varthabharthi

ವೈವಿಧ್ಯ

ಕಳಚುತ್ತಿರುವ ಕೊಂಡಿಗಳೂ ವಿಜೃಂಭಿಸುತ್ತಿರುವ ವಿಕೃತಿಗಳೂ

ವಾರ್ತಾ ಭಾರತಿ : 14 Jun, 2019
ನಾ. ದಿವಾಕರ

ಇಂದು ನೀವು ನಮ್ಮಡನಿರಬೇಕಿತ್ತು ಎಂದು ಹಲವು ಮಹನೀಯರ ಹೆಸರುಗಳನ್ನು ಪಟ್ಟಿಮಾಡುತ್ತಾ ಹೋದಂತೆಲ್ಲಾ ಅದು ವಿಸ್ತರಿಸುತ್ತಲೇ ಇದೆ. ಕಾರ್ನಾಡ್ ಇತ್ತೀಚಿನ ಸೇರ್ಪಡೆಯಾಗಿದ್ದಾರೆ. ಈ ಉದಾತ್ತ ಚಿಂತಕರ ಚಿಂತನೆಗಳು ನಮ್ಮಾಡನಿವೆ. ಹಂತಕರು ಚಿಂತಕರನ್ನು ಕೊಲ್ಲಬಹುದು, ಚಿಂತಕರ ಸಾವನ್ನು ಸಂಭ್ರಮಿಸಬಹುದು ಆದರೆ ಚಿಂತನೆಗಳನ್ನು ಕೊಲ್ಲಲಾಗುವುದಿಲ್ಲ. ಏಕೆಂದರೆ ಚಿಂತನೆಗಳಿಗೆ ಸಾವಿಲ್ಲ ಸಂಭ್ರಮಿಸುವ ಅವಕಾಶವೂ ಇರುವುದಿಲ್ಲ. ಕಾರ್ನಾಡ್ ಚಿಂತನೆಯ ಒಂದು ತುಣುಕನ್ನು ನಮ್ಮ ನಡುವೆ ಬಿತ್ತಿ ಹೋಗಿದ್ದಾರೆ. ಹೋಗಿ ಬನ್ನಿ ಕಾರ್ನಾಡರೇ. ನಿಮ್ಮ ಸಾವಿಗೆ ಸಂಭ್ರಮಿಸುವವರನ್ನು ಕ್ಷಮಿಸಿಬಿಡಿ. ಇತಿಹಾಸ ನಿಮ್ಮನ್ನು ಮರೆಯುವುದಿಲ್ಲ. ಮಾನವೀಯ ಸಮಾಜ ನಿಮ್ಮನ್ನು ತೊರೆಯುವುದೂ ಇಲ್ಲ.

ಕರ್ನಾಟಕದಲ್ಲಿ ನವ್ಯ ಸಾಹಿತ್ಯದ ಮತ್ತೊಂದು ಕೊಂಡಿ ಕಳಚಿದೆ. ನಟ, ನಿರ್ದೇಶಕ, ಸಾಹಿತಿ, ನಾಟಕಕಾರ, ಸಾಮಾಜಿಕ ಕಾರ್ಯಕರ್ತ ಮತ್ತು ವೈಚಾರಿಕ ಚಿಂತನೆಯ ಒಂದು ಪ್ರಮುಖ ಕೊಂಡಿ, ಗಿರೀಶ್ ಕಾರ್ನಾಡ್ ಕೊನೆಯುಸಿರೆಳೆದಿದ್ದಾರೆ. ಕಾರ್ನಾಡರ ಸಾವು ಕನ್ನಡ ಸಾರಸ್ವತ-ಸಾಂಸ್ಕೃತಿಕ ಹಾಗೂ ಕಲಾ ಲೋಕಕ್ಕೆ ತುಂಬಲಾರದ ನಷ್ಟ ಎನ್ನುವ ಕ್ಲೀಷೆಗಳನ್ನು ಬದಿಗಿಟ್ಟು ನೋಡಿದರೂ ಅವರ ಸಾವು ಈಗಾಗಲೇ ಸೃಷ್ಟಿಯಾಗಿರುವ ಶೂನ್ಯವನ್ನು ಮತ್ತಷ್ಟು ಹಿಗ್ಗಿಸಿದೆ ಎನ್ನುವುದು ಮನದಟ್ಟಾಗುತ್ತದೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಪ್ರಕೃತಿ ಸಹಜ ಸಾವುಗಳು ಕೆಲವು ಚೇತನಗಳನ್ನು ಕಾಡಿದ್ದರೆ ಮತಾಂಧತೆಯ ವಿಷಬೇರುಗಳು ಕೆಲವು ಚೇತನಗಳನ್ನು ಇಲ್ಲವಾಗಿಸಿವೆ. ಸತತವಾಗಿ ಕಳೆದುಕೊಳ್ಳುತ್ತಲೇ ಇದ್ದೇವೆ. ಚಿಂತನೆಗಳ ಹಂತಕರು ಚಿಂತಕರ ಅಂತ್ಯವನ್ನು ಬಯಸುತ್ತಿರುವ ಸಂದರ್ಭದಲ್ಲೇ ಕಾರ್ನಾಡ್ ಅವರಂತಹ ಮೇರು ಚಿಂತಕರೂ ನಮ್ಮನ್ನಗಲಿದ್ದಾರೆ. ವೈಚಾರಿಕತೆ, ವೈಜ್ಞಾನಿಕ ದೃಷ್ಟಿಕೋನ, ಸಂವೇದನಾಶೀಲ ಮನಸ್ಸು ಮತ್ತು ಮನುಜ ಪ್ರೇಮಿ ಜೀವ ಇವೆಲ್ಲವೂ ಅಪಾಯದ ತೂಗುಗತ್ತಿಯ ಕೆಳಗೆ ಸಾಗುತ್ತಿರುವ ವಿಷಮ ಸಂದರ್ಭದಲ್ಲೇ ಮತ್ತೊಂದು ಮಹತ್ತರವಾದ ವೈಚಾರಿಕತೆಯ ಕೊಂಡಿ ಕಳಚಿದೆ. ಗಿರೀಶ್ ಕಾರ್ನಾಡ್ ಬೆಳಕಿಲ್ಲದ ಹಾದಿಯಲ್ಲಿ ನಡೆದಿದ್ದಾರೆ ಆದರೆ ನಾವು ಕನಸುಗಳಿಲ್ಲದ ಹಾದಿಯಲ್ಲಿ ನಡೆಯಬೇಕಿಲ್ಲ. ಈ ಎಚ್ಚರಿಕೆಯನ್ನು ತಮ್ಮ ಯಯಾತಿ ನಾಟಕದಲ್ಲಿ ಕಾರ್ನಾಡ್ ನೀಡಿದ್ದನ್ನು ನಾವಿಂದು ಸ್ಮರಿಸಬೇಕಿದೆ.
 ಈ ಎಚ್ಚರಿಕೆಯ ನಡುವೆಯೇ ಕರ್ನಾಟಕದ ಚಿಂತಕರ ಚಾವಡಿ ಬರಿದಾಗುತ್ತಾ ಮುನ್ನಡೆದಿದೆ. ಬೌದ್ಧಿಕ ದಾರಿದ್ರ್ಯ ಮತ್ತು ಸಂವೇದನೆಯ ಕೊರತೆ ಎದುರಿಸುತ್ತಿರುವ ನವ ಪೀಳಿಗೆ ಮತ್ತು ಈ ಪೀಳಿಗೆಯ ಪ್ರೇರಕ ಶಕ್ತಿಯಾಗಿ ಅಹರ್ನಿಶಿ ದುಡಿಯುತ್ತಿರುವ ಸಾಂಸ್ಕೃತಿಕ ರಾಜಕಾರಣದ ವಾರಸುದಾರರು ಈ ಚಿಂತಕರ ಚಾವಡಿಯ ವಿರುದ್ಧ ಸಮರ ಸಾರುತ್ತಿರುವುದನ್ನು ಕಾಣುತ್ತಿದ್ದೇವೆ. ಗಿರೀಶ್ ಕಾರ್ನಾಡ್ ಅವರ ಸಾಧನೆ, ಸಾಹಿತ್ಯ ಲೋಕಕ್ಕೆ ಅವರ ಕೊಡುಗೆ ಮತ್ತು ಕನ್ನಡ ಸಾಹಿತ್ಯ ಸಂಸ್ಕೃತಿಗೆ ಅವರು ಸಲ್ಲಿಸಿರುವ ಸೇವೆಯನ್ನು ಸ್ಮರಿಸುವ ಸಂದರ್ಭದಲ್ಲೇ ಅವರ ಸಾವು ಸೃಷ್ಟಿಸಿರುವ ಅನಾಥ ಪ್ರಜ್ಞೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ನಿಜ, ಕರ್ನಾಟಕದಲ್ಲಾಗಲೀ, ರಾಷ್ಟ್ರಮಟ್ಟದಲ್ಲಾಗಲೀ ಬೌದ್ಧಿಕ ಚಿಂತನಾ ವಾಹಿನಿಗಳಿಗೆ ಕೊರತೆ ಇಲ್ಲ. ಸಾಂಸ್ಕೃತಿಕ ಅಧಿಪತ್ಯದ ರಾಯಭಾರಿಗಳು ಎಷ್ಟೇ ಪ್ರಯತ್ನಿಸಿದರೂ, ನವ ಪೀಳಿಗೆಯ ಒಂದು ವರ್ಗ ಎಷ್ಟೇ ಸಮೂಹ ಸನ್ನಿಗೊಳಗಾಗಿ ಮತಾಂಧತೆಗೆ ಶರಣಾಗಿದ್ದರೂ, ಭಾರತೀಯ ಸಮಾಜದಲ್ಲಿ ಸಂವೇದನೆಯ ಸೂಕ್ಷ್ಮ ತಂತುಗಳನ್ನು ಕಾಪಾಡುವಂತಹ ಮನಸುಗಳು ಹೇರಳವಾಗಿವೆ. ಅಷ್ಟೇ ಬಲಿಷ್ಠವಾಗಿಯೂ ಇವೆ. ಕಾರ್ನಾಡರ ನಿರ್ಗಮನಕ್ಕೆ ಕಾರಣಕರ್ತರಾರೂ ಇಲ್ಲ. ಸಹಜ ಸಾವು. ಆದರೆ ಈ ಸಾವನ್ನು ಸಂಭ್ರಮಿಸುವ ಮನಸುಗಳ ವಿಜೃಂಭಣೆಯನ್ನು ನೋಡಿದರೆ ಈ ಸಾವಿಗಾಗಿ ಹಲವು ವರ್ಷಗಳ ತಪಸ್ಸು ಆಚರಿಸಿದಂತೆ ಭಾಸವಾಗುತ್ತದೆ.
ಕಾರ್ನಾಡ್ ಕನ್ನಡ ಸಂಸ್ಕೃತಿಯ ಒಂದು ವಿಶಿಷ್ಟ ಆಯಾಮವನ್ನು ತಮ್ಮ ನಾಟಕ ಮತ್ತು ಚಲನಚಿತ್ರಗಳ ಮೂಲಕ ಬಿಂಬಿಸಿದ ಮೇರು ಪ್ರತಿಭೆ. ಪುರಾಣ ಮತ್ತು ಇತಿಹಾಸದ ಕಥನಗಳನ್ನು ತಮ್ಮದೇ ಆದ ಶೈಲಿಯಲ್ಲಿ ಆಧುನಿಕ ಸಮಕಾಲೀನ ಸಂದರ್ಭಕ್ಕನುಗುಣವಾಗಿ ಬಿಂಬಿಸುವ ಅವರ ನಾಟಕಗಳಲ್ಲಿ ಕಾರ್ನಾಡ್ ತಮ್ಮ ಸಮಾಜಮುಖಿ ಸಂವೇದನೆಯನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದ್ದನ್ನು ಸ್ಮರಿಸಬೇಕಾಗುತ್ತದೆ. 22ರ ಹರೆಯದಲ್ಲೇ ಯಯಾತಿ ನಾಟಕವನ್ನು ರಚಿಸುವ ಮೂಲಕ ತಮ್ಮ ಸಾಹಿತ್ಯ ಕೃಷಿ ಆರಂಭಿಸಿದ ಕಾರ್ನಾಡ್ ಆಂಗ್ಲ ಸಾಹಿತ್ಯದಿಂದ ಪ್ರಭಾವಿತರಾಗಿದ್ದರು ಎಂದು ಹೇಳಲಾದರೂ, ಅವರ ಕನ್ನಡದ ನಾಟಕಗಳು ಕರ್ನಾಟಕದ ಜನಸಂಸ್ಕೃತಿಗೆ ಹತ್ತಿರವಾಗಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಕನ್ನಡ ಸಾಹಿತ್ಯ ಲೋಕದ ಆಗುಹೋಗುಗಳಿಗೆ ಹೆಚ್ಚಾಗಿ ಸ್ಪಂದಿಸದ ಕಾರ್ನಾಡ್ ಇಲ್ಲಿನ ಸಾಹಿತ್ಯಕ ಸಂವೇದನೆಗಳಿಗೆ ವಿಮುಖರಾಗಿರಲಿಲ್ಲ ಎನ್ನುವುದನ್ನೂ ಗಮನಿಸಬೇಕು. ‘ವಂಶವೃಕ್ಷ’, ‘ಸಂಸ್ಕಾರ’, ‘ತಬ್ಬಲಿಯು ನೀನಾದೆ ಮಗನೆ’, ‘ಒಂದಾನೊಂದು ಕಾಲದಲ್ಲಿ’, ‘ಕಾಡು’ ಇಂತಹ ಹೊಸ ಅಲೆಯ ಕಲಾತ್ಮಕ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕಾರ್ನಾಡ್ ಹಲವಾರು ಚಿತ್ರಗಳಲ್ಲಿ ತಮ್ಮ ನಟನಾ ಸಾಮರ್ಥ್ಯವನ್ನೂ ಪ್ರದರ್ಶಿಸಿದ್ದರು.
ಅವರ ಸಾಹಿತ್ಯವನ್ನು ಕುರಿತ ಟೀಕೆ, ವಿಮರ್ಶೆಗಳು ಮತ್ತು ಅವರಿಗೆ ಸಂದ ಜ್ಞಾನಪೀಠ ಪ್ರಶಸ್ತಿಯ ಬಗ್ಗೆ ಕೇಳಿಬಂದ ಆಕ್ಷೇಪಗಳು ಏನೇ ಇದ್ದರೂ, ಕಾರ್ನಾಡ್ ವೈಚಾರಿಕತೆ ಮತ್ತು ಮಾನವೀಯ ಸಂವೇದನೆಯ ಮುಖವಾಣಿಯಾಗಿ ಐದು ದಶಕಗಳಿಗೂ ಹೆಚ್ಚು ಕಾಲ ಕರ್ನಾಟಕದ ಬೌದ್ಧಿಕ ಚಾವಡಿಯಲ್ಲಿ ನೆಲೆಸಿದ್ದುದನ್ನು ಅಲ್ಲಗಳೆಯಲಾಗುವುದಿಲ್ಲ. ನವ್ಯ ಸಾಹಿತ್ಯದ ಒಂದು ಭಾಗವಾಗಿಯೇ ತಮ್ಮ ನಾಟಕಗಳ ರಚನೆಯಲ್ಲಿ ತೊಡಗಿದ್ದ ಗಿರೀಶ್ ಕಾರ್ನಾಡ್ ಅವರ ‘ತಲೆದಂಡ’ ಮತ್ತು ‘ಟಿಪ್ಪುಸುಲ್ತಾನನ ಕನಸುಗಳು’ ಕರ್ನಾಟಕದ ಸಾಂಸ್ಕೃತಿಕ ಹಾಗೂ ಸಾಮಾಜಿಕ ಇತಿಹಾಸದ ಎರಡು ಮಜಲು ಗಳನ್ನು ತಮ್ಮದೇ ಆದ ರೀತಿಯಲ್ಲಿ ಬಿಂಬಿಸಿದ್ದವು. ಯಾವುದೇ ನಿರ್ದಿಷ್ಟ ಇಸಂ (ವಾದ)ಗಳಿಗೆ ಕಟ್ಟುಬೀಳದಿದ್ದರೂ ತಮ್ಮ ಎಡಪಂಥೀಯ ನಿಲುವನ್ನು ಸಾಮಾಜಿಕ ನೆಲೆಯಲ್ಲಿ, ಸಾಂಸ್ಕೃತಿಕ ನೆಲೆಯಲ್ಲಿ ಕಾರ್ನಾಡ್ ಬಿಂಬಿಸಿದ್ದನ್ನೂ ಗಮನಿಸಬೇಕಾಗುತ್ತದೆ. ಸಾಮಾಜಿಕ ಚಳವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದೆಂದರೆ ಕೇವಲ ಬೀದಿಗಿಳಿದು ಹೋರಾಟ ಮಾಡುವುದು ಮಾತ್ರವಲ್ಲ, ತಮ್ಮದೇ ಆದ ಸಾಹಿತ್ಯ ಪ್ರಕಾರಗಳ ಮೂಲಕ, ಕಲಾ ಅಭಿವ್ಯಕ್ತಿಯ ಮೂಲಕವೂ ಇದನ್ನು ಸಾಧಿಸಬಹುದು ಎಂದು ನಿರೂಪಿಸಿದವರಲ್ಲಿ ಕಾರ್ನಾಡ್ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಅವರ ಸಾಹಿತ್ಯವೂ ಇದನ್ನೇ ಬಿಂಬಿಸುತ್ತದೆ.
ಸಾಮಾಜಿಕ ನ್ಯಾಯ ಮತ್ತು ಪ್ರಜಾತಂತ್ರ ಮೌಲ್ಯಗಳು ಅಪಾಯ ಎದುರಿಸಿದ ಸಂದರ್ಭದಲ್ಲಿ, ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಯ ಸಂದರ್ಭದಲ್ಲಿ ಕಾರ್ನಾಡ್ ಸಾರ್ವಜನಿಕವಾಗಿಯೇ ತಮ್ಮ ಬದ್ಧತೆ ಪ್ರದರ್ಶಿಸಿದ್ದನ್ನು ಕಲಬುರ್ಗಿ ಹತ್ಯೆಯ ನಂತರ, ಗೌರಿ ಹತ್ಯೆಯ ನಂತರ ಕಾಣಬಹುದಿತ್ತು. ಪ್ರತಿರೋಧದ ದನಿಗಳನ್ನು, ಪ್ರಭುತ್ವ ವಿರೋಧಿ ದನಿಗಳನ್ನು ನಕ್ಸಲರೊಡನೆ ಸಮೀಕರಿಸುವ ಮೂಲಕ ದಮನಿಸುವ ಪ್ರಭುತ್ವದ ಧೋರಣೆಯನ್ನು ವಿರೋಧಿಸಿ ‘‘ನಾನೂ ನಗರ ನಕ್ಸಲ್’’ ಎಂದು ಘೋಷಿಸಿಕೊಂಡ ಕಾರ್ನಾಡ್ ತಮ್ಮ ಈ ನಿಲುವಿಗೆ ಬದ್ಧರಾಗಿದ್ದುದನ್ನು ಅವರ ನಾಟಕಗಳಲ್ಲಿನ ಸೂಕ್ಷ್ಮತೆಯಲ್ಲೂ ಗಮನಿಸಬಹುದು. ಮತಾಂಧತೆ, ಧಾರ್ಮಿಕ ಶ್ರೇಷ್ಠತೆ ಮತ್ತು ಮತಧರ್ಮಗಳ ಶೋಷಕ ವ್ಯವಸ್ಥೆಯನ್ನು ಖಂಡಿಸಲು ಹಿಂಜರಿಯದ ಕಾರ್ನಾಡ್ ಸಮಕಾಲೀನ ಸಂದರ್ಭದ ಪ್ರಭುತ್ವ ರಾಜಕಾರಣದ ವಿಕೃತಿಗಳನ್ನು, ಋಣಾತ್ಮಕ ಧೋರಣೆಗಳನ್ನು ತಮ್ಮ ನಾಟಕಗಳ ಮೂಲಕ ಪ್ರದರ್ಶಿಸಿದ್ದನ್ನು ಸ್ಮರಿಸಬೇಕಾಗಿದೆ. ಈ ಸುಂದರ ಅಭಿವ್ಯಕ್ತಿಯನ್ನು, ದಿಟ್ಟ ಧೋರಣೆಯನ್ನು, ಮಾನವೀಯ ಕಳಕಳಿ ಮತ್ತು ಸಂವೇದನೆಯನ್ನು ಹಾಗೂ ಮತಾಂಧತೆಯ ವಿರುದ್ಧ ಅವರಲ್ಲಿದ್ದ ಪ್ರತಿರೋಧವನ್ನು ತಿಕ್ಕಲುತನ ಎಂದು ಪರಿಗಣಿಸುವ ಮಾಧ್ಯಮ ಮಿತ್ರರೂ ನಮ್ಮಿಂದಿಗಿದ್ದಾರೆ. ಇಂತಹ ವಿಕೃತ ಧೋರಣೆಯ ನಡುವೆಯೇ ಕನ್ನಡದ ಚಿಂತಕರ ಚಾವಡಿ ಕಾರ್ನಾಡರನ್ನು ಕಳೆದುಕೊಂಡಿದೆ.
ಕಳೆದುಹೋದ, ಕಳಚಿಕೊಂಡ ಕೊಂಡಿಗಳು ಮತ್ತು ಆ ಚಿಂತನೆಗಳು ನಮ್ಮಡನೆ ಸದಾಕಾಲವೂ ಜಾಗೃತ ಸ್ಥಿತಿಯಲ್ಲೇ ಇದ್ದು ಸಾಮಾಜಿಕ ಸ್ವಾಸ್ಥ್ಯ ಮತ್ತು ಸೌಹಾರ್ದತೆಯನ್ನು ಕಾಪಾಡುವಲ್ಲಿ ಸಹಕಾರಿಯಾಗಿರುತ್ತವೆ. ಕಾರ್ನಾಡರೂ ಇದಕ್ಕೆ ಹೊರತಲ್ಲ. ಸಾವು ನಿಶ್ಚಿತ ಮತ್ತು ಅನಿವಾರ್ಯ. ಸಾವನ್ನು ಸ್ವೀಕರಿಸುವುದೂ ಅನಿವಾರ್ಯ. ಹಾಗಾಗಿ ಕಾರ್ನಾಡ್ ಅವರ ಸಾವು ಎಂತಹುದೇ ಶೂನ್ಯ ಸೃಷ್ಟಿಸಿದ್ದರೂ ಅದನ್ನು ಸ್ವೀಕರಿಸಿ ಮುನ್ನಡೆಯುವ ಛಲ ನಮ್ಮಲ್ಲಿದೆ. ಆದರೆ ನಾವು ಚಿಂತಿಸಬೇಕಿರುವುದು ಕಾರ್ನಾಡರ ಸಾವಿನ ಹಿನ್ನೆಲೆಯಲ್ಲಿ ಕಂಡುಬಂದ ಸಂಭ್ರಮಾಚರಣೆಯ ಬಗ್ಗೆ. ಅನಂತಮೂರ್ತಿ, ಕಲಬುರ್ಗಿ, ಗೌರಿ ಲಂಕೇಶ್ ಅವರಂತೆಯೇ ಕಾರ್ನಾಡರ ಸಾವೂ ಮತಾಂಧರ, ಫ್ಯಾಶಿಸ್ಟರ ಸಂಭ್ರಮಕ್ಕೆ ಕಾರಣವಾಗಿರುವುದು ಪ್ರಜ್ಞಾವಂತ ಸಮಾಜವನ್ನು ಕಾಡಲೇಬೇಕಿದೆ. ಈ ಸಂಭ್ರಮ ಮತ್ತು ವಿಕೃತ ಆನಂದವನ್ನು ವ್ಯಕ್ತಿಗತ ನೆಲೆಯಲ್ಲಿ ನೋಡಲಾಗುವುದಿಲ್ಲ. ಇದಕ್ಕೊಂದು ಸಾಂಸ್ಥಿಕ ಬುನಾದಿ, ಸಂಘಟನಾತ್ಮಕ ಪರಂಪರೆ ಮತ್ತು ಸಾಂಸ್ಕೃತಿಕ ಆಯಾಮವೂ ಇರುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಸಾವನ್ನು ಸಂಭ್ರಮಿಸುವ ವಿಕೃತಿಗೂ, ಹಿಂದುತ್ವ ರಾಜಕಾರಣದ ಬೆಳವಣಿಗೆಗೂ ಇರುವ ಸೂಕ್ಷ್ಮ ಸಂಬಂಧಗಳನ್ನು ಗ್ರಹಿಸದೆ ಹೋದರೆ, ಸಮೂಹ ಸನ್ನಿಗೊಳಗಾಗಿರುವ ಒಂದು ಪೀಳಿಗೆಯ ದೃಷ್ಟಿಕೋನವನ್ನು ಗ್ರಹಿಸಲಾಗುವುದಿಲ್ಲ.
ಮಂದಿರ-ಮಸೀದಿ ವಿವಾದದ ಹಿನ್ನೆಲೆಯಲ್ಲಿ ಸೃಷ್ಟಿಯಾದ ಕೋಮು ರಾಜಕಾರಣ, ಕಾಶ್ಮೀರದಲ್ಲಿ ಉಲ್ಬಣಿಸಿದ ಉಗ್ರವಾದ ಮತ್ತು ಈಶಾನ್ಯ ರಾಜ್ಯಗಳಲ್ಲಿನ ಪ್ರಾದೇಶಿಕ ಅಸ್ಮಿತೆಗಳ ಹೋರಾಟಗಳು ಭಾರತದಲ್ಲಿ ಮನುಜ ಜೀವದ ಮೌಲ್ಯವನ್ನೇ ಕಳೆದುಹಾಕಿಬಿಟ್ಟಿವೆ. ಆದರೂ ಪ್ರಭುತ್ವದ ದೃಷ್ಟಿಯಲ್ಲಿ ನಕ್ಸಲರು ಮಾತ್ರವೇ ಸಾವಿಗೆ ಅರ್ಹತೆ ಪಡೆದವರಾಗಿ ಬಿಟ್ಟಿದ್ದಾರೆ. ನಕ್ಸಲ್‌ಬಾರಿಯ ಇತಿಹಾಸ ಮತ್ತು ನಕ್ಸಲ್ ಚಳವಳಿಯ ಹಿನ್ನೆಲೆಯನ್ನೇ ತಿಳಿಯದವರೂ ಕಾರ್ನಾಡ್ ಸತ್ತಾಗ ‘‘ಮತ್ತೊಬ್ಬ ನಕ್ಸಲ್ ಸತ್ತ ಹೊಡೀರಿ ಪಟಾಕಿ’’ ಎಂದು ಸಂಭ್ರಮಿಸಿರುವುದನ್ನು ನೋಡಿದರೆ, ಸಾವನ್ನು ಸಂಭ್ರಮಿಸುವ ಮನಸ್ಸುಗಳು ಹೇಗೆ ವ್ಯವಸ್ಥಿತವಾಗಿ ರೂಪುಗೊಂಡಿವೆ ಎಂದು ಅರಿವಾಗುತ್ತದೆ. ಗೋರಕ್ಷಣೆಗಾಗಿ, ಮಂದಿರಕ್ಕಾಗಿ, ಮಸೀದಿಗಾಗಿ ಮನುಜ ಜೀವವನ್ನು ಕೊಲ್ಲಲೂ ಹಿಂಜರಿಯದ ಕಾಲಾಳುಗಳನ್ನು ಈ ದೇಶದ ಸಾಂಸ್ಕೃತಿಕ ರಾಜಕಾರಣ ಸೃಷ್ಟಿಸಿದೆ. ಇದರ ರೂವಾರಿಗಳಾರು, ಸಂಸ್ಥಾಪಕರಾರು ಎಂದು ಯೋಚಿಸುವುದಕ್ಕಿಂತಲೂ ಹೇಗೆ ಒಂದು ಇಡೀ ಪೀಳಿಗೆ ಹೇಗೆ ಇಂತಹ ಸಮೂಹ ಸನ್ನಿಗೆ ಬಲಿಯಾಗಿದೆ ಎಂದು ಯೋಚಿಸಿದಲ್ಲಿ, ಮಾನವತೆಯನ್ನು ಪ್ರತಿನಿಧಿಸುವ ಒಂದು ಸಮಾಜದತ್ತ ಮುನ್ನಡೆಯುವ ಹಾದಿ ಸುಗಮವಾಗುತ್ತದೆ.
ಸಾವನ್ನು ಸಂಭ್ರಮಿಸುವ ಮನಸ್ಸುಗಳಿಗೆ ಹತ್ಯೆಗೂ ಸಹಜ ಸಾವಿಗೂ ವ್ಯತ್ಯಾಸ ಇರುವುದಿಲ್ಲ. ತನ್ನವರಲ್ಲದ ಎಲ್ಲರ ಸಾವನ್ನೂ ಸಂಭ್ರಮಿಸುವ ಒಂದು ಸಂಸ್ಕೃತಿಗೆ ಈ ಮನಸ್ಸುಗಳು ಬದ್ಧವಾಗಿರುತ್ತವೆ. ಹಾಗಾಗಿಯೇ ಹತ್ಯೆಗೊಳಗಾದ ಕಲಬುರ್ಗಿ, ಗೌರಿ ಮತ್ತು ಸಹಜ ಸಾವಿಗೀಡಾದ ಕಾರ್ನಾಡ್ ಸಂಭ್ರಮಾಚರಣೆಗೆ ಆಕರಗಳಾಗುತ್ತಾರೆ. ಅಸ್ವಸ್ಥ ಕೆ. ಎಸ್. ಭಗವಾನ್ ಕೂಡಾ ಇಂತಹ ವಿಕೃತಿಗೆ ಸರಕಾಗಿದ್ದರು. ಅವರು ಚೇತರಿಸಿಕೊಂಡಿದ್ದಾರೆ. ಆದರೆ ಇದೇ ವೇಳೆ ಈ ವಿಕೃತ ಬೇರುಗಳು ಮತ್ತಷ್ಟು ಆಳಕ್ಕೆ ಹೋಗಿವೆ. ಮತ್ತೊಂದು ಶತ್ರುವಿನ ಸಾವಿಗಾಗಿ ಈ ಮನಸುಗಳು ಪ್ರಾರ್ಥಿಸುತ್ತಿರುತ್ತವೆ. ಇಂತಹ ವಿಕೃತ ಸಂಸ್ಕೃತಿ ಬೇರೂರುತ್ತಿರುವ ಸಂದರ್ಭದಲ್ಲೇ ಕಾರ್ನಾಡರಂತಹ ಚೇತನ ನಮ್ಮನ್ನು ಅಗಲಿರುವುದು ದುರಂತ. ಇಂದು ನೀವು ನಮ್ಮಿಡನಿರಬೇಕಿತ್ತು ಎಂದು ಹಲವು ಮಹನೀಯರ ಹೆಸರುಗಳನ್ನು ಪಟ್ಟಿಮಾಡುತ್ತಾ ಹೋದಂತೆಲ್ಲಾ ಅದು ವಿಸ್ತರಿಸುತ್ತಲೇ ಇದೆ. ಕಾರ್ನಾಡ್ ಇತ್ತೀಚಿನ ಸೇರ್ಪಡೆಯಾಗಿದ್ದಾರೆ. ಈ ಉದಾತ್ತ ಚಿಂತಕರ ಚಿಂತನೆಗಳು ನಮ್ಮಾಡನಿವೆ. ಹಂತಕರು ಚಿಂತಕರನ್ನು ಕೊಲ್ಲಬಹುದು, ಚಿಂತಕರ ಸಾವನ್ನು ಸಂಭ್ರಮಿಸಬಹುದು ಆದರೆ ಚಿಂತನೆಗಳನ್ನು ಕೊಲ್ಲಲಾಗುವುದಿಲ್ಲ. ಏಕೆಂದರೆ ಚಿಂತನೆಗಳಿಗೆ ಸಾವಿಲ್ಲ ಸಂಭ್ರಮಿಸುವ ಅವಕಾಶವೂ ಇರುವುದಿಲ್ಲ. ಕಾರ್ನಾಡ್ ಚಿಂತನೆಯ ಒಂದು ತುಣುಕನ್ನು ನಮ್ಮ ನಡುವೆ ಬಿತ್ತಿ ಹೋಗಿದ್ದಾರೆ. ಹೋಗಿ ಬನ್ನಿ ಕಾರ್ನಾಡರೇ. ನಿಮ್ಮ ಸಾವಿಗೆ ಸಂಭ್ರಮಿಸುವವರನ್ನು ಕ್ಷಮಿಸಿಬಿಡಿ. ಇತಿಹಾಸ ನಿಮ್ಮನ್ನು ಮರೆಯುವುದಿಲ್ಲ. ಮಾನವೀಯ ಸಮಾಜ ನಿಮ್ಮನ್ನು ತೊರೆಯುವುದೂ ಇಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)