varthabharthi

ರಾಷ್ಟ್ರೀಯ

ಬೆಳೆ ವಿಮೆ ಪ್ರೀಮಿಯಂ ಸಂಗ್ರಹ, ಪಾವತಿಯಲ್ಲಿ ಅಗಾಧ ಅಂತರ

5,000 ಕೋಟಿ ರೂ. ಗೂ ಹೆಚ್ಚಿನ ಬೆಳೆ ವಿಮೆ ಕ್ಲೇಮ್ ಇತ್ಯರ್ಥಕ್ಕೆ ಕೇಂದ್ರದ ಯೋಜನೆ ವಿಫಲ

ವಾರ್ತಾ ಭಾರತಿ : 12 Jun, 2019

ಹೊಸದಿಲ್ಲಿ, ಜೂ.12: ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ(ಪಿಎಂಎಫ್‌ಬಿವೈ) ನಿಗದಿತ ಗಡುವಿನಡಿ 5 ಸಾವಿರ ಕೋಟಿ ರೂ.ಗೂ ಹೆಚ್ಚಿನ ಬೆಳೆ ವಿಮೆ ಪಾವತಿ ಕ್ಲೇಮ್‌ಗಳನ್ನು ಇತ್ಯರ್ಥಪಡಿಸಲು ವಿಫಲವಾಗಿದೆ ಎಂದು ವರದಿಯಾಗಿದೆ. ಮಾಹಿತಿ ಹಕ್ಕು ಕಾಯ್ದೆಯಡಿ ಸುದ್ದಿಸಂಸ್ಥೆ ಪಡೆದಿರುವ ವಿವರದಿಂದ ಈ ಮಾಹಿತಿ ದೊರಕಿದೆ.

2018ರ ಡಿಸೆಂಬರ್‌ಗೆ ಅಂತ್ಯವಾಗುವ ಮುಂಗಾರು ಅವಧಿಯಲ್ಲಿ ಇತ್ಯರ್ಥಕ್ಕೆ ಬಾಕಿಯುಳಿದಿರುವ ವಿಮಾ ಹಕ್ಕು(ಇನ್ಷೂರೆನ್ಸ್ ಕ್ಲೇಮ್)ಗಳ ಮೊತ್ತ 5,171 ಕೋಟಿ ರೂ. ಆಗಿದೆ ಎಂದು ವರದಿ ತಿಳಿಸಿದೆ. ಪಿಎಂಎಫ್‌ಬಿವೈ ಮಾರ್ಗದರ್ಶಿ ಸೂತ್ರದ ಪ್ರಕಾರ, ಕಟಾವು ಮಾಡಿದ ಎರಡು ತಿಂಗಳೊಳಗೆ ಎಲ್ಲಾ ಬಾಕಿಗಳನ್ನೂ ಪಾವತಿಸಬೇಕು. ಇದರಂತೆ 2018ರ ಡಿಸೆಂಬರ್‌ನ ಬಾಕಿಯನ್ನು 2019ರ ಫೆಬ್ರವರಿಯೊಳಗೆ ಪಾವತಿಸಬೇಕಿತ್ತು. ಆದರೆ 2019ರ ಮೇ 10ರಂದು ಅಂದಾಜು 12,867 ಕೋಟಿ ರೂ. ಬೆಳೆ ವಿಮೆಯಲ್ಲಿ ಶೇ.40ರಷ್ಟು ಪಾವತಿಗೆ ಬಾಕಿಯಾಗಿದೆ ಎಂದು ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ಮಾಹಿತಿ ಹಕ್ಕು ಕಾಯ್ದೆಯಡಿಯ ಪ್ರಶ್ನೆಗೆ ಉತ್ತರವಾಗಿ ತಿಳಿಸಿದೆ.

ಇದರಲ್ಲಿ ಪುನರ್ರಚಿತ ಹವಾಮಾನ ಆಧರಿತ ಬೆಳೆ ವಿಮಾ ಯೋಜನೆ(ಆರ್‌ಡಬ್ಲೂಬಿಸಿಐಎಸ್)ಯ ಪಾಲು ಸುಮಾರು ಶೇ.5ರಷ್ಟಿದ್ದರೆ ಉಳಿದ ಮೊತ್ತ ಪಿಎಂಎಫ್‌ಬಿವೈಯಡಿ ಬರುತ್ತದೆ ಎಂದು ಇಲಾಖೆ ತಿಳಿಸಿದೆ.

5,171 ಕೋಟಿ ರೂ. ಪಾವತಿಯಾಗದ ಕೃಷಿ ವಿಮೆ ಮೊತ್ತದಲ್ಲಿ ಮಹಾರಾಷ್ಟ್ರ ರಾಜ್ಯದ ಪಾಲು ಅಧಿಕವಾಗಿದೆ. ತೀವ್ರ ಬರಪೀಡಿತ ರಾಜ್ಯಗಳಲ್ಲಿ ಒಂದಾಗಿರುವ ಮಹಾರಾಷ್ಟ್ರದಲ್ಲಿ ನಿರ್ಣಯಿಸಿರುವ ಅಂದಾಜು 3,893 ಕೋಟಿ ಬೆಳೆ ವಿಮೆ ಕ್ಲೇಮ್‌ಗಳಲ್ಲಿ ಶೇ.36, ಅಂದರೆ 1,416 ಕೋಟಿ ರೂ. ಮೊತ್ತದ ಬೆಳೆ ವಿಮೆ ಕ್ಲೇಮ್ ಇತ್ಯರ್ಥಕ್ಕೆ ಬಾಕಿಯಿದೆ. ದೇಶದಲ್ಲಿ ಶೇ.10ರಷ್ಟು ಮಳೆಪ್ರಮಾಣದ ಕೊರತೆ ಹಾಗೂ ದೇಶದ ಬಹುತೇಕ ದೊಡ್ಡ ಪ್ರದೇಶಗಳು ತೀವ್ರ ಬರಪರಿಸ್ಥಿತಿ ಎದುರಿಸುತ್ತಿರುವ ಸಂದರ್ಭದಲ್ಲೇ ಬೆಳೆ ವಿಮೆ ಪಾವತಿಯಲ್ಲಿ ಆಗಿರುವ ವಿಳಂಬ ರೈತರನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಿದೆ. ಗ್ರಾಮೀಣ ರೈತರ ಸಮಸ್ಯೆ ನಿವಾರಣೆಗೆ ಹಾಗೂ ಬೆಳೆಹಾನಿಯ ಸಮಸ್ಯೆ ಪರಿಹಾರಕ್ಕೆ ಪಿಎಂಎಂಬಿವೈ ಯೋಜನೆ ಮಹತ್ವದ ಹೆಜ್ಜೆ ಎಂದು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಪ್ರಥಮ ಅವಧಿಯಲ್ಲಿ ಘೋಷಿಸಿತ್ತು.

ದೇಶದಲ್ಲಿ ಕೃಷಿ ಬೆಳೆಯ 65%ರಷ್ಟು ಪ್ರದೇಶ ಮಳೆಯಾಧಾರಿತವಾಗಿದ್ದು ಮಳೆ ಪ್ರಮಾಣದ ಕೊರತೆ ಭಾರತದಲ್ಲಿ ಬೆಳೆ ನಷ್ಟಕ್ಕೆ ಪ್ರಮುಖ ಕಾರಣವಾಗಿದೆ. ಮುಂಗಾರು ಬೆಳೆಗೆ ಜೂನ್ ಮತ್ತು ಜುಲೈಯಲ್ಲಿ ಬೀಜ ಬಿತ್ತಲಾಗುತ್ತದೆ ಮತ್ತು ಮುಂಗಾರು ಬೆಳೆ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಸುರಿಯುವ ಮುಂಗಾರು ಮಳೆಯನ್ನು ಬಹುವಾಗಿ ಅವಲಂಬಿಸಿದೆ. 2018ರ ಮುಂಗಾರು ಮಳೆ ಸರಾಸರಿಗಿಂತ ಕಡಿಮೆ ಪ್ರಮಾಣದಲ್ಲಿತ್ತು. ಭಾರತೀಯ ಹವಾಮಾನ ಇಲಾಖೆಯ ವರದಿಯಂತೆ ಸರಾಸರಿ 9.4%ರಷ್ಟು ಕಡಿಮೆ ಮಳೆಯಾಗಿದ್ದು ಸತತ 5ನೇ ವರ್ಷ ಮಳೆ ಪ್ರಮಾಣ ಕಡಿಮೆಯಾಗಿದೆ.

7 ರಾಜ್ಯಗಳು ಬರಪೀಡಿತ ಎಂದು ಘೋಷಿಸಿಕೊಂಡಿದ್ದು, ಈ ರಾಜ್ಯಗಳಲ್ಲಿ ಒಟ್ಟು 15 ಮಿಲಿಯನ್ ಹೆಕ್ಟೇರ್‌ಗಳಷ್ಟು ಪ್ರದೇಶದಲ್ಲಿ ಬೆಳೆನಷ್ಟವಾಗಿದೆ. ಲೋಕಸಭೆಯಲ್ಲಿ ಸರಕಾರ ನೀಡಿದ ಉತ್ತರದಂತೆ - ದೇಶದ ಒಟ್ಟು ಜಿಲ್ಲೆಗಳಲ್ಲಿ ಮೂರನೇ ಒಂದರಷ್ಟು ಅಂದರೆ, 252 ಜಿಲ್ಲೆಗಳು 2018ರ ಜೂನ್‌ನಿಂದ ಸೆಪ್ಟೆಂಬರ್‌ವರೆಗಿನ ಅವಧಿಯಲ್ಲಿ ಮಳೆಕೊರತೆ ಎದುರಿಸಿವೆ. ಇದರಲ್ಲಿ ಹೆಚ್ಚಿನವು ಆಂಧ್ರಪ್ರದೇಶ, ಬಿಹಾರ, ಗುಜರಾತ್, ಜಾರ್ಖಂಡ್, ಕರ್ನಾಟಕ, ಮಹಾರಾಷ್ಟ್ರ,ಮಧ್ಯಪ್ರದೇಶ, ರಾಜಸ್ತಾನ, ತಮಿಳುನಾಡು, ತೆಲಂಗಾಣ ಹಾಗೂ ಈಶಾನ್ಯ ರಾಜ್ಯಗಳ ಕೆಲವು ಪ್ರದೇಶಗಳು. ಮೂರು ರಾಜ್ಯಗಳು ಭಾರೀ ಬೆಳೆ ನಷ್ಟದಿಂದ ತತ್ತರಿಸಿವೆ. ಗುಜರಾತ್‌ನಲ್ಲಿ 401 ಬರಪೀಡಿತ ಗ್ರಾಮಗಳಲ್ಲಿ ಶೇ.33ಕ್ಕೂ ಅಧಿಕ ಬೆಳೆನಷ್ಟವಾಗಿದ್ದರೆ, 269 ಗ್ರಾಮಗಳಲ್ಲಿ ಶೇ.50ಕ್ಕೂ ಹೆಚ್ಚು ಬೆಳೆನಷ್ಟವಾಗಿದೆ. ಮಹಾರಾಷ್ಟ್ರದಲ್ಲಿ ಸೋಯಾಬೀನ್ ಬೆಳೆಯಲ್ಲಿ ಶೇ.60ರಿಂದ ಶೇ.70 ನಷ್ಟ, ಹತ್ತಿಯಲ್ಲಿ 50% ಬೆಳೆನಷ್ಟವಾಗಿದೆ ಎಂದು ಕೃಷಿ ಇಲಾಖೆಯ ಹಿರಿಯ ಅಧಿಕಾರಿ ಹೇಳಿದ್ದಾರೆ.

 ಮಧ್ಯಪ್ರದೇಶ, ಜಾರ್ಖಂಡ್, ತೆಲಂಗಾಣ ಸಹಿತ ಒಟ್ಟು 6 ರಾಜ್ಯಗಳ ಶೇ.100 ಬೆಳೆವಿಮೆ ಕ್ಲೇಮ್ ಪಾವತಿಗೆ ಬಾಕಿಯಿದ್ದು ಇದರ ಒಟ್ಟು ಮೊತ್ತ 1,000 ಕೋಟಿ ರೂ.ಗೂ ಅಧಿಕವಾಗಿದೆ. ರಾಜಸ್ತಾನದಲ್ಲಿ ಬೆಳೆ ನಷ್ಟದ ಬದಲು ಮತ್ತೊಂದು ಬೆಳೆಗೆ ವಿಮೆ ಮೊತ್ತ ಪಾವತಿಸಿದ ಘಟನೆಯಿಂದ ಬೆಳೆ ವಿಮೆ ಕ್ಲೇಮ್ ಇತ್ಯರ್ಥ ವಿಳಂಬವಾಗಿದೆ ಎಂದು ವರದಿಯಾಗಿದೆ. ರಾಜಸ್ತಾನದಲ್ಲಿ 9 ಜಿಲ್ಲೆಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, 1,358 ಕೋಟಿ ರೂ. ಅಂದಾಜು ಕ್ಲೇಮ್‌ಗಳಲ್ಲಿ 66%, ಅಥವಾ 900 ಕೋಟಿ ರೂ. ಮೊತ್ತ ಪಾವತಿಗೆ ಬಾಕಿಯಿದೆ. ಬೆಳೆ ವಿಮೆಯ ಪ್ರೀಮಿಯಂ ಸಂಗ್ರಹ ಹಾಗೂ ಕ್ಲೇಮ್ ಪಾವತಿಯಲ್ಲಿ ಅಗಾಧ ಅಂತರವಿದೆ. 2018-19ರ ಮುಂಗಾರು ಅವಧಿಯಲ್ಲೇ, ವಿಮಾ ಸಂಸ್ಥೆಗಳು ಸಂಗ್ರಹಿಸಿದ ಬೆಳೆ ವಿಮೆ ಪ್ರೀಮಿಯಂ ಮೊತ್ತ ಹಾಗೂ ಪಾವತಿಸಿದ ಮೊತ್ತದ ನಡುವೆ 62%ರಷ್ಟು ವ್ಯತ್ಯಾಸವಿದೆ.

 ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಅನುಷ್ಠಾನದ ಮುನ್ನ ಬೆಳೆ ವಿಮೆ ಯೋಜನೆಯಡಿ ಸಂಗ್ರಹಿಸಿರುವ ಪ್ರೀಮಿಯಂ ಮೊತ್ತಕ್ಕೆ ಹೋಲಿಸಿದರೆ, ಪಿಎಂಎಫ್‌ಬಿವೈ ಜಾರಿಗೊಂಡ ಬಳಿಕ ಸಂಗ್ರಹಿಸಿದ ಬೆಳೆ ವಿಮೆ ಪ್ರೀಮಿಯಂ ಮೊತ್ತದಲ್ಲಿ ಶೇ.350ರಷ್ಟು ಹೆಚ್ಚಳವಾಗಿದೆ ಎಂದು ‘ದಿ ವೈರ್’ ಕಳೆದ ವರ್ಷ ವರದಿ ಮಾಡಿತ್ತು.

ವಿಳಂಬಕ್ಕೆ ಕಾರಣ: ಮುಂದಿನ ಅವಧಿಯ ಬಿತ್ತನೆ ಕಾರ್ಯ ಆರಂಭವಾಗುವ ಮುನ್ನ ಬೆಳೆ ವಿಮೆಯ ಕ್ಲೇಮ್‌ಗಳನ್ನು ಇತ್ಯರ್ಥಗೊಳಿಸಿದರೆ ಮಾತ್ರ ತಮಗೆ ಅನುಕೂಲವಾಗುತ್ತದೆ ಎಂಬುದು ರೈತರ ಆಶಯ. ಇಳುವರಿ ಅಂದಾಜು ಮಾಡುವಲ್ಲಿ ವಿಳಂಬ, ಇಳುವರಿಯ ಅಂಕಿಅಂಶ ಒದಗಿಸುವುದರಲ್ಲಿ ಆಗುವ ವಿಳಂಬ, ವಿಮೆ ಸಂಸ್ಥೆಗಳಿಗೆ ಸರಕಾರದ ಸಬ್ಸಿಡಿ ಪಾವತಿಯಲ್ಲಿ ಆಗುವ ವಿಳಂಬ, ನಿಗದಿತ ಅಂತಿಮ ದಿನಾಂಕವನ್ನು ಪದೇ ಪದೇ ವಿಸ್ತರಿಸುವುದು ಇತ್ಯಾದಿಗಳಿಂದ ಪಾವತಿ ವಿಳಂಬವಾಗುತ್ತದೆ. ಈ ಸಮಸ್ಯೆಯನ್ನು ಒಪ್ಪಿಕೊಂಡಿರುವ ಸರಕಾರ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ನಡೆಸಿದೆ. 2018ರ ಸೆಪ್ಟೆಂಬರ್‌ನಲ್ಲಿ ಜಾರಿಗೊಳಿಸಿರುವ ಪಿಎಂಎಫ್‌ಬಿವೈ ಮಾರ್ಗದರ್ಶಿ ಸೂತ್ರದಲ್ಲಿ, ವಿಳಂಬ ಪಾವತಿಯ ಸಂದರ್ಭ ವಿಮಾ ಸಂಸ್ಥೆಗಳು ಶೇ.12ರಷ್ಟು ಬಡ್ಡಿ ನೀಡಬೇಕು ಎಂದು ಸೂಚಿಸಿದೆ. ಆದರೆ ಸರಕಾರದ ಸೂಚನೆ ಹೆಚ್ಚಿನ ಪರಿಣಾಮ ಬೀರಿಲ್ಲ ಎಂಬುದು ಅಂಕಿಅಂಶಗಳಿಂದ ಸ್ಪಷ್ಟವಾಗಿದೆ.

ಕರ್ನಾಟಕ: 2 ಮಿಲಿಯ ಹೆಕ್ಟೇರ್‌ನಲ್ಲಿ ಬೆಳೆನಷ್ಟ

ಲೋಕಸಭೆಯಲ್ಲಿ ಸರಕಾರ ನೀಡಿದ ಉತ್ತರದಂತೆ, ಕರ್ನಾಟಕದಲ್ಲಿ 2 ಮಿಲಿಯನ್ ಹೆಕ್ಟೇರ್‌ಗೂ ಅಧಿಕ ಕೃಷಿ ಭೂಮಿಯಲ್ಲಿ ಬೆಳೆ ನಷ್ಟವಾಗಿದೆ. ರಾಜ್ಯದ 88.6% ಭೂಪ್ರದೇಶ ಬರದಿಂದ ಬಾಧಿತವಾಗಿದ್ದು 176 ತಾಲೂಕುಗಳಲ್ಲಿ 156 ಬರಪೀಡಿತ ಎಂದು ಘೋಷಿತವಾಗಿದೆ. 99 ತಾಲೂಕುಗಳು ತೀವ್ರ ಬರಪೀಡಿತವಾಗಿದೆ. ಅಲ್ಲದೆ ರಾಜ್ಯದ 30 ಜಿಲ್ಲೆಗಳಲ್ಲಿ 16 ಜಿಲ್ಲೆಗಳು ಶಾಶ್ವತ ಬರಪೀಡಿತ ಜಿಲ್ಲೆಗಳಾಗಿವೆ. ಆದರೆ ಬೆಳೆ ವಿಮೆ ಯೋಜನೆಯಡಿ, ರೈತರ ಅಂದಾಜು 679 ಕೋಟಿ ರೂ. ಬೇಡಿಕೆಯಲ್ಲಿ ಕೇವಲ 28 ಕೋಟಿ ರೂ. ಪಾವತಿಸಲಾಗಿದೆ. 95%ಕ್ಕೂ ಹೆಚ್ಚಿನ ಕ್ಲೇಮ್ ಪಾವತಿಗೆ ಬಾಕಿಯಿದೆ.

20,747 ಕೋಟಿ ರೂ. ಪ್ರೀಮಿಯಂ ಸಂಗ್ರಹ

 2018-19ರ ಅವಧಿಗೆ ಇನ್ಯೂರೆನ್ಸ್ ಸಂಸ್ಥೆಗಳು ಪಿಎಂಎಫ್‌ಬಿವೈ ಮತ್ತು ಆರ್‌ಡಬ್ಲ್ಯೂಬಿಸಿಐಎಸ್ ಬೆಳೆ ವಿಮೆಯ ಪ್ರೀಮಿಯಂ ರೂಪದಲ್ಲಿ ದೇಶದಾದ್ಯಂತ 20,747 ಕೋಟಿ ರೂ. ಸಂಗ್ರಹಿಸಿವೆ. ಸಂಗ್ರಹಿಸಿದ ಪ್ರೀಮಿಯಂನ 37% ಅಂದರೆ 7,696 ಕೋಟಿ ರೂ. ಮೊತ್ತ ಮಾತ್ರ ಕ್ಲೇಮ್ ರೂಪದಲ್ಲಿ ಪಾವತಿಸಲಾಗಿದೆ. ಪ್ರೀಮಿಯಂ ಸಂಗ್ರಹ ಮತ್ತು ಕ್ಲೇಮ್ ಮೊತ್ತದಲ್ಲಿರುವ ವ್ಯತ್ಯಾಸವೇ ಬೆಳೆಸಾಲ ವಿಮೆ ಯೋಜನೆಯ ಬಹುದೊಡ್ಡ ಸಮಸ್ಯೆಯಾಗಿದೆ. ಇಷ್ಟು ಅಗಾಧ ಅಂತರ ಉಳಿದಿರುವ ಬಗ್ಗೆ ವಿವರಿಸಲು ಸರಕಾರಕ್ಕೆ ಕಷ್ಟವಾಗುತ್ತಿದೆ. ಸಂಗ್ರಹಿಸಿದ ಮೊತ್ತ ಎಲ್ಲಿಗೆ ಹೋಗಿದೆ ? ಎಂದು ಬೆಳೆ ವಿಮೆ ಸಾಲದ ಅನುಷ್ಠಾನ ವಿಭಾಗದ ಅಧಿಕಾರಿಯೊಬ್ಬರು ಪ್ರಶ್ನಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)