varthabharthi

ಕರಾವಳಿ

ಭಾರತ್ ಸ್ಕೌಟ್ಸ್-ಗೈಡ್ಸ್‌ನಿಂದ ವಿಶ್ವ ಪರಿಸರ ದಿನ

ವಾರ್ತಾ ಭಾರತಿ : 12 Jun, 2019

ಮಂಗಳೂರು, ಜೂ.12: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ಜಿಲ್ಲಾ ಸಂಸ್ಥೆಯು ಪಿಲಿಕುಳದ ತರಬೇತಿ ಕೇಂದ್ರದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಬುಧವಾರ ಹಮ್ಮಿಕೊಂಡಿತು. ಗಿಡ ನೆಡುವುದರ ಮೂಲಕ ಮಂಗಳೂರು ವಲಯದ ವಲಯ ಅರಣ್ಯಾಧಿಕಾರಿ ಶ್ರೀಧರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಪರಿಸರದ ಮಹತ್ವದ ಬಗ್ಗೆ ಮಾತನಾಡಿದ ಅವರು, ಜಗತ್ತಿನಲ್ಲಿ ಮಣ್ಣಿನ ಪ್ರಾಮುಖ್ಯತೆ ಅಧಿಕ. ಇದೇ ಮಣ್ಣಿನಲ್ಲಿ ಎಲ್ಲ ಜೀವರಾಶಿಗಳು, ಸಸ್ಯ ಸಂಕುಲಗಳು ಬದುಕುತ್ತವೆ. ನಮ್ಮ ಅನುಕೂಲಕ್ಕಾಗಿ ಕಾಡನ್ನು ಕಡಿಯುತ್ತಾ ಬಂದೆವು. ಇದರ ಪರಿಣಾಮವೇ ಇಂದು ಕುಡಿಯುವ ನೀರಿಗೂ ಬರ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ತಾಪಮಾನದಿಂದಾಗಿ ಜನಜೀವನಕ್ಕೂ ಕೂಡ ಪರಿಣಾಮ ಬೀರಿದೆ. ಜೈವಿಕ ಪರಿಸರದ ಉಳಿವಿಗಾಗಿ ಗಿಡ ನೆಡಲೇಬೇಕಾದ ಅನಿವಾರ್ಯತೆ ಬಂದಿದೆ. ಪ್ರತಿಯೊಬ್ಬ ಮಗುವೂ ತಂತಮ್ಮ ಮನೆಯ ಪರಿಸರದಲ್ಲಿ ವರ್ಷಕ್ಕೊಂದಾದರೂ ಗಿಡ ನೆಡುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಆ ಮೂಲಕ ಪ್ರಕೃತಿಯನ್ನು ಪ್ರೀತಿಸುವ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಶುಭೋದಯ ವಿದ್ಯಾ ಸಂಸ್ಥೆಯ ಪ್ರಾಂಶುಪಾಲೆ ಜಯಶ್ರೀ ಪೈ ಮಾತನಾಡಿ, ಮಕ್ಕಳು ಕೇವಲ ಅಂಕಗಳನ್ನು ಪಡೆಯುವುದಲ್ಲದೇ ಪರಿಸರವನ್ನು ವೀಕ್ಷಿಸುವ, ಪ್ರೀತಿಸುವ ಹಾಗೂ ರಕ್ಷಿಸುವ ಗುಣ ಬೆಳೆಸಿಕೊಳ್ಳಬೇಕು ಎಂದರು.

ಜಿಲ್ಲಾ ಮುಖ್ಯ ಆಯುಕ್ತ ಡಾ.ಎನ್.ಜಿ. ಮೋಹನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಜಿಲ್ಲಾ ಆಯುಕ್ತ ರಾಮಶೇಷ ಶೆಟ್ಟಿ, ಜಿಲ್ಲಾ ಕೋಶಾಧಿಕಾರಿ ವಾಸುದೇವ ಬೋಳೂರು, ಜಿಲ್ಲಾ ಕಾರ್ಯದರ್ಶಿ ಎಂ.ಜಿ.ಕಜೆ, ಜಿಲ್ಲಾ ಸಂಸ್ಥೆಯ ವ್ಯವಸ್ಥಾಪಕ ಭಾಸ್ಕರ್, ಜಿಲ್ಲಾ ಸಂಘಟನಾ ಆಯುಕ್ತೆ ಶುಭಾ ವಿಶ್ವನಾಥ್ ಹಾಗೂ ಜಿಲ್ಲಾ ಸಂಘಟಕ ಭರತ್‌ರಾಜ್ ಉಪಸ್ಥತರಿದ್ದರು.

ವಾಮಂಜೂರಿನ ವಿದ್ಯಾಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಹಾಗೂ ಮೂಡುಶೆಡ್ಡೆಯ ಶುಭೋದಯ ವಿದಾಸಂಸ್ಥೆಯ ಸ್ಕೌಟ್-ಗೈಡ್ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಶುಭೋದಯ ವಿದ್ಯಾಸಂಸ್ಥೆಯ ಶಿಕ್ಷಕಿ ಪೂರ್ಣಿಮಾ ಸ್ವಾಗತಿಸಿದರು. ಎಂ.ಜಿ.ಕಜೆ ವಂದಿಸಿದರು. ಭರತ್‌ರಾಜ್ ಕಾರ್ಯಕ್ರಮ ನಿರೂಪಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)