varthabharthi

ನಿಮ್ಮ ಅಂಕಣ

ಕಳೆದುಹೋದ ಹಿಂದುಳಿದ ವರ್ಗಗಳು

ವಾರ್ತಾ ಭಾರತಿ : 15 Jun, 2019

ಹಿಂದುಳಿದ ವರ್ಗಗಳ ರಾಜಕೀಯ ವಿಘಟನೆ, ಆ ವರ್ಗಗಳು ರಾಜಕೀಯವಾಗಿ ಅಪ್ರಸ್ತುತವಾಗಲು ಕಾರಣವಾಗುತ್ತಿದೆ. ಸಂಘಟನೆಗೆ ಒತ್ತುಕೊಡುವಲ್ಲಿ ಆ ವರ್ಗಗಳ ನಾಯಕರು ವಿಫಲರಾಗುತ್ತಿದ್ದಾರೆಂಬ ಭಾವನೆ ಹಿಂದುಳಿದವರ ಮನಸ್ಸಿನಲ್ಲಿ ಬೇರೂರಿದೆ. ಹಿಂದುಳಿದವರ ರಾಜಕೀಯ ಅಸ್ಮಿತೆಗಾಗಿ ಸಂಘಟನಾತ್ಮಕ ಹೋರಾಟದ ಹಾದಿಯಲ್ಲಿ ಮುನ್ನಡೆಸುವ ಪ್ರಬುದ್ಧ ನಾಯಕನನ್ನು ಆ ವರ್ಗದ ಜನ ಎದುರು ನೋಡುತ್ತಿದ್ದಾರೆ. ಅವರ ಅಭೀಪ್ಸೆ ಕಮರಿ ಹೋಗುವ ಮುನ್ನ ಆ ನಿಟ್ಟಿನಲ್ಲಿ ಎಚ್ಚೆತ್ತುಕೊಳ್ಳುವುದು ಅಗತ್ಯ.


‘‘ಕೋಣಗಳೆರಡು ಹೋರೆ ಗಿಡವಿಂಗೆ ಮೃತ್ಯು’’ ರಾಘವಾಂಕನ ಹರಿಶ್ಚಂದ್ರ ಕಾವ್ಯದಲ್ಲಿ ಬರುವ ಈ ಸಾಲನ್ನು ಇಲ್ಲಿ ಉಲ್ಲೇಖಿಸಲು ಕಾರಣ, ಕಳೆದ ಲೋಕಸಭಾ ಚುನಾವಣೆಯಲ್ಲಿ ಎರಡು ಪ್ರಬಲ ಕೋಮುಗಳ ನಡುವೆ, ಹಿಂದುಳಿದ ವರ್ಗದವರು ಗೆದ್ದುಬರುವಲ್ಲಿ ಸಂಪೂರ್ಣ ವಿಫಲರಾಗಿರುವುದು. ಮಿತ್ರ ಪಕ್ಷಗಳು ಮಾತ್ರ 8 ಮಂದಿ ಹಿಂದುಳಿದ ಸಮುದಾಯದವರಿಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಿದ್ದರೆ, ಭಾರತೀಯ ಜನತಾ ಪಕ್ಷವು ಹಿಂದುಳಿದವರಿಗೆ ಒಂದು ಸ್ಥಾನವನ್ನೂ ನೀಡಲ್ಲೇ ಇಲ್ಲ. ಈ ಪಕ್ಷದಿಂದ ಸ್ಪರ್ಧಿಸಿ ಗೆದ್ದವರೊಬ್ಬರು ನಿಜದನೆಲೆಯಲ್ಲಿ ಹಿಂದುಳಿದವರಲ್ಲ ಎಂಬ ವಾದವಿದೆ. ಈ ಚುನಾವಣೆಯಲ್ಲಿ ಒಬ್ಬರಾದರೂ, ಕರ್ನಾಟಕದಿಂದ ಹಿಂದುಳಿದ ವರ್ಗಗಳ ಪ್ರತಿನಿಧಿಯೆಂದು ಹೇಳಿಕೊಂಡು ಲೋಕಸಭೆಗೆ ಪ್ರವೇಶಿಸಲು ಸಾಧ್ಯವಾಗಿಲ್ಲ. ಹೀಗಾಗಿ, ರಾಜಕೀಯವಾಗಿ ಕಳೆದುಹೋಗುತ್ತಿರುವ ಭಾವನೆ ಆ ವರ್ಗಗಳಿಗೆ ಬಾರದಿರದು.

2019ರ ಚುನಾವಣೆಯಲ್ಲಿ ಲೋಕಸಭೆ ಪ್ರತಿನಿಧಿಸಲು ಗೆದ್ದವರಲ್ಲಿ 9 ಮಂದಿ ಲಿಂಗಾಯತರು, ಒಬ್ಬರು ಬಂಟ ಸಮುದಾಯದವರು ಸೇರಿ 8 ಮಂದಿ ಒಕ್ಕಲಿಗರು, 3 ಮಂದಿ ಬ್ರಾಹ್ಮಣರಿದ್ದಾರೆ. ಕಾಂಗ್ರೆಸ್-ಜನತಾದಳದಿಂದ ಸ್ಪರ್ಧಿಸಲವಕಾಶ ಪಡೆದು ಸೋತವರು ಕುರುಬ, ಈಡಿಗ, ಮೊಗವೀರ, ದೇವಾಡಿಗ ಮತ್ತು ರಾಮಕ್ಷತ್ರಿಯ ಸಮುದಾಯದವರು. ಸೋತ 8 ಮಂದಿ ಹಿಂದುಳಿದ ವರ್ಗಗಳ ಸ್ಪರ್ಧಾಳುಗಳಿಗೆ ಪ್ರತಿಸ್ಪರ್ಧಿಗಳಾಗಿ ಗೆದ್ದವರಲ್ಲಿ ಇಬ್ಬರು ಮೇಲ್ವರ್ಗದ ಬ್ರಾಹ್ಮಣರಾದರೆ, ಉಳಿದ 6 ಮಂದಿ ಎರಡು ಪ್ರಬಲ ಕೋಮಿಗೆ ಸೇರಿದವರೇ ಆಗಿದ್ದಾರೆ. ಅಂತಲೇ ಹರಿಶ್ಚಂದ್ರ ಕಾವ್ಯದ ಮೇಲಿನ ಸಾಲನ್ನು ರೂಪಕವಾಗಿ ಬಳಸಿದೆ.

ಕರ್ನಾಟಕದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು (ಇವರಲ್ಲಿ, ಮುಸ್ಲಿಮರು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರು) ಬಹುಸಂಖ್ಯಾತ ರಾದರೂ, ಕಳೆದೆರಡು-ಮೂರು ಚುನಾವಣೆಗಳಲ್ಲಿ ಯಾರೂ ಗೆಲುವು ಸಾಧಿಸಿಲ್ಲ. ಕಾಂಗ್ರೆಸ್ ಪಕ್ಷ ಒಬ್ಬಿಬ್ಬರಿಗೆ ಅವಕಾಶ ನೀಡುತ್ತಿದೆಯಾದರೂ, ಅವರು ಲೋಕಸಭೆ ಪ್ರವೇಶಿಸಲು ವಂಚಿತರಾಗುತ್ತಿದ್ದಾರೆ. ಬಹುಶಃ ಇದಕ್ಕಿರುವ ಕಾರಣ, ಧಾರ್ಮಿಕ ಅಸಹಿಷ್ಣುತೆ.

ಭಾರತದ ಸಂಸತ್ತಿಗೆ ಹದಿನೇಳು ಚುನಾವಣೆಗಳು ನಡೆದಿವೆ. 1951-52ರಲ್ಲಿ ಮಾತ್ರ ಕರ್ನಾಟಕದಿಂದ ಯಾವೊಬ್ಬ ಹಿಂದುಳಿದ ವರ್ಗಕ್ಕೆ ಸೇರಿದವರು ಲೋಕಸಭೆಗೆ ಪ್ರವೇಶಪಡೆದಿರಲಿಲ್ಲ. 1957ರಲ್ಲಿ ದೇವಾಂಗ ಸಮುದಾಯದ ಶಂಕರಯ್ಯ ಎಂಬುವರು ಮೈಸೂರು ಕ್ಷೇತ್ರ ಮತ್ತು ಗಾಣಿಗ ಸಮುದಾಯದ ಕಟ್ಟಿ ದತ್ತಪ್ಪ ಎಂಬುವರು ಚಿಕ್ಕೋಡಿ ಕ್ಷೇತ್ರದಿಂದ ಲೋಕಸಭೆಗೆ ಪ್ರವೇಶಿಸಿದ್ದ ಹಿಂದುಳಿದ ವರ್ಗದ ಮೊದಲಿಗರು. 1962ರಲ್ಲಿ ಅದೇ ಶಂಕರಯ್ಯ ಮೈಸೂರಿನಿಂದಲೂ, ರಾಜಾರಾಮ್ ಗಿರಿಧರ್‌ಲಾಲ್‌ದುಬೆ ಎಂಬ ನೇಕಾರರು ವಿಜಯಪುರ ಉತ್ತರ ಕ್ಷೇತ್ರದಿಂದ ಗೆಲುವು ಪಡೆದರು. 1971ರಲ್ಲಿ ಈಡಿಗರಾದ ಬಿ.ವಿ.ನಾಯಕ್ ಉತ್ತರಕನ್ನಡ ಕ್ಷೇತ್ರದಿಂದ ಮತ್ತು ಕಬ್ಬಲಿಗರಾದ ಬಿ. ಇ. ಚೌದರಿ ವಿಜಯಪುರ ಕ್ಷೇತ್ರದಿಂದ ಗೆಲುವು ಪಡೆದಿದ್ದರು. 1977ರಲ್ಲಿ ಕುರುಬರಾದ ರಾಜಶೇಖರ ಕೊಲ್ಲೂರ, ಈಡಿಗರಾದ ಜನಾರ್ದನ ಪೂಜಾರಿ, ಮರಾಠರಾದ ಬಿ.ಪಿಕದಮ್ ಮತ್ತು ಕಬ್ಬಲಿಗರಾದ ಕೆ.ಬಿ.ಚೌದರಿ ಆಯ್ಕೆಯಾಗಿದ್ದರು.

1980ನೇ ಚುನಾವಣೆ ಹಿಂದುಳಿದ ಸಮುದಾಯಗಳಿಗೆ ಸುಗ್ಗಿಯ ಪರ್ವಕಾಲವಾಗಿತ್ತು. ಈ ಚುನಾವಣೆಯಲ್ಲಿ 8 ಮಂದಿ ಹಿಂದುಳಿದವರು ಲೋಕಸಭೆಗೆ ಪ್ರವೇಶ ಪಡೆದಿದ್ದರು. ಅವರೆೆಂದರೆ, ಈಡಿಗರಾದ ಎಚ್. ಜಿ. ರಾಮುಲು, ಜನಾರ್ದನ ಪೂಜಾರಿ, ದೇವರಾಯ ನಾಯಕ್, ಕುರುಬರಾದ ಡಿ.ಕೆ. ನಾಯ್ಕರ್, ಕಬ್ಬಲಿಗರಾದ ಕೆ.ಬಿ.ಚೌಧರಿ, ಮರಾಠ ಕ್ಷತ್ರಿಯರಾದ ಆರ್.ವೈ.ಘೋರ್ಪಡೆ, ರಜಪೂತರಾದ ಧರ್ಮಸಿಂಗ್ ಹಾಗೂ ಮತ್ತೊಬ್ಬ ಮೇಲ್ವರ್ಗದ ಅಲ್ಪಸಂಖ್ಯಾತ ವೈಶ್ಯ ಸಮುದಾಯದ ಎಸ್.ಎನ್. ಪ್ರಸನ್ನಕುಮಾರ್ ಆಯ್ಕೆಯಾಗಿದ್ದರು. 1984ರ ಚುನಾವಣೆಯಲ್ಲಿ ಈಡಿಗ ಸಮುದಾಯದ ಚೆನ್ನಯ್ಯಒಡೆಯರ್ ಮತ್ತು ಡಿ.ಕೆ.ನಾಯ್ಕರ್, ಹಾಗೆಯೇ, ಅರಸು ಸಮುದಾಯದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಗೆದ್ದ ಹಿಂದುಳಿದವರು. 1989ರಲ್ಲಿ ಗೆದ್ದವರೆಂದರೆ ಚೆನ್ನಯ್ಯ ಒಡೆಯರ್, ಡಿ.ಕೆ.ನಾಯ್ಕರ್, ಎಸ್.ಎನ್.ಒಡೆಯರ್ ಜನಾದರ್ನ ಪೂಜಾರಿ ಮತ್ತು ದೇವರಾಯ ನಾಯಕ್, ಅರಸು ಸಮುದಾಯದ ಚಂದ್ರಪ್ರಭಾ ಅರಸ್ ಗೆದ್ದವರು. 1996ರಲ್ಲಿ ಕುರುಬರಾದ ಸಿ.ಎನ್.ಭಾಸ್ಕರಪ್ಪ ಮತ್ತು ಎಚ್.ವೈ.ಮೇಟಿ, ಈಡಿಗರಾದ ಆರ್.ಎಲ್. ಜಾಲಪ್ಪ, ಎಸ್.ಬಂಗಾರಪ್ಪ, ಪದ್ಮಸಾಲಿ ಜನಾಂಗದ ಕೆ.ಸಿ.ಕೊಂಡಯ್ಯ, ಗೊಲ್ಲರಾದ ಪಿ.ಕೋದಂಡರಾಮಯ್ಯ ಮತ್ತು ಶ್ರೀಕಂಠದತ್ತನರಸಿಂಹರಾಜ ಒಡೆಯರ್ ಗೆದ್ದಿದ್ದರು.

1998ರಲ್ಲಿ ಎಚ್.ಜಿ.ರಾಮುಲು, ಆರ್.ಎಲ್.ಜಾಲಪ್ಪ, ಕೆ.ಸಿ.ಕೊಂಡಯ್ಯ ಮತ್ತು ಕುರುಬರಾದ ಸಿ.ಎಚ್.ವಿಜಯಶಂಕರ್ ಗೆದ್ದದ್ದರು. 1999ರಲ್ಲಿ ಈಡಿಗರಾದ ಎಚ್.ಜಿ.ರಾಮುಲು, ಎಸ್. ಬಂಗಾರಪ್ಪ, ಆರ್.ಎಲ್.ಜಾಲಪ್ಪ ಮತ್ತು ವಿನಯಕುಮಾರ್ ಸೊರಕೆ, ಕುರುಬರಾದ ಅಮರಸಿಂಹ ಪಾಟೀಲ್ ಮತ್ತು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಗೆದ್ದಿದ್ದರು. 2004ರಲ್ಲಿ ಕುರುಬರಾದ ವಿರೂಪಾಕ್ಷಪ್ಪ ಮತ್ತು ವಿಜಯಶಂಕರ್, ಈಡಿಗರಾದ ಬಂಗಾರಪ್ಪ ಮತ್ತು ಆರ್. ಎಲ್. ಜಾಲಪ್ಪ, ಮೊಗವೀರರಾದ ಮನೋರಮ ಮಧ್ವರಾಜ್, ಮುಂದುವರಿದ ಅಲ್ಪಸಂಖ್ಯಾತ ಸಮುದಾಯದ ಕರುಣಾಕರರೆಡ್ಡಿ ಮತ್ತು ರಜಪೂತರಾದ ಧರ್ಮಸಿಂಗ್ ಗೆದ್ದವರು. 2009ರಲ್ಲಿ ಸ್ವಲ್ಪ ಹಿನ್ನಡೆ ಉಂಟಾಯಿತು. ಹಿಂದುಳಿದವರ ಸಂಖ್ಯೆ ಮೂರಕ್ಕಿಳಿಯಿತು. ದೇವಾಡಿಗರಾದ ಎಂ.ವೀರಪ್ಪಮೊಯ್ಲಿ, ಕುರುಬರಾದ ಎಚ್.ವಿಶ್ವನಾಥ್ ಮತ್ತು ಧರ್ಮಸಿಂಗ್ ಮಾತ್ರ ಲೋಕಸಭೆಗೆ ಪ್ರವೇಶ ಪಡೆಯಲು ಶಕ್ತರಾದರು.

2014ರ ಚುನಾವಣೆಯಲ್ಲಿ ಗೆಲುವು ಪಡೆದ ಏಕೈಕ ಪ್ರತಿನಿಧಿ ಎಂದರೆ, ಎಂ. ವೀರಪ್ಪಮೊಯ್ಲಿ ಮಾತ್ರ. ಹಿಂದುಳಿದ ವರ್ಗದ ಪ್ರತಿನಿಧಿಯೆಂದು ನೆಪಮಾತ್ರಕ್ಕಾದರೂ ಇದ್ದ ದೇವಾಡಿಗ ಸಮುದಾಯದ ಎಂ.ವೀರಪ್ಪ ಮೊಯ್ಲಿರವರು ಈ ಚುನಾವಣೆಯಲ್ಲಿ ಸೋತರು. ಇದ್ದ ಒಬ್ಬ ಪ್ರತಿನಿಧಿಯನ್ನು ಕಳೆದುಕೊಂಡು ಹಿಂದುಳಿದ ವರ್ಗಗಳಿಗೆ ರಾಜಕೀಯ ಅನಾಥಪ್ರಜ್ಞೆ ಕಾಡಲಾರಂಭಿಸಿದೆ. ಇಲ್ಲಿ ಹೇಳಲೇಬೇಕಾದ ವಿಷಯವೆಂದರೆ, ಕರ್ನಾಟಕದಲ್ಲಿ ಸವರ್ಣೀಯರಲ್ಲಿ ಲಿಂಗಾಯತ ಮತ್ತು ಒಕ್ಕಲಿಗರನ್ನು ಹೊರತುಪಡಿಸಿ, ಜನಸಂಖ್ಯೆಯಲ್ಲಿ 3ನೇ ಸ್ಥಾನದಲ್ಲಿರುವ ಕುರುಬ ಸಮುದಾಯ 2014 ಮತ್ತು 2019ರ ಚುನಾವಣೆಯಲ್ಲಿ ಲೋಕಸಭೆಗೆ ಪ್ರಾತಿನಿಧ್ಯ ಪಡೆಯಲು ಸಾಧ್ಯವಾಗಲಿಲ್ಲ ಎಂಬುದು ಚುನಾವಣಾ ರಾಜಕೀಯ ದೃಷ್ಟಿಯಿಂದ ಹಿಂದುಳಿದ ವರ್ಗಗಳಿಗಾದ ಅಪಾರ ನಷ್ಟ.

ಹಿಂದುಳಿದ ವರ್ಗಗಳ ರಾಜಕೀಯ ವಿಘಟನೆ, ಆ ವರ್ಗಗಳು ರಾಜಕೀಯವಾಗಿ ಅಪ್ರಸ್ತುತವಾಗಲು ಕಾರಣವಾಗುತ್ತಿದೆ. ಸಂಘಟನೆಗೆ ಒತ್ತುಕೊಡುವಲ್ಲಿ ಆ ವರ್ಗಗಳ ನಾಯಕರು ವಿಫಲರಾಗುತ್ತಿದ್ದಾರೆಂಬ ಭಾವನೆ ಹಿಂದುಳಿದವರ ಮನಸ್ಸಿನಲ್ಲಿ ಬೇರೂರಿದೆ. ಹಿಂದುಳಿದವರ ರಾಜಕೀಯ ಅಸ್ಮಿತೆಗಾಗಿ ಸಂಘಟನಾತ್ಮಕ ಹೋರಾಟದ ಹಾದಿಯಲ್ಲಿ ಮುನ್ನಡೆಸುವ ಪ್ರಬುದ್ಧ ನಾಯಕನನ್ನು ಆ ವರ್ಗದ ಜನ ಎದುರು ನೋಡುತ್ತಿದ್ದಾರೆ. ಅವರ ಅಭೀಪ್ಸೆ ಕಮರಿಹೋಗುವ ಮುನ್ನ ಆ ನಿಟ್ಟಿನಲ್ಲಿ ಎಚ್ಚೆತ್ತುಕೊಳ್ಳುವುದು ಅಗತ್ಯ.

ಚುನಾವಣೆಯಿಂದ ಚುನಾವಣೆಗೆ ರಾಜಕೀಯ ಧ್ರುವೀಕರಣ ದಿಕ್ಸೂಚಿ ಬದಲಾಗುತ್ತಲೇ ಹೋಗುತ್ತಿದೆ. ಕರ್ನಾಟಕದಲ್ಲಿ ಉಳಿದೆಲ್ಲಾ ಸಮುದಾಯಗಳಿಗಿಂತ ನೂರಾರು ಹಿಂದುಳಿದ ಸಮುದಾಯಗಳ ಸಂಖ್ಯೆ ಗಣನೀಯವಾಗಿದ್ದರೂ, ಅಸಂಘಟಿತರಾಗಿರುವುದರಿಂದ ಲೋಕಸಭೆಗೆ ಪ್ರಾತಿನಿಧ್ಯ ಪಡೆಯಲು ವಿಫಲರಾಗುತ್ತಿದ್ದಾರೆ. ಇಲ್ಲಿ ಗಮನಿಸಬೇಕಾದ ವಿಶೇಷವೆಂದರೆ, ಬ್ರಾಹ್ಮಣರು ಸಂಖ್ಯೆಯಲ್ಲಿ ಕಡಿಮೆ ಇದ್ದಾಗ್ಯೂ ಕನಿಷ್ಠ ಇಬ್ಬರು-ಮೂವರು ಲಾಗಾಯ್ತಿನಿಂದಲೂ ಗೆದ್ದು ಬರುತ್ತಿರುವುದು.

ರಾಷ್ಟ್ರದಲ್ಲಿ ಹಿಂದುಳಿದವರು ಬಹುಸಂಖ್ಯಾತರಾಗಿದ್ದರೂ, ವಿಧಾನಸಭೆ ಮತ್ತು ಲೋಕಸಭೆಗೆ ಪ್ರವೇಶಿಸಲು ಸುಲಭ ಸಾಧ್ಯವಾಗಿಲ್ಲದ ಕಾರಣ, ಈ ವರ್ಗಗಳಿಗೆ ಮೀಸಲಾತಿ ನೀಡಬೇಕೆಂಬ ಪರಿಕಲ್ಪನೆ ಮುನ್ನೆಲೆಗೆ ಬಂದಿದೆ. ಈ ನಿಟ್ಟಿನಲ್ಲಿ ರಾಜೀವ್‌ಗಾಂಧಿ ಪ್ರಧಾನಮಂತ್ರಿ ಆಗಿದ್ದ ಸಂದರ್ಭದಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದ ಪ್ರಯುಕ್ತ ಸ್ಥಳೀಯ ಸಂಸ್ಥೆಗಳಿಗೆ ಮಾತ್ರ ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿ ನೀಡಲಾಗುತ್ತಿದೆ. ಆದರೆ, ವಿಧಾನಸಭೆ ಮತ್ತು ಲೋಕಸಭೆಗೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಏಕಿಲ್ಲ? ಎಂಬುದು ಮಾತ್ರ ಮಿಲಿಯನ್ ಡಾಲರ್ ಪ್ರಶ್ನೆ. ಈ ದಿಸೆಯಲ್ಲಿ ಪ್ರಬಲ ಹೋರಾಟ ಮಾಡುತ್ತಿದ್ದ ಲಾಲುಪ್ರಸಾದ್ ಯಾದವ್‌ರಂತಹ ರಾಜಕಾರಣಿಗಳ ಕೊರತೆ ರಾಷ್ಟ್ರದಲ್ಲಿ ಎದ್ದು ಕಾಣುತ್ತಿದೆ. ಈ ದಿಕ್ಕಿನಲ್ಲಿ ರಾಷ್ಟ್ರಮಟ್ಟದ ಸಂಘಟಿತ ಹೋರಾಟದ ಪ್ರಯತ್ನದ ಕುರುಹು ಕಾಣಿಸುತ್ತಿಲ್ಲ. ಹೀಗಾಗಿ, ಹಿಂದುಳಿದವರು ಲೋಕಸಭೆ ಮತ್ತು ವಿಧಾನಸಭೆಗೆ ಪ್ರವೇಶಿಸಲು ಸಂವಿಧಾನದ ತಿದ್ದುಪಡಿಯ ಕನಸಿನ ದಾರಿ ದೂರವಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)