varthabharthi

ಸಂಪಾದಕೀಯ

‘ನ್ಯಾಯ’ವೇ ಅನ್ಯಾಯವಾದರೆ?

ವಾರ್ತಾ ಭಾರತಿ : 14 Jun, 2019

‘ಗಲ್ಲು ಶಿಕ್ಷೆ’ ಸರಿಯೇ? ತಪ್ಪೇ? ಎನ್ನುವ ಚರ್ಚೆ ಇಂದು ನಿನ್ನೆಯದೇನೂ ಅಲ್ಲ. ಆದರೆ ಈ ದೇಶದ ನ್ಯಾಯವ್ಯವಸ್ಥೆ ಅತ್ಯಂತ ಕಠೋರವಾದ ತಪ್ಪುಗಳಿಗೆ ಗಲ್ಲು ಶಿಕ್ಷೆಯನ್ನೇ ಗರಿಷ್ಠ ಶಿಕ್ಷೆಯಾಗಿ ಪರಿಗಣಿಸಿ, ಶಿಕ್ಷೆ ನೀಡುತ್ತಾ ಬಂದಿರುವ ಹಿನ್ನೆಲೆಯಲ್ಲಿ ಕಥುವಾ ಬಾಲಕಿಯ ಮೇಲೆ ಆರೋಪಿಗಳು ಎಸಗಿದ ಕೃತ್ಯ ಯಾಕೆ ಗಲ್ಲು ಶಿಕ್ಷೆಗೆ ಅರ್ಹವಲ್ಲ? ಎಂಬ ಪ್ರಶ್ನೆಯೊಂದು ಇದೀಗ ಚರ್ಚೆಯಲ್ಲಿದೆ. ಇಡೀ ದೇಶವನ್ನೇ ನಡುಗಿಸಿದ, ಕಥುವಾದಲ್ಲಿ ಹೆಣ್ಣು ಮಗುವೊಂದರ ಮೇಲೆ ನಡೆದ ಬರ್ಬರ ಸಾಮೂಹಿಕ ಅತ್ಯಾಚಾರ ಮತ್ತು ಅದರ ಬರ್ಬರ ಕೊಲೆ ಆರೋಪಿಗಳಿಗೆ ಕೊನೆಗೂ ಶಿಕ್ಷೆಯಾಗಿದೆ. ಹತ್ತು ಹಲವು ಅಡೆತಡೆಗಳು, ನ್ಯಾಯವಾದಿಗೆ ಜೀವಬೆದರಿಕೆ, ಆರೋಪಿಗಳ ಪರವಾಗಿ ‘ಸಂಸ್ಕೃತಿ ರಕ್ಷಕ’ ರಾಜಕೀಯ ನಾಯಕರ ಬಹಿರಂಗ ಹೋರಾಟ ಇವೆಲ್ಲವುಗಳ ನಡುವೆ ಸಂತ್ರಸ್ತೆ ಆಸಿಫಾಗೆ ನ್ಯಾಯಾಲಯ ತನ್ನ ‘ನ್ಯಾಯ’ವನ್ನು ನೀಡಿದೆ. ಮೂವರು ಆರೋಪಿಗಳಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು ನೀಡಿದ್ದರೆ, ಇತರ ಮೂವರಿಗೆ ಐದು ವರ್ಷ ಜೈಲು ಶಿಕ್ಷೆಯನ್ನು ವಿಧಿಸಿದೆ. ಓರ್ವನನ್ನು ಆರೋಪದಿಂದ ಬಿಡುಗಡೆಗೊಳಿಸಿದೆ.

ನಿರ್ದಿಷ್ಟ ಸಂಘಟನೆಗೆ ಸೇರಿದ್ದ, ಸಮಾಜದಲ್ಲಿ ಸಭ್ಯರು, ನಾಗರಿಕರು ಎಂದು ಕರೆಸಿಕೊಂಡವರು ಒಂದು ಹೆಣ್ಣು ಮಗುವನ್ನು, ದೇವಸ್ಥಾನದೊಳಗೆ ಬರ್ಬರವಾಗಿ ಸಾಮೂಹಿಕ ಅತ್ಯಾಚಾರಗೈದು, ಆ ಮಗುವಿನ ಮೇಲೆ ಹಿಂಸೆಯ ಪರಾಕಾಷ್ಠೆಯನ್ನು ಎಸಗುತ್ತಾರೆ. ಸಾವು ಬದುಕಿನಲ್ಲಿ ಒದ್ದಾಡುತ್ತಿದ್ದ ಮಗುವಿನ ದೇಹವನ್ನು ಓರ್ವ ಆರೋಪಿ ಎತ್ತಿ ತನ್ನ ಮೊಣಕಾಲಿನ ಮೂಲಕ ಮುರಿದು ಆಕೆಯನ್ನು ಕೊಂದು ಹಾಕುತ್ತಾನೆ. ಆಸಿಫಾ ಎನ್ನುವ ಆ ಮಗು ಒಂದು ನಿರ್ದಿಷ್ಟ ಸಮುದಾಯದ ಹುಡುಗಿಯಾಗಿರುವುದು ಆಕೆಯ ಮೇಲೆ ಅತ್ಯಾಚಾರ ಎಸಗಲು, ಆಕೆಯನ್ನು ಕೊಂದು ಹಾಕಲು ಮುಖ್ಯ ಕಾರಣ. ಆದರೂ ಈ ಕ್ರೌರ್ಯವನ್ನು ಎಸಗಿದ ಆರೋಪಿಗಳು ಗಲ್ಲು ಶಿಕ್ಷೆಗೆ ಅರ್ಹರಲ್ಲ ಎಂದು ನ್ಯಾಯಾಲಯ ಭಾವಿಸುತ್ತದೆ.

  ಈ ಹಿಂದೆ ನಡೆದ ನಿರ್ಭಯಾ ಪ್ರಕರಣವನ್ನು ಕೈಗೆತ್ತಿಕೊಳ್ಳೋಣ. ಕಥುವಾ ಮತ್ತು ನಿರ್ಭಯಾ ಪ್ರಕರಣಗಳಿಗೆ ಮೇಲ್ನೋಟಕ್ಕೆ ಸಾಮ್ಯತೆಯಿದೆಯಾದರೂ, ಕಥುವಾ ಕ್ರೌರ್ಯ ನಿರ್ಭಯಾಳ ಮೇಲೆ ಎಸಗಿರುವ ಕ್ರೌರ್ಯಕ್ಕಿಂತಲೂ ಭೀಕರವಾಗಿದೆ. ನಿರ್ಭಯಾ ಪ್ರಕರಣದಲ್ಲಿ ಕೃತ್ಯ ಎಸಗಿದ ಯುವಕರಿಗೆ ಸಾಮಾಜಿಕ ಹಿನ್ನೆಲೆಯಿರಲಿಲ್ಲ. ನಿರ್ಭಯಾ ಮೇಲೆ ಸಾಮೂಹಿಕ ಅತ್ಯಾಚಾರಗೈದು, ಆಕೆಯನ್ನು ಕ್ರೂರವಾಗಿ ಹಿಂಸಿಸಿದ್ದರು. ಘಟನೆ ನಡೆದಿರುವುದು ಚಲಿಸುವ ಬಸ್‌ನಲ್ಲಿ. ಆಕೆ ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಳು. ನಿರ್ಭಯಾ ಪ್ರಕರಣ ವಯಸ್ಕ ಹೆಣ್ಣಿನ ಮೇಲೆ ಎಸಗಿದ ಕ್ರೌರ್ಯವಾಗಿದ್ದರೆ, ಕಥುವಾದಲ್ಲಿ ಎಳೆ ಬಾಲಕಿಯ ಮೇಲೆ ದೇವಸ್ಥಾನದೊಳಗೇ ನಡೆದ ಕ್ರೌರ್ಯವಾಗಿದೆ. ನಿರ್ಭಯ ಪ್ರಕರಣಕ್ಕೆ ಹೋಲಿಸಿದರೆ ಇಲ್ಲಿ ಅತ್ಯಾಚಾರಗೈದವರ ಸಂಖ್ಯೆಯೂ ಹೆಚ್ಚಿದೆ. ಜೊತೆಗೆ ಪೊಲೀಸ್ ಸಿಬ್ಬಂದಿಯೂ ಇದರೊಳಗೆ ಶಾಮೀಲಾಗಿದ್ದ. ಅತ್ಯಾಚಾರಗೈದದ್ದು ಒಂದು ಎಳೆ ಮಗುವಿನ ಮೇಲೆ ಎನ್ನುವುದಕ್ಕಿಂತ, ಆ ದೇಗುಲದಲ್ಲಿರುವ ದೇವರ ಮೇಲೆ ಎನ್ನುವುದೇ ಸರಿ. ಅಷ್ಟೇ ಅಲ್ಲ, ಎರಡು ದಿನಗಳ ಕಾಲ ಆ ಮಗುವಿನ ಮೇಲೆ ದೌರ್ಜನ್ಯ ಎಸಗಿ ಕ್ರೂರವಾಗಿ ಕೊಲೆಗೈದು ಮೃತದೇಹವನ್ನು ಕಾಡುಗಳಲ್ಲಿ ಎಸೆದು ಬಿಟ್ಟರು.

ವಿಪರ್ಯಾಸ ಗಮನಿಸಿ. ನಿರ್ಭಯಾ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ನ್ಯಾಯಾಲಯ ಗಲ್ಲು ಶಿಕ್ಷೆಯನ್ನು ವಿಧಿಸಿತು. ಆದರೆ ಕಥುವಾದಲ್ಲಿ ಮೂವರಿಗೆ ಜೀವಾವಧಿ ಹಾಗೂ ಉಳಿದ ಮೂವರಿಗೆ ಐದು ವರ್ಷ ಜೈಲು. ಓರ್ವನ ಖುಲಾಸೆ. ಇದೀಗ ಒಂದು ಪ್ರಶ್ನೆ ಏಳುತ್ತದೆ. ನಿರ್ಭಯಾ ಪ್ರಕರಣಕ್ಕಿಂತ ಕಥುವಾ ಪ್ರಕರಣ ಲಘುವಾದದ್ದು ಎಂದು ನ್ಯಾಯಾಲಯ ಭಾವಿಸುತ್ತದೆಯೇ? ನಿರ್ಭಯಾ ಪ್ರಕರಣದ ಸಂತ್ರಸ್ತ ತರುಣಿಗೆ ಒಂದು ನ್ಯಾಯ, ಆಸಿಫಾ ಎನ್ನುವ ಮಗುವಿಗೆ ಇನ್ನೊಂದು ನ್ಯಾಯವನ್ನು ನ್ಯಾಯ ವ್ಯವಸ್ಥೆ ಯಾಕೆ ನೀಡಿತು? ಒಂದು ಹೆಣ್ಣು ಮಗುವಿನ ಮೇಲೆ ಐದಕ್ಕೂ ಅಧಿಕ ಮಂದಿ ಕ್ರೌರ್ಯ ಎಸಗಿ, ಕೊಂದು ಹಾಕುವುದು ಯಾಕೆ ‘ಗಲ್ಲು ಶಿಕ್ಷೆಗೆ ಅರ್ಹ’ವಾದ ಕ್ರೌರ್ಯ ಎಂದು ನ್ಯಾಯಾಲಯಕ್ಕೆ ಯಾಕೆ ಮನವರಿಕೆಯಾಗಲಿಲ್ಲ?

ಬಹುಶಃ ನ್ಯಾಯ ಸಿಗಬೇಕಾದರೆ ಅತ್ಯಾಚಾರ ಮತ್ತು ಕೊಲೆಯಾದವರ ಹಿನ್ನೆಲೆ ಹಾಗೂ ಕೃತ್ಯ ಎಸಗಿದರ ಹಿನ್ನೆಲೆಯೂ ಮಹತ್ವ ಪಡೆಯುತ್ತದೆ ಎನ್ನುವ ಅಂಶ ಇದರಿಂದ ಬಯಲಾಗುತ್ತದೆ. ನಿರ್ಭಯಾ ವಿದ್ಯಾವಂತೆ ಮತ್ತು ಆಕೆಗೊಂದು ಸಾಮಾಜಿಕ ಹಿನ್ನೆಲೆ ಇತ್ತು. ನಗರ ಪ್ರದೇಶದಲ್ಲಿ ವಿದ್ಯಾವಂತ ಮಹಿಳೆಯ ಮೇಲೆ ನಡೆಯುವ ಎಲ್ಲ ಪ್ರಕರಣಗಳು ಈ ದೇಶದಲ್ಲಿ ಮಹತ್ವವನ್ನು ಪಡೆದುಕೊಳ್ಳುತ್ತದೆ. ಆ ಕಾರಣದಿಂದಲೇ ನಿರ್ಭಯಾ ಪರವಾಗಿ ದೇಶ ವಿದೇಶಗಳಲ್ಲಿ ಮೊಂಬತ್ತಿಗಳು ಕರಗಿದವು. ಇದೇ ಸಂದರ್ಭದಲ್ಲಿ ಆಕೆಯ ಮೇಲೆ ಕ್ರೌರ್ಯವನ್ನು ಮೆರೆದವರು ಅವಿದ್ಯಾವಂತರು, ಅನಕ್ಷರಸ್ಥರು ಮತ್ತು ಕುಗ್ರಾಮಗಳಿಂದ ಬಂದ ಕೂಲಿಗಳು. ಕಥುವಾದಲ್ಲಿ ಎಲ್ಲವೂ ತಿರುವು ಮುರುವಾಗಿದೆ. ಆಸಿಫಾ ಕುಗ್ರಾಮಕ್ಕೆ ಸೇರಿದ ಮಗು. ಆದರೆ ಆಕೆಯ ಮೇಲೆ ಅತ್ಯಾಚಾರ ಎಸಗಿದ ಮಂದಿಗಳಿಗೆ ಸಾಮಾಜಿಕ ಹಿನ್ನೆಲೆಯಿದೆ. ವಿಶೇಷವೆಂದರೆ, ನಿರ್ದಿಷ್ಟ ಪಕ್ಷದ ಜನಪ್ರತಿನಿಧಿಗಳೇ ಇವರ ಪರವಾಗಿ ಬೀದಿಗಿಳಿದು ಧರಣಿ ನಡೆಸಿದರು. ಧರ್ಮ, ಜಾತಿಗಳ ಗಂಧಗಾಳಿಯೇ ಗೊತ್ತಿಲ್ಲದ ಆಸಿಫಾ ಎಂಬ ಮುಗ್ಧ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದರಿಗೆ ಕೃತ್ಯ ಎಸಗಲು ರಾಜಕೀಯ, ಧಾರ್ಮಿಕ ಕಾರಣವೂ ಇತ್ತು. ಆಸಿಫಾ ಕಾಶ್ಮೀರಿ ಮಾತ್ರವಲ್ಲ, ಆಕೆ ಮುಸ್ಲಿಮ್ ಸಮುದಾಯಕ್ಕೆ ಸೇರಿದ್ದಳು. ಆಳವಾಗಿ ನೋಡಿದರೆ ಈ ಕೃತ್ಯ ಒಂದು ಹತ್ಯಾಕಾಂಡಕ್ಕೆ ಸಮ. ಯಾವುದೇ ಸೈಕೋಪಾತ್ ಕೊಲೆಗಾರರನ್ನು ಮೀರಿಸಬಲ್ಲ ಈ ಆರೋಪಿಗಳು ಮರಣ ದಂಡನೆಗೆ ಅರ್ಹರಲ್ಲವೆಂದಾದರೆ, ಈ ದೇಶದಲ್ಲಿ ಮರಣದಂಡನೆ ಎನ್ನುವ ಶಿಕ್ಷೆ ಅಸ್ತಿತ್ವದಲ್ಲಿರುವುದಾದರೂ ಯಾಕೆ?

 ಕಥುವಾ ಪ್ರಕರಣ ಈ ದೇಶದ ಮಕ್ಕಳ ಮುಗ್ಧತೆಯ ಮೇಲೆ ನಡೆದ ಬರ್ಬರ ದೌರ್ಜನ್ಯ. ದೇವಸ್ಥಾನದ ಒಳಗಡೆಯೇ ನಡೆದ ಕೃತ್ಯ ಇದಾಗಿರುವುದರಿಂದ, ಈ ದೇಶದ ಧರ್ಮ ಸಂಸ್ಕೃತಿಯ ಮೇಲೆ ಅವರು ಅತ್ಯಾಚಾರವೆಸಗಿದರು. ಗಾಂಧೀಜಿಯನ್ನು ಕೊಂದ ಗೋಡ್ಸೆಯನ್ನು ಗಲ್ಲಿ ಗೇರಿಸಲಾಯಿತು. ಕಥುವಾ ಪ್ರಕರಣದಲ್ಲಿ ಬಾಲಕಿಯನ್ನು ಕೊಂದವರು ಗೋಡ್ಸೆ ಸಿದ್ಧಾಂತವನ್ನು ಬೆಂಬಲಿಸುತ್ತಿರುವವರು. ಜೊತೆಗೆ ಗಾಂಧೀಜಿಯನ್ನು ಕೊಂದಿರುವುದಕ್ಕಿಂತಲೂ ಬರ್ಬರ ಕೃತ್ಯವನ್ನು ಎಸಗಿದವರು. ಆದರೂ ಒಬ್ಬನೇ ಒಬ್ಬ ಗಲ್ಲು ಶಿಕ್ಷೆಗೆ ಅರ್ಹನಾಗಲಿಲ್ಲ. ಆಸಿಫಾಳಿಗೆ ನ್ಯಾಯಾಲಯವು ನ್ಯಾಯದ ಹೆಸರಿನಲ್ಲಿ ‘ಅನ್ಯಾಯ’ವನ್ನೇ ಉಡುಗೊರೆಯಾಗಿ ನೀಡಿದೆ. ನ್ಯಾಯಾಲಯದಲ್ಲಿ ಆಕೆ ಎರಡನೆಯ ಬಾರಿ ಅತ್ಯಾಚಾರಕ್ಕೊಳಗಾಗಿ ಹತ್ಯೆಗೈಯಲ್ಪಟ್ಟಳು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)