varthabharthi

ಕರಾವಳಿ

ಗುರುಪುರ: ಬೃಹತ್ ಆಲದ ಮರ ಬಿದ್ದು ಮನೆಗೆ ಹಾನಿ

ವಾರ್ತಾ ಭಾರತಿ : 12 Jun, 2019

ಮಂಗಳೂರು, ಜೂ.12: ಮಂಗಳೂರು ನಗರ ಹೊರವಲಯದ ಗುರುಪುರ ಗ್ರಾಪಂ ವ್ಯಾಪ್ತಿಯ ಮೂಳೂರು ಗ್ರಾಮದ ಬಳ್ಳಿಯಲ್ಲಿ ಚಂದ್ರಶೇಖರ ಪೂಜಾರಿಯವರ ಮನೆ ಮೇಲೆ ಭಾರೀ ಗಾತ್ರದ ಆಲದಮರವೊಂದು ಬಿದ್ದು, ಮನೆ ಸಂಪೂರ್ಣ ಜಖಂಗೊಂಡಿದೆ. ಇದರಿಂದ ಸುಮಾರು ಲಕ್ಷಾಂತರ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಬುಧವಾರ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಮರ ಬಿದ್ದಿದೆ. ಬೆಳಗ್ಗಿನಿಂದಲೂ ಈ ಭಾಗದಲ್ಲಿ ಭಾರೀ ಗಾಳಿ ಬೀಸುತ್ತಿದ್ದು, ಮನೆಯ ಪಕ್ಕದ ಗುಡ್ಡದ ಮೇಲಿದ್ದ ಮರ ಮುರಿದು ಬಿದ್ದಿದೆ. ಮನೆಯಲ್ಲಿ ಚಂದ್ರಶೇಖರರ ಸಹೋದರಿ ಪುಷ್ಪಾ ಎಂಬವರು ಮಾತ್ರ ಇದ್ದರು. ಮನೆಗೆ ಮರ ಮುರಿದು ಬೀಳುತ್ತಲೇ ಅವರು ಹೊರಗೆ ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆಯಲ್ಲಿ ಮನೆಯ ಗೋಡೆ ಸಂಪೂರ್ಣ ಜಖಂಗೊಂಡಿದೆ. ಎರಡು ಕೊಠಡಿಯ ಸೊತ್ತುಗಳು ಪುಡಿಪುಡಿಯಾಗಿವೆ. ಸದ್ಯ ಮಳೆ ನೀರು ಮನೆಯೊಳಗೆ ಸುರಿಯುತ್ತಿದೆ. ಮರ ತೆರವುಗೊಳಿಸಿ, ಮನೆಗೆ ಟರ್ಪಾಲು ಹಾಸಲಾಗಿದೆ.

ಘಟನಾ ಸ್ಥಳಕ್ಕೆ ಗ್ರಾಪಂ ಅಧಿಕಾರಿಗಳು ಹಾಗೂ ಇತರ ಸಿಬ್ಬಂದಿ ಆಗಮಿಸಿ, ಪರಿಶೀಲನೆ ನಡೆಸಿದರು.

ಮಂಗಳೂರಲ್ಲಿ ವರುಣನ ಆರ್ಭಟ: ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಮಂಗಳವಾರವೇ ಚಂಡಮಾರುತವಾಗಿ ಮಾರ್ಪಟ್ಟಿತ್ತು. ಬುಧವಾರ ಮತ್ತೆ ವಾಯುಭಾರ ಕುಸಿತ ಉಂಟಾಗಿ ಮಂಗಳೂರು ನಗರದಲ್ಲಿ ವರುಣನ ಆರ್ಭಟ ಮುಂದುವರಿದಿದೆ. ಕರಾವಳಿ ಜಿಲ್ಲೆಗಳಲ್ಲಿ ಜೂ.13ರವರೆಗೆ ಗಾಳಿ ಸಹಿತ ಭಾರೀ ಮಳೆಯಾಗುವ ನಿರೀಕ್ಷೆಯಿದೆ.

ಚಂಡಮಾರುತದಿಂದ ಸಮುದ್ರ ಪ್ರಕ್ಷುಬ್ಧಗೊಂಡಿರುವುದರಿಂದ ಕರಾವಳಿಯ ತೀರ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಸಮುದ್ರದ ಪ್ರಕ್ಷುಬ್ಧತೆಯು ವಿವಿಧೆಡೆ ಕಡಲ್ಕೊರೆತ ಉಂಟಾಗಲು ಕಾರಣವಾಗಿದೆ. ಕರಾವಳಿಯಲ್ಲಿ ಮೀನುಗಾರಿಕೆಗೆ ನಿಷೇಧವಿದ್ದರೂ ಇನ್ನು ಎರಡು ದಿನಗಳ ಕಾಲ ಮೀನುಗಾರರು ಸಮುದ್ರಕ್ಕೆ ತೆರಳದಂತೆ ಮೀನುಗಾರಿಕಾ ಇಲಾಖೆ ಉಪನಿರ್ದೇಶಕರು ಎಚ್ಚರಿಕೆ ನೀಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)