varthabharthi

ಸಂಪಾದಕೀಯ

ಯುದ್ಧ ವಿಮಾನ ನಾಪತ್ತೆ: ರಕ್ಷಣಾ ಸಚಿವರು ಮಾತನಾಡಲಿ

ವಾರ್ತಾ ಭಾರತಿ : 13 Jun, 2019

ಕಳೆದ ಐದು ವರ್ಷಗಳೀಚೆಗೆ ಸೇನೆ ಪತ್ರಿಕೆಗಳ ಮುಖಪುಟಗಳಲ್ಲಿ ಬೇರೆ ಬೇರೆ ಕಾರಣಗಳಿಗಾಗಿ ಸುದ್ದಿಯಾಗುತ್ತಿದೆ. ಸೇನೆಯೊಳಗೆ ನಡೆಯುತ್ತಿರುವ ರಾಜಕೀಯ ಹಸ್ತಕ್ಷೇಪ ಇದಕ್ಕೆ ಮುಖ್ಯ ಕಾರಣ. ಇತ್ತೀಚಿನ ದಿನಗಳಲ್ಲಿ ಸೇನೆಗೆ ಸಂಬಂಧಿಸಿದ ಯಾವುದೇ ಬೆಳವಣಿಗೆಗಳಿಗೂ ಜನರು ರಾಜಕೀಯ ಅರ್ಥ ಹಚ್ಚುವಂತಹ ಸ್ಥಿತಿ ನಿರ್ಮಾಣವಾಗಿದೆ. ಪುಲ್ವಾಮ ದಾಳಿಯ ಬಳಿಕ ನಡೆದ ‘ಬಾಲಕೋಟ್ ಸರ್ಜಿಕಲ್ ಸ್ಟ್ರೈಕ್’ನ ನಂತರ ಪಾಕಿಸ್ತಾನ-ಭಾರತದ ನಡುವಿನ ಸಂಬಂಧ ತೀರಾ ಹಳಸಿತು. ಈ ಸರ್ಜಿಕಲ್ ಸ್ಟ್ರೈಕ್‌ನ ಬಹಿರಂಗ ಕೂಡ ಸೇನೆಯನ್ನು ತೀವ್ರ ಮುಜುಗರಕ್ಕೆ ತಳ್ಳಿತು. ಪಾಕಿಸ್ತಾನದ ಯುದ್ಧವಿಮಾನವನ್ನು ತಾನು ನಾಶ ಮಾಡಿದೆ ಎಂದು ಭಾರತ ಹೇಳಿದಂತೆಯೇ ಪಾಕಿಸ್ತಾನವೂ ಪ್ರತಿ ಹೇಳಿಕೆ ನೀಡಿತು. ನಮ್ಮ ಯೋಧನೊಬ್ಬ ಪಾಕಿಸ್ತಾನಕ್ಕೆ ಸೆರೆ ಸಿಕ್ಕ ಬಳಿಕ ಪ್ರಕರಣ ಇನ್ನಷ್ಟು ಬಿಗಡಾಯಿಸಿತು. ಆದರೆ ಪಾಕಿಸ್ತಾನ ಯೋಧನನ್ನು ಕ್ಷೇಮವಾಗಿ ಹಸ್ತಾಂತರಿಸುವ ಮೂಲಕ ಸಮಯ ಪ್ರಜ್ಞೆಯನ್ನು ಮೆರೆಯಿತು. ಇಲ್ಲದೇ ಇದ್ದರೆ, ಉಭಯ ದೇಶಗಳ ಸಂಬಂಧ ಗುಣಪಡಿಸಲಾಗದಷ್ಟು ಬಿಗಡಾಯಿಸಿ ಬಿಡುತ್ತಿತ್ತು. ಆದರೆ ಈ ಬಾಲಕೋಟ್ ಸರ್ಜಿಕಲ್ ದಾಳಿಯ ಗದ್ದಲದ ನಡುವೆಯೇ ಕಾಶ್ಮೀರದ ಬಗ್ದಾಮ್‌ನಲ್ಲಿ ಭಾರತೀಯ ಸೇನಾ ಹೆಲಿಕಾಪ್ಟರ್ ಒಂದು ನೆಲಕಚ್ಚಿತು. ಆರು ಮಂದಿ ವಾಯುಸೇನಾ ಯೋಧರು ಮೃತಪಟ್ಟರು. ಆದರೆ ಈ ಅವಘಡ ಹೊರ ಜಗತ್ತಿಗೆ ಒಂದು ಅಪಘಾತ ಮಾತ್ರವಾಗಿತ್ತು. ಚುನಾವಣೆಯ ಹಿನ್ನೆಲೆಯಲ್ಲಿಯೋ ಅಥವಾ ಇತರ ಕಾರಣಗಳಿಗಾಗಿಯೋ ಸೇನೆ ಅವಘಡಕ್ಕೆ ಕಾರಣವಾದ ಅಂಶವನ್ನು ಮುಚ್ಚಿಟ್ಟಿತು. ಆದರೆ ಯಾವಾಗ ಚುನಾವಣೆಯ ಫಲಿತಾಂಶ ಬಹಿರಂಗವಾಯಿತೋ, ಈ ದುರಂತದ ಕಾರಣವೂ ಜೊತೆ ಜೊತೆಗೇ ಬಹಿರಂಗವಾಯಿತು.

ನಮ್ಮ ಹೆಲಿಕಾಪ್ಟರನ್ನು ಯಾವುದೇ ಹೊರಗಿನ ದೇಶ ಪತನಗೊಳಿಸಿರಲಿಲ್ಲ ಅಥವಾ ಯಾವುದೇ ತಾಂತ್ರಿಕ ದೋಷವೂ ಈ ಅಪಘಾತಕ್ಕೆ ಕಾರಣವಾಗಿರಲಿಲ್ಲ. ನಮ್ಮದೇ ಸೇನೆಯ ಕ್ಷಿಪಣಿಗೆ ಸಿಲುಕಿ ಈ ಸೇನಾ ಹೆಲಿಕಾಪ್ಟರ್ ಪತನಗೊಂಡಿತ್ತು. ಅಧಿಕಾರಿಗಳ ಬೇಜವಾಬ್ದಾರಿಗೆ ಸೇನೆ ತನ್ನ ಆರು ಮಂದಿ ಯೋಧರನ್ನು ಕಳೆದುಕೊಂಡಿತು. ಇದೀಗ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ. ಇತ್ತೀಚೆಗೆ ಉಡುಪಿಯ ಮೀನುಗಾರಿಕಾ ದೋಣಿ ನಿಗೂಢವಾಗಿ ನಾಪತ್ತೆಯಾಗಿತ್ತು. ಉಡುಪಿ ಜಿಲ್ಲೆಯಲ್ಲಿ ಈ ಕುರಿತಂತೆ ವಿವಿಧ ವದಂತಿಗಳು ಹುಟ್ಟಿಕೊಂಡವು. ರತ್ನಗಿರಿಯ ಮುಸ್ಲಿಮರು ಈ ದೋಣಿಯನ್ನು ಅಪಹರಿಸಿದ್ದಾರೆಂದು ಕೆಲವರು ಜಾಲತಾಣಗಳಲ್ಲಿ ಸುದ್ದಿಗಳನ್ನು ಹರಡಿದರೆ, ಪಾಕಿಸ್ತಾನ ಮೀನುಗಾರರನ್ನು ಬಂಧಿಸಿದೆ ಎಂಬ ಹೇಳಿಕೆಗಳನ್ನು ರಾಜಕಾರಣಿಗಳು ನೀಡತೊಡಗಿದರು. ಬಿಜೆಪಿಯಂತೂ ಈ ಘಟನೆಯನ್ನು ಹಿಂದೂ-ಮುಸ್ಲಿಮರ ನಡುವೆ ಕಿಚ್ಚಿಡುವುದಕ್ಕೆ ಬಳಸಲು ಹವಣಿಸಿತು. ಚುನಾವಣೆ ಮುಗಿಯುವವರೆಗೂ ದೋಣಿ ನಾಪತ್ತೆಯ ಕಾರಣ ನಿಗೂಢವಾಗಿಯೇ ಉಳಿಯಿತು. ಯಾವಾಗ ಚುನಾವಣೆ ಮುಗಿಯಿತೋ, ಅದರ ಬೆನ್ನಿಗೇ ದೋಣಿಯ ಅವಶೇಷಗಳು ಪತ್ತೆಯಾದವು.

ಈ ದೋಣಿಗೆ ಸೇನಾ ಹಡಗು ಢಿಕ್ಕಿ ಹೊಡೆದಿದೆ ಎನ್ನುವುದು ಬಯಲಾಯಿತು. ಆತಂಕದ ವಿಷಯವೆಂದರೆ, ಈ ದುರಂತವು ರಾಜಕೀಯ ತಿರುವು ಪಡೆಯುತ್ತಿರುವಾಗಲೂ ಈ ಬಗ್ಗೆ ಸೇನೆಯ ಅಧಿಕಾರಿಗಳು ಸ್ಪಷ್ಟನೆಯನ್ನು ನೀಡಿರಲಿಲ್ಲ. ಇದೀಗ ದುರಂತದ ಕುರಿತಂತೆ ಅಣಕು ತನಿಖೆ ನಡೆಯುತ್ತಿದೆ. ಆದರೆ ಸೇನೆ ಈ ವಿಷಯವನ್ನು ಮುಚ್ಚಿಡಲು ಕಾರಣವಾದ ಅಂಶಗಳು ಯಾವುವು? ಇದರ ಹಿಂದೆ ರಾಜಕೀಯ ಶಕ್ತಿಗಳಿವೆಯೇ? ಅಥವಾ ಸೇನಾ ಸಿಬ್ಬಂದಿಯ ಬೇಜವಾಬ್ದಾರಿ ಕಾರಣವೇ ಎನ್ನುವುದೂ ತನಿಖೆಯಿಂದ ಬಹಿರಂಗವಾಗಬೇಕಾಗಿದೆ. ಇದೀಗ ಇನ್ನೊಂದು ಪ್ರಕರಣ ಸುದ್ದಿಯಲ್ಲಿದೆ. ಭಾರತದ ಸೇನಾ ವಿಮಾನವೊಂದು ನಾಪತ್ತೆಯಾಗಿದೆ. ಭಾರತೀಯ ವಾಯುಪಡೆಯ ಎಎನ್-32 ಈಶಾನ್ಯ ಭಾರತದಲ್ಲಿ ನಿಗೂಢವಾಗಿ ಕಾಣೆಯಾಗಿದ್ದು ಒಂದು ವಾರಗಳ ಕಾಲ ಅದನ್ನು ಪತ್ತೆ ಮಾಡುವುದಕ್ಕೆ ನಮಗೆ ಸಾಧ್ಯವಾಗಲಿಲ್ಲ. ಈ ವಿಮಾನದಲ್ಲಿ 13 ಮಂದಿ ಯೋಧರಿದ್ದರು. ಇದೀಗ ಎಂಟು ದಿನಗಳ ಬಳಿಕ ಅದರ ಅವಶೇಷಗಳು ಅರುಣಾಚಲ ಪ್ರದೇಶದಲ್ಲಿ ಪತ್ತೆಯಾಗಿವೆ. ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಯಿದ್ದ ಈ ವಿಮಾನ ತಾಂತ್ರಿಕ ಕಾರಣದಿಂದ ಪತನವಾಗಿರಬಹುದು ಎಂದು ಅನುಮಾನ ಪಡಲಾಗಿದೆ. ಆದರೆ ಆ ಅನುಮಾನದಿಂದ ನಾವು ಸಂತೃಪ್ತಿ ಪಡುವಂತೆಯೂ ಇಲ್ಲ.

ಯಾಕೆಂದರೆ ಇತ್ತೀಚೆಗೆ ಪಾಕಿಸ್ತಾನ ಮತ್ತು ಚೀನಾ ಗಡಿಭಾಗಗಳು ರಾಜಕೀಯ ಕಾರಣಗಳಿಗಾಗಿ ಸುದ್ದಿಯಾಗುತ್ತಿವೆ. ಚೀನಾವಂತೂ ಬೇರೆ ಬೇರೆ ನೆಪಗಳ ಮೂಲಕ ಭಾರತದ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದೆ. ಪಾಕಿಸ್ತಾನದ ಬೇಜವಾಬ್ದಾರಿ ನಡವಳಿಕೆಗಳನ್ನು ಚೀನಾ ಬಹಿರಂಗವಾಗಿಯೇ ಬೆಂಬಲಿಸುತ್ತಿದೆ. ಒಂದು ವೇಳೆ ಭಾರತದ ಯುದ್ಧ ವಿಮಾನ ಆಕಸ್ಮಿಕವಾಗಿ ಚೀನಾದ ಗಡಿಭಾಗವನ್ನು ಪ್ರವೇಶಿಸಿತ್ತೇ? ಮತ್ತು ಚೀನಾವೇ ಭಾರತದ ಯುದ್ಧ ವಿಮಾನವನ್ನು ಉಡಾಯಿಸಿತೇ? ಎಂದು ಅನುಮಾನ ಪಡುವುದಕ್ಕೆ ಕಾರಣಗಳು ನಮ್ಮ ಮುಂದೆ ಸಾಕಷ್ಟಿವೆ. ಬಹುಶಃ ಇಂದು ಭಾರತದ ಯುದ್ಧ ವಿಮಾನ ಪಾಕಿಸ್ತಾನದ ಗಡಿಭಾಗದಲ್ಲಿ ನಾಪತ್ತೆಯಾಗಿದ್ದರೆ, ಅಲ್ಲಿ ಅದರ ಅವಶೇಷಗಳು ಪತ್ತೆಯಾಗಿದ್ದರೆ ಪರಿಸ್ಥಿತಿಯೇ ಬೇರೆ ರೂಪವನ್ನು ಪಡೆಯುತ್ತಿತ್ತು. ಉಭಯ ದೇಶಗಳ ನಡುವೆ ಮತ್ತೆ ಯುದ್ಧದ ವಾತಾವರಣ ನಿರ್ಮಾಣವಾಗಿ ಬಿಡುತ್ತಿತ್ತು. ಶತ್ರುವಾಗಿ ಭಾರತಕ್ಕೆ ಚೀನಾ ದೇಶವು ಪಾಕ್‌ಗಿಂತ ಭಿನ್ನವೇನಲ್ಲ. ಹೇಗೆ ಭಾರತದ ಭೂಭಾಗ ಪಾಕಿಸ್ತಾನದ ವಶದಲ್ಲಿದೆಯೋ, ಹಾಗೆಯೇ ಚೀನಾದ ವಶದಲ್ಲೂ ಇದೆ.

ಕಾಶ್ಮೀರದ ಮೇಲೆ ಪಾಕಿಸ್ತಾನ ಹಕ್ಕು ಸಾಧಿಸುವಂತೆಯೇ ಅರುಣಾಚಲದ ಮೇಲೆ ಚೀನಾ ಪದೇ ಪದೇ ಹಕ್ಕು ಸಾಧಿಸುತ್ತಾ ಬಂದಿದೆ. ಅರುಣಾಚಲದಲ್ಲಿ ಭಾರತ ಸರಕಾರ ಅಧಿಕೃತವಾಗಿ ಅಸ್ತಿತ್ವದಲ್ಲಿದ್ದರೂ, ಆ ನೆಲಕ್ಕೆ ಪ್ರಧಾನಿ ಕಾಲಿಟ್ಟಾಗ ಚೀನಾ ಆಕ್ಷೇಪ ವ್ಯಕ್ತಪಡಿಸಿತ್ತು. ಇದೀಗ ನಾಪತ್ತೆಯಾಗಿರುವ ವಿಮಾನದ ಅವಶೇಷಗಳು ಅರುಣಾಚಲದಲ್ಲೇ ಪತ್ತೆಯಾಗಿರುವುದರಿಂದ, ಚೀನಾ ಕೈವಾಡ ಇದರ ಹಿಂದೆ ಯಾಕಿರಬಾರದು ಎಂದು ಸಂಶಯಿಸುವಂತೆ ಮಾಡಿದೆ. ಚೀನಾದ ಕುರಿತಂತೆ ಭಾರತವು ಅಪಾರ ಸಹನೆಯನ್ನು ತಾಳುತ್ತಾ ಬಂದಿದೆ. ರಾಜಕೀಯ ದೃಷ್ಟಿಯಿಂದ ಅದು ಮುತ್ಸದ್ದಿತನದ ನಿಲುವು ಕೂಡ. ಸೇನಾ ಬಲದಲ್ಲಿ ಅತ್ಯಂತ ಸಮರ್ಥವಾಗಿರುವ, ಭಾರತಕ್ಕಿಂತಲೂ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಚೀನಾದ ಜೊತೆಗೆ ವ್ಯವಹರಿಸುವಾಗ ಗರಿಷ್ಠ ತಾಳ್ಮೆ ವ್ಯಕ್ತಪಡಿಸುವುದು ಅನಿವಾರ್ಯ. ಆದರೆ ಇದೀಗ ನಾಪತ್ತೆಯಾಗಿರುವ ಯುದ್ಧವಿಮಾನದ ಹಿಂದೆ ಚೀನಾದ ಕೈವಾಡವೇನಾದರೂ ಇದ್ದರೆ ಭಾರತ ಅದಕ್ಕಾಗಿ ತನ್ನ ಪ್ರತಿಭಟನೆಯನ್ನು ವ್ಯಕ್ತಪಡಿಸಲೇಬೇಕಾಗುತ್ತದೆ. ನಮ್ಮ ಯೋಧರು ಯಾವ ಕಾರಣಕ್ಕಾಗಿ ಅರುಣಾಚಲದಲ್ಲಿ ಪ್ರಾಣವನ್ನು ಬಲಿಕೊಟ್ಟರು ಎನ್ನುವುದನ್ನು ತಿಳಿದುಕೊಳ್ಳುವ ಹಕ್ಕು ಈ ದೇಶದ ಪ್ರಜೆಗಳಿಗೆ ಇದೆ.ಈ ನಿಟ್ಟಿನಲ್ಲಿ ನಮ್ಮ ಯುದ್ಧ ವಿಮಾನದ ಪತನದ ಕಾರಣವನ್ನು ರಕ್ಷಣಾ ಸಚಿವರು ದೇಶಕ್ಕೆ ಸ್ಪಷ್ಟಪಡಿಸಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)