varthabharthi

ನಿಮ್ಮ ಅಂಕಣ

ಸಾವನ್ನೂ ಸಂಭ್ರಮಿಸುವ ಅಮಾನವೀಯತೆ!

ವಾರ್ತಾ ಭಾರತಿ : 11 Jun, 2019
ವಿಜಯ್‌ಕುಮಾರ್ ಎಚ್. ಕೆ. ಶಕ್ತಿನಗರ, ರಾಯಚೂರು

ಮಾನ್ಯರೇ,

ಕನ್ನಡ ನಾಟಕಲೋಕದ ಅನರ್ಘ್ಯ ರತ್ನ, ಖ್ಯಾತ ಸಾಹಿತಿ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಲೇಖಕ ಗಿರೀಶ್ ಕಾರ್ನಾಡ್ ಮೊನ್ನೆ ಇಹಲೋಕದ ಯಾತ್ರೆ ಮುಗಿಸಿದ್ದಾರೆ. ಆದರೆ, ಯು.ಆರ್. ಅನಂತಮೂರ್ತಿ ಸಾವನ್ನಪ್ಪಿದಾಗ ಪಟಾಕಿ ಸಿಡಿಸಿ ಸಂಭ್ರಮಿಸಿದ ಅದೇ ಮನಸ್ಥಿತಿಗಳು ಇಂದು ಗಿರೀಶ್ ಕಾರ್ನಾಡ್‌ರ ಸಾವನ್ನೂ ಸಂಭ್ರಮಿ ಸುತ್ತಿವೆ. ಇಂತಹ ಹೀನ ಕೃತ್ಯಗಳಿಗೆ ಸಾಮಾಜಿಕ ಜಾಲತಾಣಗಳು ವೇದಿಕೆಯಾಗಿರುವುದು ನಿಜಕ್ಕೂ ವಿಷಾದನೀಯ ಸಂಗತಿ.

ವ್ಯಕ್ತಿ ಯಾರೇ ಆಗಿರಲಿ ಅವರ ಸಾವನ್ನು ಸಂಭ್ರಮಿಸುವುದು ಪೈಶಾಚಿಕ ಮನಸ್ಥಿತಿ. ಆದರೆ, ಇಂದು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಡೆ ಅಂತಹ ಮನಸ್ಥಿತಿಗಳೇ ತಾಂಡವವಾಡುತ್ತಿವೆ. ಕೆಲವರು ಕಾರ್ನಾಡ್ ಸಾವನ್ನಪ್ಪಿರುವುದು ಒಳ್ಳೆಯ ಸುದ್ದಿ ಎಂದರೆ, ಮತ್ತೆ ಕೆಲವರು ಅವರ ವಿರುದ್ಧ ಅಸಂಬದ್ಧ ಹಾಗೂ ಅವಾಚ್ಯ ಪದಗಳನ್ನು ಬಳಕೆ ಮಾಡುವ ಮೂಲಕ ಕಾರ್ನಾಡ್‌ರನ್ನು ನಿಂದಿಸಿದ್ದಾರೆ. ಅಲ್ಲದೆ ಅವರ ಸಾವನ್ನು ಸಂಭ್ರಮಿಸಿದ್ದಾರೆ. ಜ್ಞಾನಪೀಠ ಪುರಸ್ಕೃತ ಸಾಹಿತಿ ಹಾಗೂ ವಿಚಾರವಾದಿ ಯು.ಆರ್. ಅನಂತಮೂರ್ತಿ ಸಾವನ್ನಪ್ಪಿದ್ದ ಸಂದರ್ಭದಲ್ಲೂ ಈ ಗುಂಪು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಸದ್ದು ಮಾಡಿತ್ತು. ಸಂಭ್ರಮಾಚರಣೆಗೆ ಇಳಿದಿತ್ತು. ಆದರೆ, ಆಗ ಪೊಲೀಸ್ ಇಲಾಖೆ ಈ ಕುರಿತು ಕ್ರಮ ಜರುಗಿಸಬೇಕು ಎಂಬ ಕೂಗು ಕೇಳಿಬಂದರೂ ಇಲಾಖೆಯಾಗಲಿ, ಸರಕಾರವಾಗಲಿ ಈ ಕುರಿತು ಗಂಭೀರವಾಗಿ ಚಿಂತಿಸಿರಲಿಲ್ಲ. ಪರಿಣಾಮ ಸಾವನ್ನು ಗೇಲಿಮಾಡಿ ಸಂಭ್ರಮಿಸುತ್ತಿರುವವರ ಸಂಖ್ಯೆ ಅಧಿಕವಾಗುತ್ತಲೇ ಇದೆ. ಇಂತಹವರ ವಿರುದ್ಧ ಕ್ರಮ ಜರುಗಿಸಬೇಕು ಎಂಬ ಕೂಗು ಮತ್ತೆ ಮತ್ತೆ ಕೇಳಿ ಬರುತ್ತಿದೆ. ಇನ್ನಾದರೂ ಪೊಲೀಸ್ ಇಲಾಖೆ ಹಾಗೂ ಆಡಳಿತರೂಢ ಸರಕಾರ ಸಾವನ್ನು ಸಂಭ್ರಮಿಸುವ ಇಂತಹ ಜನರ ವಿರುದ್ಧ ಕ್ರಮ ಜರುಗಿಸಬೇಕಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)