varthabharthi

ಕರ್ನಾಟಕ

ಕೊಡಗಿನಲ್ಲಿ ಚುರುಕುಗೊಂಡ ಮಳೆ

ವಾರ್ತಾ ಭಾರತಿ : 13 Jun, 2019

ಮಡಿಕೇರಿ, ಜೂ.12: ಕೊಡಗಿನಲ್ಲಿ ತಡವಾಗಿ ಆರಂಭಗೊಂಡ ಮಳೆ ಮೂರನೇ ದಿನ ಚುರುಕು ಪಡೆದುಕೊಂಡಿದೆ. ನೈಋತ್ಯ ಭಾಗಕ್ಕೆ ಜೂನ್ ಮೊದಲ ವಾರದಲ್ಲಿ ಮುಂಗಾರು ಪ್ರವೇಶ ಮಾಡಿ ಜಿಲ್ಲೆಯಲ್ಲಿ ಎರಡನೇ ಅಥವಾ ಮೂರನೇ ವಾರದಲ್ಲಿ ಮುಂಗಾರು ತೀವ್ರತೆಯನ್ನು ಪಡೆದುಕೊಳ್ಳುವುದು ಸಾಮಾನ್ಯ. 

ಜಿಲ್ಲಾ ಕೇಂದ್ರ ಮಡಿಕೇರಿ ಮಂಜಿನ ನಗರಿಯಾಗಿ ಬದಲಾಗಿದೆ, ಚಳಿಯೂ ಇದೆ. ಮುಂಗಾರು ಮಳೆಗೆ ಪ್ರತಿಯೊಬ್ಬರೂ ಕೊಡೆ, ಸ್ವೆಟರ್, ಗಂಬೂಟು, ಬಟ್ಟೆ ಒಣಗಲು ಬಳಂಜಿ ಹೀಗೆ ನಾನಾ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕಿದೆ. ಇನ್ನು ಮುಂದಿನ ನಾಲ್ಕು ತಿಂಗಳ ಕಾಲ ಮೋಡ ಕವಿದ ವಾತಾವರಣ ಕೊಡಗು ಜಿಲ್ಲೆಯಲ್ಲಿ ಕಾಣಬಹುದಾಗಿದೆ.  

ಕಳೆದ ಬಾರಿಯ ತೀವ್ರ ಅತಿವೃಷ್ಟಿಯಿಂದಾಗಿ ಜಿಲ್ಲೆಯ ಜನರು ತುಂಬಾ ಸಂಕಷ್ಟ ಅನುಭವಿಸಿದ್ದರು. ಭತ್ತ, ಮುಸುಕಿನ ಜೋಳ, ಕಾಫಿ, ಏಲಕ್ಕಿ, ಕಾಳು ಮೆಣಸು, ಬಾಳೆ ಹೀಗೆ ನಾನಾ ಕೃಷಿ, ತೋಟಗಾರಿಕೆ ಹಾಗೂ ವಾಣಿಜ್ಯ ಬೆಳೆಗಳು ನಾಶವಾದವು. ಇದರಿಂದಾಗಿ ಜಿಲ್ಲೆಯ ಕೃಷಿಕರು ಚೇತರಿಸಿಕೊಳ್ಳುವುದೇ ಕಷ್ಟಸಾಧ್ಯವಾಗಿತ್ತು. ಸರ್ಕಾರ ಬೆಳೆ ಹಾನಿಗೆ ಪರಿಹಾರ ನೀಡಿದೆ. ಸಂತ್ರಸ್ತರಿಗೆ ಮನೆ ನಿರ್ಮಾಣ ಮಾಡುತ್ತಿದ್ದು ಸದ್ಯದಲ್ಲಿಯೇ ಮನೆ ಹಸ್ತಾಂತರ ಪ್ರಕ್ರಿಯೆ ನಡೆಯಲಿದೆ. ಆದರೂ ಕಳೆದ ಬಾರಿಯ ತೀವ್ರ ಅತಿವೃಷ್ಟಿಯಿಂದಾಗಿ ಒಂದು ರೀತಿ ಜಿಲ್ಲೆಯ ಜನರ ಬದುಕು ಅಸ್ತವ್ಯಸ್ತ ಉಂಟಾಗಿತ್ತು.    

ಕಳೆದ ನಾಲ್ಕು ವರ್ಷದಲ್ಲಿ ಜನವರಿಯಿಂದ ಮೇ ಅಂತ್ಯದ ವರೆಗಿನ ವಾಡಿಕೆ ಮಳೆಯ ಪ್ರಮಾಣ ಅವಲೋಕನ ಮಾಡಿದಾಗ ಜಿಲ್ಲೆಯಲ್ಲಿ ಜನವರಿಯಿಂದ ಮೇ ಅಂತ್ಯದ ವರೆಗೆ ವಾಡಿಕೆ ಮಳೆಯ ಪ್ರಮಾಣವು 245.50 ಮಿ.ಮೀ.ಗಳಾಗಿದ್ದು, 2016 ರಲ್ಲಿ 158.20 ಮಿ.ಮೀ ಮಳೆಯಾಗಿದ್ದು, 2017 ರಲ್ಲಿ 305.04 ಮಿ.ಮೀ. ಮಳೆಯಾಗಿದ್ದು, 2018 ರ ಇದೇ ಅವಧಿಯಲ್ಲಿ 423.68 ಮಿ.ಮೀ. ಮಳೆಯಾಗಿದ್ದರೆ, 2019ರ  ಇದೇ ಅವಧಿಯಲ್ಲಿ 146.92 ಮಿ.ಮೀ ಮಳೆಯಾಗಿದೆ. 

ತಾಲೂಕುವಾರು ಗಮನಿಸಿದಾಗ ಮಡಿಕೇರಿ ತಾಲೂಕಿನಲ್ಲಿ ಜನವರಿಯಿಂದ ಮೇ ಅಂತ್ಯದವರೆಗೆ ಸರಾಸರಿ ವಾಡಿಕೆ ಮಳೆ 253.60 ಮಿ.ಮೀ.ಗಳಾಗಿದ್ದು, 2019ರ ಜನವರಿಯಿಂದ ಮೇ ಅಂತ್ಯದವರೆಗೆ 167.76 ಮಿ.ಮೀ. ಮಳೆಯಾಗಿದೆ. 2018ರಲ್ಲಿ  614.74 ಮಿ.ಮೀ.ಮಳೆಯಾಗಿದೆ. 2017ರಲ್ಲಿ 344.29 ಮಿ.ಮೀ.ಮಳೆಯಾಗಿದ್ದು, 2016ರ ಇದೇ ಅವಧಿಯಲ್ಲಿ 234.75 ಮಿ.ಮೀ. ಮಳೆಯಾಗಿತ್ತು.  

ಸೋಮವಾರಪೇಟೆ ತಾಲೂಕಿನಲ್ಲಿ ಜನವರಿಯಿಂದ ಮೇ ಅಂತ್ಯದವರೆಗೆ ಸರಾಸರಿ ವಾಡಿಕೆ ಮಳೆ 211.30 ಮಿ.ಮೀ. ಗಳಾಗಿದ್ದು, 2019ರ ಜನವರಿಯಿಂದ ಮೇ ಅಂತ್ಯದವರೆಗೆ 87.62 ಮಿ.ಮೀ. ಮಳೆಯಾಗಿದೆ. 2018 ರಲ್ಲಿ 343.70 ಮಿ.ಮೀ ರಷ್ಟು ಮಳೆಯಾಗಿದೆ. 2017 ರ ಇದೇ ಅವಧಿಯಲ್ಲಿ 266.25 ಮಿ.ಮೀ.ಮಳೆಯಾಗಿತ್ತು. ಹಾಗೆಯೇ 2016 ರ ಇದೇ ಅವಧಿಯಲ್ಲಿ 122.33 ಮಿ.ಮೀ. ಮಳೆಯಾಗಿತ್ತು. 

ವಿರಾಜಪೇಟೆ ತಾಲೂಕಿನಲ್ಲಿ ಜನವರಿಯಿಂದ ಮೇ ಅಂತ್ಯದವರೆಗೆ ಸರಾಸರಿ ವಾಡಿಕೆ ಮಳೆ 271.60 ಮಿ.ಮೀ.ಗಳಾಗಿದ್ದು, 2019ರ ಜನವರಿಯಿಂದ ಮೇ ಅಂತ್ಯದವರೆಗೆ 185.35 ಮಿ.ಮೀ. ಮಳೆಯಾಗಿದೆ. 2018 ರಲ್ಲಿ 312.60 ಮಿ.ಮೀ.ಮಳೆಯಾಗಿದ್ದು, 2017ರ ಇದೇ ಅವಧಿಯಲ್ಲಿ 304.56 ಮಿ.ಮೀ. ಮಳೆಯಾಗಿದ್ದು, 2016ರ ಇದೇ ಅವಧಿಯಲ್ಲಿ 117.55 ಮಿ.ಮೀ. ಮಳೆಯಾಗಿತ್ತು.

ಹೆಸರು ನೋಂದಾಯಿಸಲು ಮನವಿ
ಜಿಲ್ಲಾಡಳಿತವು ಈ ಬಾರಿಯ ಮುಂಗಾರು ಮಳೆಯಿಂದಾಗಿ ಸಂಭವಿಸಬಹುದಾದ ಜೀವಹಾನಿ ಮತ್ತು ಪ್ರಾಣಹಾನಿಯನ್ನು ತಡೆಯಲು ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಯಾವುದೇ ರೀತಿಯ ಅನಾಹುತ ಎದುರಿಸಲು ಸನ್ನದ್ದಗೊಳ್ಳುತ್ತಿದೆ. 

2018ರಲ್ಲಿ ಕೊಡಗಿನಲ್ಲಾದ ವಿಕೋಪದ ಸಂದರ್ಭದಲ್ಲಿ ಸರ್ಕಾರೇತರ ಸಂಘ ಸಂಸ್ಥೆಗಳ ಸೇವೆ ಶ್ಲಾಘನೀಯ. ಈ ಬಾರಿ ಜಿಲ್ಲಾಡಳಿತ ಮತ್ತು ಸರ್ಕಾರೇತರ ಸಂಘ ಸಂಸ್ಥೆಗಳು ಜೊತೆಯಾಗಿ ಸಿದ್ಧತೆ ಮಾಡಿಕೊಳ್ಳಬೇಕೆಂಬುದು ಜಿಲ್ಲಾಡಳಿತದ ಆಶಯ. ಈ ನಿಟ್ಟಿನಲ್ಲಿ ಸರ್ಕಾರೇತರ ಸಂಘ ಸಂಸ್ಥೆಗಳೊಂದಿಗೆ ಮುಕ್ತ ಮನಸ್ಸಿನಿಂದ ಚರ್ಚಿಸಲು ಜಿಲ್ಲಾಡಳಿತ ವತಿಯಿಂದ ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಜೂನ್, 14 ರಂದು ಬೆಳಗ್ಗೆ 9.30 ಗಂಟೆಯಿಂದ ಸಂಜೆ 4.30 ರವರೆಗೆ ‘ಒಂದು ದಿನದ ಸವಾಲುಗಳು ಮತ್ತು ಮುಂದಿನ ದಾರಿ’ ಎಂಬ ಕಾರ್ಯಾಗಾರ ಆಯೋಜಿಸಲಾಗಿದೆ. 

ಕಳೆದ ಬಾರಿ ವಿಕೋಪದ ಸಂದರ್ಭದಲ್ಲಿ ತನು ಮನ ಧನಗಳೊಂದಿಗೆ ತೊಡಗಿಸಿಕೊಂಡ ಎಲ್ಲಾ ಸಂಘ ಸಂಸ್ಥೆಗಳು ಈ ಕಾರ್ಯಾಗಾರಕ್ಕೆ ನೋಂದಣಿ ಮಾಡಿಕೊಂಡು ಚರ್ಚೆಯಲ್ಲಿ ಭಾಗವಹಿಸಿ ಜಿಲ್ಲಾ ವಿಕೋಪ ನಿರ್ವಹಣಾ ಯೋಜನೆಯ ತಯಾರಿಯಲ್ಲಿ ಭಾಗಿಯಾಗಬೇಕೆಂದು ಜಿಲ್ಲಾಡಳಿತ ಕೋರಿದೆ. 
ಹೆಸರು ನೋಂದಾಯಿಸಲು ಬಯಸುವವರು ಯುನಿಸೆಫ್ ಸಮಾಲೋಚಕರಾದ ಪ್ರಭಾತ್ ಎಂ., ಬೆಂಬಲಿತ ಸಮಗ್ರ ಕೊಡಗು ಸ್ಪಂದನೆ ಯೋಜನೆ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಕೊಡಗು ಮೊಬೈಲ್ ಸಂಖ್ಯೆ: 09886733380 ನ್ನು ಸಂಪರ್ಕಿಸಿ ಸಂಸ್ಥೆಯ ಹೆಸರು, ವಿಳಾಸ, ನೊಂದಣಿ ಸಂಖ್ಯೆ, ಸಂಪರ್ಕಿಸಬೇಕಾದವರ ಹೆಸರು ಮತ್ತು ವಿಳಾಸವನ್ನು ಜೂನ್, 13 ರೊಳಗೆ ನೋಂದಾಯಿಸಬೇಕೆಂದು ಕೋರಿದೆ. ಒಂದು ಸಂಸ್ಥೆಯಿಂದ ಕೇವಲ 2 ಜನರಿಗೆ ಪ್ರತಿನಿಧಿಸಲು ಅವಕಾಶ ಕಲ್ಪಿಸಲಾಗುವುದು. ನೋಂದಣಿಯನ್ನು ಅನುಸರಿಸಿ ಕಾರ್ಯಾಗಾರದ ಹೆಚ್ಚಿನ ರೂಪುರೇಷೆ ನಿರ್ಧರಿಸಲಾಗುವುದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)