕುರಿತು ಸ್ಪಷ್ಟನೆ ನೀಡುವಂತೆ ಸೂಚಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಶುಕ್ರವಾರ ಮಧ್ಯಾಹ್ನ ಸಭೆ ಕರೆಯಲಾಗಿದೆ ಎಂದು ಅವರು ಹೇಳಿದರು.

ರೈತರ ಸಾಲ ಮನ್ನಾ ಪ್ರಕ್ರಿಯೆಯನ್ನು ರಾಜ್ಯ ಸರಕಾರವು ಅತ್ಯಂತ ಜವಾಬ್ದಾರಿಯುತವಾಗಿ ಹಾಗೂ ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತಿದೆ. ರಾಜ್ಯ ಸರಕಾರದಿಂದ ಈ ಗೊಂದಲ ಉಂಟಾಗಿಲ್ಲ. ಹಾಗೂ ಚುನಾವಣೆಗೂ ಈ ಗೊಂದಲಕ್ಕೂ ಸಂಬಂಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ವಾಣಿಜ್ಯ ಬ್ಯಾಂಕುಗಳಲ್ಲಿ 7 ಲಕ್ಷ 49 ಸಾವಿರ ರೈತರಿಗೆ 3,021 ಕೋಟಿ ರೂ.ಹಣ ಬಿಡುಗಡೆ ಮಾಡಿದ್ದೇವೆ. ಸಹಕಾರಿ ಬ್ಯಾಂಕ್‌ನಿಂದ 11ಲಕ್ಷಕ್ಕೂ ಹೆಚ್ಚು ರೈತರಿಗೆ 4 ಸಾವಿರ ಕೋಟಿ ರೂ.ಗೂ ಹೆಚ್ಚು ಹಣ ಬಿಡುಗಡೆ ಮಾಡಿದ್ದೇವೆ. 2017-18-20ನೆ ಸಾಲಿನಲ್ಲಿ ಸಾಲ ಮನ್ನಾಗೆ 25 ಸಾವಿರ ಕೋಟಿ ರೂ.ಮೀಸಲಿಟ್ಟಿದ್ದೇವೆ ಎಂದು ಅವರು ವಿವರಿಸಿದರು. ಲೋಕೋಪಯೋಗಿ ಇಲಾಖೆ ಅಭಿವೃದ್ಧಿಗೆ ಪೂರಕವಾದ ಇಲಾಖೆಯಾಗಿದೆ. ರಾಜ್ಯದ ಅಭಿವೃದ್ಧಿಗೆ ಜಿಲ್ಲಾಧಿಕಾರಿಗಳು ಒಂದು ಭಾಗ. ಮತ್ತೊಂದು ಭಾಗ ಎಂಜಿನಿರ್‌ಗಳಾಗಿದ್ದಾರೆ. ಕೆಲಸ ನಿರ್ವಹಣೆ ಮಾಡಬೇಕಾದರೆ ಗುಣಾತ್ಮಕ ಯೋಜನೆ ಜಾರಿಗೆ ತರಬೇಕು. ಹಿಂದಿನ ದಿನಗಳ ನಿಮ್ಮ ಲೋಪಗಳ ಬಗ್ಗೆ ನಾನು ಚರ್ಚೆ ಮಾಡಲ್ಲ. ಇವತ್ತಿನ ಮೈತ್ರಿ ಸರಕಾರದಲ್ಲಿ ಪಾರದರ್ಶಕ ಕೆಲಸ ಆಗಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.

ಸಾಲ ಮನ್ನಾ ಪ್ರಕರಣದಲ್ಲಿ ರಾಷ್ಟ್ರೀಯ ಬ್ಯಾಂಕ್‌ನಿಂದ ಆಗಿರುವ ತಪ್ಪಿಗೆ ಮಾಧ್ಯಮಗಳು ನನ್ನ ಮೇಲೆ ಯಾಕೆ ದೋಷಣೆ ಮಾಡುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಬಗ್ಗೆ ದಿನಾ ಹೊಗಳುವ ಮಾಧ್ಯಮಗಳು, ಸಾಲ ಮನ್ನಾ ವಿಷಯದ ಬಗ್ಗೆಯೂ ಮಾತನಾಡಲಿ. ರಾಜ್ಯ ಅಭಿವೃದ್ದಿಯಾಗಬೇಕಾ ಅಥವಾ ಹಾಳಾಗಬೇಕಾ ಎಂಬುದನ್ನು ಮಾಧ್ಯಮಗಳೇ ನಿರ್ಧಾರ ಮಾಡಲಿ. ಅಸತ್ಯವನ್ನು ದಿನಾ ತೋರಿಸಿ ಏನು ಸಾಧನೆ ಮಾಡುತ್ತವೆ.

-ಕುಮಾರಸ್ವಾಮಿ, ಮುಖ್ಯಮಂತ್ರಿ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)