varthabharthi

ಬೆಂಗಳೂರು

ಸರಕಾರದ ಅಭದ್ರತೆ ಬಗ್ಗೆ ಮಾತನಾಡದಿರಲು ಅಧಿಕಾರಿಗಳಿಗೆ ತಾಕೀತು

ಬಿಪಿಎಲ್ ಕಾರ್ಡ್ ವಿತರಣೆ ಮಾನದಂಡ ಮರುಪರಿಶೀಲನೆ: ಡಿಸಿಎಂ ಡಾ.ಜಿ.ಪರಮೇಶ್ವರ್

ವಾರ್ತಾ ಭಾರತಿ : 12 Jun, 2019

ಬೆಂಗಳೂರು, ಜೂ. 12: ಬಿಪಿಎಲ್ ಪಡಿತರ ಚೀಟಿ ವಿತರಣೆ ಮಾನದಂಡ ಹಾಗೂ ಕಾರ್ಡ್ ವಿತರಣೆ ಬಗ್ಗೆ ಮರು ಪರಿಶೀಲನೆ ಅಗತ್ಯವಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ಹೇಳಿದ್ದಾರೆ.

ಬುಧವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಏರ್ಪಡಿಸಿದ್ದ ಪ್ರಾದೇಶಿಕ ಆಯುಕ್ತರ ಸಮ್ಮೇಳನದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಶೇ.90ರಷ್ಟು ಜನ ಬಿಪಿಎಲ್ ಪಡಿತರ ಚೀಟಿ ಹೊಂದಿದ್ದಾರೆ. ಅಭಿವೃದ್ಧಿಶೀಲ ಕರ್ನಾಟಕದಲ್ಲಿ ಇಷ್ಟು ಪ್ರಮಾಣದ ಬಡವರು ಇದ್ದಾರೆಯೇ? ಎಂದು ಪ್ರಶ್ನಿಸಿದರು.

ಐಟಿ-ಬಿಟಿ ಸಿಟಿ ಎಂದೆ ನಮ್ಮ ರಾಜ್ಯ ಖ್ಯಾತಿ ಹೊಂದುತ್ತಿದೆ. ಹೀಗಿರುವಾಗ ಇಷ್ಟು ಪ್ರಮಾಣದ ಬಡವರು ಇರಲು ಹೇಗೆ ಸಾಧ್ಯ? ಇಲಾಖೆ ಯಾವ ಮಾನದಂಡದಲ್ಲಿ ಬಿಪಿಎಲ್ ಕಾರ್ಡ್ ವಿತರಿಸುತ್ತಿದೆ ಎಂದ ಅವರು, ಈ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದರು.

ಸರಕಾರದ ಬಗ್ಗೆ ಚರ್ಚೆ ಬೇಡ: ರಾಜ್ಯ ಸರಕಾರ ಅಭದ್ರವಾಗಿದೆ ಎಂದು ಅಧಿಕಾರಿಗಳು ತಮಾಷೆಯಾಗಿಯೂ ಚರ್ಚೆ ಮಾಡಬಾರದು. ಸರಕಾರವನ್ನು ಭದ್ರವಾಗಿ ಇಟ್ಟುಕೊಳ್ಳುವ ಬಗ್ಗೆ ನಾವು ನೋಡಿಕೊಳ್ಳುತ್ತೇವೆ. ಆ ವಿಷಯ ಅಧಿಕಾರಿಗಳಿಗೆ ಬೇಕಿಲ್ಲ. ಈ ಬಗ್ಗೆ ನೀವು ಚರ್ಚೆ ಮಾಡಿದರೆ ಸುಲಲಿತ ಆಡಳಿತ ನೀಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.

ಮೈತ್ರಿ ಸರಕಾರ ಸುಭದ್ರವಾಗಿಲ್ಲ ಎಂದು ಅಧಿಕಾರಿಗಳು ಚರ್ಚೆ ಮಾಡುತ್ತಿರುವ ಬಗ್ಗೆ ಗಮನಿಸಿದ್ದೇನೆ. ಈ ಬೆಳವಣಿಗೆ ಸರಿಯಲ್ಲ. ಈ ಬಗ್ಗೆ ಅಧಿಕಾರಿಗಳು ತಲೆಕೆಡಿಸಿಕೊಳ್ಳದೆ ಜನರ ಪರವಾಗಿ ಕೆಲಸ ಮಾಡಬೇಕು ಎಂದು ಅವರು ಇದೇ ವೇಳೆ ಸೂಚನೆ ನೀಡಿದರು.

ರಾಜ್ಯ ಸರಕಾರ ರೈತರ ನೆರವಿಗೆ ಧಾವಿಸಿ ಸಾಲಮನ್ನಾ ಮಾಡಿದೆ. ಇದರ ಫಲ ರೈತರಿಗೆ ತಲುಪಿಸುವಲ್ಲಿ ಅಧಿಕಾರಿಗಳ ಪಾತ್ರ ದೊಡ್ಡದಿದೆ. ನೀವು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಿದರೆ ಮಾತ್ರ ಸರಕಾರದ ಈ ಕ್ರಮ ರೈತರಿಗೆ ಮುಟ್ಟಲು ಸಾಧ್ಯ. ಅದೇ ರೀತಿ ಮನೆ ನಿರ್ಮಾಣ, ಗಂಗಾ ಕಲ್ಯಾಣ ಯೋಜನೆ ಸೇರಿದಂತೆ ಆದ್ಯತಾ ಯೋಜನೆಗಳು ಶೀಘ್ರವಾಗಿ ಜನರಿಗೆ ತಲುಪುವ ವ್ಯವಸ್ಥೆ ಆಗಬೇಕು ಎಂದರು.

ಪಡಿತರ ಚೀಟಿಗೆ ಶಾಶ್ವತ ಪರಿಹಾರ:

‘ಪಡಿತರ ಚೀಟಿಯೊಂದಿಗೆ ಆಧಾರ್ ಕಾರ್ಡ್ ಮತ್ತು ಜಾತಿ-ಆದಾಯ ಪ್ರಮಾಣ ಪತ್ರ ಜೋಡಣೆಗೆ ಜನರು ಸರದಿ ಸಾಲಿನಲ್ಲಿ ನಿಲ್ಲುವ ಸ್ಥಿತಿಯ ಬಗ್ಗೆ ನನ್ನ ಗಮನಕ್ಕೆ ಬಂದಿದ್ದು, ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಲಾಗುವುದು. ಯಾವುದೇ ಕಾರಣಕ್ಕೂ ಜನರಿಗೆ ಅನಾನುಕೂಲ ಮಾಡಬೇಡಿ’

-ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)