varthabharthi


ಬೆಂಗಳೂರು

ಕಸಾಪ ವತಿಯಿಂದ ಗಿರೀಶ್ ಕಾರ್ನಾಡ್‌ ಶ್ರದ್ಧಾಂಜಲಿ ಕಾರ್ಯಕ್ರಮ

ಕಾರ್ನಾಡ್ ಬರಹಗಳಲ್ಲಿ ಸಾರ್ವಜನಿಕ ಅನುಸಂಧಾನ ಕಾಣಬಹುದು: ಪ್ರೊ.ಬರಗೂರು ರಾಮಚಂದ್ರಪ್ಪ

ವಾರ್ತಾ ಭಾರತಿ : 11 Jun, 2019

ಬೆಂಗಳೂರು, ಜೂ.11: ಸಾರ್ವಜನಿಕ ವಲಯದಲ್ಲಿ ಅನುಸಂಧಾನ ಮಾಡುವ ಸಾಧ್ಯತೆ ಹೇಗೆ ಎಂಬುದನ್ನು ಗಿರೀಶ್ ಕಾರ್ನಾಡ್‌ರ ಬರವಣಿಗೆಯಲ್ಲಿ ಕಾಣಬಹುದು ಎಂದು ಹಿರಿಯ ಸಾಹಿತಿ ನಾಡೋಜ ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.

ಮಂಗಳವಾರ ಕಸಾಪದ ವತಿಯಿಂದ ಆಯೋಜಿಸಿದ್ದ ಗಿರೀಶ್ ಕಾರ್ನಾಡ್‌ರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾರ್ನಾಡ್‌ರ ನಾಟಕಗಳು ಹೊಸ ಅಲೆಯನ್ನು ಸೃಷ್ಟಿಸಿ ಸೃಜನಶೀಲತೆಯಿಂದ ತೆರೆದುಕೊಳ್ಳುತ್ತವೆ ಎಂದು ತಿಳಿಸಿದರು.

ಗಿರೀಶ್ ಕಾರ್ನಾಡ್‌ರ ತುಘಲಕ್, ತಲೆದಂಡ ನಾಟಕಗಳು ಚರಿತ್ರೆಯ ಒಳಗಡೆ ತೂರಿ ಅಂದಿನ ಚಾರಿತ್ರಿಕ ಘಟನೆಗಳನ್ನು ಇಂದಿನ ಸಮಕಾಲೀನ ಸಂದರ್ಭದಲ್ಲಿಯೂ ಪ್ರಸ್ತುತಗೊಳ್ಳುವ ಬರವಣಿಗೆಗಳಾಗಿವೆ. ನಾಗಮಂಡಲ, ಯಯಾತಿ ನಾಟಕಗಳು ಚಿಂತನೆಗೆ ಹಚ್ಚುವ ಹೊಸ ಅಲೆಯ ನಾಟಕಗಳು ಎಂದು ಹೇಳಿದರು.

ಕಾರ್ನಾಡ್‌ರದ್ದು ಸರಳ ವ್ಯಕ್ತಿತ್ವವಾಗಿದ್ದು, ಬಹುದೊಡ್ಡ ಆದರ್ಶ ವ್ಯಕ್ತಿಯಾಗಿದ್ದರು. ಸಾಂಸ್ಕೃತಿಕವಾಗಿ ಅವರು ನೀಡಿದ ಕೊಡುಗೆ ಎಂದೆಂದಿಗೂ ನೆನಪಿನಲ್ಲಿ ಉಳಿಯುತ್ತದೆ ಎಂದ ಅವರು, ಕಾರ್ನಾಡ್‌ರಿಗಿದ್ದ ಆತ್ಮೀಯ ಬಳಗ ತೀರಾ ಕಡಿಮೆ. ಆದರೂ ಅವರು ಎದುರು ಸಿಕ್ಕಿದವರನ್ನು ಮಾತನಾಡುವಷ್ಟು ಸರಳ ವ್ಯಕ್ತಿಯಾಗಿದ್ದರು. ಅವರು ಕೊನೆಯವರೆಗೂ ಅತ್ಯಂತ ಸರಳವಾಗಿ ಜೀವಿಸಿದ ಸಜ್ಜನ ವ್ಯಕ್ತಿಯಾಗಿದ್ದಾರೆ ಎಂದು ಬಣ್ಣಿಸಿದರು.

ಜಾತ್ಯತೀತವಾಗಿ, ಧರ್ಮಾತೀತವಾಗಿ ಬದುಕಿದ ಅಪರೂಪದ ವ್ಯಕ್ತಿಗಳಲ್ಲಿ ಕಾರ್ನಾಡ್ ಒಬ್ಬರಾಗಿದ್ದಾರೆ. ಜಾತ್ಯತೀತ ಮೌಲ್ಯಗಳನ್ನು ಎತ್ತಿಹಿಡಿದಿದ್ದಾರೆ. ಅವರು ಸಸ್ಯಾಹಾರಿಯಾಗಿದ್ದರೂ, ಎಂದಿಗೂ ಮತ್ತೊಬ್ಬರ ಆಹಾರ ಪದ್ಧತಿಯ ಬಗ್ಗೆ ಪ್ರಶ್ನಿಸಿದವರಲ್ಲ. ಇನ್ನೊಬ್ಬರ ಆಹಾರ ಸಂಸ್ಕೃತಿಯನ್ನು ಕಸಿದುಕೊಳ್ಳಲು ಮುಂದಾದ ಸಂದರ್ಭದಲ್ಲಿ, ಅದನ್ನು ಪ್ರತಿಭಟಿಸಿ ಕತ್ತಿನಲ್ಲಿ ನಾನೂ ನಗರ ನಕ್ಸಲ್ ಎಂಬ ಫಲಕ ಹಾಕಿಕೊಂಡಿದ್ದರು ಎಂದು ನುಡಿದರು.

ಧಾರವಾಡದಿಂದ ಮದ್ರಾಸ್‌ನಂತರ ಮುಂಬೈ ಕೊನೆಗೆ ಬೆಂಗಳೂರಿಗೆ ಬಂದು ಮತ್ತಷ್ಟು ವಿಕಾಸಗೊಂಡರು. ಚರಿತ್ರೆ ಪರಂಪರೆಯ ಭಾಗವಾಗಿ ಉಳಿದುಕೊಂಡರು. ಸಾಹಿತ್ಯ ಕ್ಷೇತ್ರದಲ್ಲಿ ಅವರ ಸಾಧನೆ, ಕೊಡುಗೆ ನಾಡು ಎಂದೆಂದಿಗೂ ಮರೆಯುವುದಿಲ್ಲ ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ತುಘಲಕ್‌ನನ್ನು ಹುಚ್ಚ ಎಂದು ಬಿಂಬಿಸುತ್ತಿದ್ದ ಕಾಲಘಟ್ಟದಲ್ಲಿ ಅವರ ಬಗ್ಗೆ ಸಂಶೋಧನೆ ಮಾಡಿ, ಅವನ ಪ್ರತಿನಿತ್ಯದ ಸಂಕಷ್ಟಗಳನ್ನು ನಾಟಕದ ಮೂಲಕ ಪರಿಚಯಿಸಿದ ವ್ಯಕ್ತಿ ಕಾರ್ನಾಡ್. ಅವನ ವ್ಯಕ್ತಿತ್ವದ ರಾಜಕಾರಣದ ಮುತ್ಸದ್ದಿತನವನ್ನು ನಿರೀಕ್ಷೆ ಮಾಡದಷ್ಟು ರೀತಿಯಲ್ಲಿ ಹೊಸದಾಗಿ ಸೃಷ್ಟಿಸಿದರು ಎಂದು ತಿಳಿಸಿದರು.

ವ್ಯಕ್ತಿ ಸಂಬಂಧ ಮೀರದಂತೆ ಸಾಮಾಜಿಕ ವ್ಯವಸ್ಥೆಯಲ್ಲಿ ವಿಶ್ವಾಸವಿಟ್ಟುಕೊಂಡು ಬದುಕಿದರು. ಯಾವುದೇ ಕಾರಣಕ್ಕೂ ರಾಜೀ ಮಾಡಿಕೊಳ್ಳಲು ಮುಂದಾಗಲಿಲ್ಲ. ಅಲ್ಲದೆ, ಅವರು ಎಂದೂ ಹಠಕ್ಕೆ ಬಿದ್ದವರಲ್ಲ ಎಂದು ಅವರು ನುಡಿದರು.

ಸಮಾರಂಭದಲ್ಲಿ ಹಿರಿಯ ಸಾಹಿತಿ ಪ್ರೊ.ಚಂಪಾ, ಕರ್ನಾಟಕ ವಿಕಾಸ ರಂಗದ ಪ್ರಧಾನ ಸಂಚಾಲಕ ವ.ಚ.ಚನ್ನೇಗೌಡ, ಕನ್ನಡ ಹೋರಾಟಗಾರ ರಾ.ನಂ.ಚಂದ್ರಶೇಖರ್, ರಾಜ್‌ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಚಳವಳಿಗೊಂದು ಸ್ಪೂರ್ತಿ

ಗಿರೀಶ್ ಕಾರ್ನಾಡ್‌ರು ಚಳವಳಿಯಲ್ಲಿ ಪಾಲ್ಗೊಂಡರೆ ಅಲ್ಲಿದ್ದವರಿಗೆ ಸ್ಪೂರ್ತಿ ಸಿಗುತ್ತಿತ್ತು. ಸಾಮಾನ್ಯ ಚಳವಳಿಗಾರರೊಂದಿಗೆ ಅವರು ಬೆರೆತು ಅನ್ಯಾಯದ ವಿರುದ್ಧ ಧ್ವನಿ ಎತ್ತುತ್ತಿದ್ದರು. ಅಂತಹ ಸಾಹಿತಿಗಳು, ನಾಟಕಕಾರರು, ಚಿಂತಕರು ಸಿಗುವುದು ಅಪರೂಪ.

-ಡಾ.ಕೆ.ಮರುಳಸಿದ್ದಪ್ಪ, ಅಧ್ಯಕ್ಷ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)