varthabharthi

ಬೆಂಗಳೂರು

ಐಎಂಎ ವಂಚನೆ ಪ್ರಕರಣ: ಹೂಡಿಕೆದಾರರ ಗೋಳು ಕೇಳುವವರು ಯಾರು ?

ವಾರ್ತಾ ಭಾರತಿ : 12 Jun, 2019
-ಅಮ್ಜದ್‌ ಖಾನ್ ಎಂ.

ಬೆಂಗಳೂರು, ಜೂ.12: ಐಎಂಎ ಸಮೂಹ ಸಂಸ್ಥೆಗಳ ಬಹುಕೋಟಿ ವಂಚನೆ ಹಗರಣದಿಂದ ಕಂಗಾಲಾಗಿರುವ ಸಾವಿರಾರು ಮಂದಿ ಇದೀಗ ಬೀದಿಗೆ ಬಂದು ಬಿದ್ದಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸುತ್ತಿರುವ ಸಾವಿರಾರು ಮಂದಿ ಹೂಡಿಕೆದಾರರು ಕಳೆದ ಮೂರು ದಿನಗಳಿಂದ ಸರತಿ ಸಾಲಿನಲ್ಲಿ ನಿಂತು ಪೊಲೀಸರಿಗೆ ದೂರು ದಾಖಲಿಸುತ್ತಿದ್ದಾರೆ.

ಶಿವಾಜಿನಗರದ ಎ.ಎಸ್.ಕನ್ವೆಂಷನ್ ಹಾಲ್, ಸೆಂಟ್ ಪೌಲ್ ಚರ್ಚ್ ಹಾಗೂ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಹೂಡಿಕೆದಾರರಿಂದ ದೂರು ಸ್ವೀಕರಿಸಲು ವ್ಯವಸ್ಥೆ ಮಾಡಲಾಗಿದೆ. ಕಳೆದ ಮೂರು ದಿನಗಳಿಂದ ಅಂದಾಜು 10 ಸಾವಿರಕ್ಕೂ ಅಧಿಕ ದೂರುಗಳು ದಾಖಲಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.

ಯುವಕರು, ಹಿರಿಯ ನಾಗರಿಕರು, ಮಹಿಳೆಯರು, ಗರ್ಭಿಣಿಯರು, ಬಾಣಂತಿಯರು, ಆಟೋ ಚಾಲಕರು, ವೈದ್ಯರು, ನಿವೃತ್ತ ಸರಕಾರಿ ನೌಕರರು, ವಕೀಲರು, ವ್ಯಾಪಾರಿಗಳು, ಕಾರ್ಮಿಕರು ಹೀಗೆ ಸಮಾಜದ ಎಲ್ಲ ವರ್ಗದವರು ದೂರು ದಾಖಲಿಸಲು ಉರಿ ಬಿಸಿಲಿನಲ್ಲಿ, ಮಳೆಯಲ್ಲಿ ನಿಂತಿರುವ ದೃಶ್ಯ ಶಿವಾಜಿನಗರದಲ್ಲಿ ಕಂಡು ಬರುತ್ತಿದೆ.

ಮೋಸ ಹೋಗಿರುವ ನೋವು ಪ್ರತಿಯೊಬ್ಬ ಹೂಡಿಕೆದಾರರ ಮುಖದಲ್ಲಿ ಎದ್ದು ಕಾಣುತ್ತಿದೆ. ಕೆಲವರು ಕಣ್ಣೀರು ಹಾಕಿಕೊಂಡು ನಿಂತಿದ್ದರೆ, ಇನ್ನು ಕೆಲವರು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಲಾಗದೆ ಚಡಪಡಿಸುತ್ತಿರುವ ದೃಶ್ಯಗಳು, ವಂಚನೆಗೆ ಒಳಗಾಗಿರುವವರು ಪರಸ್ಪರ ಒಬ್ಬರಿಗೊಬ್ಬರು ಸಹಾಯ ಮಾಡಿಕೊಳ್ಳುತ್ತಿದ್ದರು.

ಇದೇ ವೇಳೆ ಕೆಲವರನ್ನು ಮಾತನಾಡಿಸಲು ಮುಂದಾದಾಗ ಹಲವಾರು ಮಂದಿ ತಮ್ಮ ನೋವನ್ನು ವ್ಯಕ್ತಪಡಿಸಿದರು. ನನ್ನ ಮಗಳ ಮದುವೆಗಾಗಿ ನಾಲ್ಕು ಲಕ್ಷ ರೂ.ಗಳನ್ನು ಹೂಡಿಕೆ ಮಾಡಿದ್ದೆ. ಕಳೆದ ಮೂರು ತಿಂಗಳಿನಿಂದ ಲಾಭಾಂಶ ಬಂದಿಲ್ಲ. ಈ ಬಗ್ಗೆ ಬಂದು ವಿಚಾರಿಸಿದರೆ, ಆಡಿಟ್ ಆಗುತ್ತಿದೆ ಜೂನ್ 10ರ ಬಳಿಕ ಎಲ್ಲವೂ ಸರಿ ಹೋಗುತ್ತದೆ ಎಂದಿದ್ದರು. ಆದರೆ, ಈಗ ನಾನು ಏನು ಮಾಡಬೇಕು ಎಂಬುದು ತೋಚುತ್ತಿಲ್ಲ ಎಂದು ನೀಲಸಂದ್ರ ನಿವಾಸಿ ರಹ್ಮಾನ್ ಪಾಷ ಅಳಲು ತೋಡಿಕೊಂಡರು.

ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ನಾನು, ನಿವೃತ್ತಿ ಬಳಿಕ ಹಲಾಲ್ ಆದಾಯದ ನಿರೀಕ್ಷೆಯಲ್ಲಿ ಬ್ಯಾಂಕ್‌ನಲ್ಲಿದ್ದ ನಿಶ್ಚಿತ ಠೇವಣಿ ಇಟ್ಟಿದ್ದ 5.50 ಲಕ್ಷ ರೂ.ಗಳನ್ನು ತಂದು ಐಎಂಎ ಸಂಸ್ಥೆಯಲ್ಲಿ ಹೂಡಿಕೆ ಮಾಡಿದೆ. ಎರಡು ವರ್ಷಗಳಿಂದ ಸರಿಯಾಗಿ ಪ್ರತಿ ತಿಂಗಳು ಲಾಭಾಂಶ ಕೊಡುತ್ತಿದ್ದರು ಎಂದು ಜಯನಗರ ನಿವಾಸಿ ಬಾಬಾ ಜಾನ್ ತಿಳಿಸಿದರು.

ಆದರೆ, ಕಳೆದ ಮೂರು ತಿಂಗಳಿನಿಂದ ಸರಿಯಾಗಿ ಲಾಭಾಂಶ ಬರುತ್ತಿರಲಿಲ್ಲ. ಹಲವು ಬಾರಿ ಕಚೇರಿಗೆ ಬಂದು ವಿಚಾರಿಸಿದರೆ, ತಾಂತ್ರಿಕ ಕಾರಣಗಳನ್ನು ಮುಂದಿಟ್ಟು ವಾಪಸ್ ಕಳುಹಿಸುತ್ತಿದ್ದರು. ನನ್ನ ಪರಿಚಯದವರು ಈ ಸಂಸ್ಥೆಯ ಬಗ್ಗೆ ಮಾಹಿತಿ ನೀಡಿದರು. ಅವರ ಮಾತನ್ನು ನಂಬಿ ನಾನು ಮೋಸ ಹೋಗಿದ್ದೇನೆ. ಈ ಸಂಸ್ಥೆಯಿಂದ ಬರುತ್ತಿದ್ದ ಲಾಭಾಂಶದಿಂದಲೇ ನನ್ನ ಜೀವನ ನಡೆಯುತ್ತಿತ್ತು ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಮುಂದಿನ ಮೂರು ತಿಂಗಳಲ್ಲಿ ನನ್ನ ಮದುವೆಯಿದೆ. ಸ್ನೇಹಿತರ ಮೂಲಕ ಐಎಂಎ ಬಗ್ಗೆ ಮಾಹಿತಿ ಸಿಕ್ಕಿತ್ತು. ನಾನು ಉಳಿತಾಯ ಮಾಡಿ ಇಟ್ಟಿದ್ದ ಐದು ಲಕ್ಷ ರೂ.ಗಳನ್ನು ಭವಿಷ್ಯದ ದೃಷ್ಟಿಯಿಂದ 2017ರಲ್ಲಿ ಐಎಂಎ ಸಂಸ್ಥೆಯಲ್ಲಿ ಹೂಡಿಕೆ ಮಾಡಿದೆ. ಆರಂಭದಲ್ಲಿ ಲಾಭಾಂಶ ಹೆಚ್ಚಿಗೆ ಕೊಡುತ್ತಿದ್ದರು. ಕ್ರಮೇಣ ಅದು ಕಡಿಮೆಯಾಗುತ್ತಾ ಹೋಯಿತು. ಈಗ ನಮ್ಮ ಹೂಡಿಕೆಯ ಹಣವು ಇಲ್ಲ, ಲಾಭಾಂಶವು ಇಲ್ಲ ಎಂದು ತುಮಕೂರು ಜಿಲ್ಲೆಯ ಖಾಸಗಿ ಸಂಸ್ಥೆಯ ಉದ್ಯೋಗಿ ಸಿರಾಜುದ್ದೀನ್ ಅಸಹಾಯಕತೆ ವ್ಯಕ್ತಪಡಿಸಿದರು.

ನನ್ನ ಹಿರಿಯ ಸಹೋದರಿಗೆ ನಾಲ್ವರು ಹೆಣ್ಣು ಮಕ್ಕಳು. ಈ ಪೈಕಿ ಮೊದಲ ಮಗಳ ಮದುವೆಗೆ ಚಿನ್ನಾಭರಣ ಖರೀದಿಸಲು ಬಂದಿದ್ದಾಗ ಐಎಂಎ ಸಂಸ್ಥೆಯವರು ತಮ್ಮ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಅದರಂತೆ, ಹಲಾಲ್ ಲಾಭದ ನಿರೀಕ್ಷೆಯಲ್ಲಿ ನನ್ನ ಭಾವ ಅವರ ಲಾರಿ ಮಾರಾಟ ಮಾಡಿ ಇಟ್ಟುಕೊಂಡಿದ್ದ ಹಣವನ್ನು ಇಲ್ಲಿ ಹೂಡಿಕೆ ಮಾಡಿದೆವು. ಈಗ ಏನು ಮಾಡಬೇಕು ಎಂದು ದಿಕ್ಕೇ ತೋಚುತ್ತಿಲ್ಲ ಎಂದು ರಾಮನಗರದ ಆಟೋ ಚಾಲಕ ಮುಬಾರಕ್ ಪಾಷ ಬೇಸರ ವ್ಯಕ್ತಪಡಿಸಿದರು.

ಹಲಾಲ್ ಆದಾಯ ಎಂದು ನಂಬಿ ನಾವು ಈ ಸಂಸ್ಥೆಯಲ್ಲಿ ಹೂಡಿಕೆ ಮಾಡಿದೆವು. ನಮ್ಮ ಪರಿಚಯದವರು ನೀಡಿದ ಮಾಹಿತಿಯನ್ನು ಆಧರಿಸಿ ನಾವು ಇಲ್ಲಿಗೆ ಬಂದೆವು. ಕಚೇರಿಯಲ್ಲಿ ಸಂಪೂರ್ಣವಾಗಿ ಇಸ್ಲಾಮಿಕ್ ವಾತಾವರಣ ಇದ್ದುದ್ದನ್ನು ನೋಡಿ, ಮನ ಸೋತೆವು. ಹಲಾಲ್ ಆದಾಯ ಬರುತ್ತದೆ ಎಂದು ಹೂಡಿಕೆ ಮಾಡಿದೆವು. ಇಸ್ಲಾಮ್, ಹಲಾಲ್ ಹೆಸರಿನಲ್ಲಿ ಈ ರೀತಿ ಜನರಿಗೆ ವಂಚನೆ ಮಾಡಿದ ಮನ್ಸೂರ್ ಖಾನ್ ನಿಲುವು ಸ್ವೀಕಾರಾರ್ಹವಲ್ಲ ಎಂದು ನೋವು ತೋಡಿಕೊಂಡರು ಹೊಸಕೋಟೆಯ 75 ವರ್ಷದ ವಯೋವೃದ್ಧ ಅಬ್ದುಲ್ ಖಯ್ಯೂಮ್.

ಉಲಮಾಗಳು ಸಮುದಾಯದ ಧಾರ್ಮಿಕ ನೇತಾರರು. ಧರ್ಮಕ್ಕೆ ಸಂಬಂಧಿಸಿದ ವಿಷಯಗಳಿಗೆ ಧಕ್ಕೆಯಾಗದಂತೆ ಅದನ್ನು ಕಾಪಾಡಿಕೊಂಡು ಹೋಗುವುದು, ಸಮುದಾಯದಕ್ಕೆ ಸರಿಯಾದ ಮಾರ್ಗದರ್ಶನ ನೀಡುವುದು ಉಲಮಾಗಳ ಕೆಲಸ. ಯಾವುದೋ ಒಂದು ವಿಷಯದ ಕುರಿತು ಯಾರಾದರೂ ಕೇಳಿದರೆ, ಅದರ ಬಗ್ಗೆ ಧರ್ಮದ ಚೌಕಟ್ಟಿನಲ್ಲಿ ಮಾರ್ಗದರ್ಶನ ಮಾಡಿರುತ್ತಾರೆ. ಉಲಮಾಗಳನ್ನು ಈ ವ್ಯವಹಾರದ ವಿಷಯಗಳಲ್ಲಿ ಎಳೆದು ತಂದು ಅಪಮಾನ ಮಾಡುವುದು ಸರಿಯಲ್ಲ.

-ಮೌಲಾನ ಮುಫ್ತಿ ಇಫ್ತಿಖಾರ್ ಅಹ್ಮದ್ ಖಾಸ್ಮಿ, ಅಧ್ಯಕ್ಷರು, ಜಮೀಯತ್ ಉಲಮಾ ಕರ್ನಾಟಕ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)