varthabharthi

ಕ್ರೀಡೆ

ಗುರುವಾರ ಭಾರತ-ಕಿವೀಸ್‌ಗೆ ಅಜೇಯ ಓಟ ಮುಂದುವರಿಸುವ ತವಕ

ವಾರ್ತಾ ಭಾರತಿ : 12 Jun, 2019

ನಾಟಿಂಗ್‌ಹ್ಯಾಮ್, ಜೂ.12: ವಿಶ್ವಕಪ್ ಟೂರ್ನಿಯಲ್ಲಿ ಈವರೆಗೆ ತಾವಾಡಿದ್ದ ಪಂದ್ಯಗಳನ್ನು ಜಯಿಸಿ ಅಜೇಯ ದಾಖಲೆ ಕಾಯ್ದುಕೊಂಡಿರುವ ಭಾರತ ಹಾಗೂ ನ್ಯೂಝಿಲ್ಯಾಂಡ್ ತಂಡಗಳು ಗುರುವಾರ ಟ್ರೆಂಟ್‌ಬ್ರಿಡ್ಜ್‌ನಲ್ಲಿ ನಡೆಯುವ ವಿಶ್ವಕಪ್ ಪಂದ್ಯದಲ್ಲಿ ಸೆಣಸಾಡಲಿವೆ. ಕಿವೀಸ್ ಟೂರ್ನಿಯಲ್ಲಿ ಆಡಿರುವ ಮೊದಲ ಮೂರು ಪಂದ್ಯಗಳನ್ನು ಗೆದ್ದುಕೊಂಡರೆ, ಭಾರತ ಎರಡೂ ಪಂದ್ಯಗಳಲ್ಲಿ ಜಯಭೇರಿ ಬಾರಿಸಿದೆ. ಭಾರತ ಹಾಗೂ ನ್ಯೂಝಿಲ್ಯಾಂಡ್ ವಿಶ್ವಕಪ್ ಕ್ರಿಕೆಟ್‌ನಲ್ಲಿ ಹಲವು ಬಾರಿ ಮುಖಾಮುಖಿಯಾಗಿದ್ದು,ಅಂಕಿ-ಅಂಶದಲ್ಲಿ ಕಿವೀಸ್ ಅಲ್ಪ ಮೇಲುಗೈ ಸಾಧಿಸಿದೆ.

ಭಾರತ-ನ್ಯೂಝಿಲ್ಯಾಂಡ್ ವಿಶ್ವಕಪ್‌ನಲ್ಲಿ ಈ ತನಕ 7 ಪಂದ್ಯಗಳನ್ನು ಆಡಿದ್ದು, ಈ ಪೈಕಿ ನ್ಯೂಝಿಲ್ಯಾಂಡ್ 4 ರಲ್ಲಿ ಜಯ ಸಾಧಿಸಿದ್ದರೆ, ಭಾರತ ಮೂರರಲ್ಲಿ ಗೆಲುವು ದಾಖಲಿಸಿದೆ.

ನ್ಯೂಝಿಲ್ಯಾಂಡ್ ತಂಡ ಇಂಗ್ಲೆಂಡ್‌ನಲ್ಲಿ ಆಡಿರುವ ಮೂರು ವಿಶ್ವಕಪ್ ಪಂದ್ಯಗಳಲ್ಲಿ ಭಾರತವನ್ನು ಮಣಿಸಿತ್ತು. ಸ್ವದೇಶದಲ್ಲಿ ನಡೆದ ಮತ್ತೊಂದು ಪಂದ್ಯದಲ್ಲೂ ಜಯ ಸಾಧಿಸಿತ್ತು. ಭಾರತ ಸ್ವದೇಶದಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ 2 ಬಾರಿ ಹಾಗೂ 2003ರಲ್ಲಿ ದಕ್ಷಿಣ ಆಫ್ರಿಕದಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲಿ ಜಯ ಸಾಧಿಸಿತ್ತು. ಉಭಯ ತಂಡಗಳು 2003ರಲ್ಲಿ ಕೊನೆಯ ಬಾರಿ ವಿಶ್ವಕಪ್‌ನ ಗ್ರೂಪ್ ಹಂತದಲ್ಲಿ ಮುಖಾಮುಖಿಯಾಗಿದ್ದವು.

ಧವನ್ ಗಾಯಾಳು, ಪ್ರತಿಕೂಲ ಹವಾಮಾನ ಭಾರತಕ್ಕೆ ಸವಾಲು

ಪ್ರಮುಖ ದಾಂಡಿಗ ಶಿಖರ್ ಧವನ್ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಭಾರತ ಪರ್ಯಾಯ ರಣತಂತ್ರ ರೂಪಿಸಬೇಕಾಗಿದ್ದು, ನ್ಯೂಝಿಲ್ಯಾಂಡ್‌ನ ಪ್ರಬಲ ಬೌಲಿಂಗ್ ದಾಳಿ ಎದುರು ಕಠಿಣ ಪರೀಕ್ಷೆ ಎದುರಿಸಬೇಕಾಗಿದೆ. ಪ್ರತಿಕೂಲ ಹವಾಗುಣ ಗುರುವಾರದ ಪಂದ್ಯಕ್ಕೆ ಅಡ್ಡಿಯಾಗುವ ಭೀತಿಯೂ ಇದೆ.

ಇಂಗ್ಲೆಂಡ್‌ನ ಮೋಡ ಕವಿದ ವಾತಾವರಣದಲ್ಲಿ ನ್ಯೂಝಿಲ್ಯಾಂಡ್‌ನ ವೇಗದ ಬೌಲಿಂಗ್ ವಿಭಾಗ ರೋಹಿತ್ ಶರ್ಮಾರೊಂದಿಗೆ ಇನಿಂಗ್ಸ್ ಆರಂಭಿಸಲಿರುವ ಕೆ.ಎಲ್. ರಾಹುಲ್‌ಗೆ ಸವಾಲಾಗುವ ಸಾಧ್ಯತೆಯಿದೆ. ಧವನ್ ಹೆಬ್ಬೆರಳಿಗೆ ಗಾಯವಾದ ಕಾರಣ ಮೂರು ವಾರ ಟೂರ್ನಿಯಿಂದ ದೂರ ಉಳಿದಿದ್ದಾರೆ. ಐಸಿಸಿ ಟೂರ್ನಿಗಳಲ್ಲಿ ನ್ಯೂಝಿಲ್ಯಾಂಡ್ ತಂಡ ಭಾರತದ ವಿರುದ್ಧ ಉತ್ತಮ ದಾಖಲೆ ಕಾಯ್ದುಕೊಂಡಿದೆ. ಕೇನ್ ವಿಲಿಯಮ್ಸನ್ ಬಳಗ ಟೂರ್ನಿಯಲ್ಲಿ ಈಗಾಗಲೇ ಹ್ಯಾಟ್ರಿಕ್ ಗೆಲುವು ದಾಖಲಿಸಿದ್ದು, ಕೊಹ್ಲಿ ಪಡೆಯನ್ನೂ ಕಟ್ಟಿಹಾಕಿ ಸತತ 4ನೇ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಉಳಿಸಿಕೊಳ್ಳುವ ಯೋಜನೆಯಲ್ಲಿದೆ.

ದಕ್ಷಿಣ ಆಫ್ರಿಕ ಹಾಗೂ ಆಸ್ಟ್ರೇಲಿಯ ವಿರುದ್ಧ ಆಡಿರುವ ಮೊದಲೆರಡು ವಿಶ್ವಕಪ್ ಪಂದ್ಯಗಳಲ್ಲಿ ಜಯ ಸಾಧಿಸಿರುವ ಭಾರತ ತಂಡ ಧವನ್ ಅನುಪಸ್ಥಿತಿಯ ಕಾರಣ ಕಿವೀಸ್ ವಿರುದ್ಧ ತನ್ನ ರಣತಂತ್ರ ಬದಲಾಯಿಸಬೇಕಾಗಿದೆ. ಕನ್ನಡಿಗ ರಾಹುಲ್ ಇನಿಂಗ್ಸ್ ಆರಂಭಿಸುವ ಸಾಧ್ಯತೆಯಿದ್ದು ರಾಹುಲ್ ಆಡುತ್ತಿದ್ದ ನಾಲ್ಕನೇ ಕ್ರಮಾಂಕದಲ್ಲಿ ವಿಜಯ ಶಂಕರ್ ಅಥವಾ ದಿನೇಶ್ ಕಾರ್ತಿಕ್ ಆಡುವ ನಿರೀಕ್ಷೆಯಿದೆ. ಶಂಕರ್ ಆಲ್‌ರೌಂಡರ್ ಸಾಮರ್ಥ್ಯದ ಮೂಲಕ ಕಾರ್ತಿಕ್‌ರನ್ನು ಹಿಂದಿಕ್ಕಿ ಅಂತಿಮ-11ರ ಬಳಗದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಬಹುದು.

  ದಟ್ಟ ಕಾರ್ಮೋಡ ಹಾಗೂ ತೇವಾಂಶದ ವಾತಾವರಣದಲ್ಲಿ ಮುಹಮ್ಮದ್ ಶಮಿ ಅವರನ್ನು ಭಾರತ ಕಣಕ್ಕಿಳಿಸಬಹುದು. ಶಮಿ ಆಡುವ ಬಳಗಕ್ಕೆ ಬಂದರೆ ಇಬ್ಬರು ಸ್ಪಿನ್ನರ್‌ಗಳ ಪೈಕಿ ಓರ್ವ ಸ್ಥಾನ ತೆರವುಗೊಳಿಸಬೇಕಾಗುತ್ತದೆ. ಭಾರತದ ಉಪ ನಾಯಕ ರೋಹಿತ್ ಟೂರ್ನಿಯಲ್ಲಿ ಆಡಿರುವ ಮೊದಲೆರಡು ಪಂದ್ಯಗಳಲ್ಲಿ ಶತಕ ಹಾಗೂ ಅರ್ಧಶತಕ ಗಳಿಸಿದ್ದಾರೆ. ಭಾರತದ ಆರಂಭಿಕ ಜೋಡಿ ರೋಹಿತ್-ರಾಹುಲ್‌ಗೆ ಟ್ರೆಂಟ್ ಬೌಲ್ಟ್‌ರ ಮೊದಲ ಸ್ಪೆಲ್ ಎದುರಿಸುವುದು ದೊಡ್ಡ ಸವಾಲಾಗಿದೆ. ಬೌಲ್ಟ್ ಅಭ್ಯಾಸ ಪಂದ್ಯದಲ್ಲಿ ಭಾರತೀಯ ಬ್ಯಾಟಿಂಗ್ ಸರದಿಗೆ ಪರೀಕ್ಷೆಯೊಡ್ಡಿದ್ದರು. ಆಗ ಭಾರತ ತಂಡ ಇಂಗ್ಲೆಂಡ್ ನೆಲಕ್ಕೆ ಕಾಲಿರಿಸಿ ಕೆಲವೇ ದಿನವಾಗಿತ್ತು. ಬೌಲ್ಟ್ ಇಂಗ್ಲೆಂಡ್‌ಗೆ ಬಂದು ಎರಡೂವರೆ ವಾರಗಳು ಕಳೆದಿದ್ದರೂ ಅವರಿಗೆ ಟೂರ್ನಿ ಯಲ್ಲಿ ಚೆಂಡನ್ನು ಹೆಚ್ಚು ಸ್ವಿಂಗ್ ಮಾಡಲು ಸಾಧ್ಯವಾಗಿಲ್ಲ. ಗಂಟೆಗೆ 150 ಕಿ.ಮೀ. ವೇಗ ದಲ್ಲಿ ಬೌಲಿಂಗ್ ಮಾಡಬಲ್ಲ ಲಾಕಿ ಫರ್ಗ್ಯುಸನ್ ಬೌನ್ಸರ್ ಒದಗಿಸುವ ಟ್ರೆಂಟ್‌ಬ್ರಿಡ್ಜ್ ಪಿಚ್‌ನಲ್ಲಿ ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿದ್ದಾರೆ. ಪಾಕಿಸ್ತಾನ ಹಾಗೂ ಆಸ್ಟ್ರೇಲಿಯ ವಿರುದ್ಧ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಬೌಲರ್‌ಗಳು ಬೌನ್ಸರ್ ಮೂಲಕ ಗಮನ ಸೆಳೆದಿದ್ದರು.

‘‘ಟ್ರೆಂಟ್‌ಬ್ರಿಡ್ಜ್‌ನಲ್ಲಿ ಹೆಚ್ಚುವರಿ ಬೌನ್ಸ್ ಲಭ್ಯವಿದೆ ಎನ್ನುವುದನ್ನು ವಿಂಡೀಸ್ ತಂಡ ತೋರಿಸಿಕೊಟ್ಟಿದೆ. ಇದು ಎದುರಾಳಿಗೆ ಸ್ವಲ್ಪ ಸಮಸ್ಯೆಯಾಗಬಹುದು. ಟ್ರೆಂಟ್‌ಬ್ರಿಡ್ಜ್ ಮೈದಾನವನ್ನು ನಾನು ತುಂಬಾ ಇಷ್ಟಪಡುತ್ತೇನೆ. ಭಾರತೀಯ ಆಟಗಾರರಿಗೆ ಸವಾಲಾಗಲು ಎದುರು ನೋಡುತ್ತಿದ್ದೇನೆ’’ ಎಂದು ಫರ್ಗ್ಯುಸನ್ ಸ್ಪಷ್ಟಪಡಿಸಿದ್ದಾರೆ.

ಪಂದ್ಯಕ್ಕೆ ಮಳೆ ಭೀತಿ

 ಭಾರತ ಟೂರ್ನಿಯಲ್ಲಿ ಆಡಿದ್ದ ತನ್ನ ಮೊದಲ ಹಾಗೂ ಎರಡನೇ ಪಂದ್ಯಕ್ಕೆ ಮೊದಲು ಸೌತಾಂಪ್ಟನ್ ಹಾಗೂ ಲಂಡನ್‌ನಲ್ಲಿನ ಅಭ್ಯಾಸವನ್ನು ಮಳೆಯಿಂದಾಗಿ ರದ್ದುಪಡಿಸಿತ್ತು. ಮಂಗಳವಾರ ಮತ್ತೊಮ್ಮೆ ತನ್ನ ಅಭ್ಯಾಸವನ್ನು ರದ್ದುಪಡಿಸಿತ್ತು. ಸೋಮವಾರ ಬೆಳಗ್ಗೆಯಿಂದ ನಾಟಿಂಗ್‌ಹ್ಯಾಮ್ ನಗರ ಸಹಿತ ಇಂಗ್ಲೆಂಡ್‌ನಾದ್ಯಂತ ನಿರಂತರವಾಗಿ ಮಳೆಯಾಗುತ್ತಿದೆ. ಮುಂದಿನ ಎರಡು ದಿನಗಳ ಕಾಲ ಪ್ರತಿಕೂಲ ಹವಾಮಾನವಿದ್ದು, ನ್ಯೂಝಿಲ್ಯಾಂಡ್ ವಿರುದ್ಧ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆಯಿದೆ. ಬುಧವಾರ ಮಿಂಚು-ಗುಡುಗು ಸಹಿತ ಮಳೆ ಹಾಗೂ ಮೋಡ ಕವಿದ ವಾತಾವರಣವಿದ್ದು,ಗುರುವಾರವೂ ಇದೇ ವಾತಾವರಣ ಮುಂದುವರಿಯಬಹುದು. ಪಂದ್ಯ ನಡೆಯಬೇಕಾದರೆ, ಮಳೆ ನಿಲ್ಲಬೇಕು. ಆ ನಂತರ ಸೂರ್ಯಕಿರಣ ಕಾಣಿಸಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)