varthabharthi

ರಾಷ್ಟ್ರೀಯ

ಪ.ಬಂಗಾಳ: ಮರಗಳಿಂದ ನೇತಾಡುತ್ತಿದ್ದ ಬಿಜೆಪಿ, ಆರೆಸ್ಸೆಸ್ ಕಾರ್ಯಕರ್ತರ ಶವಗಳು ಪತ್ತೆ

ವಾರ್ತಾ ಭಾರತಿ : 11 Jun, 2019

 ಕೋಲ್ಕತಾ,ಜೂ.11: ರವಿವಾರ ಹಿರಿಯ ಆರೆಸ್ಸೆಸ್ ಸದಸ್ಯನೋರ್ವನ ಶವವು ಅಟ್ಚಟಾ ಗ್ರಾಮದ ಮರವೊಂದರಲ್ಲಿ ತೂಗಾಡುತ್ತಿದ್ದ ಸ್ಥಿತಿಯಲ್ಲಿ ಪತ್ತೆಯಾದ ಬೆನ್ನಿಗೇ ಸೋಮವಾರ ಹೌರಾದ ಅಮ್ಟಾದ ಸರ್ಪೋಟಾ ಗ್ರಾಮದ ಮರವೊಂದರಲ್ಲಿ ಬಿಜೆಪಿ ಕಾರ್ಯಕರ್ತ ಸಮತುಲ್ ದೋಲುಯಿ ಎಂಬಾತನ ಶವವು ತೂಗಾಡುತ್ತಿದ್ದುದು ಪತ್ತೆಯಾಗಿದೆ.

 ಇದರೊಂದಿಗೆ ರಾಜ್ಯದಲ್ಲಿ ತೃಣಮೂಲ ಮತ್ತು ಬಿಜೆಪಿ ನಡುವೆ ರಾಜಕೀಯ ಹಿಂಸಾಚಾರ ಮತ್ತು ಆರೋಪ-ಪ್ರತ್ಯಾರೋಪಗಳು ಕಾವು ಪಡೆದುಕೊಳ್ಳುತ್ತಿವೆ. ದೋಲುಯಿ ಹತ್ಯೆಯ ಹಿಂದೆ ತೃಣಮೂಲ ಕೈವಾಡವಿದೆ ಎಂದು ಆತನ ಕುಟುಂಬ ಮತ್ತು ಬಿಜೆಪಿ ನಾಯಕರು ಆರೋಪಿಸಿದ್ದಾರೆ.

ದೋಲುಯಿ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿದ್ದ. ಲೋಕಸಭಾ ಚುನಾವಣೆಯಲ್ಲಿ ತನ್ನ ಬೂತ್‌ನಲ್ಲಿ ಪಕ್ಷಕ್ಕೆ ಹೆಚ್ಚಿನ ಮತಗಳನ್ನು ದೊರಕಿಸಿಕೊಟ್ಟಿದ್ದ. ತನ್ನ ಬಡಾವಣೆಯಲ್ಲಿ ಜೈ ಶ್ರೀರಾಮ ರ್ಯಾಲಿಗಳನ್ನು ಆಯೋಜಿಸಿದ ಬಳಿಕ ಆತನಿಗೆ ಜೀವ ಬೆದರಿಕೆಗಳು ಬಂದಿದ್ದವು. ಚುನಾವಣೆಯ ಬೆನ್ನಲ್ಲೇ ತೃಣಮೂಲ ಬೆಂಬಲಿತ ಸಮಾಜವಿರೋಧಿಗಳು ಆತನ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದರು ಎಂದು ಬಿಜೆಪಿಯ ಹೌರಾ(ಗ್ರಾಮೀಣ) ಘಟಕದ ಅಧ್ಯಕ್ಷ ಅನುಪಮ್ ಮಲಿಕ್ ಹೇಳಿದರು.

ದೋಲುಯಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸುತ್ತಿದ್ದಾಗ ಕೆಲವು ದುಷ್ಕರ್ಮಿಗಳು ಅದನ್ನು ಅಪಹರಿಸಲು ಪ್ರಯತ್ನಿಸಿದ್ದರು. ಇದನ್ನು ಗ್ರಾಮಸ್ಥರು ಪ್ರತಿರೋಧಿಸಿದ್ದು,ಜಿಲ್ಲಾಡಳಿತವು ಬಿಗು ಬಂದೋಬಸ್ತ್ ಏರ್ಪಡಿಸಿದೆ.

ರವಿವಾರ ಹಿರಿಯ ಆರೆಸ್ಸೆಸ್ ಕಾರ್ಯಕರ್ತ ಸ್ವದೇಶ ಮನ್ನಾ ಅವರ ಶವ ಅಟ್ಚಟಾ ಗ್ರಾಮದ ಮರವೊಂದರಲ್ಲಿ ನೇತಾಡುತ್ತಿದ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮನ್ನಾ ಕೂಡ ಕಳೆದ ಕೆಲವು ದಿನಗಳಿಂದ ಜೈ ಶ್ರೀರಾಮ ರ್ಯಾಲಿಗಳನ್ನು ನಡೆಸುತ್ತಿದ್ದರು.

ಈ ಎರಡೂ ಪ್ರಕರಣಗಳಲ್ಲಿ ತೃಣಮೂಲ ಬೆಂಬಲಿಗರು ನಮ್ಮ ಪಕ್ಷದ ಕಾರ್ಯಕರ್ತರನ್ನು ಹತ್ಯೆಗೈದಿದ್ದಾರೆ ಎಂದು ಮಲಿಕ್ ಆರೋಪಿಸಿದರು.

ಈ ಹತ್ಯೆಗಳು ಪುರುಲಿಯಾದಲ್ಲಿ 2018ರ ಪಂಚಾಯತ್ ಚುನಾವಣೆಗಳಿಗೆ ಮುನ್ನ ನಡೆದಿದ್ದ ಬಿಜೆಪಿ ಕಾರ್ಯಕರ್ತರ ಇಂತಹುದೇ ಹತ್ಯೆಗಳನ್ನು ನೆನಪಿಸಿವೆ. ಆದರೆ ಪುರುಲಿಯಾದಂತೆ ದೋಲುಯಿಯ ಶವಕ್ಕೆ ಯಾವುದೇ ಪೋಸ್ಟರ್‌ನ್ನು ಅಂಟಿಸಿರಲಿಲ್ಲ.

ಈ ಪ್ರಕರಣಗಳಲ್ಲಿ ತನ್ನ ಪಕ್ಷದ ಕಾರ್ಯಕರ್ತರ ಪಾತ್ರವನ್ನು ತೃಣಮೂಲ ಶಾಸಕ ಪುಲಕ್ ರಾಯ್ ನಿರಾಕರಿಸಿದ್ದ್ದಾರೆ.

ಸೋದಪುರದಲ್ಲಿ ಪ್ರತ್ಯೇಕ ಘಟನೆಯಲ್ಲಿ ಶಂಕಿತ ತೃಣಮೂಲ ಕಾರ್ಮಿಕ ಒಕ್ಕೂಟದ ಸದಸ್ಯರು ಇಬ್ಬರು ಭದ್ರತಾ ಸಿಬ್ಬಂದಿಗಳನ್ನು ಕಬ್ಬಿಣದ ಸರಳುಗಳಿಂದ ಥಳಿಸಿದ್ದಾರೆ. ಅವರಿಬ್ಬರೂ ಬಿಜೆಪಿ ಅಧೀನದಲ್ಲಿ ಪ್ರತ್ಯೇಕ ಕಾರ್ಮಿಕ ಒಕ್ಕೂಟವನ್ನು ರಚಿಸಲು ಯತ್ನಿಸಿದ್ದರು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು,ಈ ಬಗ್ಗೆ ಪೊಲೀಸ್ ದೂರು ದಾಖಲಾಗಿದೆ. ಎರಡು ದಿನಗಳ ಹಿಂದೆ ಸಂದೇಶಖಾಲಿಯಲ್ಲಿ ನಡೆದ ಹತ್ಯೆಗಳನ್ನು ಪ್ರತಿಭಟಿಸಿ ಬಿಜೆಪಿಯು ಮಂಗಳವಾರ 12 ಗಂಟೆಗಳ ದಕ್ಷಿಣ 24 ಪರಗಣಗಳ ಜಿಲ್ಲಾ ಬಂದ್‌ಗೆ ಕರೆ ನೀಡಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)