varthabharthi

ರಾಷ್ಟ್ರೀಯ

ಚಂಡಮಾರುತ ‘ವಾಯು’ ಅಪ್ಪಳಿಸುವ ಸಾಧ್ಯತೆ: ಗುಜರಾತ್‌ನಲ್ಲಿ ಹೈ ಅಲರ್ಟ್

ವಾರ್ತಾ ಭಾರತಿ : 11 Jun, 2019

ಅಹ್ಮದಾಬಾದ್, ಜೂ. 11: ರಾಜ್ಯದ ವೆರಾವಲ್ ಸಮೀಪದ ಕರಾವಳಿಗೆ ಗುರುವಾರ ಚಂಡಮಾರುತ ‘ವಾಯು’ ಅಪ್ಪಳಿಸಲಿದ್ದು, ಗುಜರಾತ್ ಸರಕಾರ ಮುನ್ನೆಚ್ಚರಿಕೆ ನೀಡಿದೆ.

ಕರಾವಳಿ ವಲಯದಲ್ಲಿ ವಾಸಿಸುತ್ತಿರುವವರನ್ನು ಸುರಕ್ಷಿತ ಸ್ಥಳಗಳಿಗೆ ವರ್ಗಾಯಿಸಲಾಗುವುದು ಎಂದು ಮುಖ್ಯಮಂತ್ರಿ ವಿಜಯ್ ರೂಪಾನಿ ಮಂಗಳವಾರ ಹೇಳಿದ್ದಾರೆ. ‘ವಾಯು’ ವೆರಾವಲ್ ಕರವಾಳಿಯ ದಕ್ಷಿಣಕ್ಕೆ 650 ಕಿ.ಮೀ. ಸುತಮುತ್ತ ಇದೆ. ಇದು ಇನ್ನಷ್ಟು ತೀವ್ರಗೊಂಡು ಮುಂದಿನ 12 ಗಂಟೆಗಳಲ್ಲಿ ಗಂಭೀರ ಚಂಡಮಾರುತವಾಗುವ ಸಾಧ್ಯತೆ ಇದೆ. ಜೂನ್ 13ರಂದು ಇದು ರಾಜ್ಯದ ಕರಾವಳಿಗೆ ಅಪ್ಪಳಿಸಲಿದೆ ಎಂದು ಇತ್ತೀಚೆಗಿನ ಹವಾಮಾನ ವರದಿ ಹೇಳಿದೆ.

ಕಚ್‌ನಿಂದ ಆರಂಭವಾಗಿ ಗುಜರಾತ್‌ನ ದಕ್ಷಿಣದ ವರೆಗೆ ಸಂಪೂರ್ಣ ಕರಾವಳಿಯಲ್ಲಿ ಮುನ್ನೆಚ್ಚರಿಕೆ ವಿಧಿಸಲಾಗಿದೆ ಎಂದು ರೂಪಾನಿ ಗಾಂಧಿನಗರದಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಇತ್ತೀಚೆಗೆ ಗುಜರಾತ್‌ನಲ್ಲಿ ಫನಿ ಚಂಡಮಾರುತ ಅಪ್ಪಳಿಸಿದ ಸಂದರ್ಭ ತೆಗೆದುಕೊಳ್ಳಲಾದ ವಿಪತ್ತು ನಿರ್ವಹಣಾ ತಂತ್ರಗಳನ್ನು ಅನುಸರಿಸಲು ಹಾಗೂ ಅನುಷ್ಠಾನಗೊಳಿಸಲು ಒಡಿಶಾ ಸರಕಾರದೊಂದಿಗೆ ಸಂಪರ್ಕ ಇರಿಸಿಕೊಂಡಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಾವು ಸಂಬಂಧಿತ ಎಲ್ಲ ಉದ್ಯೋಗಿಗಳ ರಜೆಯನ್ನು ರದ್ದುಗೊಳಿಸಿದ್ದೇವೆ ಹಾಗೂ ಕರ್ತವ್ಯಕ್ಕೆ ಹಾಜರಾಗುವಂತೆ ವಿನಂತಿಸಿದ್ದೇವೆ. ನಾಳೆ ಸಂಪುಟ ಸಭೆಯ ಬಳಿಕ ಎಲ್ಲ ಸಚಿವರು ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆಗೆ ವಿವಿಧ ಜಿಲ್ಲೆಗಳಿಗೆ ತೆರಳಲಿದ್ದಾರೆ ಎಂದು ಅವರು ಹೇಳಿದರು. ‘‘ಜೂನ್ 13 ಹಾಗೂ 14ರಂದು ನಮಗೆ ನಿರ್ಣಾಯಕ. ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆಗೆ ನಾವು ಸೇನೆ, ಎನ್‌ಡಿಆರ್‌ಎಫ್, ಗಡಿ ರಕ್ಷಣಾ ಪಡೆ ಹಾಗೂ ಇತರ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಮಾನವ ಜೀವ ಹಾನಿ ತಪ್ಪಿಸಲು ಕರಾವಳಿ ಪ್ರದೇಶದ ಜನರನ್ನು ನಾಳೆ ಸುರಕ್ಷಿತ ಪ್ರದೇಶಗಳಿಗೆ ವರ್ಗಾಯಿಸಲಾಗುವುದು’’ ಎಂದು ರೂಪಾನಿ ತಿಳಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)