varthabharthi

ಸಂಪಾದಕೀಯ

ಬಂಗಾರದ ಜಿಂಕೆಯನ್ನು ಬೆಂಬತ್ತಿ ಮೋಸ ಹೋದವರು

ವಾರ್ತಾ ಭಾರತಿ : 15 Jun, 2019

ರಾಜಕೀಯದಲ್ಲಿ ಧರ್ಮದ ಸಂಬಂಧ, ಧರ್ಮದಲ್ಲಿ ರಾಜಕೀಯದ ಸಂಬಂಧ ಯಾವ ಮಟ್ಟದಲ್ಲಿ ಇರಬೇಕು ಎನ್ನುವುದು ಭಾರತದಲ್ಲಿ ಕಳೆದ ಮೂರು ದಶಕಗಳಿಂದ ತೀವ್ರ ಚರ್ಚೆಗೊಳಗಾಗುತ್ತಿವೆ. ಇದೇ ಸಂದರ್ಭದಲ್ಲಿ ಧರ್ಮ ಮತ್ತು ಉದ್ಯಮಗಳ ನಡುವಿನ ಸಂಬಂಧವನ್ನೂ ನಾವು ಚರ್ಚಿಸಲೇ ಬೇಕಾದಂತಹ ಸನ್ನಿವೇಶದಲ್ಲಿ ಬಂದು ನಿಂತಿದ್ದೇವೆ. ವ್ಯಾಪಾರ, ಉದ್ಯಮ ನ್ಯಾಯವಾಗಿರಬೇಕು ಎನ್ನುವುದನ್ನು ಎಲ್ಲ ಧರ್ಮಗಳೂ ಹೇಳಿಕೊಡುತ್ತವೆ. ಇಸ್ಲಾಂ ಧರ್ಮವಂತೂ ತನ್ನದೇ ಆದ ಸ್ಪಷ್ಟ ಆರ್ಥಿಕ ನೀತಿಯನ್ನು ಹೊಂದಿದೆ. ಬಡ್ಡಿ ನಿಷೇಧ, ಝಕಾತ್ ಮೊದಲಾದವುಗಳನ್ನು ಇಸ್ಲಾಂ ಕಟ್ಟು ನಿಟ್ಟಾಗಿ ಆದೇಶಿಸುತ್ತದೆ. ಯಾವುದೇ ಧರ್ಮ ಉದ್ಯಮ, ವ್ಯಾಪಾರದಲ್ಲಿ ಬಡವರನ್ನು, ದುರ್ಬಲರನ್ನು ಶೋಷಿಸದಿರಿ, ದೋಚದಿರಿ ಎಂದೇ ಕಲಿಸುತ್ತದೆ. ಇಸ್ಲಾಂನಲ್ಲಿ ಬಡ್ಡಿಯನ್ನು ವ್ಯವಹಾರದಿಂದ ಹೊರಗಿಡುವುದಕ್ಕೆ ಇದುವೇ ಮುಖ್ಯ ಕಾರಣ.

ವಿಶ್ವದ ಶ್ರೀಮಂತ ರಾಷ್ಟ್ರಗಳು ದುರ್ಬಲ ದೇಶಗಳನ್ನು ನಿಯಂತ್ರಿಸುತ್ತಿರುವುದೇ ಈ ‘ಬಡ್ಡಿ ಭಯೋತ್ಪಾದನೆ’ಯ ಮೂಲಕ. ವಿಶ್ವ ಬ್ಯಾಂಕ್‌ನಿಂದ ಪಡೆದ ಸಾಲಗಳೇ ಹಿಂದುಳಿದ, ದುರ್ಬಲ ರಾಷ್ಟ್ರಗಳ ಪಾಲಿಗೆ ಮೂಗುದಾರವಾಗಿ ಪರಿವರ್ತನೆಗೊಂಡಿವೆ. ಭಾರತದಂತಹ ದೇಶ, ವಿಶ್ವ ಬ್ಯಾಂಕಿನ ಮೂಗಿನ ನೇರಕ್ಕೇ ತನ್ನ ಬಜೆಟ್‌ಗಳನ್ನು ರೂಪಿಸಬೇಕಾದಂತಹ ಸ್ಥಿತಿಗೆ ತಲುಪಿದೆ. ವ್ಯಾಪಾರಿ ಸಮಾಜವಾಗಿದ್ದ ಅರಬ್ ನೆಲದಲ್ಲಿ, ಬಡವರನ್ನು ಬಡ್ಡಿ ಸರ್ವ ರೀತಿಯಲ್ಲಿ ಶೋಷಿಸುತ್ತಿದ್ದಾಗ, ಬಡ್ಡಿಯನ್ನು ನಿಷೇಧಿಸುವ ಮೂಲಕ, ಬಡವರನ್ನು ಆರ್ಥಿಕವಾಗಿ ಇಸ್ಲಾಂ ಸ್ವತಂತ್ರಗೊಳಿಸಿತು. ಎಲ್ಲ ಧರ್ಮಗಳೂ ಉದ್ಯಮ, ವ್ಯಾಪಾರದ ಲಾಭಕೋರತನಗಳ ವಿರುದ್ಧ ಧ್ವನಿಯೆತ್ತಿವೆ. ಆದರೆ ಇಂದಿನ ದಿನಗಳಲ್ಲೇ ಬೃಹತ್ ಉದ್ಯಮಿಗಳು ತಮ್ಮ ಉದ್ಯಮಗಳನ್ನು ಬೆಳೆಸುವುದಕ್ಕೆ, ಜನರನ್ನು ವಂಚಿಸುವುದಕ್ಕಾಗಿಯೇ ಧಾರ್ಮಿಕ ಮೌಲ್ಯಗಳನ್ನು ದುರ್ಬಳಕೆ ಮಾಡುತ್ತಿರುವ ಪ್ರಕರಣಗಳು ವ್ಯಾಪಕವಾಗಿ ನಡೆಯುತ್ತಿರುವುದು ದುರದೃಷ್ಟಕರ.

ಇಂದು ಮಠ ಮಾನ್ಯಗಳಿರುವುದೇ ರಾಜಕಾರಣಿಗಳ ಸಂಪತ್ತನ್ನು ಜೋಪಾನ ಮಾಡುವುದಕ್ಕೆ ಎನ್ನುವ ಆರೋಪಗಳಿವೆ. ಭಾರೀ ಶ್ರೀಮಂತವಾಗಿರುವ ಮಠ, ಮಂದಿರಗಳಿಗೆ ಐಟಿ ದಾಳಿಯಾದ ಒಂದೇ ಒಂದು ಉದಾಹರಣೆಗಳಿಲ್ಲ. ಆದುದರಿಂದಲೇ ಓರ್ವ ಹಿರಿಯ ರಾಜಕಾರಣಿ ಮಠಗಳನ್ನು ‘ಭಾರತದ ಕಪ್ಪು ಹಣವನ್ನು ಬಚ್ಚಿಟ್ಟುಕೊಂಡಿರುವ ಸ್ವಿಸ್ ಬ್ಯಾಂಕ್’ ಎಂದು ಬಣ್ಣಿಸಿದ್ದರು. ಎಲ್ಲ ರಾಜಕಾರಣಿಗಳೂ ಇಂದು ಒಂದೊಂದು ಮಠವನ್ನು ನೆಚ್ಚಿಕೊಂಡಿದ್ದರೆ ಅದಕ್ಕೆ ಧಾರ್ಮಿಕ ಕಾರಣಗಳಿಗೆ ಹೊರತಾದ ಆರ್ಥಿಕ ಕಾರಣಗಳಿವೆ. ಇಂದು ಬೃಹತ್ ಉದ್ಯಮಿಗಳೆಲ್ಲರೂ ತಮ್ಮ ಧರ್ಮಗಳ ಜೊತೆಗೆ ಅವಿನಾಭಾವ ಸಂಬಂಧಗಳನ್ನು ಹೊಂದಿದ್ದಾರೆ. ವ್ಯಾಪಾರ, ಉದ್ದಿಮೆಗಳ ಬೆನ್ನಿಗೆ ಮಠಮಾನ್ಯಗಳು ಇದ್ದರೆ ಅದರಿಂದ ಹಲವು ಲಾಭಗಳಿವೆ ಎನ್ನುವುದು ಅವರಿಗೆ ಸ್ಪಷ್ಟವಾಗಿ ಗೊತ್ತಿದೆ. ಉದ್ಯಮಿಗಳು-ರಾಜಕಾರಣಿಗಳು-ಸ್ವಾಮೀಜಿಗಳ ನಡುವೆ ಪರಸ್ಪರ ಕಡಿದುಕೊಳ್ಳಲಾಗದ ಅನೈತಿಕ ಬಂಧವಿದೆ. ಇದೇ ಸಂದರ್ಭದಲ್ಲಿ, ಹೇಗೆ ಬಡವರ ಶೋಷಣೆಯ ವಿರುದ್ಧ ಇರುವ ಧಾರ್ಮಿಕ ಕಾನೂನುಗಳನ್ನೇ ಮುಂದಿಟ್ಟುಕೊಂಡು ಜನರನ್ನು ವಂಚಿಸಬಹುದು ಎನ್ನುವುದಕ್ಕೆ ಕರ್ನಾಟಕ ಐಎಂಎ ವಂಚನೆ ಪ್ರಕರಣ ಉದಾಹರಣೆಯಾಗಿದೆ.

ಸಾಧಾರಣವಾಗಿ ಕೆಲವು ಮಠ ಮಾನ್ಯಗಳು ತಮ್ಮಲ್ಲಿರುವ ಹಣವನ್ನು ಬಡ್ಡಿಗೆ ಸಾಲ ನೀಡುವುದಿದೆ. ಗುಟ್ಟಾಗಿಯೂ ಬಹಿರಂಗವಾಗಿಯೂ ಇವು ನಡೆಯುತ್ತಿವೆ. ಇಸ್ಲಾಂನಲ್ಲಿ ಬಡ್ಡಿ ನಿಷೇಧವಿದ್ದರೂ ಸಾಮಾನ್ಯವಾಗಿ ಬ್ಯಾಂಕ್ ವ್ಯವಹಾರವನ್ನು ಎಲ್ಲರೂ ನಡೆಸುತ್ತಾರೆ. ಆದರೆ ಬ್ಯಾಂಕ್‌ನಲ್ಲಿ ಅತ್ಯಧಿಕ ಠೇವಣಿ ಇಡುವ ಸಂದರ್ಭದಲ್ಲಿ, ಅದಕ್ಕೆ ಬೀಳುವ ಬಡ್ಡಿ ಹಲವರಿಗೆ ಸಮಸ್ಯೆಯಾಗುತ್ತದೆ. ಪಕ್ಕಾ ಧಾರ್ಮಿಕವಾಗಿರುವ ಜನರು ಇಂತಹ ಬಡ್ಡಿ ವ್ಯಾಪಾರಕ್ಕೆ ಪೂರಕವಾಗುವ ಠೇವಣಿಗಳನ್ನು ಇಡಲು ಹಿಂಜರಿಯುತ್ತಾರೆ. ಇಂತಹ ಜನರನ್ನೇ ಗುರಿಯಾಗಿಟ್ಟು ಐಎಂಎ ಸ್ಥಾಪನೆಯಾಯಿತು. ‘ಹಲಾಲ್(ಶುದ್ಧ) ವ್ಯಾಪಾರ’ ತಲೆಬರಹವೇ ಈ ಐಎಂಎಯ ಹೆಗ್ಗಳಿಕೆ. ಜೊತೆಗೆ ಯಾವುದೇ ಬ್ಯಾಂಕ್ ನೀಡುವ ಬಡ್ಡಿಗಿಂತಲೂ ಅಧಿಕ ಲಾಭವನ್ನು ಈ ಸಂಸ್ಥೆ ಪಾಲುದಾರರ ಜೊತೆಗೆ ಹಂಚಿಕೊಳ್ಳುತ್ತದೆ ಎನ್ನುವುದು ಅಮಾಯಕ ಮುಸ್ಲಿಮ್ ಗ್ರಾಹಕರಲ್ಲಿ ದುರಾಸೆಯನ್ನೂ ಹುಟ್ಟಿಸಿತು. ಇದರಲ್ಲಿ ಹೂಡಿದ ಬಹುತೇಕ ಜನರಿಗೆ ‘ಹಲಾಲ್ ವ್ಯಾಪಾರ’ ಒಂದು ನೆಪ. ಅವರ ಕಣ್ಣು ಅಧಿಕ ಆದಾಯದ ಮೇಲಿತ್ತು. ಯಾವುದೇ ಒಂದು ಸಂಸ್ಥೆ ಹೂಡಿದ ಹಣಕ್ಕೆ ಯಾವುದೇ ಬ್ಯಾಂಕುಗಳು ನೀಡದಷ್ಟು ಪ್ರಮಾಣದ ಲಾಭ ನೀಡುತ್ತದೆ ಎನ್ನುವಾಗ ಆ ಕುರಿತಂತೆ ಜನರು ಒಂದಿಷ್ಟು ಅನುಮಾನ ಪಡಬೇಕು.

ಎಲ್ಲಕ್ಕಿಂತಲೂ ಮುಖ್ಯವಾಗಿ ಇಸ್ಲಾಂ ‘ಸರಳತೆ’ಯನ್ನು ಕಲಿಸುತ್ತದೆ. ಲಾಭಕೋರತನವನ್ನು, ಸಂಗ್ರಹಿಸಿಡುವುದನ್ನು ನಿಷೇಧಿಸುತ್ತದೆ. ದಾನ, ಝಕಾತ್ ಅಥವಾ ಕಡ್ಡಾಯ ದಾನಕ್ಕೆ ಪ್ರೋತ್ಸಾಹಿಸುತ್ತದೆ. ಈ ಸಂಸ್ಥೆಯಲ್ಲಿ ಹಣ ಹೂಡಿದ ಬಹುತೇಕರು ಲಾಭಕೋರತನದ ಬೆನ್ನು ಹತ್ತಿದ್ದಾರೆ. ಒಂದೆಡೆ ಧರ್ಮ ಸಮ್ಮತಿಸಿದ ‘ಹಲಾಲ್’ನ ಮೇಲೆ ನಂಬಿಕೆ ಇರುವವರಂತೆ ನಟಿಸಿ, ಹರಾಮ್‌ನ ಹಣಕ್ಕೆ ನಾಲಗೆ ಚಾಚಿದ್ದಾರೆ. ಇದೇ ಸಂದರ್ಭದಲ್ಲಿ ಹೆಣ್ಣು ಮಕ್ಕಳ ಮದುವೆ, ಮನೆ ನಿರ್ಮಾಣ ಮೊದಲಾದ ಮಧ್ಯಮವರ್ಗದ ಆಸೆಗಳನ್ನು ಇಟ್ಟು ಹಣ ಹೂಡಿದವರೂ ಇದ್ದಾರೆ. ಆದರೆ ಒಂದು ಹಡಗು ಮುಳುಗುವಾಗ ಮಕ್ಕಳು, ವೃದ್ಧರೂ ಜೊತೆಗೇ ಮುಳುಗ ಬೇಕಾಗುತ್ತದೆ. ಸದ್ಯಕ್ಕೆ ಅವರೆಲ್ಲರೂ ಭೇದಭಾವವಿಲ್ಲದೆ ಐಎಂಎ ಸಂಸ್ಥೆಯ ಜೊತೆಗೆ ಮುಳುಗಿದ್ದಾರೆ. ಹಣ ಹೂಡಿದ ಶ್ರೀಮಂತರು ಹೂಡಿದ ಹಣವನ್ನು ಮರೆತು ಸುಮ್ಮಗಾಗಬಹುದು, ಆದರೆ ಮಧ್ಯಮ ವರ್ಗದ ಜನರು ತಮ್ಮ ಅಳಿದುಳಿದ ಹಣವನ್ನು ಕಳೆದುಕೊಂಡು ತೀವ್ರ ಆಘಾತಕ್ಕೊಳಗಾಗಿದ್ದಾರೆ. ‘ಹಲಾಲ್ ವ್ಯಾಪಾರ, ಹಲಾಲ್ ಉದ್ದಿಮೆ’ ಸಾಧ್ಯವೇ ಇಲ್ಲ ಎಂದಲ್ಲ. ಈ ಉದ್ದಿಮೆಯಲ್ಲಿ ಯಶಸ್ವಿಯಾದ ಅದೆಷ್ಟೋ ಸಂಸ್ಥೆಗಳಿವೆ.

ಲಾಭಕೋರತನದ ಉದ್ದೇಶವಿಲ್ಲದೆ ಪ್ರಾಮಾಣಿಕವಾಗಿ, ಯಾರಿಗೂ ವಂಚಿಸದೇ, ಯಾರನ್ನೂ ಶೋಷಿಸದೆ ಸಿಗುವ ಲಾಭವಷ್ಟೇ ಸಾಕು ಎಂಬ ಗುರಿ ಅದರ ಸ್ಥಾಪಕನಿಗೂ, ಅದರ ಗ್ರಾಹಕರಿಗೂ ಇದ್ದಿದ್ದರೆ ಖಂಡಿತವಾಗಿಯೂ ಐಎಂಎ ಉಳಿಯುತ್ತಿತ್ತೇನೋ. ಆದರೆ ಸ್ಥಾಪಿಸಿದಾತ ಹಲಾಲ್ ಹೆಸರನ್ನು ಮೋಸಕ್ಕಾಗಿಯೇ ಬಳಸಿಕೊಂಡ. ಜನರು ವಂಚನೆಗೊಳಗಾಗುವುದರಿಂದ ತಪ್ಪಿಸಲು ಸೃಷ್ಟಿಯಾದ ಪದವನ್ನೇ ಇಲ್ಲಿ ಜನರನ್ನು ಯಾಮಾರಿಸುವುದಕ್ಕಾಗಿ ಬಳಸಲಾಯಿತು. ಜೊತೆಗೆ ಈ ಸಂಸ್ಥೆಯೊಂದಿಗೆ ನಂಟು ಹೊಂದಿರುವ ರಾಜಕಾರಣಿಗಳು, ಧಾರ್ಮಿಕ ಪುರೋಹಿತರೂ ಈ ವಂಚನೆಯ ಪಾಪವನ್ನು ಹಂಚಿಕೊಂಡಿದ್ದಾರೆ. ಒಟ್ಟಿನಲ್ಲಿ, ವಂಚನೆಗೊಳಗಾಗುವವರು ಇರುವವರೆಗೆ ವಂಚಿಸುವವರು ಇರುತ್ತಾರೆ. ಐಎಂಎ ವಂಚನೆಯಲ್ಲಿ ಹಣ ಹೂಡಿದವರನ್ನು ಸಂಪೂರ್ಣ ಸಂತ್ರಸ್ತರು ಎಂದು ಹೇಳುವಂತಿಲ್ಲ. ಅವರ ದುರಾಸೆಯೂ ಈ ಸಂಸ್ಥೆಯ ಜೊತೆಗೆ ಸಹಭಾಗಿಯಾಗಿದೆ. ಹೇಗೆ ಲಂಚ ನೀಡಿದವರೂ ಆರೋಪಿಯಾಗುತ್ತಾರೋ ಹಾಗೆಯೇ, ಅತಿಯಾದ ಲಾಭದ ಹಿಂದೆ ಬಿದ್ದ ಗ್ರಾಹಕರೂ ಇಲ್ಲಿ ಆರೋಪಿಗಳೇ ಆಗಿದ್ದಾರೆ. ಅಧಿಕ ಲಾಭ ಕೊಡುತ್ತೇವೆ ಎಂದು ಒಂದು ಸಂಸ್ಥೆ ಘೋಷಿಸಿದಾಕ್ಷಣ ಆ ಬಂಗಾರದ ಜಿಂಕೆಯ ಬೆನ್ನ ಹಿಂದೆ ಓಡುವ ಜನರಿಗೆ ಐಎಂಎ ವಂಚನೆ ಒಂದು ದೊಡ್ಡ ಪಾಠವಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)