varthabharthi

ವೈವಿಧ್ಯ

ಗಾಂಧಿ ಕಗ್ಗೊಲೆ: ಕಾರಣ - ಪರಿಣಾಮ

ಜನರನ್ನು ಮರುಳುಗೊಳಿಸುವ ದಾರಿ ಕಂಡುಕೊಂಡರು!

ವಾರ್ತಾ ಭಾರತಿ : 12 Jun, 2019
ಕೋ. ಚೆನ್ನಬಸಪ್ಪ

ಭಾಗ-38

ರಾಮನಾಮದ ಮಹಿಮೆ ರಾಮಭಕ್ತರಿಗಷ್ಟೇ ಅಲ್ಲದೆ ಇತರ ಶೂದ್ರ, ದರಿದ್ರರಿಗೂ ಕಾಣಿಸತೊಡಗಿತು. ಅದರ ಆಕರ್ಷಣೆ ಅವರನ್ನು ಸಂಘಪರಿವಾರದ ಕಡೆ ಕಿವಿಗೊಡುವಂತೆ, ಅವರತ್ತ ವಾಲುವ ಲಕ್ಷಣಗಳು ಕಾಣತೊಡಗಿದವು. ಈ ಉಪಾಯ ‘ಕ್ಲಿಕ್’ ಆಗುವಂತೆ ಕಾಣಿಸಿತು! ಆಗ ಎಲ್.ಕೆ.ಅಡ್ವಾಣಿಯ ರಥಯಾತ್ರೆ ಕನ್ಯಾಕುಮಾರಿಯಿಂದ ಅಯೋಧ್ಯೆಯವರೆಗೆ ಮೆರವಣಿಗೆ ಹೊರಟಿತು. ಧನುರ್ಧಾರಿ ಶ್ರೀರಾಮ ಬಿಲ್ಲಿನ ಹೆದೆ ಏರಿಸಿ ಯುದ್ಧ ಸನ್ನದ್ಧನಾದವನ ಭಂಗಿಯಲ್ಲಿ ನಿಂತ ದಶರಥಾತ್ಮಜ ಮೆರವಣಿಗೆಯ ರಥವೇರಿದ.

 ಸಂಘಪರಿವಾರದ ಅದೃಷ್ಟವೊ, ಭಾರತದ ದುರದೃಷ್ಟವೊ 1969ರಲ್ಲಿ ಕಾಂಗ್ರೆಸ್ ಇಬ್ಭಾಗವಾಗಿ ಇಂದಿರಾ ಗಾಂಧಿ ಕೇಂದ್ರದಲ್ಲಿ ಅಲ್ಪಸಂಖ್ಯಾತ ಸರಕಾರವನ್ನು ರಚಿಸಿದ ನಂತರ ಈ ದೇಶಕ್ಕೆ ಪ್ರಥಮ ವಿಪತ್ತು ಎದುರಾಯಿತು. ಆ ಕಾಲಾವಧಿಯಲ್ಲಿ ಪೂರ್ವ ಪಾಕಿಸ್ತಾನವೆಂದು ಹೆಸರಿದ್ದ ಪೂರ್ವ ಬಂಗಾಳ ಪಾಕಿಸ್ತಾನದಿಂದ ಬಿಡುಗಡೆ ಪಡೆಯಲು ಬಾಂಗ್ಲಾ ಮುಕ್ತಿ ಮೋರ್ಚಾ ನೇತೃತ್ವದಲ್ಲಿ ಸ್ವಾತಂತ್ರ ಸಂಗ್ರಾಮ ಹೂಡಿದ್ದು ಆ ಸಂಗ್ರಾಮಕ್ಕೆ ಇಂದಿರಾ ಗಾಂಧಿ ಸರಕಾರ ಸಹಾಯ ಮಾಡಿ ಸ್ವತಂತ್ರ ಬಾಂಗ್ಲಾದೇಶ ಸ್ಥಾಪನೆಗೆ ನೆರವಾದದ್ದು ಭಾರತ ಇಬ್ಭಾಗವಾದದ್ದರಿಂದ ದುಃಖಕ್ರಾಂತರಾಗಿ ಕುಪಿತರಾಗಿದ್ದ ಪಾಕಿಸ್ತಾನದ ಅಸ್ತಿತ್ವವನ್ನು ವಿರೋಧಿಸುತ್ತಿದ್ದ ‘ಹಿಂದೂ ರಾಷ್ಟ್ರಭಕ್ತ’ರಿಗೆ (ಆರೆಸ್ಸೆಸ್ ಸರಸಂಘ ಚಾಲಕ ಗುರೂಜಿಯ ಶಿಷ್ಯರಿಗೆ) ಅತೀವ ಸಂತೋಷವನ್ನುಂಟು ಮಾಡಿತು. ಪೂರ್ವ ಪಾಕಿಸ್ತಾನ ಭೂಪಟದಿಂದ ಅಳಿಸಲು ನೆರವಾದ ಇಂದಿರಾ ಗಾಂಧಿಯನ್ನು ಸಂಘಪರಿವಾರ ‘ದುರ್ಗೆ’, ‘ಚಂಡಿ ಚಾಮುಂಡಿ’ ಎಂದು ಮುಂತಾಗಿ ಹಾಡಿ ಹೊಗಳಿ ಆಕಾಶಕ್ಕೆತ್ತಿ ಕೊಂಡಾಡಿತು! ತನ್ನ ಶಕ್ತಿ ಸಾಮರ್ಥ್ಯದ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಇಂದಿರಾ ಗಾಂಧಿ ಲೋಕಸಭೆಯನ್ನು ವಿಸರ್ಜಿಸಿ ಮಧ್ಯಂತರ ಚುನಾವಣೆ ನಡೆಸಿ ಪ್ರಚಂಡ ಬಹುಮತದಿಂದ ಗೆದ್ದು ಬಂದು ತಮ್ಮ ಗದ್ದುಗೆಯನ್ನು ಭದ್ರಪಡಿಸಿಕೊಂಡರು. ಆಗ ಎರಗಿ ಬಂತು ಭಾರತಕ್ಕೆ ಮತ್ತೊಂದು ವಿಪತ್ತು. ಅಧಿಕಾರವನ್ನು ತನ್ನ ಮುಷ್ಟಿಯಲ್ಲಿ ಭದ್ರವಾಗಿ ಹಿಡಿದುಕೊಂಡ ಮೇಲೆ ಭ್ರಷ್ಟಾಚಾರ, ಸ್ವಜನ ಮತ್ತು ತನ್ನ ಮಕ್ಕಳ ಅಭ್ಯುದಯಾಕಾಂಕ್ಷೆ ಅಂಕೆಯಿಲ್ಲದೆ ಬೆಳೆಯಿತು. ಅವರ ಚುನಾವಣೆಯನ್ನು ಪ್ರಶ್ನಿಸಿ ಅಲಹಾಬಾದ್‌ಉಚ್ಚ ನ್ಯಾಯಾಲಯದಲ್ಲಿ ರಾಜನಾರಾಯಣ ಸಲ್ಲಿಸಿದ್ದ ಚುನಾವಣಾ ಅರ್ಜಿ ಊರ್ಜಿತವಾಗಿ ನ್ಯಾ.ಮೂ.ಜಗಮೋಹನ ಸಿಂಗ್ ಕೊಟ್ಟ ತೀರ್ಪು, ತುರ್ತು ಪರಿಸ್ಥಿತಿಯನ್ನು ಇಂದಿರಾ ಗಾಂಧಿ ಹೇರುವುದರಲ್ಲಿ ಭೀಕರ ರೂಪ ತಾಳಿತು. ಲೋಕನಾಯಕ ಜಯಪ್ರಕಾಶ್ ನಾರಾಯಣ್, ತಮ್ಮ ಸರಕಾರದಲ್ಲಿಯೇ ಮಂತ್ರಿಯಾಗಿದ್ದ ಮೊರಾರ್ಜಿ ದೇಸಾಯಿ, ಜನಸಂಘಿ ವಾಜಪೇಯಿ ಮುಂತಾದ ಮುಖಂಡರನ್ನು ವಿಚಾರಣೆ ಇಲ್ಲದೆ ತುರಂಗಕ್ಕೆ ತಳ್ಳಿದ ಇಂದಿರಾ ಗಾಂಧಿಯ ಸರ್ವಾಧಿಕಾರಿ ಆಡಳಿತ ನಮ್ಮ ದೇಶಕ್ಕೆ ತಟ್ಟಿದ ಮೂರನೇ ವಿಪತ್ತು. ಸಂಘಪರಿವಾರದ ಉನ್ನತಿಗೆ ಹೆಬ್ಬಾಗಿಲು ಹಾರುಹೊಡೆದ ಮಹಾದುರಂತ! ತುರ್ತುಪರಿಸ್ಥಿತಿಯ ಕಾಲಕ್ಕೆ ಇಡೀ ದೇಶವೇ ಒಂದು ಸೆರೆಮನೆಯಾಗಿ ತಲ್ಲಣಿಸಿತ್ತು. ಆಗ ಆರೆಸ್ಸೆಸ್ ಮತ್ತು ಸಂಘಪರಿವಾರ ದೇಶವನ್ನು ಅದರಿಂದ ಪಾರುಮಾಡಲು ‘ದ್ವಿತೀಯ ಸ್ವಾತಂತ್ರ ಚಳವಳಿ’ ಎಂಬ ಹೆಸರಿನಲ್ಲಿ ತುರ್ತು ಪರಿಸ್ಥಿತಿಯನ್ನು ವಿರೋಧಿಸಿತು. ಬ್ರಿಟಿಷರ ಕಾಲದಲ್ಲಿ ಅಂದಿನ ವಿದೇಶೀ ಆಡಳಿತದ ವಿರುದ್ಧವಾಗಿ ತುಟಿಪಿಟಕ್ ಎನ್ನದ, ತನ್ನ ಕಿರುಬೆರಳನ್ನು ಎತ್ತದಿದ್ದ ಸಂಘಪರಿವಾರ ಇಂದಿರಾ ಸರಕಾರದ ವಿರುದ್ಧ ಘೋರ ಭೂಗತ ಚಳವಳಿಯನ್ನು ಹೂಡಿದ್ದು ಆ ಸಂಘಟನೆಯ ಬಗ್ಗೆ ಜನರಲ್ಲಿ ವಿಶ್ವಾಸ ಹುಟ್ಟಲು ಕಾರಣವಾಯಿತು. ಆ ಭೂಗತ ಚಳವಳಿ ಮತ್ತು ಪ್ರತ್ಯಕ್ಷ ಹೋರಾಟದಲ್ಲಿ 25,000 ಆರೆಸ್ಸೆಸ್ ಕಾರ್ಯಕರ್ತರು ಸೆರೆಮನೆ ವಾಸ ಅನುಭವಿಸಿದರು. ಅವರ ಅಗ್ರನಾಯಕರಾದ ವಾಜಪೇಯಿ, ಅಡ್ವಾಣಿ ಸಹಿತ ಸ್ಥಾನಬದ್ಧತೆಯಲ್ಲಿದ್ದರು. ತುರ್ತು ಪರಿಸ್ಥಿತಿಯಿಂದ ದೇಶವನ್ನು ಪಾರುಮಾಡಲು ಹೋರಾಡಿದರು. ಅದುವರೆಗೆ ಸಂಘಪರಿವಾರವನ್ನು ಗುಮಾನಿಯಿಂದಲೇ ಕಾಣುತ್ತಿದ್ದ ಜನರಿಗೆ ಅವರನ್ನು ಹತ್ತಿರ ಬಿಟ್ಟುಕೊಳ್ಳುವುದು ಅಷ್ಟೊಂದು ಅಪಾಯಕಾರಿಯಲ್ಲ ಎಂಬ ಭಾವನೆ ಮೂಡತೊಡಗಿತು. ತುರ್ತು ಪರಿಸ್ಥಿತಿಯನ್ನು ರದ್ದುಪಡಿಸಿ 1977ರಲ್ಲಿ ಚುನಾವಣೆ ನಡೆದಾಗ ಇಂದಿರಾ ಗಾಂಧಿಯನ್ನು ಶತಾಯ ಗತಾಯ ಸೋಲಿಸಲೇಬೇಕು ಎಂಬ ಏಕಮಾತ್ರ ಉದ್ದೇಶದಿಂದ ಲೋಕನಾಯಕ ಜಯಪ್ರಕಾಶರ ನಾಯಕತ್ವದಲ್ಲಿ ವಿರೋಧಪಕ್ಷಗಳೆಲ್ಲ ಒಂದಾದವು. ಇಂದಿರಾ ಗಾಂಧಿಯ ಸರ್ವಾಧಿಕಾರದ 19 ತಿಂಗಳ ತುರ್ತು ಪರಿಸ್ಥಿತಿಯ ದೌರ್ಜನ್ಯ, ದಬ್ಬಾಳಿಕೆ, ಚಿತ್ರಹಿಂಸೆ, ಪ್ರಜಾಸತ್ತೆಯ ಸರ್ವನಾಶ, ಮೂಲಭೂತ ಹಕ್ಕುಗಳ ದಮನದಿಂದ ಬೇಸತ್ತು ಆರೆಸ್ಸೆಸ್ ಜನಸಂಘಗಳು (ಈಗಿನ ಬಿಜೆಪಿಯ ಮಾತೃಸಂಸ್ಥೆಯ) ಸದಸ್ಯರು, ಸಂಸ್ಥಾ ಕಾಂಗ್ರೆಸಿಗರು, ಮುಸ್ಲಿಂಲೀಗ್‌ನವರು, ಸೋಷಿಯಲಿಸ್ಟರು ಎಲ್ಲರೂ ಒಂದಾದರು. ಹಿಂದೆ ಒಬ್ಬರನ್ನೊಬ್ಬರು ಪ್ರಬಲವಾಗಿ ವಿರೋಧಿಸುತ್ತಿದ್ದ ವಿವಿಧ ನಾಯಕರು ಈಗ ಪರಸ್ಪರ ವಿಚಾರ ವಿನಿಮಯ ಮಾಡತೊಡಗಿದರು. ಎಪ್ಪತ್ತೆಂಟು ವಯಸ್ಸಿನ ಮೂತ್ರಕೋಶದ ತೊಂದರೆಯಿಂದ ಬಳಲಿ ಬಳಲಿ ಬೆಂಡಾಗಿದ್ದ, ಇನ್ನು ದೀರ್ಘಕಾಲ ಬದುಕುವುದಿಲ್ಲ ಎಂದೇ ನಿಖರವಾಗಿದ್ದ ಲೋಕನಾಯಕರು ಜನತಾ ಪಾರ್ಟಿಯನ್ನು ಕಟ್ಟಿದರು. ಅದುವರೆಗೆ ಕೋಮುವಾದಿ ಪಕ್ಷವೆಂದೇ ಅಪಖ್ಯಾತಿಗೆ ಗುರಿಯಾಗಿದ್ದ ಜನಸಂಘದೊಡನೆ ಸಖ್ಯ ಬೆಳೆಸಿದರು. ಆಗ ಆ ಪಕ್ಷದ ಕೋಮುವಾದ ದೃಷ್ಟಿ ಮತ್ತು ಇತಿಹಾಸ ಜನರಿಗೆ ಅಷ್ಟೊಂದು ಅಪಾಯಕಾರಿಯಾಗಿ ಕಾಣದಿರುವುದಕ್ಕೆ ಇದೂ ಒಂದು ಕಾರಣ. ಮಾರ್ಚ್ 1977ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ (ಇಂದಿರಾ) ವಿರುದ್ಧ ಸ್ಪರ್ಧಿಸಿ ಪ್ರಚಂಡ ಬಹುಮತದಿಂದ ಜನತಾಪಕ್ಷ ಜಯಭೇರಿ ಬಾರಿಸಿತು. ಮೊರಾರ್ಜಿ ದೇಸಾಯಿ ಅವರ ಮಂತ್ರಿಮಂಡಲದಲ್ಲಿ ಜನಸಂಘಿಗಳು ಅಧಿಕಾರವನ್ನು ಹಂಚಿಕೊಂಡರು. ಸಾವರ್ಕರ್‌ರ ಹಿಂದುತ್ವ, ಗೋಳ್ವ್ವಾಲ್ಕರರ ಹಿಂದೂರಾಷ್ಟ್ರ ಸ್ಥಾಪನೆ, ಜನಸಂಘಿಗಳ ಕೋಮುವಾದಗಳನ್ನು ಬದಿಗಿಟ್ಟು ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಆಧಾರದ ಮೇಲೆ ಅಧಿಕಾರಕ್ಕೆ ಬಂದರು. ಆದರೆ ಆ ಒಗ್ಗಟ್ಟು ಸ್ಥಿರವಾಗಲಿಲ್ಲ. ಜನಸಂಘ, ‘ಭಾರತೀಯ ಜನತಾ ಪಾರ್ಟಿ’ ಎಂಬ ಹೊಸ ಹೆಸರಿನಿಂದ ನಾಮಾಂತರಗೊಂಡು ವಿಜೃಂಭಿಸತೊಡಗಿತು. ತರುವಾಯ ನಡೆದ ಚುನಾವಣೆಗಳಲ್ಲಿ ಸಂಘಪರಿವಾರ ಸ್ವಶಕ್ತಿಯಿಂದ ಅಧಿಕಾರಕ್ಕೆ ಬರಲಾರದೆ ಪರಿತಪಿಸುತ್ತಿತ್ತು. ಏನು ಮಾಡಿದರೆ ಭಾರತದ ಈ ಜನರನ್ನು ತಮ್ಮೆಡೆಗೆ ಸೆಳೆದುಕೊಳ್ಳಬಹುದು ಎಂದು ಚಿಂತಿಸಿದರು. ಜನರ ಅನ್ನ, ಅರಿವೆ, ಅಕ್ಷರವಿದ್ಯೆ, ಆರೋಗ್ಯ, ಆಸರೆಗಳ ಸಮಸ್ಯೆಗಳಿಗೆ ಪರಿಹಾರ ನೀಡುವ ಯಾವ ನೂತನ ಆಕರ್ಷಕ ಕಾರ್ಯಕ್ರಮವೂ ಸಂಘಪರಿವಾರಕ್ಕೆ ಹೊಳೆಯಲಿಲ್ಲ. ಸಂಘಪರಿವಾರದ ದೃಷ್ಟಿಕೋನವಿರುವವರಿಗೆ ಈ ಕುರಿತು ಹೊಳೆಯಲು ಸಾಧ್ಯವೂ ಇಲ್ಲ. ಪರಿವಾರದ ಪ್ರಭಾವೀ ಮಾರ್ಗದರ್ಶಿಗಳು ಹೇಳುವ ಪ್ರಕಾರ ನಮ್ಮ ದೇಶದ ಜನರಲ್ಲಿ ಅಚಲವಾದ ಗಾಢ ಧರ್ಮಶ್ರದ್ಧೆಯಿದೆ. ಅವರ ಧಾರ್ಮಿಕ ಭಾವನೆಗಳಿಗೆ ಅಪ್ಯಾಯಮಾನವಾದ ಒಂದು ವಿಷಯವನ್ನು ಮುಂದಿಟ್ಟು ಅವರ ಭಾವನೆಗಳನ್ನು ಉದ್ದೀಪನೆಗೊಳಿಸಿ, ಕೊನೆಕೊನೆಗೆ ಕೆರಳಿಸಿ ಜನರನ್ನು ಮರುಳುಗೊಳಿಸುವುದೊಂದೇ ಯಶಸ್ಸಿನ ಮಾರ್ಗೋಪಾಯವೆಂದು ಕಂಡುಕೊಂಡರು. ಈ ದಿಶೆಯಲ್ಲಿ ಆಲೋಚಿಸಿದಾಗ ಸಂಘ ಪರಿವಾರಕ್ಕೆ ಜ್ಞಾಪಕ ಬಂದದ್ದು 1947ರಷ್ಟು ಹಿಂದೆಯೇ ಎದ್ದಿದ್ದ ರಾಮಜನ್ಮಭೂಮಿ-ಬಾಬರಿ ಮಸೀದಿಯ ಸಮಸ್ಯೆ! ತಗೋ ಆಗ ಶ್ರೀರಾಮಭಕ್ತರ ದಂಡು ಬಾಬರಿ ಮಸೀದಿಯನ್ನು ಧ್ವಂಸ ಮಾಡಿ ಅಲ್ಲಿಯೇ ರಾಮಮಂದಿರವನ್ನು ಕಟ್ಟಬೇಕೆಂಬ ಅಬ್ಬರದ ಗದ್ದಲ ಎಬ್ಬಿಸತೊಡಗಿದರು!!


  ರಾಮನಾಮದ ಮಹಿಮೆ ರಾಮಭಕ್ತರಿಗಷ್ಟೇ ಅಲ್ಲದೆ ಇತರ ಶೂದ್ರ, ದರಿದ್ರರಿಗೂ ಕಾಣಿಸತೊಡಗಿತು. ಅದರ ಆಕರ್ಷಣೆ ಅವರನ್ನು ಸಂಘಪರಿವಾರದ ಕಡೆ ಕಿವಿಗೊಡುವಂತೆ, ಅವರತ್ತ ವಾಲುವ ಲಕ್ಷಣಗಳು ಕಾಣತೊಡಗಿದವು. ಈ ಉಪಾಯ ‘ಕ್ಲಿಕ್’ ಆಗುವಂತೆ ಕಾಣಿಸಿತು! ಆಗ ಎಲ್.ಕೆ.ಅಡ್ವಾಣಿಯ ರಥಯಾತ್ರೆ ಕನ್ಯಾಕುಮಾರಿಯಿಂದ ಅಯೋಧ್ಯೆಯವರೆಗೆ ಮೆರವಣಿಗೆ ಹೊರಟಿತು. ಧನುರ್ಧಾರಿ ಶ್ರೀರಾಮ ಬಿಲ್ಲಿನ ಹೆದೆ ಏರಿಸಿ ಯುದ್ಧ ಸನ್ನದ್ಧನಾದವನ ಭಂಗಿಯಲ್ಲಿ ನಿಂತ ದಶರಥಾತ್ಮಜ ಮೆರವಣಿಗೆಯ ರಥವೇರಿದ. ದಾರಿಯುದ್ಧಕ್ಕೆ ರಾಮಭಕ್ತರು ರಥವನ್ನು ಸ್ವಾಗತಿಸಿದರು! ಆರತಿ ಬೆಳಗಿದರು. ಹಾರ ಹಾಕಿ ಕೈ ಮುಗಿದರು !! ರಾಮಮಂದಿರ ನಿರ್ಮಾಣಕ್ಕೆ ಬೇಕಾಗುವ ಇಟ್ಟಿಗೆಗಳನ್ನು ತಲೆಮೇಲೆ ಹೊತ್ತುಕೊಂಡು ಅಯೋಧ್ಯಾಭಿಮುಖವಾಗಿ ಹೊರಟರು. ಅಯೋಧ್ಯೆಯಲ್ಲಿ ನಿರ್ಮಾಣವಾಗುವ ರಾಮಮಂದಿರಕ್ಕೆ ಮೈಸೂರು, ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ, ನಾಸಿಕ್, ಪುಣೆಯಿಂದ ಇಟ್ಟಿಗೆ ಮೆರವಣಿಗೆ ಯಾತ್ರೆ ನಡೆಯಿತು. ಈ ರಾಮಭಕ್ತಿ ಜಾಡ್ಯ ಸಾಂಕ್ರಾಮಿಕ ರೋಗದಂತೆ ಹಬ್ಬಿತು!! ಜನಸಂಘ ಪರಿವಾರದತ್ತ ವಾಲುವ ಸೂಚನೆ ಕಂಡುಬಂತು! ಇದನ್ನು ತಡೆಯುವುದೆಂತು ಎಂಬುದು ಜಾತ್ಯತೀತ ಪಕ್ಷಗಳ ಸಮಸ್ಯೆಯಾಯಿತು. ಅಷ್ಟು ಹೊತ್ತಿಗೆ ಇಂದಿರಾ ಗಾಂಧಿ ಹತ್ಯೆಯಾಗಿ ರಾಜೀವ್ ಗಾಂಧಿ ಅಧಿಕಾರಾರೂಢರಾಗಿದ್ದರು. ಅವರಿಗೆ ಅದಾರು ಹೇಳಿದರೋ-ನೀವು ಈ ‘ಮತಭ್ರಾಂತಿ’ಯ ಅಸ್ತ್ರವನ್ನು ಹೂಡಿ ಎಂದು. ಬಾಬರಿ ಮಸೀದಿ ವಿವಾದ ಅಯೋಧ್ಯಾ ಜಿಲ್ಲಾ ನ್ಯಾಯಾಲಯದಲ್ಲಿ ಇದ್ದಾಗ ವಿವಾದಿತ ಮಂದಿರದ ಬಾಗಿಲಿಗೆ 1947ರಲ್ಲಿ ಹಾಕಿದ್ದ ಬೀಗವನ್ನು ರಾಜೀವ್ ಗಾಂಧಿ ತೆಗೆಸಿ ಸಂಘಪರಿವಾರ ಬೀಸಿದ್ದ ಬಲೆಯಲ್ಲಿ ಬಿದ್ದರು! ರಾಮಮಂದಿರ ಶಿಲಾನ್ಯಾಸವನ್ನು ತಾವೇ ಮಾಡುವುದಾಗಿ ಸೂಚನೆ ಕಳಿಸಿದರು. ಹಣೆಗೆ ಕುಂಕುಮದ ದೀರ್ಘ, ಎದ್ದುಕಾಣುವಂಥ ನಾಮಧಾರಣೆ ಮಾಡಿದರು. ಇದುವರೆಗೆ ಜಾತೀಯತೆಯನ್ನು ಕೋಮುವಾದವನ್ನು ಬಹಿರಂಗವಾಗಿ ಉಗ್ರವಾಗಿ ಖಂಡಿಸುತ್ತಿದ್ದ ಕಾಂಗ್ರೆಸ್ ಈಗ ಮೃದು ಕೋಮುವಾದವನ್ನು ಅಂತರಂಗದಲ್ಲಿ ಆಚರಣೆಯಲ್ಲಿ ತಂದಿತು! ಇದು 1992 ಡಿಸೆಂಬರ್ 6ರಂದು ಬಾಬರಿ ಮಸೀದಿಯ ಧ್ವಂಸದಲ್ಲಿ ಸ್ಫೋಟಿಸಿತು !! ಸ್ವಾತಂತ್ರಾನಂತರ ಬಂದೊದಗಿದ ಪ್ರಥಮ ವಿಪತ್ತು ಗಾಂಧೀ ಹತ್ಯೆಯಾದರೆ ದ್ವಿತೀಯ ವಿಪತ್ತು ಬಾಬರಿ ಮಸೀದಿ ಧ್ವಂಸ! ಗೋಡ್ಸೆ ಆತ್ಮಕ್ಕೆ ಶಾಂತಿಯುಂಟಾಗಿರಬಹುದು. ಗಾಂಧಿ ಹತ್ಯೆಯ ಉದ್ದೇಶ ಮುಸ್ಲಿಮರನ್ನು ದಮನ ಮಾಡುವ ಹಿಂದೂಧರ್ಮ ಸಂಸ್ಥಾಪನಾ ಗುರಿ-ಅಷ್ಟರಮಟ್ಟಿಗೆ ಈಡೇರಿದ ತೃಪ್ತಿ ಸಂಘಪರಿವಾರದಲ್ಲಿ ಉಂಟಾಯಿತು. ಸಂಘಪರಿವಾರ ಕೋಮುದ್ವೇಷವನ್ನು ವಿಸ್ತರಿಸುವ ವಿಶ್ವ ಹಿಂದೂ ಪರಿಷತ್ತು, ಧರ್ಮಸಂಸದ್, ಮಠಾಧೀಶ್ವರರು ಬಹಿರಂಗವಾಗಿ ರಾಜಕೀಯ ಪ್ರವೇಶಿಸುವ ಚಟುವಟಿಕೆ ವಿಸ್ತೃತಗೊಂಡವು. 1999ರಲ್ಲಿ ಬಿಜೆಪಿ, ಜಾರ್ಜ್ ಫೆರ್ನಾಂಡಿಸ್‌ರಂಥ ಸಮಾಜವಾದಿ ಮುಖಂಡರಂಥವರ ಸಹಕಾರದಿಂದ ಕೇಂದ್ರದಲ್ಲಿ ಅಧಿಕಾರದ ಗದ್ದುಗೆಗೂ ಏರಿತು! ಇಂದಿರಾ ಗಾಂಧಿ ನೆಹರೂ ಮನೆತನದ ವಂಶಪಾರಂಪರ್ಯ ಪ್ರಜಾಸತ್ತಾ ಪದ್ಧತಿಯನ್ನು ದ್ವೇಷಿಸುವ ಏಕಮಾತ್ರ ಉದ್ದೇಶದಿಂದ ಕಾಂಗ್ರೆಸ್ ಪಕ್ಷವನ್ನು ವಿರೋಧಿಸಿ ಸಂಘಪರಿವಾರವನ್ನು ಸಮರ್ಥಿಸಿದರು. ಕಾಂಗ್ರೆಸ್‌ನಲ್ಲೂ ಸಂಘಪರಿವಾರವನ್ನು ಮೆಚ್ಚುವ ‘ಮೀರ್ ಸಾಧಕರು’ ನುಸುಳಿಕೊಂಡು ಬಾಬರಿ ಮಸೀದಿ ಧ್ವಂಸ ಮಾಡುವುದಕ್ಕೆ ಗುಪ್ತ ನೆರವು ನೀಡಿದರು. ಆ ದುಷ್ಕೃತ್ಯ ನೆರವೇರಲು ನ್ಯಾಯಾಂಗವೂ ತನ್ನ ಕರ್ತವ್ಯ ಲೋಪದಿಂದ ಪರೋಕ್ಷವಾಗಿ ನೆರವಾಯಿತು ಎಂಬುದನ್ನು ದುಃಖದಿಂದ ಸ್ಮರಿಸಬೇಕಾಗುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)