varthabharthi

ಕರಾವಳಿ

ಕಾರು ಮಾಲಕನ ಸಹಿತ ಇಬ್ಬರು ಆರೋಪಿಗಳ ಬಂಧನ

ಬೆಳ್ತಂಗಡಿ: ಅಕ್ರಮ ಗೋಸಾಗಾಟದ ಕಾರು ಅಪಘಾತ ಪ್ರಕರಣ ಭೇದಿಸಿದ ಪೊಲೀಸರು

ವಾರ್ತಾ ಭಾರತಿ : 12 Jun, 2019

ಬೆಳ್ತಂಗಡಿ, ಜೂ.12: ಹಿಂಸಾತ್ಮಕ ಹಾಗೂ ಅಕ್ರಮ ಗೋಸಾಗಾಟ ಮಾಡುತ್ತಿದ್ದ ಕಾರು ಅಪಘಾತ ಪ್ರಕರಣವನ್ನು ಭೇದಿಸಿದ ಬೆಳ್ತಂಗಡಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

 ಮೂಡುಬಿದಿರೆ ತೋಡಾರು ನಿವಾಸಿಗಳಾದ ಅನ್ಸಾರ್(27) ಹಾಗೂ ಝುಬೈರ್(26) ಬಂಧಿತ ಆರೋಪಿಗಳಾಗಿದ್ದಾರೆ.
ಅಪಘಾತಕ್ಕೀಡಾದ ಕಾರು ಅನ್ಸಾರ್‌ಗೆ ಸೇರಿದ್ದಾಗಿದ್ದು, ಗೋ ಸಾಗಾಟಕ್ಕಾಗಿ ಕಾರಿಗೆ ನಕಲಿ ನಂಬರ್ ಪ್ಲೇಟ್ ಅಳವಡಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಜೂನ್ 7ರಂದು ರಾತ್ರಿ ವೇಳೆ ಮುಂಡಾಜೆ ಸಮೀಪ ಕಾರೊಂದು ಅಪಘಾತಕ್ಕೀಡಾದ ಸಂದರ್ಭ ಅದರಲ್ಲಿ ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿದ್ದ ಐದು ದನಗಳು ಸಾವನ್ನಪ್ಪಿದ್ದವು, ಒಂದು ದನ ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ವೇಳೆ ಆರೋಪಿಗಳನ್ನು ಕಾರನ್ನು ಅಪಘಾತ ಸ್ಥಳದಲ್ಲೇ ತೊರೆದು ಪರಾರಿಯಾಗಿದ್ದರು.

ದನಗಳ ಈ ದಾರುಣ ಸಾವಿಗೆ ಕಾರಣವಾದ ಆರೋಪಿಗಳ ವಿರುದ್ಧ ನಾಡಿನೆಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಖಾಝಿ ಸಹಿತ ಹಲವು ಧಾರ್ಮಿಕ ಮುಖಂಡರು, ಸಂಘಟನೆಗಳು ಕೃತ್ಯವನ್ನು ಖಂಡಿಸಿದ್ದು, ಆರೋಪಿಗಳನ್ನು ಶೀಘ್ರವಾಗಿ ಬಂಧಿಸಿ ಕಠಿಣ ಕ್ರಮಕ್ಕೆ ಪೊಲೀಸರನ್ನು ಆಗ್ರಹಿಸಿದ್ದವು.

ಈ ನಡುವೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬೆಳ್ತಂಗಡಿ ಪೊಲೀಸರು ಆರೋಪಿಗಳ ಪತ್ತೆಗೆ ವ್ಯಾಪಕ ಬಲೆ ಬೀಸಿದ್ದರು. ಇದೀಗ ಬೆಳ್ತಂಗಡಿ ಪೊಲೀಸರ ತಂಡ ಕೃತ್ಯಕ್ಕೆ ಬಳಸಿದ ಕಾರು ಮಾಲಕ ಹಾಗೂ ಒಬ್ಬ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಇನ್ನೂ ಇಬ್ಬರು ಆರೋಪಿಗಳು ತಲೆ ಮರೆಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದು, ಅವರಿಗಾಗಿ ಹುಡುಕಾಟ ಮುಂದುವರಿದಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)