varthabharthi

ಬೆಂಗಳೂರು

ಐಎಂಎ ಅಧ್ಯಕ್ಷ ಮನ್ಸೂರ್ ಗೆ ಸಚಿವ ಝಮೀರ್ ಅಹ್ಮದ್ ಒತ್ತಾಯ

"ನನ್ನನ್ನು ಸೇರಿದಂತೆ ಯಾವ ರಾಜಕಾರಣಿಗಳು ಹಣ ಪಡೆದಿದ್ದಾರೆ ಎಂಬುದನ್ನು ಬಹಿರಂಗಪಡಿಸಿ"

ವಾರ್ತಾ ಭಾರತಿ : 11 Jun, 2019

ಬೆಂಗಳೂರು, ಜೂ.11: ಬಡವರು, ಮಧ್ಯಮ ವರ್ಗದವರು ಕಷ್ಟಪಟ್ಟು ಸಂಪಾದನೆ ಮಾಡಿರುವ ಹಣವನ್ನು ಲೂಟಿ ಮಾಡಬೇಡಿ. ನೀವು ಎಲ್ಲೇ ಇದ್ದರೂ ವಾಪಸ್ ಬನ್ನಿ, ಬಡವರಿಗೆ ಕೊಡಬೇಕಿರುವ ಹಣವನ್ನು ಅವರಿಗೆ ಕೊಡುವ ಕೆಲಸವನ್ನು ಮಾಡಿ ಎಂದು ಐಎಂಎ ಸಂಸ್ಥೆಯ ಅಧ್ಯಕ್ಷ ಮುಹಮ್ಮದ್ ಮನ್ಸೂರ್ ಖಾನ್‌ಗೆ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಝಮೀರ್ ಅಹ್ಮದ್ ಖಾನ್ ಮನವಿ ಮಾಡಿದರು.

ಮಂಗಳವಾರ ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆ ನಡೆಸುವಂತೆ ಕೋರಿ ಮುಸ್ಲಿಂ ಮುಖಂಡರ ನಿಯೋಗದೊಂದಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಗೃಹ ಸಚಿವ ಎಂ.ಬಿ.ಪಾಟೀಲ್‌ರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಬಳಿಕ ಅವರು ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ನನ್ನನ್ನು ಸೇರಿದಂತೆ ನಿಮ್ಮ ಬಳಿ ಯಾವ ರಾಜಕಾರಣಿಗಳು, ಅಧಿಕಾರಿಗಳು ಹಣ ಪಡೆದಿದ್ದಾರೆ ಎಂಬುದನ್ನು ಬಹಿರಂಗವಾಗಿ ಹೇಳಿ. ಅವರಿಂದ ಹಣ ವಸೂಲು ಮಾಡಿ, ಅರ್ಹ ಫಲಾನುಭವಿಗಳಿಗೆ ತಲುಪಿಸೋಣ. ಈ ವಿಚಾರದಲ್ಲಿ ಸರಕಾರದಿಂದ ನಿಮಗೆ ಅಗತ್ಯ ಸಹಕಾರ ನೀಡುತ್ತೇವೆ. ದಯವಿಟ್ಟು ಬಡವರನ್ನು ಬೀದಿಗೆ ತಳ್ಳುವ ಕೆಲಸ ಮಾಡಬೇಡಿ ಎಂದು ಅವರು ಕೋರಿದರು.

ಐಎಂಎ ಸಂಸ್ಥೆಯಿಂದ ವಂಚನೆಗೊಳಗಾದ ಬಡವರಿಗೆ ನ್ಯಾಯ ಒದಗಿಸಲು ನಾವು ಬದ್ಧರಾಗಿದ್ದೇವೆ. ಮುಹಮ್ಮದ್ ಮನ್ಸೂರ್ ಖಾನ್ ಹೆಸರಿನಲ್ಲಿರುವ 25 ಆಸ್ತಿಗಳನ್ನು ಗುರುತಿಸಿದ್ದೇವೆ. ಅವರ ಆಡಿಯೋ ಸಂದೇಶದಲ್ಲಿ 33 ಸಾವಿರ ಕ್ಯಾರೆಟ್ ವಜ್ರ, ಚಿನ್ನಭಾರಣ ಇರುವುದಾಗಿ ಹೇಳಿಕೊಂಡಿದ್ದಾರೆ ಎಂದು ಅವರು ತಿಳಿಸಿದರು. ಎಸ್‌ಐಟಿಯಲ್ಲಿ ಒಬ್ಬ ನಿವೃತ್ತ ನ್ಯಾಯಮೂರ್ತಿ, ಆರ್ಥಿಕ, ಕಂದಾಯ ಇಲಾಖೆಯ ಓರ್ವ ಅಧಿಕಾರಿ ಹಾಗೂ ಒಬ್ಬ ಐಪಿಎಸ್ ಅಧಿಕಾರಿಯನ್ನು ಸದಸ್ಯರನ್ನಾಗಿ ಮಾಡಬೇಕು. ಒಂದು ವೇಳೆ ಎಸ್‌ಐಟಿ ತನಿಖೆ ತೃಪ್ತಿಕರವಾಗಿರದಿದ್ದರೆ, ಸಿಬಿಐ ತನಿಖೆಗೂ ಶಿಫಾರಸ್ಸು ಮಾಡುವಂತೆ ಮನವಿ ಮಾಡಿದ್ದೇವೆ ಎಂದು ಅವರು ಹೇಳಿದರು.

ಮೊದಲು ಮನ್ಸೂರ್ ಖಾನ್ ಹಾಗೂ ಐಎಂಎ ಸಂಸ್ಥೆಯ ಆಸ್ತಿಗಳನ್ನು ಜಪ್ತಿ ಮಾಡಬೇಕು. ಬೇನಾಮಿ ಆಸ್ತಿಗಳೂ ಅವರ ಬಳಿಯಿದೆ ಎಂಬ ಮಾಹಿತಿ ಸಿಕ್ಕಿದೆ. ಇದನ್ನು ಮೊದಲು ಸರಕಾರದ ವಶಕ್ಕೆ ಪಡೆದು, ಆನಂತರ ಹೂಡಿಕೆದಾರರಿಗೆ ಯಾವ ರೀತಿಯಲ್ಲಿ ಹಣ ಪಾವತಿಸಬೇಕು ಎಂಬುದರ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.

ಕೇವಲ ನಮ್ಮ ರಾಜ್ಯವಷ್ಟೇ ಅಲ್ಲ, ಮಹಾರಾಷ್ಟ್ರ, ತಮಿಳುನಾಡು, ದಿಲ್ಲಿ, ಕೇರಳ ಸೇರಿದಂತೆ ಇನ್ನಿತರ ರಾಜ್ಯಗಳ ಜನರು ಈ ಸಂಸ್ಥೆಯಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ನಮ್ಮ ರಾಜ್ಯದಲ್ಲಿನ ಎಲ್ಲ ಜಿಲ್ಲೆಗಳಲ್ಲೂ ಹೂಡಿಕೆದಾರರಿದ್ದಾರೆ ಎಂದು ಝಮೀರ್ ಅಹ್ಮದ್ ಖಾನ್ ತಿಳಿಸಿದರು.

ಆದುದರಿಂದ, ಆಯಾ ಜಿಲ್ಲೆ, ತಾಲೂಕಿನ ಜನ ದೂರು ನೀಡಲು ಬೆಂಗಳೂರಿಗೆ ಬರಬೇಕಿಲ್ಲ. ತಮ್ಮ ಸ್ಥಳೀಯ ಪೊಲೀಸ್ ಠಾಣೆಗಳಲ್ಲೆ ದೂರು ನೀಡಲು ವ್ಯವಸ್ಥೆ ಮಾಡುವಂತೆ ನಾವು ಸಲ್ಲಿಸಿದ ಮನವಿಗೆ ಗೃಹ ಸಚಿವರು ಸಹಮತ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಮೊದಲು ಸಿಸಿಬಿ ತನಿಖೆಗೆ ಆದೇಶಿಸಿದ್ದರು. ಆದರೆ, ನಮ್ಮ ಮನವಿ ಮೇರೆಗೆ ಎಸ್‌ಐಟಿ ತನಿಖೆಗೆ ಆದೇಶಿಸಿದ್ದಾರೆ ಎಂದು ಅವರು ಹೇಳಿದರು.

ಸಿಸಿಬಿಗೆ ವಹಿಸಿದ್ದ ಆ್ಯಂಬಿಡೆಂಟ್ ಪ್ರಕರಣದ ಪ್ರಮುಖ ಆರೋಪಿ ಫರೀದ್, ಕೇವಲ ಮೂರು ದಿನಗಳಲ್ಲೆ ಜಾಮೀನು ಪಡೆದು ಪೊಲೀಸರ ಭದ್ರತೆಯಲ್ಲಿ ಹೊರಗೆ ಓಡಾಡುತ್ತಿದ್ದಾನೆ. ಆದುದರಿಂದ, ನಾವು ಸಿಸಿಬಿ ತನಿಖೆ ಬೇಡ, ಎಸ್‌ಐಟಿ ತನಿಖೆ ಮಾಡಿ ಎಂದು ಮನವಿ ಸಲ್ಲಿಸಿದ್ದೇವೆ ಎಂದು ಝಮೀರ್ ಅಹ್ಮದ್ ಖಾನ್ ತಿಳಿಸಿದರು.

ಮನ್ಸೂರ್ ಖಾನ್ ಆತ್ಮಹತ್ಯೆ ಮಾಡಿಕೊಂಡಿಲ್ಲ. ಒಂದು ವೇಳೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಈವರೆಗೆ ಅವರ ಮೃತದೇಹ ಸಿಗಬೇಕಿತ್ತು. ಪೊಲೀಸರು ಎಲ್ಲ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ. ಆದಷ್ಟು ಶೀಘ್ರವೇ ಸತ್ಯಾಂಶ ಬಹಿರಂಗವಾಗುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಐಎಂಎ ವ್ಯವಹಾರಕ್ಕೆ ಆರ್‌ಬಿಐ ಅನುಮತಿ ಇದೆ, ಜಾರಿ ನಿರ್ದೇಶನಾಲಯದ ಅನುಮತಿ ಇದೆ ಎಂದು ಹೇಳಿಕೊಂಡಿದ್ದರು. ಯಾವ ರೀತಿಯಲ್ಲಿ ಇವರ ವ್ಯವಹಾರಕ್ಕೆ ಅನುಮತಿ ಸಿಕ್ಕಿದೆ ಎಂಬುದು ಗೊತ್ತಿಲ್ಲ. ಬಡವರು, ಮಧ್ಯಮ ವರ್ಗದ ಜನರು ಅನಕ್ಷರಸ್ಥರು ಹಣದ ಆಸೆಗಾಗಿ ಹೂಡಿಕೆ ಮಾಡಿ, ಪರದಾಡುತ್ತಿದ್ದಾರೆ ಎಂದು ಝಮೀರ್ ಅಹ್ಮದ್ ಖಾನ್ ತಿಳಿಸಿದರು. ಆಡಿಯೋದಲ್ಲಿ ನೇರವಾಗಿ ನಮ್ಮ ಹಿರಿಯ ನಾಯಕ ರೋಷನ್ ಬೇಗ್ ಅವರ ಹೆಸರನ್ನು ಉಲ್ಲೇಖಿಸಿ, ಅವರು 400 ಕೋಟಿ ರೂ.ಪಡೆದಿದ್ದಾರೆ ಎಂದು ಆಪಾದನೆ ಮಾಡಲಾಗಿದೆ. ಇದರ ಹಿಂದೆ ಷಡ್ಯಂತ್ರ ಇರಬಹುದು. ಆಡಿಯೋ ಕುರಿತು ಸತ್ಯಾಸತ್ಯತೆ ಹೊರಗೆ ಬಂದಾಗ ಈ ಎಲ್ಲ ವಿಷಯಗಳು ಸ್ಪಷ್ಟವಾಗುತ್ತವೆ ಎಂದು ಅವರು ಹೇಳಿದರು.

ನಮ್ಮ ನಿಯೋಗದಲ್ಲಿ ವಿಧಾನಪರಿಷತ್ ಸದಸ್ಯರಾದ ನಸೀರ್ ಅಹ್ಮದ್, ರಿಝ್ವಾನ್ ಅರ್ಶದ್, ಶಾಸಕ ಎನ್.ಎ.ಹಾರೀಸ್, ಉದ್ಯಮಿ ಫಿರೋಝ್ ಅಬ್ದುಲ್ಲಾ ಸೇರಿದಂತೆ ಇನ್ನಿತರರ ಮುಖಂಡರಿದ್ದರು ಎಂದು ಝಮೀರ್ ಅಹ್ಮದ್ ಖಾನ್ ತಿಳಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)