varthabharthi

ಕರ್ನಾಟಕ

ಟ್ರಾಫಿಕ್ ಜಾಮ್‍ನಲ್ಲಿ ಸಿಲುಕಿದ ಸಂಸದ ತೇಜಸ್ವಿ

ಕಾಫಿನಾಡಿನಲ್ಲಿ ಚುರುಕುಗೊಂಡ ಮುಂಗಾರು: ಅಲ್ಲಲ್ಲಿ ಧರೆಗುರುಳಿದ ಮರ, ವಿದ್ಯುತ್ ಕಂಬಗಳು

ವಾರ್ತಾ ಭಾರತಿ : 12 Jun, 2019

ಚಿಕ್ಕಮಗಳೂರು, ಜೂ.12: ಕಾಫಿನಾಡಿಗೆ ಮುಂಗಾರು ಪ್ರವೇಶಿಸಿದ್ದು, ಕಳೆದ ಎರಡು ದಿನಗಳಿಂದ ಜಿಲ್ಲೆಯ ಮಲೆನಾಡು ಭಾಗದ ತಾಲೂಕುಗಳ ವ್ಯಾಪ್ತಿಯಲ್ಲಿ ನಿರಂತರ ಮಳೆಯಾಗುತ್ತಿದ್ದರೆ, ಚಿಕ್ಕಮಗಳೂರು, ಕಡೂರು ಹಾಗೂ ತರೀಕೆರೆ ತಾಲೂಕಿನ ಬಯಲುಸೀಮೆ ಪ್ರದೇಶಗಳಲ್ಲೂ ಸಾಧಾರಣ ಮಳೆಯಾಗುತ್ತಿದೆ. ಸೋಮವಾರ ಜಿಲ್ಲಾದ್ಯಂತ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಮಳೆಯಾಗುವ ನಿರೀಕ್ಷೆ ಮೂಡಿಸಿತ್ತು. ಅದರಂತೆ ಮಂಗಳವಾರ  ಬೆಳಗ್ಗೆಯಿಂದಲೇ ಆರಂಭವಾದ ಮಳೆಯ ಸಿಂಚನ ಬುಧವಾರವೂ ಮುಂದುವರಿಯಿತು. 

ಜಿಲ್ಲೆಯ ಮಲೆನಾಡು ಭಾಗದ ತಾಲೂಕುಗಳಾದ ಮೂಡಿಗೆರೆ, ಎನ್.ಆರ್.ಪುರ, ಕೊಪ್ಪ, ಶೃಂಗೇರಿ ಹಾಗೂ ಚಿಕ್ಕಮಗಳೂರು ತಾಲೂಕಿನಾದ್ಯಂತ ಮಂಗಳವಾರ ಬೆಳಗಿನಿಂದಲೇ ಸಾಧಾರಣ ಮಳೆ ಸುರಿದಿದ್ದು, ಕಡೂರು ಹಾಗೂ ತರೀಕೆರೆ ತಾಲೂಕುಗಳ ಬಯಲಸೀಮೆ ಪ್ರದೇಶಗಳಲ್ಲೂ ಸಾಧಾರಣ ಮಳೆ ಸುರಿದಿತ್ತು. ಬುಧವಾರ ಮಂಗಳವಾರ ರಾತ್ರಿ ಆಗಾಗ್ಗೆ ಈ ಭಾಗದಲ್ಲಿ ಉತ್ತಮ ಮಳೆ ಸುರಿದಿದೆ. ಬುಧವಾರ ಬೆಳಗ್ಗೆಯಿಂದಲೇ ಜಿಲ್ಲಾದ್ಯಂತ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಭಾರೀ ಮಳೆಯಾಗುವ ನಿರೀಕ್ಷೆ ಹುಟ್ಟಿಸಿತ್ತು. ಆದರೆ ಮಲೆನಾಡು ಭಾಗದ ಅಲ್ಲಲ್ಲಿ ಬುಧವಾರ ಧಾರಾಕಾರ ಮಳೆ ಸುರಿದಿದ್ದರೆ, ಬಯಲು ಸೀಮೆ ಭಾಗದಲ್ಲಿ ಬುಧವಾರ ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ಭಾರೀ ಗಾಳಿಯೊಂದಿಗೆ ಸಾಧಾರಣ ಹಾಗೂ ತುಂತುರು ಮಳೆ ಸುರಿಯಿತು. ಆದರೆ ಸಂಜೆ ವೇಳೆಗೆ ಜಿಲ್ಲೆಯ ಎಲ್ಲ ತಾಲೂಕುಗಳ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾದ ಬಗ್ಗೆ ವರದಿಯಾಗಿದೆ.

ಮೂಡಿಗೆರೆ, ಶೃಂಗೇರಿ, ಕೊಪ್ಪ ಮತ್ತು ನರಸಿಂಹರಾಜಪುರ, ಚಿಕ್ಕಮಗಳೂರು, ಕಡೂರು, ತರೀಕೆರೆ ತಾಲೂಕುಗಳ ವ್ಯಾಪ್ತಿಯಲ್ಲಿ ಮಂಗಳವಾರ ಹಾಗೂ ಬುಧವಾರ ಗಾಳಿಯೊಂದಿಗೆ ಮಳೆಯಾಗಿದ್ದು, ಸತತ ಮಳೆಯಿಂದಾಗಿ ಬುಧವಾರ ಮಲೆನಾಡಿನ ಕೆಲವೆಡೆ ಮರಗಳು ರಸ್ತೆಗುರುಳಿ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ನಿರಂತರ ಮಳೆಯಿಂದಾಗಿ ಮೂಡಿಗೆರೆ ತಾಲೂಕು ವ್ಯಾಪ್ತಿಯ ಗ್ರಾಮವೊಂದರಲ್ಲಿ ವಿದ್ಯುತ್ ಕಂಬಗಳು ನೆಲಕ್ಕುರುಳಿದ ಬಗ್ಗೆ ವರದಿಯಾಗಿದೆ.

ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರು ಗ್ರಾಪಂ ವ್ಯಾಪ್ತಿಯಲ್ಲಿರುವ ಕಣತಿ ಗ್ರಾಮದಲ್ಲಿ ಹಾದು ಹೋಗಿರುವ ಶೃಂಗೇರಿ-ಬಾಳೆಹೊನ್ನೂರು-ಚಿಕ್ಕಮಗಳೂರು ಹೆದ್ದಾರಿ ಮೇಲೆ ಬೃಹತ್ ಗಾತ್ರದ ಮರವೊಂದು ಉರುಳಿ ಬಿದ್ದ ಪರಿಣಾಮ ಒಂದು ಗಂಟೆಗೂ ಹೆಚ್ಚುಕಾಲ ಬಾಳೆಹೊನ್ನೂರು-ಚಿಕ್ಕಮಗಳೂರು ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು. ಇದರಿಂದಾಗಿ ಈ ಮಾರ್ಗದಲ್ಲಿ ಸಾಗುತ್ತಿದ್ದ ನೂರಾರು ಪ್ರವಾಸಿಗರ ವಾಹನಗಳು ಟ್ರಾಫಿಕ್ ಜಾಮ್‍ನಲ್ಲಿ ಸಿಲುಕಿ ಸಂಚಾರಕ್ಕೆ ಪರದಾಡುವಂತಾಗಿತ್ತು. ಸ್ಥಳೀಯರ ಸಹಾಯದಿಂದ ಅರಣ್ಯ ಇಲಾಖೆ ಸಿಬ್ಬಂದಿ ರಸ್ತೆ ಮೇಲೆ ಬಿದಿದ್ದ ಮರವನ್ನು ತೆರವುಗೊಳಿಸಿದ್ದರಿಂದ ವಾಹನಗಳ ಸಂಚಾರ ಪುನಾರಂಭಗೊಂಡಿತ್ತು.

ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿ ಭಾಗದಲ್ಲಿ ಮಂಗಳವಾರ ರಾತ್ರಿ ಬೀಸಿದ ಗಾಳಿಗೆ ಮರವೊಂದು ಹಾಗೂ ವಿದ್ಯುತ್ ತಂತಿ ಮೇಲೆ ಉರುಳಿದ ಪರಿಣಾಮ ವಿದ್ಯುತ್ ಕಂಬಗಳು ಹಾಗೂ ಟ್ರಾನ್ಸ್ ಫಾರ್ಮರ್ ನೆಲಕ್ಕುರುಳಿದ್ದು, ರಸ್ತೆಯ ಮೇಲೆ ವಿದ್ಯುತ್ ಕಂಬಗಳು ಬಿದ್ದ ಪರಿಣಾಮ ನಾಲ್ಕು ಗಂಟೆಗೂ ಹೆಚ್ಚು ಕಾಲ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಅಲ್ಲದೇ ಬುಧವಾರ ಈ ಭಾಗದಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು. ಇದರ ಹೊರತಾಗಿ ಜಿಲ್ಲೆಯಲ್ಲಿ ಸತತ ಮಳೆಯಿಂದಾಗಿ ಭಾರೀ ಅನಾಹುತಗಳು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.

ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಪ್ರವೇಶ ತಡವಾಗಿದ್ದರಿಂದ ಜಿಲ್ಲೆ ಕಾಫಿ, ಅಡಿಕೆ ಸೇರಿದಂತೆ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಸಾಧ್ಯವಾಗದೇ ನಿರಾಶರಾಗಿದ್ದರು. ಆದರೆ ತಡವಾಗಿಯಾದರೂ ಇದೀಗ ಮಂಗಾರು ಮಳೆ ಸತತವಾಗಿ ಸುರಿಯುತ್ತಿರುವುದರಿಂದ ಜಿಲ್ಲೆಯ ಬೆಳೆಗಾರರು ಹಾಗೂ ರೈತರ ಮುಖದಲ್ಲಿ ಮಂದಹಾಸ ಮೂಡಿದ್ದು, ಕಾಫಿ, ಅಡಿಕೆ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುವ ಜಿಲ್ಲೆಯ ರೈತರು ಕೃಷಿ ಚಟುವಟಿಕೆಗಳನ್ನು ಆರಂಭಿಸುವ ನಿಟ್ಟಿನಲ್ಲಿ ಹೊಲಗದ್ದೆಗಳತ್ತ ಮುಖಮಾಡಿದ್ದಾರೆ.

ಟ್ರಾಫಿಕ್ ಜಾಮ್‍ನಲ್ಲಿ ಸಿಲುಕಿದ ಸಂಸದ ತೇಜಸ್ವಿ
ಬುಧವಾರ ಸುರಿದ ಮಳೆಯಿಂದಾಗಿ ಚಿಕ್ಕಮಗಳೂರು-ಶೃಂಗೇರಿ ಹೆದ್ದಾರಿ ಮೇಲೆ ಭಾರೀ ಗಾತ್ರದ ಮರವೊಂದು ಉರುಳಿ ಬಿದ್ದ ಪರಿಣಾಮ ಇದೇ ರಸ್ತೆಯಲ್ಲಿ ಬೆಂಗಳೂರಿನಿಂದ ಶೃಂಗೇರಿಗೆ ತೆರಳುತ್ತಿದ್ದ ನೂತನ ಸಂಸದ ತೇಜಸ್ವಿ ಸೂರ್ಯ ಅವರ ಕಾರು ಟ್ರಾಫಿಕ್ ಜಾಮ್‍ನಲ್ಲಿ ಸಿಲುಕಿಕೊಂಡಿತ್ತು. ರಸ್ತೆಗೆ ಬಿದ್ದ ಮರ ತೆರವು ಕಾರ್ಯಾಚರಣೆ ಸುಮಾರು 1 ಗಂಟೆಗೂ ಹೆಚ್ಚು ಕಾಲ ನಡೆದಿದ್ದರಿಂದ ಸಂಸದ ತೇಜಸ್ವಿ ಇದ್ದ ಕಾರು ವಾಹನಗಳ ಮಧ್ಯೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸಿಲುಕಿಕೊಂಡಿತ್ತು. ಮರ ತೆರವುಗೊಳಿಸಿದ ಬಳಿಕ ಅವರು ಶೃಂಗೇರಿಯತ್ತ ಪ್ರಯಾಣ ಬೆಳೆಸಿದರು.

ಮಳೆ ವಿವರ: ಬುಧವಾರ ಬೆಳಗ್ಗೆ 8 ಗಂಟೆಗೆ ಅಂತ್ಯಗೊಂಡ 24 ಗಂಟೆಗಳಲ್ಲಿ ಜಿಲ್ಲೆಯ ವಿವಿಧ ಮಳೆಮಾಪನ ಕೇಂದ್ರಗಳಲ್ಲಿ ದಾಖಲಾದ ಮಳೆಯ ವಿವರ ಇಂತಿದೆ:

(ವಿವರ ಮಿ.ಮೀ.ಗಳಲ್ಲಿ) ಚಿಕ್ಕಮಗಳೂರು ತಾಲೂಕಿನ ಚಿಕ್ಕಮಗಳೂರು 5.2, ವಸ್ತಾರೆ 11.4, ಜೋಳದಾಳು 12, ಆಲ್ದೂರು 16.8, ಕೆ.ಆರ್.ಪೇಟೆ 5.1, ಅತ್ತಿಗುಂಡಿ 18.5, ಸಂಗಮೇಶ್ವರಪೇಟೆ 3.7, ಬ್ಯಾರವಳ್ಳಿ 2.2, ಮಳಲೂರು 4.3, ದಾಸರಹಳ್ಳಿಯಲ್ಲಿ 6.8ಮಿ.ಮೀ. ಮಳೆಯಾಗಿದೆ. ಕಡೂರು ತಾಲೂಕಿನ ಸಖರಾಯಪಟ್ಟಣ 3.3, ಕೊಪ್ಪ ತಾಲೂಕಿನ ಕೊಪ್ಪ 8.2, ಹರಿಹರಪುರ 11.4, ಜಯಪುರ 3.8, ಕಮ್ಮರಡಿ 9.7, ಬಸರಿಕಟ್ಟೆಯಲ್ಲಿ 10.8 ಮಿ.ಮೀ ಮಳೆಯಾಗಿದೆ. ಮೂಡಿಗೆರೆ ತಾಲೂಕಿನ ಮೂಡಿಗೆರೆ 12.2, ಕೊಟ್ಟಿಗೆಹಾರ 14.8, ಜಾವಳಿ 10.1, ಗೋಣಿಬೀಡು 12.3, ಕಳಸ 13.4, ಎನ್.ಆರ್.ಪುರ ತಾಲೂಕಿನ ಎನ್.ಆರ್.ಪುರ 0.6, ಬಾಳೆಹೊನ್ನೂರು 3.4, ಶೃಂಗೇರಿ ತಾಲೂಕಿನ ಶೃಂಗೇರಿ 22.8, ಕಿಗ್ಗಾ 21.8, ಕೆರೆಕಟ್ಟೆಯಲ್ಲಿ 70.4ಮಿ.ಮೀ. ಮಳೆಯಾಗಿದೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)