varthabharthi

ಕರ್ನಾಟಕ

ಮೂಡಬಿದಿರೆ ಮಾರುಕಟ್ಟೆ ಕಟ್ಟಡ ನೆಲಸಮ: ನೂತನ ಕಟ್ಟಡ ನಿರ್ಮಾಣಕ್ಕೆ ಮಧ್ಯಂತರ ತಡೆ ನೀಡಿದ ಹೈಕೋರ್ಟ್

ವಾರ್ತಾ ಭಾರತಿ : 11 Jun, 2019

ಬೆಂಗಳೂರು, ಜೂ.11: ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯಲ್ಲಿ ಪ್ರಾಚೀನ ಚೌಟರ ಅರಮನೆ ಸಮೀಪ ಹಳೆ ಮಾರುಕಟ್ಟೆ ಕಟ್ಟಡ ನೆಲಸಮ ಮಾಡಿ ಹೊಸ ಕಟ್ಟಡ ನಿರ್ಮಿಸಲು ನಗರ ಸಭೆ ಮುಂದಾಗಿರುವ ಕ್ರಮಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

ನಗರಸಭೆಯ ಕ್ರಮ ಪ್ರಶ್ನಿಸಿ ಜೇಸನ್ ಮಾರ್ಷಲ್ ನವಾರೇಸ್ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಎಚ್.ಟಿ.ನರೇಂದ್ರಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಚೌಟರ ಅರಮನೆ ಸಮೀಪದ ಹಳೆ ಮಾರುಕಟ್ಟೆಯನ್ನು ಸರ್ವೇ ಮಾಡಿ, ವರದಿ ನೀಡಬೇಕೆಂದು ನ್ಯಾಯಪೀಠವು ನಿರ್ದೇಶನ ನೀಡಿತು.

ಮೂಡಬಿದಿರೆಯಲ್ಲಿ ಪುರಾತನವಾದ ಚೌಟರ ಅರಮನೆ ಇದ್ದು, ಅದನ್ನು ಸ್ಮಾರಕವಾಗಿ ಪುರಾತತ್ವ ಇಲಾಖೆ ಸಂರಕ್ಷಿತ ಸ್ಮಾರಕ ಎಂದು ಘೋಷಿಸಿದೆ. ಪುರಾತತ್ವ ಸ್ಮಾರಕ ಸಂರಕ್ಷಣಾ ನಿಯಮಗಳ ಪ್ರಕಾರ ಪ್ರಾಚೀನ ಸ್ಮಾರಕಗಳ ಸುತ್ತಲಿನ ಸಂರಕ್ಷಿತ ಪ್ರದೇಶದಿಂದ 200 ಮೀಟರ್ ಒಳಗೆ ಯಾವುದೇ ಕಟ್ಟಡ ನಿರ್ಮಿಸುವಂತಿಲ್ಲ. ಆದರೆ, ಈ ಚೌಟರ ಅರಮನೆಯ 200 ಮೀಟರ್ ಮೂಡಬಿದಿರೆ ನಗರಸಭೆಗೆ ಸೇರಿದ 100 ವರ್ಷಕ್ಕೂ ಹಳೆಯ ಮಾರುಕಟ್ಟೆ ಕಟ್ಟಡ ಇದೆ. ಅದನ್ನು ಸದ್ಯ ನೆಲಸಮ ಮಾಡಿ ಹೊಸ ಕಟ್ಟಡ ನಿರ್ಮಿಸಲು ನಗರ ಸಭೆ ಮುಂದಾಗಿದೆ. ಈಗಾಗಲೇ ಕಾಮಗಾರಿಗೆ ಗುತ್ತಿಗೆದಾರದಿಂದ ಟೆಂಡರ್ ಕೂಡ ಆಹ್ವಾನಿಸಲಾಗಿದೆ. ಒಂದು ವೇಳೆ ಈ ಜಾಗದಲ್ಲಿ ಹೊಸ ಕಟ್ಟಡ ನಿರ್ಮಾಣ ಆದ ಪಕ್ಷದಲ್ಲಿ ಈ ಸ್ಮಾರಕಕ್ಕೆ ಧಕ್ಕೆಯಾಗುವ ಸಾಧ್ಯತೆ ಇದೆ. ಹೀಗಾಗಿ, ಮಾರುಕಟ್ಟೆ ನೆಲಸಮ ಮಾಡಿ ಹೊಸ ಕಟ್ಟಡ ನಿರ್ಮಾಣ ಮಾಡಬಾರದು ಎಂದು ಅರ್ಜಿಯಲ್ಲಿ ಕೋರಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)