varthabharthi

ರಾಷ್ಟ್ರೀಯ

ಪಕ್ಷದ ನಾಯಕರ ವರದಿ ಹೇಳಿದ್ದು ಹೀಗೆ….

ಉ.ಪ್ರದೇಶದಲ್ಲಿ ಕಾಂಗ್ರೆಸ್‌ ಸೋಲಿಗೆ ಕಾರಣವೇನು ಗೊತ್ತಾ?

ವಾರ್ತಾ ಭಾರತಿ : 11 Jun, 2019

ಹೊಸದಿಲ್ಲಿ, ಜೂ.11: ಕೋಮು ಧ್ರುವೀಕರಣ, ಹೊರಗಿನ ವ್ಯಕ್ತಿಗಳನ್ನು ಅಭ್ಯರ್ಥಿಗಳಾಗಿ ನೇಮಿಸಿದ್ದು ಮತ್ತು ಸಂಘಟನಾ ಕೊರತೆ ಪಶ್ಚಿಮ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣ ಎಂದು ಹಲವು ನಾಯಕರು ಪಕ್ಷದ ಪ್ರಧಾನ ಕಾರ್ಯದರ್ಶಿ ಜ್ಯೋತಿರಾಧಿತ್ಯ ಸಿಂಧ್ಯಾಗೆ ಮಂಗಳವಾರ ವರದಿ ನೀಡಿದ್ದಾರೆ.

 ಪಕ್ಷದ ಸೋಲಿಗೆ ಕಾರಣವೇನು ಎಂಬ ಪ್ರಶ್ನೆಗೆ ಉತ್ತರ ಕಂಡು ಹಿಡಿಯಲು ಯತ್ನಿಸಿದ ಕಾಂಗ್ರೆಸ್‌ನ ಸಹರನ್‌ಪುರ, ಬಿಜನೋರ್, ಮೊರಾದಾಬಾದ್, ಗಾಝಿಯಾಬಾದ್, ಗೌತಮ್ ಬುದ್ಧ ನಗರ, ಅಲಿಗಡ್, ನಗೀನ, ಕೈರಾನ, ಬುಲಂದ್‌ಶಹರ್ ಮತ್ತು ಮೀರತ್‌ನ ಲೋಕಸಭಾ ಅಭ್ಯರ್ಥಿಗಳು, ಜಿಲ್ಲಾಧ್ಯಕ್ಷರು, ಶಾಸಕರು, ಮಾಜಿ ಸಚಿವರು, ಮಾಜಿ ಸಂಸದರು ಮತ್ತು ಮಾಜಿ ಶಾಸಕರು ಈ ಬಗ್ಗೆ ಸಿಂಧ್ಯಾಗೆ ತಮ್ಮ ವರದಿ ಸಲ್ಲಿಸಿದ್ದಾರೆ.

ಸಿಂಧ್ಯಾ ಲೋಕಸಭಾ ಚುನಾವಣೆಯ ವೇಳೆ ಪಶ್ಚಿಮ ಉತ್ತರ ಪ್ರದೇಶದ ಉಸ್ತುವಾರಿ ವಹಿಸಿದ್ದರು. ಆದರೆ ಈ ಪ್ರದೇಶದಲ್ಲಿ ಕಾಂಗ್ರೆಸ್ ಒಂದು ಸ್ಥಾನವನ್ನು ಗಳಿಸಲೂ ವಿಫಲವಾಗಿತ್ತು. ಸಂಪೂರ್ಣ ಉತ್ತರ ಪ್ರದೇಶದಲ್ಲಿ ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿ ಮಾತ್ರ ರಾಯ್‌ಬರೇಲಿಯಿಂದ ಜಯಗಳಿಸಿದ್ದರು. ಫೆಬ್ರವರಿ 26ರಂದು ಪಾಕಿಸ್ತಾನದ ಬಾಲಕೋಟ್‌ನ ಉಗ್ರರ ತಾಣಗಳ ಮೇಲೆ ಭಾರತೀಯ ವಾಯುಪಡೆ ಬಾಂಬ್ ದಾಳಿ ನಡೆಸಿದ ನಂತರ ಕಾಂಗ್ರೆಸ್‌ನ ಮತದಾರರು ಪಕ್ಷದಿಂದ ದೂರ ಸರಿಯಲು ಆರಂಭಿಸಿದ್ದರು. ಈ ಘಟನೆ ಬಿಜೆಪಿಗೆ ಬಹುದೊಡ್ಡ ಮಟ್ಟದಲ್ಲಿ ಲಾಭವನ್ನು ತಂದುಕೊಟ್ಟಿತು ಎಂದು ನಾಯಕರು ಸಿಂಧ್ಯಾಗೆ ತಿಳಿಸಿದ್ದಾರೆ. ಹೊರಗಿನ ವ್ಯಕ್ತಿಗಳಿಗೆ ಟಿಕೆಟ್ ನೀಡಿದ್ದು ಮತ್ತು ಸಂಘಟನೆಯ ಕೊರತೆಯೂ ಕಾಂಗ್ರೆಸ್ ಸೋಲಿಗೆ ಪ್ರಮುಖ ಕಾರಣವಾಗಿದೆ ಎಂದು ಈ ವೇಳೆ ಸಿಂಧ್ಯಾಗೆ ಪಕ್ಷದ ನಾಯಕರು ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)