varthabharthi

ಸಿನಿಮಾ

ರಾಜರಾಜ ಚೋಳನ್ ಆಳ್ವಿಕೆಯ ಬಗ್ಗೆ ಹೇಳಿಕೆ: ‘ಕಬಾಲಿ’ ನಿರ್ದೇಶಕ ಪಾ ರಂಜಿತ್ ವಿರುದ್ಧ ಪ್ರಕರಣ

ವಾರ್ತಾ ಭಾರತಿ : 12 Jun, 2019

ತಂಜಾವೂರ್, ಜೂ.12: ಖ್ಯಾತ ತಮಿಳು ಚಿತ್ರ ನಿರ್ದೇಶಕ ಪಾ ರಂಜಿತ್ ವಿರುದ್ಧ ತಿರುಪನಂದಲ್ ಪೊಲೀಸರು ಮಂಗಳವಾರ ಪ್ರಕರಣ ದಾಖಲಿಸಿದ್ದಾರೆ.

ತಿರುಪನಂನದಲ್ ಎಂಬಲ್ಲಿ ಇತ್ತೀಚೆಗೆ ಬ್ಲೂ ಪ್ಯಾಂಥರ್ಸ್ ಪಾರ್ಟಿ ಆಯೋಜಿಸಿದ್ದ ಸಭೆಯೊಂದರಲ್ಲಿ ಚೋಳರ ಆಳ್ವಿಕೆ ಸಂದರ್ಭದ  ತುಳಿತಕ್ಕೊಳಗಾದ ಸಮುದಾಯದ ಬವಣೆಯನ್ನು ವಿವರಿಸುವ ವೇಳೆ ರಾಜರಾಜ ಚೋಳನ್ ಅರಸನ ಬಗ್ಗೆ ಕೆಟ್ಟದ್ದಾಗಿ ಮಾತನಾಡಿದ್ದಾರೆಂಬ ಆರೋಪ ಅವರ ಮೇಲಿದೆ. ಸಾಮಾನ್ಯ ನಂಬಿಕೆಗೆ ವಿರುದ್ಧವಾಗಿ ರಾಜರಾಜ ಚೋಳನ್ ಆಳ್ವಿಕೆಯು ದಲಿತರ ಪಾಲಿಗೆ ಕರಾಳವಾಗಿತ್ತು ಎಂದು ಸಭೆಯಲ್ಲಿ ರಂಜಿತ್ ಹೇಳಿದ್ದಾರೆನ್ನಲಾಗಿದೆ.

ಹಿಂದು ಮಕ್ಕಳ್ ಕಚ್ಚಿ ಸಂಘಟನೆಯ ತಂಜಾವೂರ್ ಜಿಲ್ಲಾ ಕಾರ್ಯದರ್ಶಿ ಬಾಲ ಎಂಬವರು ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿದೆ. ಹಿಂಸೆಗೆ ಪ್ರಚೋದನೆ, ವಿಭಿನ್ನ ಗುಂಪುಗಳ ನಡುವೆ ಜಾತಿ, ಧರ್ಮ, ಭಾಷೆ ವಿಚಾರದಲ್ಲಿ ದ್ವೇಷ ಬೆಳೆಸಲು ಹಾಗೂ ಸಮಾಜದ ಸೌಹಾರ್ದತೆ  ಕೆಡಿಸಲು ಯತ್ನಿಸಿದ ಆರೋಪದ ಮೇಲೆ ಐಪಿಸಿಯ ವಿವಿಧ ಸೆಕ್ಷನ್ ಗಳನ್ವಯ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.

ಪಾ ರಂಜಿತ್ ಅವರು ರಜನೀಕಾಂತ್ ಅಭಿನಯದ ಚಿತ್ರಗಳಾದ ಕಬಾಲಿ ಹಾಗೂ ಕಾಲಾ ಚಿತ್ರದ ನಿರ್ದೇಶಕರಾಗಿದ್ದಾರೆ.

ಯಾರು ಈ ದಲಿತ ನಾಯಕ ಉಮರ್ ಫಾರೂಕ್?

ಬ್ಲೂ ಪ್ಯಾಂಥರ್ಸ್ ಪಾರ್ಟಿ (ನೀಲ ಪುಲಿಗಳ್ ಇಯಕ್ಕಮ್)ಯ ಸ್ಥಾಪಕ ಉಮರ್ ಫಾರೂಕ್ ರ ಪುಣ್ಯತಿಥಿಯಂದು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಟಿಎಂ ಮಾಣಿ ಅಥವಾ ಟಿಎಂ ಉಮರ್ ಫಾರೂಕ್ ತಮಿಳುನಾಡಿನ ದಲಿತ ನಾಯಕರಾಗಿದ್ದರು. ತನ್ನ ಜೀವನದುದ್ದಕ್ಕೂ ಪೆರಿಯಾರ್ ಮತ್ತು ಅಂಬೇಡ್ಕರ್ ರ ಅನುಯಾಯಿಯಾಗಿದ್ದ ಫಾರೂಕ್ ಮೇಲ್ವರ್ಗದ ದೌರ್ಜನ್ಯಗಳ ವಿರುದ್ಧ ಸಿಡಿದೆದ್ದವರು. ಹಲವು ಬಾರಿ ಜೈಲು ಶಿಕ್ಷೆಗೊಳಗಾಗಿದ್ದ ಇವರಿಗೆ ಒಂದು ಬಾರಿ ಜೀವಾವಧಿ ಶಿಕ್ಷೆಯಾಗಿತ್ತು. ಆದರೆ ಹೈಕೋರ್ಟ್ ಅವರನ್ನು ಖುಲಾಸೆಗೊಳಿಸಿತು. ಜಾತಿ ಪದ್ಧತಿಯ ವಿರುದ್ಧ ನಿರಂತರ ಹೋರಾಟ ನಡೆಸಿದ್ದ ಫಾರೂಕ್ 2007ರಲ್ಲಿ ಇಸ್ಲಾಂ ಧರ್ಮ ಸ್ವೀಕರಿಸಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)